SAFF ಚಾಂಪಿಯನ್‌ಶಿಪ್ ಫುಟ್ಬಾಲ್, ಪಾಕಿಸ್ತಾನ ವಿರುದ್ಧ 4-0 ಅಂತರದಿಂದ ಭಾರತಕ್ಕೆ ಗೆಲುವು!
ನಾಯಕ ಸುನಿಲ್ ಚೆಟ್ರಿ ಹ್ಯಾಟ್ರಿಕ್ ಗೋಲು ಹಾಗೂ ಉದಾಂತ ಸಿಂಗ್ ಸಿಡಿಸಿದ ಅದ್ಭುತ ಗೋಲ್ ಮೂಲಕ ಭಾರತ ಬದ್ಧವೈರಿ ಪಾಕಿಸ್ತಾನ ವಿರುದ್ಧ 4-0 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ.
ಬೆಂಗಳೂರು(ಜೂ.21); 14ನೇ ಆವೃತ್ತಿಯ ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತ, ಬದ್ಧವೈರಿ ಪಾಕಿಸ್ತಾನ ವಿರುದ್ಧ 4-0 ಅಂತರದ ಗೆಲುವು ದಾಖಲಿಸಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡದ ರೋಚಕ ಪಂದ್ಯದಲ್ಲಿ ನಾಯಕ ಸುನಿಲ್ ಚೆಟ್ರಿ ಹ್ಯಾಟ್ರಿಕ್ ಗೋಲು, ಉದಾಂತಾ ಸಿಂಗ್ ಸಿಡಿಸಿದ ಮತ್ತೊಂದು ಗೋಲುಗಳಿಂದ ಭಾರತ 4-0 ಅಂತರದಲ್ಲಿ ಗೆಲುವಿನ ನಗೆ ಬೀರಿತು.
ಪಂದ್ಯ ಆರಂಭಗೊಂಡ 5 ನಿಮಿಷಗಳ ವರೆಗೆ ಗೋಲ ದಾಖಲಾಗಲಿಲ್ಲ. ಕೆಲ ಅವಕಾಶಗಳನ್ನು ಭಾರತ ಹಾಗೂ ಪಾಕಿಸ್ತಾನ ಕೈಚೆಲ್ಲಿತು. ಪಾಕಿಸ್ತಾನ ಕೂಡ ಪ್ರಬಲ ಪೈಪೋಟಿ ನೀಡುವ ಸೂಚನೆ ನೀಡಿತು. ಆದರೆ 10ನೇ ನಿಮಿಷದಲ್ಲಿ ನಾಯಕ ಸುನಿಲ್ ಚೆಟ್ರಿ ಸಿಡಿಸಿದ ಗೋಲು ಭಾರತದ ಖಾತೆ ತೆರೆಯಿತು. 15ನೇ ನಿಮಿಷದಲ್ಲಿ ಅನಿರುದ್ಧ್ ತಾಪಾ ಕಿಕ್, ಪಾಕ್ ಮಿಡ್‌ಫೀಲ್ಡರ್ ಮ್ಯಾಮೂನ್ ಮೂಸಾ ಖಾನ್ ಕೈಗೆ ತಗುಲಿತು. ಹೀಗಾಗಿ ಭಾರತ ಪೆನಾಲ್ಟಿ ಪಡೆಯಿತು. ಈ ಅವಕಾಶವನ್ನು ಸುನಿಲ್ ಚೆಟ್ರಿ ಮಿಸ್ ಮಾಡಲಿಲ್ಲ. ಈ ಮೂಲಕ ಭಾರತ 2-0 ಮುನ್ನಡೆ ಪಡೆದುಕೊಂಡಿತು.
ಬೆಂಗಳೂರಿನಲ್ಲಿ ನಡೆದ ಭಾರತ-ಪಾಕಿಸ್ತಾನ ಫುಟ್ಬಾಲ್ ಪಂದ್ಯದಲ್ಲಿ ಕಿತ್ತಾಟ, ಕೆಲ ಹೊತ್ತು ಪಂದ್ಯ ಸ್ಥಗಿತ!
35ನೇ ನಿಮಿಷದಲ್ಲಿ ಪಾಕಿಸ್ತಾನದ ಮೊಹಮ್ಮದ್ ಸುಫ್ಯಾನ್ ಫೌಲ್‌ನಿಂದ ಭಾರತ ಫ್ರೀ ಕಿಕ್ ಪಡೆಯಿತು. ಈ ಅವಕಾಶವನ್ನು ಸುನಿಲ್ ಚೆಟ್ರಿ ಬಳಸಿಕೊಂಡು ಗೋಲು ಸುಡಿಸಿದರು. ಭಾರತ 3-0 ಅಂತರದಲ್ಲಿ ಮುನ್ನಡೆ ಪಡೆಯಿತು. ಇಷ್ಟೇ ಅಲ್ಲ ಸುನಿಲ್ ಚೆಟ್ರಿ ಹ್ಯಾಟ್ರಿಕ್ ಗೋಲು ಸಿಡಿಸಿದರು. ಅಂತಿಮ ಹಂತದಲ್ಲಿ ಉದಾಂತ ಸಿಂಗ್ ಸಿಡಿಸಿದ ಅದ್ಭುತ ಗೋಲು ಭಾರತದ ಅಂತರ ಹೆಚ್ಚಿಸಿತು.
ಭಾರತ 4-0 ಅಂತರದ ಮುನ್ನಡೆ ಕಾಯ್ದುಕೊಂಡಿತು. ಇಷ್ಟೇ ಅಲ್ಲ ಪಾಕಿಸ್ತಾನ ತಂಡಕ್ಕೆ ಒಂದು ಗೋಲು ಸಿಡಿಸಲೂ ಅವಕಾಶ ನೀಡಲಿಲ್ಲ. ಅಂತಿಮವಾಗಿ ಭಾರತ 4- 0 ಅಂತರದಲ್ಲಿ ಪಾಕಿಸ್ತಾನ ಮಣಿಸಿತು.
ಭಾರತ ತನ್ನ ಆರಂಭಿಕ ಪಂದ್ಯದಲ್ಲೇ ಬದ್ಧವೈರಿ ಪಾಕಿಸ್ತಾನ ವಿರುದ್ಧ ಹೋರಾಡಿ ಗೆಲುವು ಸಾಧಿಸಿದೆ. ಈ ಎರಡು ತಂಡಗಳು 2018ರಲ್ಲಿ ಕೊನೆ ಬಾರಿ ಮುಖಾಮುಖಿಯಾಗಿದ್ದವು. 2021ರ ಆವೃತ್ತಿಯಲ್ಲಿ ಪಾಕಿಸ್ತಾನ ಆಡಿರಲಿಲ್ಲ. 5 ವರ್ಷಗಳ ಬಳಿಕ ಮತ್ತೊಮ್ಮೆ ಸಾಂಪ್ರದಾಯಿಕ ಬದ್ಧ ಎದುರಾಳಿಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಸುನಿಲ್ ಚೆಟ್ರಿ ಹ್ಯಾಟ್ರಿಕ್ ಗೋಲಿನ ಸವಿ ನೀಡಿದ್ದಾರೆ. ಇತ್ತ ಪಂದ್ಯದ ನಡುವೆ ಕಿತ್ತಾಟವೂ ನಡೆದ ಕಾರಣ ರೋಚಕತೆ ಮತ್ತಷ್ಟು ಹೆಚ್ಚಿಸಿತ್ತು.
ಮಿಸ್ ಆಯಿತು ಭಾರತದೆದುರು ಲಿಯೋನೆಲ್ ಮೆಸ್ಸಿ ಆಟ..! ಸುವರ್ಣಾವಕಾಶ ಕೈಚೆಲ್ಲಿದ ಭಾರತ
ಸ್ಯಾಫ್ ಕಪ್ ಟೂರ್ನಿಗೆ ಇದೇ ಮೊದಲ ಬಾರಿ ಬೆಂಗಳೂರು ಆತಿಥ್ಯ ವಹಿಸಿತು. ಈ ಮೊದಲು 3 ಬಾರಿ ಭಾರತದಲ್ಲಿ ಟೂರ್ನಿ ನಡೆದಿತ್ತು. 1999ರಲ್ಲಿ ಮೊದಲ ಬಾರಿ ಗೋವಾದಲ್ಲಿ ನಡೆದಿದ್ದರೆ, 2011ರಲ್ಲಿ ನವದೆಹಲಿ ಆತಿಥ್ಯ ವಹಿಸಿತ್ತು. ಬಳಿಕ 2015ರಲ್ಲಿ ಕೇರಳದಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಟೂರ್ನಿಗೆ ಆತಿಥ್ಯ ವಹಿಸಿದಾಗ ಭಾರತವೇ ಚಾಂಪಿಯನ್ ಆಗಿತ್ತು ಎನ್ನುವುದು ವಿಶೇಷ.