* ಲಿಯೋನೆಲ್‌ ಮೆಸ್ಸಿ ಭಾರತದಲ್ಲಿ ಫುಟ್ಬಾಲ್ ಆಡುವ ಅವಕಾಶ ಮಿಸ್* ಭಾರತದ ಎದುರು ಸ್ನೇಹಾರ್ಥ ಪಂದ್ಯವನ್ನಾಡುವ ಪ್ರಸ್ತಾಪವಿಟ್ಟಿದ್ದ ಅರ್ಜೆಂಟೀನಾ* ಅರ್ಜೆಂಟೀನಾ ತಂಡದ ಪ್ರಸ್ತಾಪವನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ತಿರಸ್ಕರಿಸಿದೆ

ನವದೆಹಲಿ(ಜೂ.21): ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೇಂಟೀನಾ ತಂಡವು ಭಾರತದಲ್ಲಿ, ಸುನಿಲ್ ಚೆಟ್ರಿ ನೇತೃತ್ವದ ಭಾರತ ತಂಡದ ಎದುರು ಸ್ನೇಹಾರ್ಥ ಪಂದ್ಯವನ್ನಾಡುವ ಅವಕಾಶದಿಂದ ವಂಚಿತವಾಗಿದೆ. ಭಾರತದಲ್ಲಿ ಸ್ನೇಹಾರ್ಥ ಪಂದ್ಯವನ್ನಾಡುವ ಅರ್ಜೆಂಟೀನಾ ತಂಡದ ಪ್ರಸ್ತಾಪವನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ತಿರಸ್ಕರಿಸಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್‌ ವ್ಯವಸ್ಥಾಪಕ ಕಾರ್ಯದರ್ಶಿ ಶಾಜಿ ಪ್ರಭಕರನ್‌, ಅರ್ಜೆಂಟೀನಾ ತಂಡವು ಭಾರತೀಯ ಫುಟ್ಬಾಲ್ ಆಡಳಿತ ಸಂಸ್ಥೆಯ ಬಳಿ ಫ್ರೆಂಡ್ಲಿ ಮ್ಯಾಚ್‌ ಆಡುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಆದರೆ ಭಾರತ ಹಾಗೂ ಆರ್ಜೆಂಟೀನಾ ತಂಡಗಳ ನಡುವಿನ ಪಂದ್ಯ ಆಯೋಜನೆಗೆ ಭಾರೀ ಹಣದ ಅವಶ್ಯಕತೆ ಇರುವುದರಿಂದಾಗಿ, ಅರ್ಜೆಂಟೀನಾ ಮನವಿಯನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್‌ ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಭಾರತದಲ್ಲಿ ಭಾರತದ ಎದುರು ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಆಟವನ್ನು ಕಣ್ತುಂಬಿಕೊಳ್ಳಬೇಕೆನ್ನುವ ಲಕ್ಷಾಂತರ ಮೆಸ್ಸಿ ಅಭಿಮಾನಿಗಳ ಕನಸು ಭಗ್ನವಾಗಿದೆ.

ಈ ಕುರಿತಂತೆ ಟೈಮ್ಸ್ ಆಫ್ ಇಂಡಿಯಾ ಜತೆಗೆ ಮಾತನಾಡಿರುವ ಪ್ರಭಾಕರನ್‌, ಅರ್ಜೆಂಟೀನಾ ನೀಡಿದ ಪ್ರಸ್ತಾಪವನ್ನು ಒಪ್ಪಿಕೊಂಡರೆ, ಭಾರತಕ್ಕೆ ದೊಡ್ಡ ಮೊತ್ತದ ಪ್ರಾಯೋಜಕತ್ವದ ಅವಶ್ಯಕತೆಯಿದೆ. ಆದರೆ ದುರಾದೃಷ್ಟವಶಾತ್ ನಮಗೆ ಈ ಫ್ರೆಂಡ್ಲಿ ಮ್ಯಾಚ್ ಆಯೋಜಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

" ಅರ್ಜೆಂಟೀನಾ ಫುಟ್ಬಾಲ್ ಸಂಸ್ಥೆಯು ಭಾರತದಲ್ಲಿ ಒಂದು ಸ್ನೇಹಾರ್ಥ ಪಂದ್ಯವನ್ನಾಡಲು ನಮ್ಮನ್ನು ಕೇಳಿಕೊಂಡಿತು. ಆದರೆ ಅದಕ್ಕಾಗಿ ಖರ್ಚಾಗುವ ದೊಡ್ಡ ಮೊತ್ತವನ್ನು ಹೊಂದಿಸಲು ನಮಗೆ ಈ ಬಾರಿ ಸಾಧ್ಯವಾಗುತ್ತಿಲ್ಲ" ಎಂದು ಪ್ರಭಾಕರನ್ ತಿಳಿಸಿದ್ದಾರೆ.

ಇಷ್ಟು ದೊಡ್ಡ ಪಂದ್ಯವನ್ನು ಆಯೋಜಿಸಬೇಕಿದ್ದರೇ, ನಮಗೆ ದೊಡ್ಡ ಮಟ್ಟದ ಪ್ರಾಯೋಜಕರಿರಬೇಕಾಗುತ್ತದೆ. ಅರ್ಜೆಂಟೀನಾ ತಂಡವು ನಿರೀಕ್ಷಿಸುತ್ತಿರುವ ದೊಡ್ಡ ಮೊತ್ತವನ್ನು ಕಾಲಮಿತಿಯಲ್ಲಿ ಹೊಂದಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಭಾರತೀಯ ಫುಟ್ಬಾಲ್‌ನ ಆರ್ಥಿಕ ಪರಿಸ್ಥಿತಿ ಅಷ್ಟೇನು ಉತ್ತಮವಾಗಿಲ್ಲ ಎಂದು ಪ್ರಭಾಕರನ್ ಹೇಳಿದ್ದಾರೆ.

ಫುಟ್ಬಾಲ್‌ ವೃತ್ತಿ ಬದು​ಕಿ​ನ ಕೊನೆ ಹಂತ​ದ​ಲ್ಲಿ​ದ್ದೇ​ನೆ: ಲಿಯೋನೆಲ್ ಮೆಸ್ಸಿ ನಿವೃತ್ತಿ ಸುಳಿವು

ಮೂಲಗಳ ಪ್ರಕಾರ, ಅರ್ಜೆಂಟೀನಾ ತಂಡವು ಜೂನ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ವಿರುದ್ದ ತಲಾ ಒಂದೊಂದು ಫ್ರೆಂಡ್ಲಿ ಮ್ಯಾಚ್ ಆಡಲು ಬಯಸಿತ್ತು. ಇದೇ ತಿಂಗಳಿನಲ್ಲಿ ಅರ್ಜೆಂಟೀನಾ ಎದುರು ಪಂದ್ಯ ಆಯೋಜಿಸಲು ಕೋಟ್ಯಾಂತರ ರುಪಾಯಿ ಅಗತ್ಯವಿತ್ತು. ಹೀಗಾಗಿ ಅರ್ಜೆಂಟೀನಾದ ಪ್ರಸ್ತಾಪವನ್ನು ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ನಿರಾಕರಿಸಿವೆ. ಈ ಕಾರಣಕ್ಕಾಗಿಯೇ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಅರ್ಜೆಂಟೀನಾ ಹಾಗೂ ಇಂಡೋನೇಷ್ಯಾದಲ್ಲಿ ಸ್ನೇಹಾರ್ಥ ಪಂದ್ಯವನ್ನಾಡಿತು.

ಕಳೆದ ವರ್ಷ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಫ್ರಾನ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ಮೆಸ್ಸಿ ತಮ್ಮ ಫಿಫಾ ವಿಶ್ವಕಪ್ ಗೆಲ್ಲಬೇಕೆನ್ನುವ ಜೀವಮಾನದ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಇತ್ತೀಚೆಗಷ್ಟೇ ಮೆಸ್ಸಿ ತಾವು 2026ರ ಫಿಫಾ ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ. ಇದಷ್ಟೇ ಅಲ್ಲದೇ ಲಿಯೋ​ನೆಲ್‌ ಮೆಸ್ಸಿ ಫುಟ್ಬಾಲ್‌ ವೃತ್ತಿ ಬದು​ಕಿನ ಕೊನೆ ಹಂತ​ದ​ಲ್ಲಿ​ದ್ದೇನೆ ಎಂದಿ​ದ್ದಾರೆ. ಈ ಬಗ್ಗೆ ಸಂದ​ರ್ಶ​ನ​ವೊಂದರಲ್ಲಿ ಮಾತ​ನಾ​ಡಿದ 35 ವರ್ಷದ ಮೆಸ್ಸಿ, ‘ವೃತ್ತಿ ಬದು​ಕಿನ ಕೊನೆ ಹಂತ​ದ​ಲ್ಲಿ​ದ್ದೇನೆ. ಆದರೆ ಎಲ್ಲ​ದ​ರಲ್ಲೂ ಚಾಂಪಿ​ಯನ್‌ ಎಂಬ ಖುಷಿ​ಯಲ್ಲೇ ಈಗ ಆಡು​ತ್ತಿ​ದ್ದೇನೆ. ಫುಟ್ಬಾ​ಲ್‌​ನಲ್ಲಿ ಗೆಲುವು ಮಾತ್ರ​ವಲ್ಲ, ನಮ್ಮ ಪಯ​ಣವೂ ಕೂಡಾ ಜೀವ​ನಕ್ಕೆ ಬೇಕಾದ ಅತ್ಯ​ಮೂಲ್ಯ ಪಾಠ​ಗ​ಳನ್ನು ಕಲಿ​ಸಿ​ಕೊ​ಟ್ಟಿದೆ. ನಾವು ಏನಾ​ದರೂ ಅಂದು​ಕೊಂಡಾಗ, ಯಾವು​ದ​ಕ್ಕಾದರೂ ಪ್ರಯ​ತ್ನಿ​ಸಿ​ ಸಿಗದೆ ಇರುವ ಕ್ಷಣ​ಗಳೂ ನಮಗೆ ಪಾಠ. ನೀವು ಕನಸು ಕಂಡಿ​ದ್ದನ್ನು ಸಾಧಿ​ಸು​ವ​ವ​ರೆಗೂ ಪ್ರಯತ್ನ ಬಿಡ​ಬೇ​ಡಿ’ ಎಂದು ಸಲಹೆ ನೀಡಿದ್ದರು.