ಸ್ಪೇನ್‌ನ ನಾಯಕ ರೋಡ್ರಿ ಅಚ್ಚರಿಯ ರೀತಿಯಲ್ಲಿ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ (ಗೋಲ್ಡನ್‌ ಬಾಲ್‌) ಗೆದ್ದಿದ್ದಾರೆ. ಅವರೊಂದಿಗೆ, ಉನೈ ಸಿಮೋನ್‌ ಶ್ರೇಷ್ಠ ಗೋಲ್‌ಕೀಪರ್ ಮತ್ತು ಪೌ ಕುಬಾರ್ಸಿ ಶ್ರೇಷ್ಠ ಯುವ ಆಟಗಾರ ಪ್ರಶಸ್ತಿ ಪಡೆದು ಸ್ಪೇನ್‌ನ ಪ್ರಾಬಲ್ಯ ಮೆರೆದಿದ್ದಾರೆ.

ಈ ಬಾರಿ ಗೋಲ್ಡನ್‌ ಬಾಲ್‌(ಟೂರ್ನಿಯ ಶ್ರೇಷ್ಠ ಆಟಗಾರ) ಪ್ರಶಸ್ತಿಯನ್ನು ಸ್ಪೇನ್‌ ನಾಯಕ ರೋಡ್ರಿ ತಮ್ಮದಾಗಿಸಿಕೊಂಡಿದ್ದಾರೆ. 8 ಗೋಲು ಬಾರಿಸಿ, 4 ಬಾರಿ ಗೋಲು ಗಳಿಸಲು ನೆರವು(ಅಸಿಸ್ಟ್‌) ನೀಡಿರುವ ಮೆಸ್ಸಿ ಈ ಪ್ರಶಸ್ತಿ ಗೆಲ್ಲುತ್ತಾರೆ ಎಂದೇ ಊಹಿಸಲಾಗಿತ್ತು. ಆದರೆ ಮಿಡ್‌ಫೀಲ್ಡ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿರುವ ರೋಡ್ರಿ ಪ್ರಶಸ್ತಿ ಗೆದ್ದಿದ್ದಾರೆ. 

ಅವರು ಟೂರ್ನಿಯಲ್ಲಿ 799 ಪಾಸ್‌ಗಳನ್ನು ಮಾಡಿದ್ದು, ಇದರಲ್ಲಿ ಶೇ.93ರಷ್ಟು ನಿಖರತೆ ಹೊಂದಿದ್ದರು. ಫಿಫಾ ಅಂಕಿ ಅಂಶ ಪ್ರಕಾರ ಅವರು 1803 ಪಾಸ್‌ನಲ್ಲಿ ಭಾಗಿಯಾಗಿದ್ದಾರೆ. 11 ಬಾರಿ ಗೋಲು ಅವಕಾಶ ಸೃಷ್ಟಿಸಿದ್ದು, 26 ಬಾರಿ ಎದುರಾಳಿಗಳನ್ನು ಟ್ಯಾಕಲ್‌ ಮಾಡಿ ಗೋಲು ಅವಕಾಶ ತಪ್ಪಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಅವರು ಬರೋಬ್ಬರಿ 96 ಕಿ.ಮೀ. ಓಟ ಪೂರ್ತಿಗೊಳಿಸಿದ್ದಾರೆ. ಮೈದಾನದಲ್ಲಿ ಗೋಲ್‌ಕೀಪರ್‌ ಉನೈ ಸಿಮೋನ್‌ ಯಶಸ್ಸಿನ ಹಿಂದೆ ರೋಡ್ರಿ ಪಾತ್ರ ಪರಿಗಣಿಸಿ ಅವರಿಗೆ ಗೋಲ್ಡನ್‌ ಬಾಲ್‌ ಅವಾರ್ಡ್‌ ನೀಡಲಾಗಿದೆ.

ಕುಬಾರ್ಸಿ ಶ್ರೇಷ್ಠ ಯುವ ಆಟಗಾರ, ಸಿಮೋನ್‌ ಶ್ರೇಷ್ಠ ಗೋಲ್‌ಕೀಪರ್

ಈ ಬಾರಿ ವೈಯಕ್ತಿಕ 4 ಪ್ರಶಸ್ತಿಗಳ ಪೈಕಿ ಮೂರನ್ನು ಸ್ಪೇನ್‌ ಆಟಗಾರರು ತಮ್ಮದಾಗಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ ಕೇವಲ ಒಂದು ಗೋಲು ಬಿಟ್ಟುಕೊಟ್ಟಿರುವ ಉನೈ ಸಿಮೋನ್‌ ಶ್ರೇಷ್ಠ ಗೋಲ್‌ಕೀಪರ್‌ ಪ್ರಶಸ್ತಿ ಗೆದ್ದಿದ್ದಾರೆ. 19 ವರ್ಷದ ಡಿಫೆಂಡರ್‌ ಪೌ ಕುಬಾರ್ಸಿ ಟೂರ್ನಿಯ ಶ್ರೇಷ್ಠ ಯುವ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಫೈನಲ್‌ನಲ್ಲೇ ಅವರು ಗರಿಷ್ಠ ಅಂದರೆ 124 ಪಾಸ್‌ ಮಾಡಿದ್ದಾರೆ. ಟೂರ್ನಿಯಲ್ಲಿ 25 ಬಾರಿ ಗೋಲು ಪ್ರಯತ್ನ ತಡೆದಿದ್ದು, 7 ಬಾರಿ ಗೋಲು ಅವಕಾಶ ಸೃಷ್ಟಿಸಿದ್ದಾರೆ.

ಗರಿಷ್ಠ ಗೋಲು: ಸತತ ಎರಡನೇ ಗೋಲ್ಡನ್‌ ಬೂಟ್‌ ಗೆದ್ದ ಎಂಬಾಪೆ

ಫ್ರಾನ್ಸ್‌ ತಾರಾ ಫುಟ್ಬಾಲಿಗ ಕೀಲಿಯನ್‌ ಎಂಬಾಪೆ ಸತತ 2ನೇ ವಿಶ್ವಕಪ್‌ನಲ್ಲೂ ಗೋಲ್ಡನ್‌ ಬೂಟ್‌ ಗೆದ್ದಿದ್ದಾರೆ. ಟೂರ್ನಿಯಲ್ಲಿ ಗರಿಷ್ಠ ಗೋಲು ಬಾರಿಸುವ ಆಟಗಾರರಿಗೆ ಸಿಗುವ ಈ ಪ್ರಶಸ್ತಿ ರೇಸ್‌ನಲ್ಲಿ ಸೆಮಿಫೈನಲ್‌ವರೆಗೆ ಲಿಯೋನಲ್‌ ಮೆಸ್ಸಿ ಮುಂದಿದ್ದರು. ಆದರೆ 3ನೇ ಸ್ಥಾನದ ಪಂದ್ಯದಲ್ಲಿ 2 ಗೋಲು ಗಳಿಸಿದ ಎಂಬಾಪೆ, ಒಟ್ಟಾರೆ ಟೂರ್ನಿಯ ಗೋಲು ಸಂಖ್ಯೆಯನ್ನು 10ಕ್ಕೆ ಹೆಚ್ಚಿಸಿ ಗೋಲ್ಡನ್‌ ಬೂಟ್‌ ಗೆದ್ದರು. ಮೆಸ್ಸಿ 8 ಗೋಲುಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2022ರ ವಿಶ್ವಕಪ್‌ನಲ್ಲೂ ಎಂಬಾಪೆ(8 ಗೋಲು) ಗೋಲ್ಡನ್‌ ಬೂಟ್‌ ಗೆದ್ದಿದ್ದರೆ, ಮೆಸ್ಸಿ 2ನೇ ಸ್ಥಾನಿಯಾಗಿದ್ದರು.

ವಿಶ್ವಕಪ್‌ ಗೆಲ್ಲುವಿನಲ್ಲಿದೆ ಸ್ಪ್ಯಾನಿಶ್‌ ಕ್ಲಬ್‌ಗಳ ಪಾತ್ರ!

ಈ ವಿಶ್ವಕಪ್‌ನಲ್ಲಿ ಸ್ಪೇನ್‌ ತಂಡದಲ್ಲಿ ಆಡಿದ 26 ಆಟಗಾರರ ಪೈಕಿ 17 ಆಟಗಾರರು ಸ್ಪೇನ್‌ನಲ್ಲಿ ನಡೆಯುವ ವಿಶ್ವ ಪ್ರತಿಷ್ಠಿತ ಲಾ ಲೀಗಾದಲ್ಲಿ ಬೇರೆ ಬೇರೆ ಕ್ಲಬ್‌ಗಳ ಪರ ಆಡುತ್ತಾರೆ. ಈ ಪೈಕಿ 8 ಮಂದಿ ಜಗತ್ತಿನ ಅತ್ಯಂತ ಪ್ರಖ್ಯಾತ ಕ್ಲಬ್‌ಗಳಲ್ಲಿ ಒಂದಾದ ಬಾರ್ಸಿಲೋನಾ ಎಫ್‌ಸಿಯ ಆಟಗಾರರು.

ಸ್ಪ್ಯಾನಿಶ್‌ ಲೀಗ್‌ಗಳಲ್ಲಿ ಆಡುವ ಅನುಭವ ಆ ದೇಶದ ಆಟಗಾರರನ್ನು ವಿಶ್ವಕಪ್‌ ಕಾಳಗಕ್ಕೆ ಸಜ್ಜಾಗಿಸಿತು. ಇನ್ನು, ಉಳಿದ 9 ಆಟಗಾರರು ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌, ಜರ್ಮನಿಯ ಬಂಡೆಸ್‌ ಲೀಗಾ, ಫ್ರಾನ್ಸ್‌ನ ಫ್ರೆಂಚ್‌ ಲೀಗ್‌-1ನಲ್ಲಿ ಭಾಗಿ. ಹೀಗಾಗಿ ಎಲ್ಲರಿಗೂ ಜಾಗತಿಕ ಮಟ್ಟದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಈ ಕ್ಲಬ್‌ಗಳಲ್ಲಿ ವಿಶ್ವ ಶ್ರೇಷ್ಠ ಫುಟ್ಬಾಲಿಗರ ಜೊತೆ ಬೆರೆಯುವ, ಅವರಿಂದ ಕಲಿಯುವ ಅವಕಾಶ ಸಿಕ್ಕಿದ್ದು ವಿಶ್ವಕಪ್‌ನಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದಂತೆ, ನಿರ್ಭೀತ ಆಟವಾಡಲು ಸಹಕಾರಿಯಾಯಿತು.