ಸ್ಪೇನ್‌-ಅರ್ಜೆಂಟೀನಾ ಫೈನಲ್‌ ಪಂದ್ಯದ ಬಳಿಕ ಅರ್ಜೆಂಟೀನಾ ಆಟಗಾರರು ಮೈದಾನದಲ್ಲಿ ಗಲಾಟೆ ನಡೆಸಿದರು. ಈ ಸೋಲಿನಿಂದ ಅರ್ಜೆಂಟೀನಾದಲ್ಲಿ ಅಭಿಮಾನಿಗಳು ದಾಂಧಲೆ ನಡೆಸಿದರೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೆಸ್ಸಿ ಪಡೆ ಎದುರಾಳಿ ತಂಡಕ್ಕೆ ಅಗೌರವ ತೋರಿತು.

ನ್ಯೂಜೆರ್ಸೀ: ಸ್ಪೇನ್‌-ಅರ್ಜೆಂಟೀನಾ ನಡುವಿನ ಫೈನಲ್‌ ಪಂದ್ಯ ದೊಡ್ಡ ಗದ್ದಲವಿಲ್ಲದೇ ಮುಗಿದರೂ, ಪಂದ್ಯದ ಬಳಿಕ ಆಟಗಾರರು ಕಿತ್ತಾಡಿದರು. ಅದರಲ್ಲೂ ಅರ್ಜೆಂಟೀನಾ ಆಟಗಾರ ಲಿಯಾಂಡ್ರೊ ಪೆರೆಡೆಸ್‌ ಸ್ಪೇನ್‌ ಆಟಗಾರ ಎರಿಕ್‌ ಗಾರ್ಸಿಯಾ ಅವರ ಕತ್ತು ಹಿಸುಕಿದ್ದಲ್ಲದೇ, ಮತ್ತೋರ್ವ ಸ್ಪೇನ್‌ ಆಟಗಾರನ ಜೆರ್ಸಿ ಹಿಡಿದೆಳೆದು ನೆಲಕ್ಕುರುಳುವಂತೆ ಮಾಡಿದರು. ಈ ವೇಳೆ ಕೋಚ್‌ಗಳು, ಇತರ ಆಟಗಾರರು ಮಧ್ಯಪ್ರವೇಶಿಸಿ ಗಲಾಟೆ ನಿಲ್ಲಿಸದರು. ಆದರೆ ಸೋಲಿನ ಬೇಸರದಲ್ಲಿದ್ದ ಲಿಯೋನಲ್‌ ಮೆಸ್ಸಿ, ತಮ್ಮ ಪಕ್ಕದಲ್ಲೇ ಗಲಾಟೆ ನಡೆಯುತ್ತಿದ್ದರೂ ಅದನ್ನು ನಿಲ್ಲಿಸುವ ಗೋಜಿಗೆ ಹೋಗದೆ ತಮ್ಮ ಪಾಡಿಗೆ ತಾವು ನಿಂತಿದ್ದರು.

ಅರ್ಜೆಂಟೀನಾದಲ್ಲೂ ಗಲಾಟೆ

ಇನ್ನು, ಫೈನಲ್‌ ಸೋಲಿನ ಬಳಿಕ ಅರ್ಜೆಂಟೀನಾದ ಬ್ಯೂನಸ್‌ ಐರಿಸ್‌ನಲ್ಲಿ ಅಭಿಮಾನಿಗಳು ಪೊಲೀಸರ ಮೇಲೆ ಬಾಟಲಿ, ಕಲ್ಲು ಎಸೆದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಪಾರ ಪ್ರಮಾಣದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿ, ಅಶ್ರುವಾಯು ಸಿಡಿಸಿದರು. ಘಟನೆಗೆ ಸಂಬಂಧಿಸಿದಂತೆ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಮೆಸ್ಸಿಗೆ ಮಿಸ್ಸಾದ ಗೋಲ್ಡನ್‌ ಬಾಲ್‌: ಸ್ಪೇನ್‌ ವಿರುದ್ಧ ಬೆನ್ನು ತಿರುಗಿಸಿದ ಅರ್ಜೆಂಟೀನಾ!

ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಅರ್ಜೆಂಟೀನಾ ಆಟಗಾರರು ನಡೆದುಕೊಂಡ ರೀತಿ ಟೀಕೆಗೆ ಗುರಿಯಾಗಿದೆ. ಗೋಲ್ಡನ್‌ ಬಾಲ್‌ ಪ್ರಶಸ್ತಿ ರೇಸ್‌ನಲ್ಲಿ ಮೆಸ್ಸಿ ಮುಂಚೂಣಿಯಲ್ಲಿದ್ದರೂ, ಅದು ಸ್ಪೇನ್‌ ನಾಯಕ ರೋಡ್ರಿ ಪಾಲಾಯಿತು. ಆಯೋಜಕರು ರೋಡ್ರಿ ಹೆಸರು ಘೋಷಿಸಿದಾಗ ಅರ್ಜೆಂಟೀನಾ ಆಟಗಾರರು ‘ಮೆಸ್ಸಿ, ಮೆಸ್ಸಿ’ ಎಂದು ಕೂಗಿದರು. ಬಳಿಕ ಬೆಳ್ಳಿ ಪದಕ ಸ್ವೀಕರಿಸಲು ಅರ್ಜೆಂಟೀನಾ ಆಟಗಾರರು ವೇದಿಕೆಯತ್ತ ತೆರಳುವಾಗ ಅವರಿಗೆ ಗೌರವ ಸೂಚಕವಾಗಿ ಎರಡು ಕಡೆಯಲ್ಲಿ ನಿಂತು ಚಪ್ಪಾಳೆ ತಟ್ಟುವ ಮೂಲಕ ಸ್ಪೇನ್‌ ಆಟಗಾರರು ‘ಗಾರ್ಡ್‌ ಆಫ್‌ ಹಾನರ್‌’ ನೀಡಿದರು. ಆದರೆ ಸ್ಪೇನ್‌ ತಂಡ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸುವಾಗ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಆಟಗಾರರರು ಬೆನ್ನು ತಿರುಗಿಸಿಕೊಂಡು ನಿಂತಿದ್ದರು.