ಫಿಫಾ ವಿಶ್ವಕಪ್‌ನಲ್ಲಿ ಮೊರಾಕ್ಕೊ ವಿರುದ್ಧ ನೆದರ್‌ಲೆಂಡ್ಸ್ ಪೆನಾಲ್ಟಿ ಶೂಟೌಟ್‌ನಲ್ಲಿ 2-3 ಗೋಲುಗಳಿಂದ ಸೋತಿದೆ. ಈ ಮೂಲಕ 3 ಬಾರಿ ರನ್ನರ್-ಅಪ್ ಆಗಿರುವ ಡಚ್ ಪಡೆ, ಇದೇ ಮೊದಲ ಬಾರಿಗೆ ಅಂತಿಮ 16ರ ಸುತ್ತು ತಲುಪಲು ವಿಫಲವಾಗಿ ಐತಿಹಾಸಿಕ ಮುಖಭಂಗ ಅನುಭವಿಸಿದೆ.
ಗ್ವಾಡಲುಪೆ(ಮೆಕ್ಸಿಕೊ): ಫಿಫಾ ವಿಶ್ವಕಪ್‌ನಲ್ಲಿ 3 ಬಾರಿ ರನ್ನರ್-ಅಪ್ ಆಗಿರುವ ನೆದರ್‌ಲೆಂಡ್ಸ್ ತಂಡ ಈ ಬಾರಿ ಟೂರ್ನಿಯಲ್ಲಿ ಅಂತಿಮ 32ರ ಸುತ್ತಿನಲ್ಲೇ ಹೊರಬಿದ್ದಿದೆ. ತಂಡ ಮಂಗಳವಾರ ಮೊರಾಕ್ಕೊ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 2-3 ಗೋಲುಗಳ ಅಂತರದಲ್ಲಿ ಪರಾಭವಗೊಂಡಿತು.
ಕಳೆದ ವರ್ಷ ಸ್ಪೇನ್, ಪೋರ್ಚುಗಲ್ ತಂಡಗಳನ್ನು ಸೋಲಿಸಿ ಸೆಮಿಫೈನಲ್‌ವರೆಗೂ ತಲುಪಿದ್ದ ಮೊರಾಕ್ಕೊ, ಈ ಬಾರಿ ಡಚ್ ಪಡೆಗೆ ಆಘಾತ ನೀಡಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದವು. 72ನೇ ನಿಮಿಷದಲ್ಲಿ ನೆದರ್‌ಲೆಂಡ್ಸ್ ಗೋಲು ಬಾರಿಸಿದರೆ, ಹೆಚ್ಚುವರಿ ನಿಮಿಷ(90+1)ದಲ್ಲಿ ಗೋಲು ದಾಖಲಿಸಿ ಮೊರಾಕ್ಕೊ ಪಂದ್ಯ ಸಮಬಲಗೊಳಿಸಿತು. ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಮೊರಾಕ್ಕೊ 3 ಗೋಲು ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.
ಮೊದಲ ಬಾರಿ ಪ್ರಿ ಕ್ವಾರ್ಟರ್‌ಗಿಲ್ಲ:
ನೆದರ್‌ಲೆಂಡ್ಸ್ 1934ರಿಂದ 2022ರ ವರೆಗೆ ಒಟ್ಟು 11 ವಿಶ್ವಕಪ್ ಆಡಿವೆ. ಎಲ್ಲಾ ಬಾರಿಯೂ ತಂಡ ಅಂತಿಮ 16ರ ಸುತ್ತು ಪ್ರವೇಶಿಸಿದ್ದವು. ಈ ಪೈಕಿ 3 ಬಾರಿ(1974, 1978, 2010) ಫೈನಲ್‌ನಲ್ಲಿ ಸೋತಿತ್ತು. ತಂಡ ಇದೇ ಮೊದಲ ಬಾರಿ ಅಂತಿಮ 16ರ ಸುತ್ತು ತಲುಪಲು ವಿಫಲವಾಗಿದೆ. ಇನ್ನು, ಮೊರಾಕ್ಕೊ 3ನೇ ಬಾರಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದೆ.
ಜಪಾನ್ ಶಾಕ್‌ನಿಂದ ಪಾರಾಗಿ ಬ್ರೆಜಿಲ್ ಪ್ರಿ ಕ್ವಾರ್ಟರ್ ಪ್ರವೇಶ
ಹ್ಯೂಸ್ಟನ್: ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ 5 ಬಾರಿ ಚಾಂಪಿಯನ್ ಬ್ರೆಜಿಲ್ ತಂಡ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಸೋಮವಾರ ನಡೆದ ಜಪಾನ್ ವಿರುದ್ಧದ ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
29ನೇ ನಿಮಿಷದಲ್ಲೇ ಜಪಾನ್ ಮುನ್ನಡೆ ಸಾಧಿಸಿತು. ಕೈಶು ಸಾನೊ ಗೋಲು ಬಾರಿಸಿದರು. ಮೊದಲಾರ್ಧವನ್ನು ಜಪಾನ್ 1-0 ಮುನ್ನಡೆಯೊಂದಿಗೆ ಮುಕ್ತಾಯಗೊಳಿಸಿತು. 56ನೇ ನಿಮಿಷದಲ್ಲಿ ಕ್ಯಾಸಿಮಿರೊ ಬ್ರೆಜಿಲ್‌ಗೆ ಮೊದಲ ಗೋಲು ತಂದುಕೊಟ್ಟರು. ಪಂದ್ಯದ ಕೊನೆ ಕ್ಷಣದಲ್ಲಿ (90+6ನೇ ನಿಮಿಷ), ಗೇಬ್ರಿಯಾಲ್ ಮ್ಯಾರ್ಟಿನೆಲಿ ಬಾರಿಸಿದ ಗೋಲು, ಬ್ರೆಜಿಲ್‌ಗೆ ರೋಚಕ ಜಯ ತಂದುಕೊಟ್ಟಿತು.

