ಓಸ್ಮಾನ್‌ ಡೆಂಬೆಲೆ ಅವರ ಹ್ಯಾಟ್ರಿಕ್‌ ನೆರವಿನಿಂದ ಫ್ರಾನ್ಸ್‌ ತಂಡ ವಿಶ್ವಕಪ್‌ನಲ್ಲಿ ಅಜೇಯವಾಗಿ ನಾಕೌಟ್‌ ಹಂತ ಪ್ರವೇಶಿಸಿದೆ. ಸ್ಪೇನ್ ಮತ್ತು ಬೆಲ್ಜಿಯಂ ಕೂಡಾ ಮುಂದಿನ ಹಂತಕ್ಕೆ ಲಗ್ಗೆ ಇಟ್ಟರೆ, ಒಂದೂ ಪಂದ್ಯ ಗೆಲ್ಲದ ಕೇಪ್‌ ವರ್ಡೆ ತಂಡ ನಾಕೌಟ್‌ ಪ್ರವೇಶಿಸಿ ಅಚ್ಚರಿ ಮೂಡಿಸಿದೆ.

ಫಾಕ್ಸ್‌ಬೊರೊ(ಅಮೆರಿಕ): ಓಸ್ಮಾನ್‌ ಡೆಂಬೆಲೆ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಮಾಜಿ ಚಾಂಪಿಯನ್ಸ್‌ ಫ್ರಾನ್ಸ್‌ ತಂಡ ಈ ಬಾರಿ ವಿಶ್ವಕಪ್‌ನ ಗುಂಪು ಹಂತದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದು, ಅಜೇಯವಾಗಿಯೇ ನಾಕೌಟ್‌ ಹಂತ ಪ್ರವೇಶಿಸಿದೆ. ಶುಕ್ರವಾರ ರಾತ್ರಿ ನಾರ್ವೆ ವಿರುದ್ಧ ಫ್ರಾನ್ಸ್‌ 4-1 ಗೋಲಿನ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು. ಈ ಸೋಲಿನ ಹೊರತಾಗಿಯೂ ನಾರ್ವೆ(6 ಅಂಕ) ‘ಐ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ನಾಕೌಟ್‌ಗೇರಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

7ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದ ಡೆಂಬೆಲೆ, ಬಳಿಕ 20 ಹಾಗೂ 32ನೇ ನಿಮಿಷಗಳಲ್ಲಿ ಮತ್ತೆರಡು ಗೋಲು ಹೊಡೆದು ಹ್ಯಾಟ್ರಿಕ್‌ ಪೂರೈಸಿದರು. ಇದು ವಿಶ್ವಕಪ್‌ನಲ್ಲಿ 1994ರ ಬಳಿಕ ಮೊದಲಾರ್ಧದಲ್ಲೇ ದಾಖಲಾದ ಮೊದಲ ಹ್ಯಾಟ್ರಿಕ್‌. ಪಂದ್ಯದ ಹೆಚ್ಚುವರಿ ನಿಮಿಷ(90+4)ದಲ್ಲಿ ಮತ್ತೊಂದು ಗೋಲು ದಾಖಲಿಸಿದ ಫ್ರಾನ್ಸ್‌, ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿತು. ಅಂತಿಮ 32ರ ಸುತ್ತಿನಲ್ಲಿ ತಂಡಕ್ಕೆ ಸ್ವೀಡನ್‌ ಸವಾಲು ಎದುರಾಗಲಿದೆ.

ಸ್ಪೇನ್, ಬೆಲ್ಜಿಯಂ ನಾಕೌಟ್‌ಗೆ ಲಗ್ಗೆ

ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಇನ್ನೂ ಕೆಲ ತಂಡಗಳು ಗುಂಪು ಹಂತದಿಂದ ನಾಕೌಟ್‌ ಹಂತಕ್ಕೆ ತೇರ್ಗಡೆ ಪಡೆದಿವೆ. ಮಾಜಿ ಚಾಂಪಿಯನ್‌ ಸ್ಪೇನ್‌ ಜೊತೆಗೆ ಕೇಪ್‌ ವರ್ಡೆ, ಬೆಲ್ಜಿಯಂ, ಈಜಿಪ್ಟ್‌ ಕೂಡಾ ಅಂತಿಮ 32ರ ಸುತ್ತಿನಲ್ಲಿ ಸ್ಥಾನ ಖಚಿತಪಡಿಸಿಕೊಂಡವು.

ಉರುಗ್ವೆ ವಿರುದ್ಧ ಪಂದ್ಯದಲ್ಲಿ ಸ್ಪೇನ್‌ ತಂಡ 1-0 ಗೋಲಿನ ಅಂತರದಲ್ಲಿ ಗೆಲುವು ಸಾಧಿಸಿತು. ಈ ಮೂಲಕ ‘ಎಚ್‌’ ಗುಂಪಿನಲ್ಲಿ 2 ಗೆಲುವು, 1 ಡ್ರಾದೊಂದಿಗೆ 7 ಅಂಕ ಸಂಪಾದಿಸಿ ಅಗ್ರಸ್ಥಾನ ಪಡೆದುಕೊಂಡಿತು. ಉರುಗ್ವೆ ತಂಡ ಒಂದೂ ಗೆಲುವಿಲ್ಲದೆ ಟೂರ್ನಿಯಲ್ಲಿ ಅಭಿಯಾನ ಕೊನೆಗೊಳಿಸಿತು. ತಂಡ 3 ಪಂದ್ಯಗಳಲ್ಲಿ 2 ಅಂಕದೊಂದಿಗೆ 3ನೇ ಸ್ಥಾನಿಯಾಯಿತು.

ಸೆನೆಗಲ್‌ಗೆ ಭರ್ಜರಿ ಗೆಲುವು:

ಇರಾಕ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಸೆನೆಗಲ್‌, ನಾಕೌಟ್‌ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ತಂಡ 3 ಪಂದ್ಯಗಳಲ್ಲಿ ಮೊದಲ ಗೆಲುವಿನೊಂದಿಗೆ 3 ಅಂಕ ಸಂಪಾದಿಸಿದ್ದು, ‘ಐ’ ಗುಂಪಿನಲ್ಲಿ 3ನೇ ಸ್ಥಾನ ಪಡೆದುಕೊಂಡಿತು. ಇತರ 12 ಗುಂಪಿನ 3ನೇ ಸ್ಥಾನ ಪಡೆದ 12 ತಂಡಗಳ ಪೈಕಿ ಅಗ್ರ-8ರಲ್ಲಿ ಸ್ಥಾನ ಗಿಟ್ಟಿಸಿಕೊಂಡರೆ ಸೆನೆಗಲ್‌ ನಾಕೌಟ್‌ ಹಂತ ತಲುಪಲಿದೆ. ಮತ್ತೊಂದೆಡೆ ಇರಾಕ್‌ ಸತತ 3 ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿತು.

ಒಂದೂ ಪಂದ್ಯ ಗೆಲ್ಲದಿದ್ದರೂ ನಾಕೌಟ್‌ಗೇರಿದ ಕೇಪ್‌ ವರ್ಡೆ

ಹಾಸ್ಟನ್‌: ಈ ಬಾರಿ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲೇ ಬಲಿಷ್ಠ ಸ್ಪೇನ್‌ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದ ಕೇಪ್‌ ವರ್ಡೆ ತಂಡ, ಗುಂಪು ಹಂತದಲ್ಲಿ ಒಂದೂ ಗೆಲುವು ಸಾಧಿಸದಿದ್ದರೂ ನಾಕೌಟ್‌ ಹಂತ ತಲುಪಿದೆ. ಇದರೊಂದಿಗೆ ಫಿಫಾ ವಿಶ್ವಕಪ್‌ನಲ್ಲಿ ನಾಕೌಟ್‌ ತಲುಪಿದ ಅತಿ ಕಡಿಮೆ ಜನಸಂಖ್ಯೆಯ ದೇಶ ಎಂಬ ಖ್ಯಾತಿಗೆ ಪಾತ್ರವಾಗಿದೆ. 

ಕೇಪ್‌ ವರ್ಡೆಯ ಜನಸಂಖ್ಯೆ ಕೇವಲ 5.30 ಲಕ್ಷ ಮಾತ್ರ. ತಂಡ ಈ ಬಾರಿ ಗುಂಪು ಹಂತದ ಮೂರೂ ಪಂದ್ಯಗಳಲ್ಲಿ ಡ್ರಾ ಸಾಧಿಸಿತು. ಸ್ಪೇನ್ ಬಳಿಕ ಉರುಗ್ವೆ ವಿರುದ್ಧ 2-2 ಗೋಲುಗಳಿಂದ ಡ್ರಾ ಮಾಡಿಕೊಂಡಿದ್ದ ತಂಡ, ಶನಿವಾರ ಸೌದಿ ಅರೇಬಿಯಾ ವಿರುದ್ಧ ಗೋಲು ರಹಿತ ಡ್ರಾ ಮಾಡಿಕೊಂಡಿತು. ಈ ಮೂಲಕ 3 ಅಂಕದೊಂದಿಗೆ ‘ಎಚ್‌’ ಗುಂಪಿನಲ್ಲಿ 2ನೇ ಸ್ಥಾನಿಯಾಯಿತು. ತಂಡಕ್ಕೆ ಅಂತಿಮ 32ರ ಸುತ್ತಿನಲ್ಲಿ ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಸವಾಲು ಎದುರಾಗಲಿದೆ.