ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ನಾಕೌಟ್‌ ಪಂದ್ಯಗಳಲ್ಲಿ ಬ್ರೆಜಿಲ್‌ ಹಾಗೂ ಕೆನಡಾ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ. ಜಪಾನ್‌ ವಿರುದ್ಧ ಬ್ರೆಜಿಲ್‌ 2-1 ಗೋಲುಗಳಿಂದ ಗೆದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧ ಕೆನಡಾ 1-0 ಅಂತರದಲ್ಲಿ ಐತಿಹಾಸಿಕ ಜಯ ಸಾಧಿಸಿತು.

ಹ್ಯೂಸ್ಟನ್‌/ ಲಾಸ್‌ ಏಂಜಲೀಸ್‌: ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಬ್ರೆಜಿಲ್‌ ಹಾಗೂ ಕೆನಡಾ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ. ಸೋಮವಾರ ನಡೆದ ಜಪಾನ್‌ ವಿರುದ್ಧದ ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್‌ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

29ನೇ ನಿಮಿಷದಲ್ಲೇ ಜಪಾನ್‌ ಮುನ್ನಡೆ ಸಾಧಿಸಿತು. ಕೈಶು ಸಾನೊ ಗೋಲು ಬಾರಿಸಿದರು. ಮೊದಲಾರ್ಧವನ್ನು ಜಪಾನ್‌ 1-0 ಮುನ್ನಡೆಯೊಂದಿಗೆ ಮುಕ್ತಾಯಗೊಳಿಸಿತು. 56ನೇ ನಿಮಿಷದಲ್ಲಿ ಕ್ಯಾಸಿಮಿರೊ ಬ್ರೆಜಿಲ್‌ಗೆ ಮೊದಲ ಗೋಲು ತಂದುಕೊಟ್ಟರು. ಪಂದ್ಯದ ಕೊನೆ ಕ್ಷಣದಲ್ಲಿ (90+6ನೇ ನಿಮಿಷ), ಗೇಬ್ರಿಯಾಲ್‌ ಮ್ಯಾರ್ಟಿನೆಲಿ ಬಾರಿಸಿದ ಗೋಲು, ಬ್ರೆಜಿಲ್‌ಗೆ ಜಯ ತಂದುಕೊಟ್ಟಿತು.

ಕೆನಡಾ ಇತಿಹಾಸ: 

3ನೇ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಕೆನಡಾ, ಇದೇ ಚೊಚ್ಚಲ ಬಾರಿಗೆ ಅಂತಿಮ-16ರ ಸುತ್ತು ಪ್ರವೇಶಿಸಿದೆ. ಅಂತಿಮ-32ರ ಸುತ್ತಿನ ನಾಕೌಟ್‌ ಪಂದ್ಯದಲ್ಲಿ, ಕೆನಡಾ 1-0 ಗೋಲಿನ ಅಂತರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿತು.

ಈ ಮೊದಲು 1986, 2022ರಲ್ಲಿ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದಿದ್ದ ಕೆನಡಾ, ಎರಡೂ ಆವೃತ್ತಿಗಳಲ್ಲಿ ಒಂದೂ ಗೆಲುವು ಕಾಣದೆ ಗುಂಪು ಹಂತದಲ್ಲೇ ಹೊರಬಿದ್ದಿತ್ತು.

ಕೊನೆಯ ಕ್ಷಣದ ಮ್ಯಾಜಿಕ್ ಗೋಲು: 

ನಿಗದಿತ ಸಮಯದಲ್ಲಿ ಗೋಲು ದಾಖಲಾಗುವು ಲಕ್ಷಣಗಳು ಕಾಣಲಿಲ್ಲ. ಪಂದ್ಯ ಹೆಚ್ಚುವರಿ ಸಮಯಕ್ಕೆ ಹೋಗಬಹುದು ಎನ್ನುವಾಗ ಇಂಜುರಿ ಟೈಮ್‌ನಲ್ಲಿ (92ನೇ ನಿಮಿಷ) ಸ್ಟೀಫನ್ ಯುಸ್ಟಾಕಿಯೊ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಈ ಏಕೈಕ ಗೋಲು ಕೆನಡಾ ತಂಡದ ಐತಿಹಾಸಿಕ ಜಯಕ್ಕೆ ಕಾರಣವಾಯಿತು.