ISL 2019; ಉಕ್ಕಿನನಗರಿಯಲ್ಲಿ ಜೆಮ್‌ಶೆಡ್‌ಪುರ vs ಹೈದರಾಬಾದ್ ಮುಖಾಮುಖಿ!
ಐಎಸ್ಎಲ್ ಟೂರ್ನಿಯಲ್ಲಿಂದು ರೋಚಕ ಹೋರಾಟ. ಜೆಮ್‌ಶೆಡ್‌ಪುರ ಹಾಗೂ ಹೈದರಾಬಾದ್ ತಂಡ ಹೋರಾಟಕ್ಕೆ ಸಜ್ಜಾಗಿದೆ. ಜೆಮ್‌ಶೆಡ್‌ಪುರ 2ನೇ ಗೆಲುವಿಗೆ ಹೊಂಚು ಹಾಕಿದ್ದರೆ, ಹೈದರಾಬಾದ್ ಮೊದಲ ಗೆಲುವಿನ ವಿಶ್ವಾಸದಲ್ಲಿದೆ. ಉಭಯ ತಂಡಕ್ಕೂ ಇಂಜುರಿ ಸಮಸ್ಯೆ ಕಾಡುತ್ತಿದೆ.
ಜೆಮ್‌ಶೆಡ್‌ಪುರ(ಅ.29): ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿಂದು(ಮಂಗಳವಾರ) ಗೆಲುವಿನ ನಾಗಾಲೋಟ ಮುಂದವರಿಸಲು ಜೆಮ್‌ಶೆಡ್‌ಪುರ ತಂಡ ಸಜ್ಜಾಗಿದೆ. ಜೆಆರ್ ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಆತಿಥೇಯ ಜೆಮ್‌ಶೆಡ್‌ಪುರ FC ಹಾಗೂ ಹೈದರಾಬಾದ್ Fc ಮುಖಾಮುಖಿಯಾಗುತ್ತಿವೆ. ಲೀಗ್ ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಹೈದರಾಬಾದ್ ಎಫ್ ಸಿ 0-5 ಅಂತರದಲ್ಲಿ ಎಟಿಕೆ ವಿರುದ್ಧ ಸೋಲಿನ ಆಘಾತ ಕಂಡಿತ್ತು. ಇನ್ನೊಂದೆಡೆ ಜೆಮ್‌ಶೆಡ್‌ಪುರ ಎಫ್ ಸಿ, ಒಡಿಶಾ ಎಫ್ ಸಿ ವಿರುದ್ಧ 2-1 ಅಂತರದಲ್ಲಿ ಜಯ ಗಳಿಸಿತ್ತು, ಅಂತಿಮ ಹಂತದಲ್ಲಿ ಕೇವಲ ಹತ್ತು ಮಂದಿ ಆಟಗಾರರನ್ನು ಹೊಂದಿದ್ದರೂ ಸೆರ್ಗಿಯೋ ಗ್ಯಾಸ್ಟಲ್ ಗಳಿಸಿದ ಗೋಲು ತಂಡಕ್ಕೆ ಮೂರು ಅಂಕಗಳನ್ನು ತಂದುಕೊಟ್ಟಿತು.
ಇದನ್ನೂ ಓದಿ: ಬೆಂಗಳೂರು vs ಗೋವಾ ಪಂದ್ಯ 1-1 ಗೋಲುಗಳಲ್ಲಿ ಡ್ರಾ!
ಬಿಕಾಶ್ ಜೈರು ರೆಡ್ ಕಾರ್ಡ್ ಪಡೆದ ನಂತರ ಕೋಚ್ ಅಂಟೋನಿಯೋ ಇರಿಯೊಂಡೋ ತಂಡದ ರಣ ತಂತ್ರವನ್ನು ಬದಲಾಯಿಸಿ, ಜಯಕ್ಕೆ ಹಾದಿ ಮಾಡಿಕೊಟ್ಟರು. 38 ವರ್ಷದ ಪಿಟಿ, ಟಾಟಾ ಪಡೆಯ ಮಿಡ್ ಫೀಲ್ಡ್ ವಿಭಾಗದಲ್ಲಿ ಆಧಾರವೆನಿಸಿದ್ದಾರೆ. ಕ್ಯಾಸ್ಟಲ್ ಈಗಾಗಲೇ ಮೊದಲ ಪಂದ್ಯದಲ್ಲಿ ಜಯದ ಗೋಲ್ ,ಗಳಿಸಿದ್ದು, ಮತ್ತೆ ತಂಡಕ್ಕೆ ನೆರವಾಗುವ ಹುಮ್ಮಸ್ಸಿನಲ್ಲಿದ್ದಾರೆ. ಜೈರು ಅಮಾನತುಗೊಂಡಿದ್ದು, ಸಿ ಕೆ ವಿನೀತ್ ಗಾಯದ ಕಾರಣ ಪಂದ್ಯದಲ್ಲಿ ಆಡುತ್ತಿಲ್ಲ.
ಇದನ್ನೂ ಓದಿ: ISL ಆರಂಭವಾದಾಗ ಬಾಲ್ ಬಾಯ್; ಈಗ ಸ್ಟಾರ್ ಫುಟ್ಬಾಲ್ ಪಟು!
''ತಂಡ ಇನ್ನೂ ಹೊಸ ರೂಪು ಪಡೆಯುವ ಹಾಗೂ ಪರಿಸ್ಥಿತಿಗೆ ಹೊಂದಿಕೊಲ್ಲುವುದರಲ್ಲಿದೆ, ನಮ್ಮ ಶೈಲಿಯ ಆಟಕ್ಕೆ ನಾವು ಹೊಂದಿಕೊಳ್ಳಬೇಕಾಗಿದೆ. ಒಡಿಶಾ ವಿರುದ್ಧ ನಮ್ಮ ಆಟಗಾರರು ಉತ್ತಮ ರೀತಿಯಲ್ಲಿ ಹೋರಾಟ ನೀಡಿದ್ದಾರೆ. ಆ ಬಗ್ಗೆ ನಮಗೆ ಖುಷಿ ಇದೆ. ಫಲಿತಾಂಶವೂ ಖುಷಿ ಕೊಟ್ಟಿದೆ. ಇದಕ್ಕಿಂತಲೂ ಉತ್ತಮವಾಗಿ ಆಡುವುದು ನಮ್ಮ ಗುರಿ, ಈ ಹಂತದಲ್ಲಿ ನಾವು ಇನ್ನೂ ಸುಧಾರಣೆ ಕಂಡುಕೊಳ್ಳಬೇಕಿದೆ. ನಾವು ಚೆಂಡನ್ನು ನಿಯಂತ್ರಿಸುವುದರ ಜತೆಯಲ್ಲಿ ಪಂದ್ಯವನ್ನೂ ನಿಯಂತ್ರಿಸಬೇಕಾಗಿದೆ.,'' ಎಂದು ಜೆಮ್‌ಶೆಡ್‌ಪುರ ತಂಡದ ಇರಿಯಂದೋ ಹೇಳಿದ್ದಾರೆ.
ಇದನ್ನೂ ಓದಿ: ISL; ಕೋಲ್ಕತಾ ಆರ್ಭಟಕ್ಕೆ ಶರಣಾದ ಹೈದರಾಬಾದ್!
ಎದುರಾಳಿ ತಂಡ ಹೈದರಾಬಾದ್ ಎಟಿಕೆ ವಿರುದ್ಧ ಬೃಹತ್ ಅಂತರದಲ್ಲಿ ಸೋಲನುಭವಿಸಿ, ಜೆಮ್‌ಶೆಡ್‌ಪುರ ಆಗಮಿಸಿದೆ, ಕೋಲ್ಕತಾದಲ್ಲಿ ಹೈದರಾಬಾದ್ ಉತ್ತಮ ರೀತಿಯಲ್ಲಿ ಆಡಿಲ್ಲ, ತಂಡದ ಪ್ರಮುಖ ಆಟಗಾರರಾದ, ಮಾರ್ಸಿಲಿನೊ, ಮಾರ್ಕೊ ಸ್ಟ್ಯಾಂಕೋವಿಕ್ ಮತ್ತು ಬಾರ್ನೆಸ್ ಉತ್ತಮವಾಗಿ ಆಡುವಲ್ಲಿ ವಿಫಲರಾಗಿರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಮಿಡ್ ಫೀಲ್ಡರ್ ಆದಿಲ್ ಖಾನ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡದಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣ.
''ಮೊದಲ ಪಂದ್ಯದ ನಂತರ ನಾವು ಒಂದಿಷ್ಟು ಅಭ್ಯಾಸ ಮಾಡಿದ್ದೇವೆ. 5-0 ಅಂತರದಲ್ಲಿ ಸೋತಿರುವುದು ಆಟಗಾರರಿಗೆ ಉತ್ತಮವಾದುದಲ್ಲ.ಇದು ಆಟಗಾರರ ಮನಸ್ಸಿನ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಆದರೆ ನಾವು ಸೋಲಿನಿಂದ ಚೇತರಿಸಿಕೊಂಡಿದ್ದೇವೆ, ನಮ್ಮ ತಂಡ ಈಗ ಸಜ್ಜಾಗಿದೆ,'' ಎಂದು ಕೋಚ್ ಫಿಲ್ ಬ್ರೌನ್ ಹೇಳಿದ್ದಾರೆ.
ಬೊಬೊ, ಗಿಲ್ಲೆಸ್ ಬಾರ್ನೆಸ್, ರಫೆಲ್ ಗೊಮೆಜ್, ಮತ್ತು ಆಶೀಶ್ ರಾಯ್ ಗಾಯಗೊಂಡಿರುವುದು ತಂಡದ ಬಲವನ್ನು ಕುಗ್ಗಿಸಿರುವುದು ಸಹಜ. ಜತೆಯಲ್ಲಿ ಸ್ಪೇನ್ ಮೂಲದ ಮಿಡ್ ಫೀಲ್ಡರ್ ನೆಸ್ಟರ್ ಗೋರ್ಡಿಲ್ಲೋ ಇನ್ನೂ ಅಮಾನತಿನಲ್ಲಿದ್ದು, ಇದರಿಂದ ಬ್ರೌನ್ ಅವರ ಆಯ್ಕೆ ಸೀಮಿತವಾಗಿದೆ.
'' ನಮ್ಮಲ್ಲಿ ಬಹಳ ಸಂಖ್ಯೆಯಲ್ಲಿ ಗುಣಮಟ್ಟದ ಆಟಗಾರರಿಲ್ಲ, ನಮ್ಮಲ್ಲಿ ಬೊಬೊ ಉತ್ತಮವಾಗಿ ಆಡಬಲ್ಲರು, ಆದರೆ ಗಾಯದ ಸಮಸ್ಯೆ, ನೆಸ್ಟರ್ ಅಮಾನತುಗೊಂಡಿದ್ದಾರೆ. ಗಾಯಗೊಂಡಿರಿರುವ ಆಟಗಾರರ ಪಟ್ಟಿ ದೊಡ್ಡದಿದೆ. ಜೇಮ್ಶೆಡ್ಪುರದ ಹೋರಾಟಕ್ಕೆ ಪ್ರತಿಯಾಗಿ ಸವಾಲೊಡ್ಡಬಲ್ಲ ಆಟಗಾರರು ನಮ್ಮಲ್ಲಿದ್ದಾರೆ.'' ಎಂದು ಅವರು ಹೇಳಿದ್ದಾರೆ.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹೈದರಾಬಾದ್ ವಿರುದ್ಧ ಜೆಮ್‌ಶೆಡ್‌ಪುರ ಜಯ ಗಳಿಸುವ ಗುರಿ ಹೊಂದಿದೆ , ಇನ್ನೊಂದೆಡೆ ಉತ್ತಮ ಹೋರಾಟ ನೀಡಿ ಜಯದ ಖಾತೆ ತೆರೆಯುವ ಹಂಬಲದಲ್ಲಿದೆ ಹೈದರಾಬಾದ್.