ISL; ಕೋಲ್ಕತಾ ಆರ್ಭಟಕ್ಕೆ ಶರಣಾದ ಹೈದರಾಬಾದ್!
ISL ಟೂರ್ನಿಯನ್ನು ಸೋಲಿನೊಂದಿಗೆ ಆರಂಭಿಸಿದ ಎಟಿಕೆ ಇದೀಗ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಚೊಚ್ಚಲ ಬಾರಿ ಐಎಸ್ಎಲ್ ಟೂರ್ನಿ ಆಡುತ್ತಿರುವ ಹೈದರಾಬಾದ್ ವಿರುದ್ದ ಮಿಂಚಿನ ಪ್ರದರ್ಶನ ನೀಡಿದ ಕೋಲ್ಕತಾ ತವರಿನ ಅಭಿಮಾನಿಗಳಿಗೆ ಗೆಲುವಿನ ಸಹಿ ನೀಡಿದೆ.
ಕೋಲ್ಕೊತಾ(ಅ.25): ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಹೈದರಾಬಾದ್ ಎಫ್ ಸಿ ಆರಂಭದಲ್ಲೇ ಸೋಲಿನ ಕಹಿ ಅನುಭವಿಸಿದೆ. ಎರಡು ಬಾರಿ ಚಾಂಪಿಯನ್ ಎಟಿಕೆ ವಿರುದ್ಧ ಹೋರಾಟ ನಡೆಸಿದ ಹೈದರಾಬಾದ್ ಹೀನಾಯ ಸೋಲು ಅನುಭವಿಸಿತು. ವಿಲಿಯಮ್ಸ್ ಹಾಗೂ ಎಡು ಗಾರ್ಸಿಯಾ ಅವರು ತಲಾ ಎರಡು ಅದ್ಭುತ ಗೋಲುಗಳ ನೆರವಿನಿಂದ ಎಟಿಕೆ 5-0 ಅಂತರದಲ್ಲಿ ಹೈದರಾಬಾದ್ ಬೃಹತ್ ಜಯ ಗಳಿಸಿ ಮೊದಲ ಪಂದ್ಯದ ಸೋಲು ಮರೆಯಿತು.
ಇದನ್ನೂ ಓದಿ: ISL ಆರಂಭವಾದಾಗ ಬಾಲ್ ಬಾಯ್; ಈಗ ಸ್ಟಾರ್ ಫುಟ್ಬಾಲ್ ಪಟು!
ಎಟಿಕೆ ಗೆ ಅದ್ಭುತ ಮುನ್ನಡೆ
ನಿರೀಕ್ಷೆಯಂತೆ ಎಟಿಕೆ ಮನೆಯಂಗಣದಲ್ಲಿ ಮಿಂಚಿದೆ. ಪ್ರಥಮಾರ್ಧದಲ್ಲೇ 3-0 ಗೋಲುಗಳಿಂದ ಮೇಲುಗೈ ಸಾಧಿಸಿ ಜಯಕ್ಕೆ ಅಗತ್ಯ ಇರುವ ವೇದಿಕೆ ಹಾಕಿತು. ಹೈದರಾಬಾದ್ ದ್ವಿತೀಯಾರ್ಧದಲ್ಲಿ ಗೋಲು ಗಾಳಿಸುವುದಕ್ಕಿಂತ ಗೋಲು ತಡೆಯುವುದೇ ಸೂಕ್ತ ಎಂಬ ವಾತಾವರಣವನ್ನು ಎಟಿಕೆ ನಿರ್ಮಿಸಿತು. ಡೇವಿಡ್ ವಿಲಿಯಮ್ಸ್ 25ನೇ ನಿಮಿಷದಲ್ಲಿ ಎಟಿಕೆ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಮೂರು ನಿಮಿಷಗಳ ಅಂತರದಲ್ಲಿ ಎಟಿಕೆ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು. 27ನೇ ನಿಮಿಷದಲ್ಲಿ ರಾಯ್ ಕೃಷ್ಣ ತಂಡದ ಪರ ಎರಡನೇ ಹಾಗೂ ವೈಯಕ್ತಿಕ ಮೊದಲ ಗೋಲು ಗಳಿಸಿ ತಮ್ಮ ತಂಡ ಪ್ರಭುತ್ವ ಸಾಧಿಸುವಂತೆ ಮಾಡಿದರು. 44ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್ ಎರಡನೇ ಗೋಲು ಗಳಿಸಿ ತಂಡಕ್ಕೆ 3-0 ಮುನ್ನಡೆ ತಂದುಕೊಟ್ಟರು.
ಇದನ್ನೂ ಓದಿ: ISL ಗೋಲಿಲ್ಲದೆ ಡ್ರಾಗೊಂಡ ಬಿಎಫ್‌ಸಿ ಪಂದ್ಯ
ಕೇರಳ ವಿರುದ್ಧ ಆರಂಭದಲ್ಲೇ ಗೋಲು ಗಳಿಸಿ ಮೇಲುಗೈ ಸಾಧಿಸಿದರೂ ದ್ವಿತೀಯಾರ್ಧದಲ್ಲಿ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿತ್ತು. ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎಟಿಕೆ ಮೊದಲ ಬಾರಿಗೆ ಬೃಹತ್ ಅಂತರದ ಜಯ ಗಳಿಸಿತು. ಡೇವಿಡ್ ವಿಲಿಯಮ್ಸ್ (25, 44 ನೇ ನಿಮಿಷ) ಹಾಗೂ ಎಡು ಗಾರ್ಸಿಯ (88, 90ನೇ ನಿಮಿಷ) ಅವರ ಡಬಲ್ ಗೋಲು ಗಳು ಜತೆಯಲ್ಲಿ ರಾಯ್ ಕೃಷ್ಣ (27ನೇ ನಿಮಿಷ) ಗೋಲಿನ ನೆರವಿನಿಂದ ದುರ್ಬಲ ಹೈದರಾಬಾದ್ ಎಫ್ ಸಿ ವಿರುದ್ಧ ಮಾಜಿ ಚಾಂಪಿಯನ್ ಎಟಿಕೆ 5-0 ಅಂತರದಲ್ಲಿ ಜಯ ಗಳಿಸಿತು.