ಪುಣೆ(ಅ.23):  ಇಂಡಿಯನ್ ಸೂಪರ್ ಲೀಗ್ ಆರಂಭವಾದಾಗ ಪುಣೆಯ ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಭಾರತ ಪುಟ್ಬಾಲ್ ಪಟುಗಳಾದ ಪ್ರೀತಮ್ ಕೊಟಾಲ್ ಹಾಗೂ ಲೆನ್ನಿ ರಾಡ್ರಿಗಸ್ ಅವರಿಗೆ ಚೆಂಡನ್ನು ತಂದು ಕೊಡುತ್ತಿದ್ದ 14 ವರ್ಷದ ಬಾಲಕ ಅನಿಕೇತ್ ಜಾಧವ್, ಇದೀಗ ಐಎಸ್ಎಲ್ ಟೂರ್ನಿಯಲ್ಲಿ ಸ್ಟಾರ್ ಫುಟ್ಬಾಲ್ ಪಟುವಾಗಿ ಹೊರಹೊಮ್ಮಿದ್ದಾರೆ ಸತತ 6 ವರ್ಷಗಳ ಕಠಿಣ ಪರಿಶ್ರಮ, ಅಭ್ಯಾಸ ಬಾಲಕ ಅನಿಕೇತ್ ಕನಸು ನನಸಾಯಿತು. ಅದೇ ಐಎಸ್ ಎಲ್ ನಲ್ಲಿ ಜೆಮ್‌ಶೆಡ್‌ಪುರ ತಂಡದ ಪರ ಆಡಲು ಸಜ್ಜಾಗಿರುವುದು ಅಚ್ಚರಿಯೇ ಸರಿ.

ಇದನ್ನೂ ಓದಿ: ತವರಿನಲ್ಲಿ ಗೆಲುವಿನ ಖಾತೆ ತೆರೆದ ಜೆಮ್‌ಶೆಡ್‌ಪುರ್ FC!

2017ರ ಫಿಫಾ 17ರ ವಯೋಮಿತಿಯ ವಿಶ್ವ ಕಪ್ ನಲ್ಲಿ ಭಾರತ ತಂಡದ ಪರ ಆಡಲು ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದ, ಕೊಲ್ಹಾಪುರ ಸಂಜಾತ ಯುವ ಆಟಗಾರ  ಮಂಗಳವಾರ ಒಡಿಶಾ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಇಂಡಿಯನ್ ಸೂಪರ್ ಲೀಗ್ ಗೆ ಪದಾರ್ಪಣೆ ಮಾಡಿದರು.

''ಇಂಡಿಯನ್ ಸೂಪರ್ ಲೀಗ್ ನ ಜೇಮ್ಶೆಡ್ಪುರ ತಂಡದ ಪರ ಪದಾರ್ಪಣೆ ಮಾಡಿರುವುದು, ಅತೀವ ಸಂಭ್ರಮವನ್ನುಂಟು ಮಾಡಿದೆ. ಈ ಋತುವಿನುದ್ದಕ್ಕೂ ಉತ್ತಮ ಪ್ರದರ್ಶನ ತೋರಲು ಉತ್ಸುಕನಾಗಿದ್ದೇನೆ,'' ಎಂದು 19 ವರ್ಷದ ಆಟಗಾರ ಅನಿಕೇತ್ ಹೇಳಿದರು.  U-17 ವಿಶ್ವ ಕಪ್ ಬಳಿಕ  ಅನಿಕೇತ್ ಐ-ಲೀಗ್ ನಲ್ಲಿ  ಇಂಡಿಯನ್ ಏರೋಸ್  ಪರ ಆಡಿದ್ದರು.

ಇದನ್ನೂ ಓದಿ:ISL ಗೋ​ಲಿ​ಲ್ಲದೆ ಡ್ರಾಗೊಂಡ ಬಿಎಫ್‌ಸಿ ಪಂದ್ಯ

ಜೇಮ್ಶೆಡ್ಪುರ ತಂಡವನ್ನೇ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಮಾತನಾಡಿದ ಅನಿಕೇತ್, '' ನಾನು ಚಿಕ್ಕವನಿರುವಾಗ ಸುಬ್ರತಾ ಪಾಲ್  ಹಾಗೂ ಸ್ಟೀವನ್ ಡಯಾಸ್ (ಈಗ ಜೇಮ್ಶೆಡ್ಪುರದ ಸಹಾಯಕ ಕೋಚ್) ಅವರನ್ನು ಅನುಸರಿಸುತ್ತಿದ್ದೆ.  ಬಾಲೆವಾಡಿ  ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯಗಳಿಗೆ ಬಾಲ್ ಬಾಯ್ ಆಗಿ  ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದೆ. ಜೇಮ್ಶೆಡ್ಪುರ ತಂಡಕ್ಕೆ ಸಹಿ ಮಾಡುವ ಮೊದಲು  ಐದಾರು ಮಂದಿ ಹಿರಿಯ ಆಟಗಾರರೊಂದಿಗೆ ಚರ್ಚಿಸಿರುವೆ,  ಎಲ್ಲರೂ ಸೌಲಭ್ಯ ಹಾಗೂ ತಂಡದ ಸಂಸ್ಕಾರದ ಬಗ್ಗೆ ಉತ್ತಮವಾಗಿಯೇ ಮಾತನಾಡಿದರು,''  ಎಂದು ಅನಿಕೇತ್ ಟಾಟಾ ತಂಡದ ಬಗ್ಗೆ ಇರುವ ಪ್ರೀತಿಯನ್ನು ಹಂಚಿಕೊಂಡರು.

ಅನಿಕೇತ್ ಮೂರು ತಿಂಗಳ ಕಾಲ ಇಂಗ್ಲಿಷ್ ಕ್ಲಬ್ ಬ್ಲಾಕ್ ಬರ್ನ್ ರೋವರ್ಸ್ ನಲ್ಲಿ ತರಬೇತಿ ಪಡೆದಿದ್ದಾರೆ. ಅಲ್ಲಿ ಪಡೆದಿರುವ ಅನುಭವವನ್ನು ಮುಂಬರುವ ಪಂದ್ಯಗಳಲ್ಲಿ ವಿನಿಯೋಗಿಸಿಕೊಳ್ಳುವುದಾಗಿ ಹೇಳಿದರು. 
''ತರಬೇತಿ ಪಡೆಯಲು ಸಿಕ್ಕಿದ ಉತ್ತಮ ಅವಕಾಶ ಅದಾಗಿತ್ತು. ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಅಲ್ಲಿ  ಬಹಳಷ್ಟು  ಕಲಿತಿರುವೆ, ಬ್ಲಾಕ್ ಬರ್ನ್ ತಂಡದ ಕೋಚ್ ಹಾಗೂ ತರಬೇತುದಾರರಿಂದ ಸಾಕಷ್ಟು ಅನುಭವ ಸಿಕ್ಕಿತು. ನನ್ನ ಕೆಲಿಕೆಯ ಅಂಶಗಳನ್ನು ಇಂಡಿಯನ್ ಸೂಪರ್ ಲೀಗ್ ನಲ್ಲಿ ಬಳಸಿಕೊಳ್ಳಲು ಯತ್ನಿಸುವವೆ,'' ಎಂದು ಅನಿಕೇತ್ ಹೇಳಿದರು. 

ತಂಡದ ಆಟಗಾರರ ಪಟ್ಟಿಯಲ್ಲಿ ಸಿಕೆ ವಿನೀತ್, ಹಾಗೂ ಫಾರೂಕ್ ಚೌಧರಿ ಅವರ ಸಮ್ಮುಖದಲ್ಲಿ ಆರಂಭದಲ್ಲಿ ಹೆಸರು ಕಾಣಿಸಿಕೊಳ್ಳುವುದು ಕಷ್ಟ ಎಂಬುದು ಅನಿಕೇತ್ ಗೆ ಚೆನ್ನಾಗಿ ಗೊತ್ತಿತ್ತು, ಆದರೆ ಅವರ ಕಠಿಣ ಪರಿಶ್ರಮ ಬೆಲೆ ಕೊಟ್ಟಿತು.