ದೀಪಾವಳಿ ಧಮಾಕಾ; ಬೆಂಗಳೂರು FC ಹಾಗೂ ಗೋವಾ ಮುಖಾಮುಖಿ!
ISL ಟೂರ್ನಿಯಲ್ಲಿನ ಬಲಿಷ್ಠ ತಂಡಗಳಾದ ಬೆಂಗಳೂರು FC ಹಾಗೂ FC ಗೋವಾ ಹೋರಾಟಕ್ಕೆ ಸಜ್ಜಾಗಿದೆ. ಕಳೆದ ಬಾರಿ ಫೈನಲ್ ಪಂದ್ಯದಲ್ಲಿ ಇದೇ ತಂಡಗಳು ಎದುರುಬದುರಾಗಿತ್ತು. ಇದೀಗ ಲೀಗ್‌ನ ಆರಂಭದಲ್ಲೇ ರೋಚಕ ಹೋರಾಟಕ್ಕೆ ರೆಡಿಯಾಗಿದೆ.
ಗೋವಾ(ಅ.26): ಕಳೆದ ವರ್ಷ ಫೈನಲ್ ಪಂದ್ಯದಲ್ಲಿ ಸೆಣಸಿದ್ದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಹಾಗೂ ಎಫ್ ಸಿ ಗೋವಾ ತಂಡಗಳು ಸೋಮವಾರ(ಅ.28) ಇಂಡಿಯನ್ ಸೂಪರ್ ಲೀಗ್ ನಲ್ಲಿ ದೀಪಾವಳಿಯ ದಿನದಂದು ಮುಖ ಮುಖಿಯಾಗುತ್ತಿರುವುದು ಫುಟ್ಬಾಲ್ ಅಭಿಮಾನಿಗಳಲ್ಲಿ ಕುತೂಹಲವನ್ನು ಉಂಟುಮಾಡಿದೆ. ಒಂದು ರೀತಿಯಲ್ಲಿ ಇದು ಕಳೆದ ಋತುವಿನ ಫೈನಲ್ ಇದ್ದಂತೆ.
ಇದನ್ನೂ ಓದಿ: ISL ಗೋಲಿಲ್ಲದೆ ಡ್ರಾಗೊಂಡ ಬಿಎಫ್‌ಸಿ ಪಂದ್ಯ
ಇಂಡಿಯನ್ ಸೂಪರ್ ಲೀಗ್ ನಲ್ಲಿ ಕಾಡೆತ್ತುಗಳು ಎಂದೇ ಹೆಸರಾಗಿರುವ ಗೋವಾ ಹಾಗೂ ಬ್ಲೂಸ್ ಖ್ಯಾತಿಯ ಬೆಂಗಳೂರು ತಂಡ ಐಎಸ್ ಎಲ್ ನಲ್ಲಿ ಬಲಿಷ್ಠ ತಂಡಗಳಾಗಿದ್ದು ಕಳೆದ ಋತುವಿನ ಫೈನಲ್ ಪಂದ್ಯದಲ್ಲಿ ಅತ್ಯಂತ ರೋಚಕ ಹೋರಾಟವನ್ನು ನೀಡಿದ್ದವು. ಹೆಚ್ಚುವರಿ ಸಮಯದಲ್ಲಿ ರಾಹುಲ್ ಬಿಖೆ ಹೆಡರ್ ಮೂಲಕ ಗಳಿಸಿದ ಗೋಲಿನಿಂದ ಬೆಂಗಳೂರು ಚಾಂಪಿಯನ್ ಪಟ್ಟ ಗೆದ್ದಿತ್ತು.
ಇದನ್ನೂ ಓದಿ: ISL ಆರಂಭವಾದಾಗ ಬಾಲ್ ಬಾಯ್; ಈಗ ಸ್ಟಾರ್ ಫುಟ್ಬಾಲ್ ಪಟು!
ಅದು ಬೆಂಗಳೂರು ಪಾಲಿಗೆ ಮೊದಲ ಪ್ರಶಸ್ತಿಯಾಗಿತ್ತು. ಈ ಫಲಿತಾಂಶ ಗೋವಾಕ್ಕೆ ಆಘಾತವನ್ನು ಉಂಟುಮಾಡಿತ್ತು. ಎರಡು ಬಾರಿ ಫೈನಲ್ ತಲುಪಿರುವ ಗೋವಾ ಪ್ರಶಸ್ತಿಯಿಂದ ವಂಚಿತವಾಗಿತ್ತು.
''ಫೈನಲ್ ನಲ್ಲಿ ಸೋತಿರುವುದು ಈಗ ಇತಿಹಾಸ, ಫೈನಲ್ ನಲ್ಲಿ ಆಡಿರುವ ನಮ್ಮ ಆಟಗಾರರ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ಉತ್ತಮ ರೀತಿಯಲ್ಲಿ ಹೋರಾಟ ನೀಡಿದ್ದಾರೆ. ಮುಂದಿನ ಪಂದ್ಯದಲ್ಲಿ ನಾವು ಫೈನಲ್ ನಲ್ಲಿ ನೀಡಿದ ಹೋರಾಟವನ್ನೇ ನೀಡಲಿದ್ದೇವೆ ಎಂದು ನಂಬಿರುತ್ತೇನೆ. ನಾವು ಉತ್ತಮ ರೀತಿಯಲ್ಲಿ ಸುಧಾರಣೆ ಕಂಡಿದ್ದೇವೆ,'' ಎಂದು ಗೋವಾ ತಂಡದ ಪ್ರಧಾನ ಕೋಚ್ ಸೆರ್ಜಿಯೋ ಲೊಬೆರಾ ಹೇಳಿದ್ದಾರೆ.
ಇದನ್ನೂ ಓದಿ: ISL; ಕೋಲ್ಕತಾ ಆರ್ಭಟಕ್ಕೆ ಶರಣಾದ ಹೈದರಾಬಾದ್!
ಗೋವಾ ಮತ್ತು ಬೆಂಗಳೂರು ತಂಡಗಳಲ್ಲಿ ಹೆಚ್ಚಿನ ಬದಲಾವಣೆಗಳು ಇಲ್ಲದ ಕಾರಣ ಈ ಬಾರಿಯೂ ಇತ್ತಂಡಗಳ ನಡುವೆ ಉತ್ತಮ ಪೈಪೋಟಿಯ ಸಾಧ್ಯತೆ ಇದೆ. ಉಭಯ ತಂಡಗಳು ಉತ್ತಮ ರೀತಿಯಲ್ಲಿ ವೃತ್ತಿಪರ ಫುಟ್ಬಾಲ್ ಆಡುತ್ತಿರುವುದು ಐಎಸ್ ಎಲ್ ನಲ್ಲಿ ಇತರ ಕ್ಲಬ್ ಗಳಿಗೆ ಹೋಲಿಸಿದರೆ ಶ್ರೇಷ್ಠ ಸ್ಥಾನದಲ್ಲಿ ನಿಲ್ಲುತ್ತವೆ.
''ಗೋವಾ ತಂಡ ಯಾವಾಗಲೂ ಅತಿ ದೊಡ್ಡ ಸವಾಲು ಎಂಬುದು ನಮಗೆ ಯಾವಾಗಲೂ ಗೊತ್ತಿದೆ, ಏಕೆಂದರೆ ಅದು ಅದ್ಭುತ ತಂಡ. ಬಹಳ ಕಾಲದಿಂದ ತಂಡದಲ್ಲಿ ಹೆಚ್ಹಿನ ಬದಲಾವಣೆ ಆಗಿಲ್ಲ. ಇದು ಅತ್ಯಂತ ಕುತೂಹಲದ ಪಂದ್ಯ. ಇದು ಋತುವಿನಲ್ಲಿ ಆರಂಭದಲ್ಲೇ ಬಂದಿದೆ, ಆದ್ದರಿಂದ ಈ ಅಂಕ ಅತ್ಯಂತ ಮುಖ್ಯವಾದುದು. ಆದರೂ ಋತು ಈಗಷ್ಟೇ ಆರಂಭಗೊಂಡಿದೆ,'' ಎಂದು ಬೆಂಗಳೂರು ಎಫ್ ಸಿ ಪ್ರಧಾನ ಕೋಚ್ ಕಾರ್ಲೆಸ್ ಕ್ವಾಡ್ರಟ್ ಹೇಳಿದ್ದಾರೆ.
ಈ ಎರಡು ಕ್ಲಬ್ ಗಳ ನಡುವಿನ ಹೋರಾಟವೆಂದರೆ ಐಎಸ್ ಎಲ್ ನಲ್ಲೇ ಅತ್ಯಂತ ಉನ್ನತ ಮಟ್ಟದ ಸ್ಪರ್ಧೆ ಎಂದರೆ ತಪ್ಪಾಗಲಾರದು. ಏಕೆಂದರೆ ಇತ್ತಂಡಗಳು ಉತ್ತಮ ಗುಣಮಟ್ಟದ ಫುಟ್ಬಾಲ್ ಆಡುತ್ತವೆ.
ಮೊದಲ ಪಂದ್ಯದಲ್ಲೇ ಗೋವಾ ತಂಡ, ಚೆನ್ನೈಯಿನ್ ಎಫ್ ಸಿ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಅದ್ಭುತ ಆರಂಭ ಕಂಡು, ಋತುವಿನ ಆರಂಭಕೆ ಯಶಸ್ಸಿನ ಮುನ್ನುಡಿ ಬರೆದಿತ್ತು,
ಇನ್ನೊಂದೆಡೆ ಬೆಂಗಳೂರು ತಂಡ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಕೇವಲ ಗೋಲಿಲ್ಲದ ಡ್ರಾ ಕಂಡಿತ್ತು. ಪರ್ವತ ಪ್ರದೇಶದ ತಂಡದ ವಿರುದ್ಧ ಗೋಲು ಗಳಿಸಲು ಬೆಂಗಳೂರು ಉತ್ತಮ ರೀತಿಯಲ್ಲಿ ಅವಕಾಶವನ್ನು ಕಲ್ಪಿಸಿತ್ತು, ಆದರೆ ಅದು ಗೋಲಾಗಿ ಪರಿವರ್ತನೆ ಗೊಂಡಿಲ್ಲ,
ಈ ಎರಡು ತಂಡಗಳ ನಡುವಿನ ಹೋರಾಟದಲ್ಲಿ ಗೋವಾದ ದಾಳಿ ಹಾಗೂ ಬೆಂಗಳೂರಿನ ಡಿಫೆನ್ಸ್ ಗಮನಾರ್ಹ. ಐಎಸ್ ಎಲ್ ನಲ್ಲಿ ಅತಿಹೆಚ್ಚು ಗೋಲು ಗಳಿಸಿರುವ ಫರಾನ್ ಕೊರೊಮಿನಾಸ್ ಹಾಗೂ ಗೋಲು ಗಳಿಸಲು ಉತ್ತಮ ರೀತಿಯಲ್ಲಿ ಚೆಂಡನ್ನು ಸೆಟ್ ಮಾಡಬಲ್ಲ ಎಡು ಬೇಡಿಯ, ಹ್ಯೂಗೋ ಬೌಮುಸ್ ಮತ್ತು ಮಾನ್ವಿರ್ ಸಿಂಗ್ ಮಿಂಚಿನ ವೇಗದಲ್ಲಿ ಗೋವಾಕ್ಕೆ ಗೋಲು ಗಳಿಸಬಲ್ಲ ಆಟಗಾರರು.
''ಸುಧಾರಿಸಿಕೊಳ್ಳುವುದನ್ನು ನಾನು ಮುಂದುವರಿಸಲಿದ್ದೇನೆ, ಕಳೆದ ಎರಡು ಮೂರು ವರ್ಷಗಳಲ್ಲಿ ಬೆಂಗಳೂರು ಮತ್ತು ಗೋವಾ ನಡುವಿನ ಅಂತರವು ಕಡಿಮೆಯಾಗಿದೆ, ಇದು ನಾವು ಸುಧಾರಣೆ ಕಂಡಿದ್ದೇವೆ ಎಂಬುದಕ್ಕೆ ಉದಾಹರಣೆ, ಲೀಗ್ ನಲ್ಲಿ ಬೆಂಗಳೂರು ಉತ್ತಮ ತಂಡವಾದ ಕಾರಣ ನಮಗೆ ಕಠಿಣ ಸವಾಲನ್ನು ಎದುರಿಸಬೇಕಾಗಿದೆ,'' ಎಂದು ಲೊಬೆರಾ ಹೇಳಿದ್ದಾರೆ.
ಲೀಗ್ ನ ಎರಡು ಬಲಿಷ್ಠ ತಂಡಗಳು ಸೋಮವಾರ ಮುಖಾಮುಖಿ ಆಗಲಿವೆ, ಇಲ್ಲಿ ಮಿಂಚು ಕಾಣಿಸಿಕೊಳ್ಳುವುದು ಸಹಜ, ಬೆಂಗಳೂರು ತನ್ನ ಎರಡನೇ ಪಂದ್ಯದಲ್ಲಿ ನೇರ ಎದುರಾಳಿಯಾಗಿರುವ ಗೋವಾ ವಿರುದ್ಧ ಜಯ ಗಳಿಸುವ ಗುರಿ ಹೊಂದಿದೆ.