ISL ಗೋಲಿಲ್ಲದೆ ಡ್ರಾಗೊಂಡ ಬಿಎಫ್‌ಸಿ ಪಂದ್ಯ
ಬಿರುಸಿನ ಮಳೆಯಲ್ಲೂ ಜಿದ್ದಾಜಿದ್ದಿನಿಂದ ಕೂಡಿದ್ದ ಕಾದಾಟದಲ್ಲಿ ಬೆಂಗಳೂರು ಎಫ್’ಸಿ ಹಾಗೂ ನಾರ್ಥ್ ಈಸ್ಟ್ ಯುನೈಟೆಡ್ ನಡುವಿನ ಪಂದ್ಯ ಗೋಲು ರಹಿತ ಡ್ರಾಗೆ ಸಾಕ್ಷಿಯಾಯಿತು. ಈ ಕುರಿತಾದ ವರದಿ ಇಲ್ಲಿದೆ ನೋಡಿದೆ.
ಬೆಂಗಳೂರು(ಅ.22): ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಿಯ 6ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡ, ತನ್ನ ಅಭಿಯಾನವನ್ನು ಗೋಲು ರಹಿತ ಡ್ರಾದೊಂದಿಗೆ ಆರಂಭಿಸಿದೆ. ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಮಳೆಯ ನಡುವೆಯೇ ನಡೆದ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಬಿಎಫ್‌ಸಿ ಗೋಲು ಗಳಿಸಲು ವಿಫಲವಾಯಿತು.
ತನ್ನ ಭದ್ರಕೋಟೆ ಕಂಠೀರವ ಕ್ರೀಡಾಂಗಣದಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದ ಬಿಎಫ್‌ಸಿ, ನೆರೆದಿದ್ದ ಸಾವಿರಾರು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಪಂದ್ಯದುದ್ದಕ್ಕೂ ಉಭಯ ತಂಡಗಳ ನಡುವೆ ಭಾರೀ ಪೈಪೋಟಿ ನಡೆಯಿತು. ಎರಡೂ ತಂಡಗಳ ರಕ್ಷಣಾ ಪಡೆಗಳು ಆಕರ್ಷಕ ಪ್ರದರ್ಶನ ತೋರಿದವು. ಬಿಎಫ್‌ಸಿ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಎಲ್ಲರ ಗಮನ ಸೆಳೆದರು. ಬಿಎಫ್‌ಸಿ ತನ್ನ ಮುಂದಿನ ಪಂದ್ಯವನ್ನು ಅ.28ರಂದು ಗೋವಾ ಎಫ್‌ಸಿ ವಿರುದ್ಧ ಆಡಲಿದೆ.
ಟ್ರ್ಯಾಕ್ ಹಾಳಾಗದಂತೆ ಎಚ್ಚೆತ್ತುಕೊಂಡ ಬಿಎಫ್‌ಸಿ!
ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಹಾಗೂ ಅಥ್ಲೆಟಿಕ್ಸ್ ಕೋಚ್‌ಗಳ ವಿರೋಧದ ನಡುವೆಯೇ ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್‌ಗೆ ರಾಜ್ಯ ಕ್ರೀಡಾ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಸೋಮವಾರ ಮೊದಲ ಪಂದ್ಯವನ್ನಾಡಿದ ಬಿಎಫ್‌ಸಿ ತಂಡ, ಕ್ರೀಡಾಂಗಣದಲ್ಲಿನ ಗುಂಡಿ ಬಿದ್ದ ಸಿಂಥೆಟಿಕ್ ಟ್ರ್ಯಾಕ್ ಮತ್ತಷ್ಟು ಹಾಳಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಟ್ರ್ಯಾಕ್ ಮೇಲೆ ಯಾವುದೇ ಬ್ಯಾರಿಕೇಡ್‌ಗಳನ್ನು ಹಾಕಿಲ್ಲ. ಮೈದಾನದ ಸುತ್ತ ಎಲೆಕ್ಟ್ರಿಕ್ ಬೋರ್ಡ್‌ಗಳನ್ನು ಹಾಕಲಾಗಿದೆ. ಅದು ಕೂಡ ಕಾರ್ಪೆಟ್ ಒಂದರ ಮೇಲೆ ಇರಿಸಲಾಗದೆ.
ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಹಾಗೂ ಇಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ ಸರಣಿ ವರದಿ ಬಳಿಕ ಎಚ್ಚೆತ್ತುಕೊಂಡಿರುವ ಕ್ರೀಡಾ ಇಲಾಖೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿ ಕ್ರೀಡಾಂಗಣವನ್ನು ಬಿಎಫ್‌ಸಿ ಕ್ಲಬ್ ಒಡೆತನದ ಜೆಎಸ್‌ಡಬ್ಲ್ಯು ಸಂಸ್ಥೆಗೆ ಬಾಡಿಗೆಗೆ ನೀಡಿದೆ.