ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ದಾಖಲಾಗಿದ್ದು, 4 ಬಾರಿಯ ಚಾಂಪಿಯನ್ ಜರ್ಮನಿ ತಂಡವು ಪರಗ್ವೆ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಜರ್ಮನಿಯ ಹಲವು ಗೋಲು ಪ್ರಯತ್ನಗಳನ್ನು ತಡೆದು, ಪೆನಾಲ್ಟಿ ಶೂಟೌಟ್‌ನಲ್ಲೂ ಮಿಂಚಿದ ಪರಗ್ವೆ ಗೋಲ್‌ಕೀಪರ್ ಓರ್ಲಾಂಡೊ ಗಿಲ್ ಹೀರೋ ಆಗಿ ಹೊರಹೊಮ್ಮಿದರು.

Germany Knocked Out of FIFA World Cup 2026: ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ದಾಖಲಾಗಿದೆ. 4 ಬಾರಿ ಚಾಂಪಿಯನ್‌ ಜರ್ಮನಿ ತಂಡ ಅಂತಿಮ 32ರ ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿದೆ. 40ನೇ ರ್‍ಯಾಂಕಿಂಗ್‌ನೊಂದಿಗೆ ಈ ವಿಶ್ವಕಪ್‌ಗೆ ಕಾಲಿಟ್ಟಿದ್ದ ಪರಗ್ವೆ ವಿರುದ್ಧ ವಿಶ್ವ ನಂ.12 ಜರ್ಮನಿ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 3-4 ಗೋಲುಗಳ ಅಂತರದಲ್ಲಿ ಸೋಲನುಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಂಪು ಪಂದ್ಯ 3 ಪಂದ್ಯಗಳಲ್ಲಿ 10 ಗೋಲು ಬಾರಿಸಿ, ಅಜೇಯವಾಗಿಯೇ ನಾಕೌಟ್‌ ತಲುಪಿದ್ದ ಜರ್ಮನಿ ತಂಡವು ಪರಗ್ವೆಯ ರಕ್ಷಣಾ ಪಡೆಯನ್ನು ಭೇದಿಸಲು ಹರಸಾಹಸಪಟ್ಟಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದವು. ಜ್ಯುಲಿಯೋ ಎನ್ಸಿಕೊ ಮೊದಲಾರ್ಧದಲ್ಲಿ ಗೋಲು ದಾಖಲಿಸಿ ಪರಗ್ವೆಗೆ ಮುನ್ನಡೆ ಒದಗಿಸಿದರು. 52ನೇ ನಿಮಿಷದಲ್ಲಿ ಕೇ ಹಾವರ್ಟ್ಜ್‌ ದಾಖಲಿಸಿದ ಗೋಲಿನಿಂದಾಗಿ ಜರ್ಮನಿ ಸಮಬಲ ಸಾಧಿಸಿತು. ಬಳಿಕ ಗೋಲು ದಾಖಲಾಗಲಿಲ್ಲ. ಹೀಗಾಗಿ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು.

ತಲಾ 5 ಪ್ರಯತ್ನಗಳಲ್ಲಿ ಉಭಯ ತಂಡಗಳು 3-3 ಸಮಬಲ ಸಾಧಿಸಿದವು. ಸಡನ್‌ ಡೆತ್‌ನಲ್ಲಿ ಜರ್ಮನಿ ಗೋಲು ಬಾರಿಸಲು ವಿಫಲವಾಯಿತು. ಪರಗ್ವೆ ಗೋಲು ದಾಖಲಿಸಿ ಜಯಭೇರಿ ಬಾರಿಸಿ ವಿಶ್ವಕಪ್‌ನಲ್ಲಿ 5ನೇ ಬಾರಿ ಪ್ರಿ ಕ್ವಾರ್ಟರ್‌ ಫೈನಲ್‌ಗೇರಿತು.

2014ರ ಬಳಿಕ ಸತತ ವೈಫಲ್ಯ:

ಜರ್ಮನಿ 2014ರಲ್ಲಿ ಚಾಂಪಿಯನ್‌ ಆಗಿತ್ತು. ಆ ಬಳಿಕ 2018, 2022ರ ವಿಶ್ವಕಪ್‌ನಲ್ಲಿ ತಂಡ ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ಈ ಬಾರಿ ತಂಡ ನಾಕೌಟ್‌ ಪ್ರವೇಶಿಸಿದರೂ ಪ್ರಿ ಕ್ವಾರ್ಟರ್‌ ಫೈನಲ್‌ಗೇರಲು ವಿಫಲವಾಗಿದೆ.

--ಹಣವಿಲ್ಲದೆ ಹಳೆ ಕ್ಲಬ್‌ನ ಜೆರ್ಸಿ ಮಾರಿದ್ದ ಗಿಲ್‌ ಈಗ ಪರಗ್ವೆ ಹೀರೋ!

ಜರ್ಮನಿ ವಿರುದ್ಧ ಪರಗ್ವೆ ಪಾಲಿನ ಹೀರೋ ಆಗಿ ಮೂಡಿಬಂದ ಓರ್ಲಾಂಡೊ ಗಿಲ್‌, ಈ ಹಿಂದೆ ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ಹಳೆ ಕ್ಲಬ್‌ನ ಜೆರ್ಸಿಗಳನ್ನು ಮಾರಾಟ ಮಾಡುವ ಸ್ಥಿತಿಗೆ ತಲುಪಿದ್ದರು. ಈ ಬಗ್ಗೆ ಅವರ ಪತ್ನಿ 2 ವರ್ಷದ ಹಿಂದೆ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡಿದ್ದು, ಸೋಮವಾರದ ಜರ್ಮನಿ ವಿರುದ್ಧ ಪಂದ್ಯದ ಬಳಿಕ ಅವರ ಪೋಸ್ಟ್‌ಗಳು ವೈರಲ್‌ ಆಗುತ್ತಿವೆ. ಪಂದ್ಯದಲ್ಲಿ ಹಲವು ಬಾರಿ ಜರ್ಮನಿಯ ಗೋಲು ಪ್ರಯತ್ನವನ್ನು ತಡೆದ ಗಿಲ್‌ ಬಳಿಕ ಪೆನಾಲ್ಟಿ ಕಾರ್ನರ್‌ನಲ್ಲೂ ಪರಗ್ವೆ ಪಾಲಿನ ಆಪತ್ಬಾಂಧವರಾದರು.

ಅಂ.ರಾ. ಫುಟ್ಬಾಲ್‌ನಿಂದ ನಿವೃತ್ತಿಯಾದ ಜರ್ಮನಿ ಗೋಲ್‌ಕೀಪರ್‌ ನೋಯ

ಜರ್ಮನಿಯ ಗೋಲ್‌ಕೀಪರ್ ಮ್ಯಾನುಯೆಲ್ ನೋಯ ಅವರು ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಫಿಫಾ ವಿಶ್ವಕಪ್‌ನಲ್ಲಿ ಪರಗ್ವೆ ವಿರುದ್ಧ ಸೋಲಿನ ಬೆನ್ನಲ್ಲೇ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ನೋಯ ಅವರು 2024ರ ಯುರೋಪಿಯನ್‌ ಚಾಂಪಿಯನ್‌ಶಿಪ್‌ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾಗಿದ್ದರು. ಆದರೆ ಈ ಬಾರಿ ವಿಶ್ವಕಪ್‌ಗೂ ಕೆಲ ದಿನ ಮೊದಲು ನಿವೃತ್ತಿಯಿಂದ ಹಿಂದೆ ಸರಿದಿದ್ದ 40 ವರ್ಷದ ನೋಯ, ಪರಗ್ವೆ ವಿರುದ್ಧ ಸೋಮವಾರದ ಅನಿರೀಕ್ಷಿತ ಸೋಲು ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. 2009ರಿಂದ ಈವರೆಗೂ ಅವರು ಜರ್ಮನಿ ಪರ 128 ಪಂದ್ಯಗಳನ್ನಾಡಿದ್ದಾರೆ.

ಇಂದಿನ ಪಂದ್ಯಗಳು

ಮೆಕ್ಸಿಕೊ-ಈಕ್ವೆಡಾರ್, ಬೆಳಗ್ಗೆ 6.30ಕ್ಕೆ

ಇಂಗ್ಲೆಂಡ್‌-ಕಾಂಗೊ, ಬೆಳಗ್ಗೆ 9.30ಕ್ಕೆ

ಬೆಲ್ಜಿಯಂ-ಸೆನೆಗಲ್‌, ರಾತ್ರಿ 1.30ಕ್ಕೆ