23ನೇ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ಮೆಕ್ಸಿಕೊ ಸಿಟಿಯ ಅಜ್ಟೆಕಾ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಗಾಯಕಿ ಶಕೀರಾ ಅವರ ಪ್ರದರ್ಶನ ಮತ್ತು ಆಕರ್ಷಕ ಲೈಟ್ ಶೋ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು. ಈ ಬಾರಿ ಮೂರು ದೇಶಗಳು ಆತಿಥ್ಯ ವಹಿಸುತ್ತಿದ್ದು, ಕೆನಡಾ ಮತ್ತು ಅಮೆರಿಕದಲ್ಲೂ ಪ್ರತ್ಯೇಕ ಉದ್ಘಾಟನಾ ಸಮಾರಂಭಗಳು ನಡೆಯಲಿವೆ.

ಮೆಕ್ಸಿಕೊ ಸಿಟಿ: ಬಹುನಿರೀಕ್ಷಿತ 23ನೇ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ಅದ್ಧೂರಿ ಚಾಲನೆ ಲಭಿಸಿದೆ. ಗುರುವಾರ ರಾತ್ರಿ ಮೆಕ್ಸಿಕೊ ಸಿಟಿಯಲ್ಲಿರುವ ಅಜ್ಟೆಕಾ ಕ್ರೀಡಾಂಗಣದಲ್ಲಿ ಆತಿಥೇಯ ಮೆಕ್ಸಿಕೊ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನೆರವೇರಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಸಿದ್ಧ ಗಾಯಕಿ ಶಕೀರಾ ಹಾಗೂ ಬರ್ನಾ ಬಾಯ್‌, ಈ ಬಾರಿ ಫಿಫಾ ವಿಶ್ವಕಪ್‌ನ ಅಧಿಕೃತ ಗೀತೆ ‘ಡೈ ಡೈ’ ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಅಲ್ಲದೆ, ಮೆಕ್ಸಿಕೊ ಗಾಯಕರಾದ ಅಲೆಜಾಂಡ್ರೊ ಫೆರ್ನಾಂಡೆಜ್‌, ಬೆಲಿಂಡಾ, ಲಿಲಾ ಡೌನ್ಸ್‌, ವೆನಿಜುವೆಲಾದ ಗಾಯಕ ಡ್ಯಾನಿ ಓಷಿಯನ್‌, ಕೊಲಂಬಿಯಾದ ಗಾಯಕ ಜೆ.ಬಲ್ವಿನ್‌ ಸೇರಿ ಪ್ರಮುಖರು ಕೂಡಾ ಪ್ರದರ್ಶನ ನೀಡಿದರು. ಆಕರ್ಷಕ ನೃತ್ಯ ಪ್ರದರ್ಶನ, ಲೈಟ್‌ ಶೋ, ಡ್ರೋನ್‌ಗಳ ಮೂಲಕ ಪ್ರದರ್ಶಿಸಿದ ದೃಶ್ಯಗಳು, ಮೆಕ್ಸಿಕೊದ ಸಾಂಪ್ರದಾಯಿಕ ನೃತ್ಯ ಎಲ್ಲರ ಗಮನ ಸೆಳೆದವು. ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಪ್ರೇಕ್ಷಕರು ಮನಮೋಹಕ ಕಾರ್ಯಕ್ರಮಕ್ಕೆ ತಲೆದೂಗಿದರು.

ಇನ್ನೂ 2 ಉದ್ಘಾಟನಾಸಮಾರಂಭಗಳು ಬಾಕಿ

ಈ ಬಾರಿ 3 ದೇಶಗಳು ಆತಿಥ್ಯ ವಹಿಸುತ್ತಿರುವುದರಿಂದ 3 ಉದ್ಘಾಟನಾ ಸಮಾರಂಭಗಳು ನಡೆಯಲಿವೆ. ಶುಕ್ರವಾರ ಕೆನಡಾದ ಬಿಎಮ್‌ಒ ಫೀಲ್ಡ್‌ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ಕೊನೆಯ ಉದ್ಘಾಟನಾ ಸಮಾರಂಭ ಅಮೆರಿಕದ ಲಾಸ್‌ ಏಂಜಲೀಸ್‌ನ ಸೋಫಿ ಕ್ರೀಡಾಂಗಣದಲ್ಲಿ ಶುಕ್ರವಾರ ಅಮೆರಿಕ-ಪನಾಮ ನಡುವಿನ ಪಂದ್ಯಕ್ಕೂ ಮುನ್ನ ನಡೆಯಲಿದೆ.

ಇಂದಿನ ಪಂದ್ಯಗಳು

ದ.ಕೊರಿಯಾ-ಚೆಕ್‌ ಗಣರಾಜ್ಯ, ಬೆಳಗ್ಗೆ 7.30

ಕೆನಡಾ-ಬೋಸ್ನಿಯಾ, ರಾತ್ರಿ 12.30

ಸ್ವಾರಸ್ಯ

ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಬಳಸಲಾಗುವ ಚೆಂಡಿನ ಹೆಸರು ಟ್ರಿಯೋಂಡಾ. ಇದನ್ನು ಅಡಿಡಾಸ್‌ ಸಂಸ್ಥೆ ತಯಾರಿಸಿದೆ. 3 ದೇಶಗಳು ಆತಿಥ್ಯ ವಹಿಸುತ್ತಿರುವುದರಿಂದ ಇಂಗ್ಲಿಷ್‌ನ ‘ತ್ರಿ’ ಎಂಬುದನ್ನು ‘ಟ್ರಿ’ ಎಂದು ಬಳಸಲಾಗಿದೆ. ‘ಒಂಡಾ’ ಎಂದರೆ ಸ್ಪಾನಿಷ್‌ನಲ್ಲಿ ಅಲೆಗಳು. ಅಂದರೆ ಟ್ರಿಯೋಂಡಾದ ಅರ್ಥ ಮೂರು ಅಲೆಗಳು.

ಚೆಂಡಿನಲ್ಲಿ ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾವನ್ನು ಪ್ರತಿನಿಧಿಸುವ ಕೆಂಪು, ಹಸಿರು ಹಾಗೂ ನೀಲಿ ಬಣ್ಣಗಳು ಹಾಗೂ ಅಲೆಯ ವಿನ್ಯಾಸವಿದೆ.