23ನೇ ಸೀಸನ್ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಆರಂಭದ ಹಿನ್ನೆಲೆಯಲ್ಲಿ, ಫುಟ್ಬಾಲ್ ಇತಿಹಾಸದ ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ. ಬ್ರೆಜಿಲ್‌ನ ಸಾರ್ವಕಾಲಿಕ ಭಾಗವಹಿಸುವಿಕೆಯಿಂದ ಹಿಡಿದು, ಆಟಗಾರರ ದಾಖಲೆಗಳು, ಟ್ರೋಫಿಯ ವಿವರ ಹಾಗೂ ಈ ಬಾರಿಯ ಟೂರ್ನಿಯ ವಿಶೇಷತೆಗಳ ಬಗ್ಗೆ ಈ ಲೇಖನ ಮಾಹಿತಿ ನೀಡುತ್ತದೆ.
ಕನ್ನಡಪ್ರಭ ವಿಶೇಷ
ಇಂದಿನಿಂದ 23ನೇ ಸೀಸನ್ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿ ಆರಂಭಕ್ಕೂ ಮುನ್ನ ಫುಟ್ಬಾಲ್ ಅಭಿಮಾನಿಗಳಾಗಿ ನೀವು ತಿಳಿದಿರಲೇಬೇಕಾದ ಇಂಟ್ರೆಸ್ಟಿಂಗ್ ಸಂಗತಿಗಳಿವು
1.ಎಲ್ಲಾ ವಿಶ್ವಕಪ್ ಆಡಿದ ಏಕೈಕ ತಂಡ ಬ್ರೆಜಿಲ್
ಈವರೆಗೂ ಒಟ್ಟು 22 ವಿಶ್ವಕಪ್ ಆವೃತ್ತಿಗಳು ನಡೆದಿವೆ. ಈ ಎಲ್ಲಾ 22 ಆವೃತ್ತಿಗಳಲ್ಲೂ ಆಡಿರುವ ಏಕೈಕ ತಂಡ ಬ್ರೆಜಿಲ್ ಮಾತ್ರ. ಈ ಬಾರಿಯದ್ದು ಬ್ರೆಜಿಲ್‌ಗೆ 23ನೇ ವಿಶ್ವಕಪ್. ಜರ್ಮನಿ 21ನೇ ವಿಶ್ವಕಪ್ ಆಡಲಿದ್ದು, 2ನೇ ಗರಿಷ್ಠ..
2. ಈವರೆಗೆ ಚಾಂಪಿಯನ್ ಆದ ತಂಡಗಳು 8 ಮಾತ್ರ
1930ರಿಂದ ಈವರೆಗೂ ಒಟ್ಟು 22 ವಿಶ್ವಕಪ್ ನಡೆದಿದೆ. ಈ ಪೈಕಿ ಕನಿಷ್ಠ ಒಂದು ಬಾರಿಯಾದರೂ ಚಾಂಪಿಯನ್ ಆದ ತಂಡಗಳು 8 ಮಾತ್ರ. ಬ್ರೆಜಿಲ್, ಅರ್ಜೆಂಟೀನಾ, ಜರ್ಮನಿ, ಫ್ರಾನ್ಸ್, ಉರುಗ್ವೆ, ಇಂಗ್ಲೆಂಡ್, ಇಟಲಿ, ಸ್ಪೇನ್ ಕಪ್ ಗೆದ್ದಿದೆ.
3. ಗರಿಷ್ಠ ಗೋಲು ಗಳಿಸಿದ ಆಟಗಾರ ಕ್ಲೋಸ್(16)
ಫಿಫಾ ವಿಶ್ವಕಪ್‌ನಲ್ಲಿ ಗರಿಷ್ಠ ಗೋಲು ಬಾರಿಸಿದ ಆಟಗಾರ ಜರ್ಮನಿಯ ಮಿರೋಸ್ಲಾವ್ ಕ್ಲೋಸ್. ಅವರು 4 ವಿಶ್ವಕಪ್‌ನ ಒಟ್ಟು 24 ಪಂದ್ಯಗಳಲ್ಲಿ 16 ಗೋಲು ಸಿಡಿಸಿದ್ದಾರೆ. 2016ರಲ್ಲಿ ಅವರು ನಿವೃತ್ತಿಯಾಗಿದ್ದಾರೆ.
4. ಮೊದಲ ಸಲ ವಿಶ್ವಕಪ್‌ಗೆ ಮೂರು ದೇಶಗಳ ಆತಿಥ್ಯ
ಫಿಫಾ ವಿಶ್ವಕಪ್‌ಗೆ ಈ ಬಾರಿ ಮೆಕ್ಸಿಕೊ, ಅಮೆರಿಕ, ಕೆನಡಾ ಆತಿಥ್ಯ ವಹಿಸಲಿದೆ. ವಿಶ್ವಕಪ್ ಆವೃತ್ತಿಯೊಂದಕ್ಕೆ 3 ದೇಶಗಳು ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು. 2002ರಲ್ಲಿ ದ.ಕೊರಿಯಾ, ಜಪಾನ್ ಜಂಟಿಯಾಗಿ ಆತಿಥ್ಯ ವಹಿಸಿದ್ದೇ ಗರಿಷ್ಠ.
5. 891 ಆಟಗಾರರಿಗಿದು ಮೊದಲ ಫಿಫಾ ವಿಶ್ವಕಪ್
ಈ ವಿಶ್ವಕಪ್ ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೋಗೆ 6ನೇ ವಿಶ್ವಕಪ್. ಆದರೆ ಬರೋಬ್ಬರಿ 891 ಆಟಗಾರರಿಗೆ ಇದು ಚೊಚ್ಚಲ ವಿಶ್ವಕಪ್ ಆಗಿರಲಿದೆ. ಒಟ್ಟಾರೆ 1248 ಆಟಗಾರರು ಈ ಬಾರಿ ಟೂರ್ನಿಯಲ್ಲಿ ಆಡಲಿದ್ದಾರೆ.
6. ಈ ಸಲ ಪ್ರತಿ ತಂಡಕ್ಕೂ ಕನಿಷ್ಠ ₹100 ಕೋಟಿ!
ಈ ಬಾರಿ ವಿಶ್ವಕಪ್‌ಗೆ ಪ್ರವೇಶ ಪಡೆದ ಪ್ರತಿ ತಂಡಗಳೂ ಕನಿಷ್ಠ ₹100 ಕೋಟಿ ಹಣ ಸಿಗಲಿದೆ. ಗುಂಪು ಹಂತದಲ್ಲೇ ಹೊರಬೀಳುವ ಪ್ರತಿ ತಂಡಕ್ಕೆ ₹85.5 ಕೋಟಿ ಲಭಿಸಲಿದೆ. ವಿಶ್ವಕಪ್‌ಗೆ ಸಿದ್ಧತೆಗಾಗಿ ಈಗಾಗಲೇ ತಲಾ ₹14.3 ಕೋಟಿ ನೀಡಲಾಗಿದೆ.
7. ಟ್ರೋಫಿ ಗೆಲ್ಲುವ ತಂಡಕ್ಕೆ ಸಿಗಲಿದೆ ₹477 ಕೋಟಿ!
2026ರ ಫಿಫಾ ವಿಶ್ವಕಪ್‌ನ ವಿಜೇತ ತಂಡಕ್ಕೆ ₹477 ಕೋಟಿ, ರನ್ನರ್-ಅಪ್‌ಗೆ ₹314 ಕೋಟಿ ನಗದು ಸಿಗಲಿದೆ. 2022ರಲ್ಲಿ ಅರ್ಜೆಂಟೀನಾಗೆ ₹348 ಕೋಟಿ ಲಭಿಸಿತ್ತು. ರನ್ನರ್-ಅಪ್ ಫ್ರಾನ್ಸ್ ತಂಡ ₹248 ಕೋಟಿ ತನ್ನದಾಗಿಸಿಕೊಂಡಿತ್ತು.
8. ಈವರೆಗೂ ವಿಶ್ವಕಪ್ ಆಡಿದ ದೇಶಗಳು 80
ಈವರೆಗೂ ಒಟ್ಟು 80 ದೇಶಗಳು ಫುಟ್ಬಾಲ್ ವಿಶ್ವಕಪ್‌ನಲ್ಲಿ ಪಾಲ್ಗೊಂಡಿವೆ. ಈ ಸಲ ಕೇಪ್ ವರ್ಡೆ, ಕ್ಯುರಾಕಾವೊ, ಜೋರ್ಡನ್, ಉಜ್ಬೇಕಿಸ್ತಾನ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಲಿದೆ. ಇದರೊಂದಿಗೆ ವಿಶ್ವಕಪ್ ಆಡಿದ ದೇಶಗಳ ಸಂಖ್ಯೆ 84ಕ್ಕೆ ಏರಿಕೆಯಾಗಲಿವೆ.
9. ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡದಿಂದ 237 ಗೋಲು
ಈವರೆಗಿನ ಎಲ್ಲಾ ಫಿಫಾ ವಿಶ್ವಕಪ್‌ನಲ್ಲೂ ಆಡಿದ ಏಕೈಕ ತಂಡ ಎಂಬ ಖ್ಯಾತಿ ಹೊಂದಿರುವ ಬ್ರೆಜಿಲ್, ಒಟ್ಟು 237 ಗೋಲು ಬಾರಿಸಿದೆ. ಇದು ಗರಿಷ್ಠ. ಜರ್ಮನಿ 232 ಗೋಲುಗಳೊಂದಿಗೆ 2ನೇ ಸ್ಥಾನದಲ್ಲಿದೆ.
10. ಚೊಚ್ಚಲ ಆವೃತ್ತಿಗಿಂತ ಈಗ 35 ತಂಡ ಹೆಚ್ಚಳ
ಚೊಚ್ಚಲ ಫಿಫಾ ವಿಶ್ವಕಪ್(1930)ನಲ್ಲಿ ಕೇವಲ 13 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ ಆಡುತ್ತಿರುವ ತಂಡಗಳ ಸಂಖ್ಯೆ 48. ಅಂದರೆ ಮೊದಲ ಆವೃತ್ತಿಗಿಂತ ಈ ಬಾರಿ ವಿಶ್ವಕಪ್‌ಗೆ ತಂಡಗಳ ಸಂಖ್ಯೆಯಲ್ಲಿ 35 ಏರಿಕೆಯಾಗಿದೆ.
11. ವಿಶ್ವಕಪ್ ಆಡಿ ಒಂದೂ ಪಂದ್ಯ ಗೆಲ್ಲದ ದೇಶ 20
ವಿಶ್ವಕಪ್‌ನಲ್ಲಿ ಈವರೆಗೂ 80 ದೇಶಗಳು ಪಾಲ್ಗೊಂಡಿವೆ. ಈ ಪೈಕಿ 60 ದೇಶಗಳಿಗೆ ಮಾತ್ರ ಕನಿಷ್ಠ ಒಂದಾದರೂ ಗೆಲುವು ಲಭಿಸಿವೆ. ನ್ಯೂಜಿಲೆಂಡ್, ಈಜಿಫ್ಟ್, ಇಸ್ರೇಲ್, ಇರಾಕ್, ಕತಾರ್ ಸೇರಿ 20 ತಂಡಗಳಿಗೆ ಒಂದರಲ್ಲೂ ಗೆಲ್ಲಲು ಸಾಧ್ಯವಾಗಿಲ್ಲ.
12. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪದಕ ಗೆದ್ದ ಟೀಂ ಜರ್ಮನಿ
ಗರಿಷ್ಠ ಬಾರಿ ಚಾಂಪಿಯನ್ ಆದ ತಂಡ ಬ್ರೆಜಿಲ್ ಆಗಿದ್ದರೂ, ಅತಿ ಹೆಚ್ಚು ಪದಕ(12) ತನ್ನದಾಗಿಸಿಕೊಂಡ ತಂಡ ಜರ್ಮನಿ. ತಂಡಕ್ಕೆ ತಲಾ 4 ಚಿನ್ನ, ಬೆಳ್ಳಿ, ಕಂಚು ಲಭಿಸಿದೆ. ಬ್ರೆಜಿಲ್ 5 ಚಿನ್ನ, 2 ಬೆಳ್ಳಿ, 2 ಕಂಚು ಸೇರಿ ಒಟ್ಟು 9 ಪದಕ ಗೆದ್ದಿದೆ.
13. ಸತತ 2 ಟ್ರೋಫಿ ಗೆದ್ದ ತಂಡಗಳು ಕೇವಲ 2
ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಸತತವಾಗಿ 2 ಬಾರಿ ಚಾಂಪಿಯನ್ ಆದ ತಂಡಗಳು ಕೇವಲ 2 ಮಾತ್ರ. ಇಟಲಿ 1934, 1938, ಬ್ರೆಜಿಲ್ 1958, 1962ರಲ್ಲಿ ಟ್ರೋಫಿ ಗೆದ್ದಿದ್ದವು. ಈ ಸಲ ಅರ್ಜೆಂಟೀನಾಗೆ ಸತತ 2ನೇ ಕಪ್ ಗೆಲ್ಲುವ ಅವಕಾಶವಿದೆ.
14. 3 ಸಲ ವಿಶ್ವಕಪ್ ಆತಿಥ್ಯ: ಮೆಕ್ಸಿಕೋ ಮೊದಲ ದೇಶ
3 ವಿಶ್ವಕಪ್ ಆವೃತ್ತಿಗಳಿಗೆ ಆತಿಥ್ಯ ವಹಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಮೆಕ್ಸಿಕೋ ಪಾತ್ರವಾಗಲಿದೆ. ಈ ಹಿಂದೆ 1970, 1986ರಲ್ಲಿ ಮೆಕ್ಸಿಕೋದಲ್ಲಿ ವಿಶ್ವಕಪ್ ನಡೆದಿದ್ದವು. ಇದೇ ಮೊದಲ ಬಾರಿ ಜಂಟಿಯಾಗಿ ಆತಿಥ್ಯ ವಹಿಸಲಿದೆ.
15. ಅಜ್ಟೆಕಾ ಕ್ರೀಡಾಂಗಣದಲ್ಲಿ ಇದು 3ನೇ ಫಿಫಾ ವಿಶ್ವಕಪ್
ಮೆಕ್ಸಿಕೋ ಸಿಟಿಯಲ್ಲಿ ಅಜ್ಟೆಕಾ ಕ್ರೀಡಾಂಗಣವು 3 ಬಾರಿ ವಿಶ್ವಕಪ್‌ಗೆ ಆತಿಥ್ಯ ವಹಿಸಿದ ವಿಶ್ವದ ಮೊದಲ ಸ್ಟೇಡಿಯಂ ಎನಿಸಿಕೊಳ್ಳಲಿದೆ. 1970, 1986ರ ವಿಶ್ವಕಪ್‌ನಲ್ಲೂ ಈ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದಿದ್ದವು.
16. ಗಿಲ್ಬರ್ಟೋ ಅತಿ ಕಿರಿಯ, ಗೋರ್ಡನ್ ಅತಿ ಹಿರಿಯ
ಮೆಕ್ಸಿಕೋ ತಂಡದಲ್ಲಿರುವ 17 ವರ್ಷ ಗಿಲ್ಬರ್ಟೋ ಮೋರ 2026ರ ವಿಶ್ವಕಪ್‌ನಲ್ಲಿ ಆಡಲಿರುವ ಅತಿ ಕಿರಿಯ ಆಟಗಾರ. ಸ್ಕಾಟ್ಲೆಂಡ್ ತಂಡದ 43 ವರ್ಷದ ಕ್ರೇಗ್ ಗೋರ್ಡನ್ ಈ ಬಾರಿ ಆಡಲಿರುವ ಅತಿ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.
17. ಈ ಬಾರಿ 20ಕ್ಕಿಂತ ಕಡಿಮೆ ವಯಸ್ಸಿನ 22 ಆಟಗಾರರು
ಈ ವಿಶ್ವಕಪ್‌ನಲ್ಲಿ 20ಕ್ಕಿಂತ ಕಡಿಮೆ ವಯಸ್ಸಿನ 22 ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದರಲ್ಲಿ ಗಿಲ್ಬರ್ಟೊ, ಸ್ಪೇನ್‌ನ ಲ್ಯಾಮಿನೆ ಯಮಲ್, ಈಜಿಫ್ಟ್‌ನ ಇಬ್ರಾಹಿಂ ಎಂಬಾಯೆ, ಬ್ರೆಜಿಲ್‌ನ ಎಂಡ್ರಿಕ್, ರಯಾನ್ ಕೂಡಾ ಸೇರಿದ್ದಾರೆ.
18. ವಿಶ್ವಕಪ್‌ಗಾಗಿ ಅಮೆರಿಕದ ಸ್ಟೇಡಿಯಂ ಹೆಸರು ಬದಲು
ಅಮೆರಿಕದಲ್ಲಿ ಜಿಲೆಟ್, ಮೆರ್ಸಿಡಿಸ್ ಬೆಂಜ್, ಲಿವೈಸ್ ಸೇರಿ ಪ್ರಮುಖ ಬ್ರ್ಯಾಂಡ್‌ಗಳ ಹೆಸರಿನ ಕ್ರೀಡಾಂಗಣಗಳಿವೆ. ಆದರೆ ಟೂರ್ನಿಯಲ್ಲಿ ಫಿಫಾದ ಅಧಿಕೃತ ಪ್ರಾಯೋಜಕರ ಹೆಸರನ್ನು ಮಾತ್ರ ಬಳಸಬೇಕಿರುವ ಕಾರಣ ಈ ವಿಶ್ವಕಪ್‌ಗಾಗಿ ಈ ಎಲ್ಲಾ ಕ್ರೀಡಾಂಗಣಗಳ ಹೆಸರನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ.
19. 68 ವರ್ಷವಾದ್ರೂ ಅಳಿಯದ ಗರಿಷ್ಠ ಗೋಲುಗಳ ದಾಖಲೆ
ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಗರಿಷ್ಠ ಗೋಲು ಗಳಿಸಿದ ಆಟಗಾರ ಫ್ರಾನ್ಸ್‌ನ ಜಸ್ಟ್ ಪಾಂಟೈನ್. 1958ರ ವಿಶ್ವಕಪ್‌ನ 6 ಪಂದ್ಯದಲ್ಲಿ 13 ಗೋಲು ಬಾರಿಸಿದ್ದರು. 68 ವರ್ಷವಾದರೂ ಈ ದಾಖಲೆಯನ್ನು ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ.
20. 3 ಬಾರಿ ಟ್ರೋಫಿ ಗೆದ್ದ ಏಕೈಕ ಆಟಗಾರ ಪೀಲೆ
ಬ್ರೆಜಿಲ್ ದಂತಕತೆ ಪೀಲೆ 3 ಬಾರಿ ಫಿಫಾ ವಿಶ್ವಕಪ್ ಗೆದ್ದ ವಿಶ್ವದ ಏಕೈಕ ಆಟಗಾರ. ಅವರು 1958, 1962 ಹಾಗೂ 1970ರಲ್ಲಿ ಚಾಂಪಿಯನ್ ಆದ ಬ್ರೆಜಿಲ್ ತಂಡದಲ್ಲಿದ್ದರು. ಉಳಿದಂತೆ 20 ಮಂದಿ ತಲಾ 2 ಬಾರಿ ವಿಶ್ವಕಪ್ ಗೆದ್ದಿದ್ದಾರೆ.
21. ಫಿಫಾ ವಿಶ್ವಕಪ್ ವಿಜೇತ ಆಟಗಾರರ ಸಂಖ್ಯೆ 471
1930ರಿಂದ ಈವರೆಗೂ ಒಟ್ಟು 471 ಆಟಗಾರರು ಕನಿಷ್ಠ ಒಮ್ಮೆಯಾದರೂ ಫಿಫಾ ವಿಶ್ವಕಪ್ ಗೆದ್ದಿದ್ದಾರೆ. ನಾಯಕರಾಗಿ ಯಾವೊಬ್ಬರೂ 2 ವಿಶ್ವಕಪ್ ಗೆದ್ದ ಇತಿಹಾಸವಿಲ್ಲ.
22. 2 ದೇಶದ ಪರ ಫೈನಲ್: ಮೊಂಟಿ ಏಕೈಕ ಆಟಗಾರ
ಲೂಯಿಸ್ ಮೊಂಟಿ ಫಿಫಾ ವಿಶ್ವಕಪ್‌ನಲ್ಲಿ 2 ದೇಶಗಳ ಪರ ಫೈನಲ್ ಆಡಿದ ಏಕೈಕ ಆಟಗಾರ. 1930ರಲ್ಲಿ ಅರ್ಜೆಂಟೀನಾ ಪರ ಫೈನಲ್ ಆಡಿದ್ದ ಅವರು, 1934ರಲ್ಲಿ ಇಟಲಿ ಪರ ಫೈನಲ್ ಪಂದ್ಯದಲ್ಲಿ ಆ ತಂಡದ ಭಾಗವಾಗಿದ್ದರು.
23. ಫಿಫಾ ವಿಶ್ವಕಪ್ ಟ್ರೋಫಿ ತೂಕ 6 ಕಿಲೋ ಗ್ರಾಮ್
ಫಿಫಾ ವಿಶ್ವಕಪ್ ಟ್ರೋಫಿಯ ತೂಕ 6.175 ಕೆ.ಜಿ. ಇದೆ. ಇದು 14.5 ಇಂಚು ಉದ್ದವಿದೆ. ಶೇ.75ರಷ್ಟು ಚಿನ್ನ(18 ಕ್ಯಾರೆಟ್) ಬಳಸಿ ಈ ಟ್ರೋಫಿಯನ್ನು ತಯಾರಿಸಲಾಗಿದೆ. ಉಳಿದ ಭಾಗ ಮಲಾಕೈಟ್‌ನಿಂದ ಮಾಡಿದ 2 ಉಂಗುರವಿದೆ.


