ಕೋಲ್ಕತಾ(ಮಾ.31): ಭಾರತ ಫುಟ್ಬಾಲ್ ದಂತಕತೆ ಬೈಚುಂಗ್ ಭುಟಿಯಾ ದೇಶದ ನಿರಾಶ್ರಿತ ಜನರ ಸಂಕಷ್ಟಕ್ಕೆ ಮನ ಮಿಡಿದಿದ್ದಾರೆ. ಕೊರೋನಾ ವೈರಸ್ ಭೀತಿಯಿಂದಾಗಿ 21 ದಿನಗಳ ಲಾಕ್‌ಡೌನ್ ಘೋಷಣೆಯಾಗಿದ್ದು, ಸಿಕ್ಕಿಂಗೆ ಮರಳುತ್ತಿರುವ ನಿರಾಶ್ರಿತ ವಲಸಿಗರಿಗೆ ತಮ್ಮ ಹೊಸದಾಗಿ ನಿರ್ಮಿಸುತ್ತಿರುವ ಮನೆಯಲ್ಲಿ ಉಳಿದುಕೊಳ್ಳಲು ಮುಕ್ತ ಆಹ್ವಾನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊರೋನಾ ಫೈಟ್: ಪ್ರಧಾನಿ ಕೇರ್ಸ್‌ಗೆ ಕೈ ತುಂಬಾ ದೇಣಿಗೆ ನೀಡಿದ ಕ್ರಿಕೆಟರ್ಸ್

ಪ್ರಧಾನಿ ನರೇಂದ್ರ ಮೋದಿ ಕೋವಿಡ್ 19 ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಚ್ 24ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಿದರು.ಇದರಿಂದ ಕಂಗೆಟ್ಟ ಅಸಂಘಟಿತ ವಲಯದ ಕಾರ್ಮಿಕರು ಶತಾಯಗತಾಯ ತಮ್ಮ ಮನೆ ಸೇರಿಕೊಳ್ಳಲು ಪರದಾಡುತ್ತಿದ್ದಾರೆ. ಅದರಲ್ಲೂ ಸಾವಿರಾರು ನಿರಾಶ್ರಿತ ಮಂದಿ ಸಿಕ್ಕಿಂ ಗಡಿಯಲ್ಲಿ ಜಮಾವಣೆಗೊಂಡಿದ್ದಾರೆ. ಇವರೆಲ್ಲರ ಸಂಕಷ್ಟಕ್ಕೆ 43 ವರ್ಷದ ಭುಟಿಯಾ ನೆರವಿನ ಹಸ್ತ ಚಾಚಿದ್ದಾರೆ.

ಇಂಡಿಯಾ ಲಾಕ್‌ಡೌನ್ ಹಲವಾರು ಅಸಂಘಟಿತ ಕಾರ್ಮಿಕರಿಗೆ ಬಲವಾದ ಪೆಟ್ಟು ನೀಡಿದೆ. ಭಾರತ ಸರ್ಕಾರ ಹಾಗೂ ಸಿಕ್ಕಿಂ ರಾಜ್ಯ ಸರ್ಕಾರ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ದಾಟುವುದನ್ನು ನಿಷೇಧಿಸಿದೆ. ಅವರೆಲ್ಲಾ ದಿನಗೂಲಿ ನೌಕರಾಗಿದ್ದು, ಈಗ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಹೀಗಾಗಿ ಅವರೆಲ್ಲಾ ನನ್ನ ಕಟ್ಟಡದಲ್ಲೇ ಉಳಿದುಕೊಳ್ಳಲು ತಿಳಿಸಿದ್ದೇನೆ ಎಂದಿದ್ದಾರೆ.

ಕೊರೋನಾ ಸಂಕಷ್ಟ: ದೇಶಕ್ಕೆ ಬರೋಬ್ಬರಿ 51 ಕೋಟಿ ರುಪಾಯಿ ದೇಣಿಗೆ ನೀಡಿದ ಬಿಸಿಸಿಐ..!

ಇನ್ನು ಸ್ವತಃ ಭುಟಿಯಾ ಸಹಾ ಸಿಲಿಗುರಿಯಲ್ಲೇ ಸಿಕ್ಕಿಹಾಕಿಕೊಂಡಿದ್ದು, ದೇಶದ ಜನರಿಗೆ ಮನೆಯೊಳಗೆ ಇರಿ, ಸುರಕ್ಷಿತವಾಗಿರಿ, ಹಾಗೆಯೇ ಧನಾತ್ಮಕವಾಗಿರಿ. ಇದು ಕ್ಲಿಷ್ಟಕರವಾದ ಸಮಯ ಎಂದು ನನಗೂ ಗೊತ್ತಿದೆ. ನಾವೆಲ್ಲಾ ಒಟ್ಟಾಗಿ ಹೋರಾಡುವ ಮೂಲಕ ಕೊರೋನಾ ವೈರಸ್ ಮಣಿಸಬಹುದಾಗಿದೆ ಎಂದು ಸಂದೇಶ ರವಾನಿಸಿದ್ದಾರೆ.

ಇನ್ನು ಭುಟಿಯಾ ತಂದೆ ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದು, ವಲಸಿಗ ನಿರಾಶ್ರಿತರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಒಂದೇ ಒಂದು ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ ವಲಸಿಗ ನಿರಾಶ್ರಿತರು ಕೊರೋನಾ ಸೋಂಕಿನಿಂದ ಮುಕ್ತವಾಗಿದ್ದಾರೆ. ನಾನು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದೇನೆಂದರೆ, ಗಡಿಯಲ್ಲಿ ಪರದಾಡುತ್ತಿರುವ ಜನರಿಗೆ ಕನಿಷ್ಠಪಕ್ಷ ಮೂಲಭೂತ ಸೌಕರ್ಯಗಳನ್ನಾದರೂ ಒದಗಿಸಿಕೊಡಿ. ಇಲ್ಲದಿದ್ದರೆ ಅವರೆಲ್ಲಿಗೆ ಹೋಗಬೇಕು ಎಂದಿದ್ದಾರೆ.