Asianet Suvarna News Asianet Suvarna News

ಗುಜರಾತ್ ಮತ್ತೊಮ್ಮೆ ಮಣಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಿಗಿದ ಆರ್‌ಸಿಬಿ..!

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೆಲ್ಲಲು ಕೇವಲ 148 ರನ್‌ಗಳ ಸಾಧಾರಣ ಗುರಿ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಓವರ್‌ನಿಂದಲೇ ಸ್ಪೋಟಕ ಆರಂಭ ಪಡೆಯಿತು. ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಕೇವಲ 3.1 ಓವರ್‌ಗಳಲ್ಲಿ 50 ರನ್‌ಗಳ ಜತೆಯಾಟವಾಡಿದರು. ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಫಾಫ್ ಡು ಪ್ಲೆಸಿಸ್‌ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಆರ್‌ಸಿಬಿ ಪರ ಕ್ರಿಸ್ ಗೇಲ್(17 ಎಸೆತ) ಬಳಿಕ ಅತಿವೇಗದ ಅರ್ಧಶತಕ ಸಿಡಿಸಿದ ಕೀರ್ತಿಗೆ ಫಾಫ್ ಪಾತ್ರರಾದರು

IPL 2024 RCB Thrash Gujarat Titans by 4 wickets kvn
Author
First Published May 4, 2024, 10:52 PM IST

ಬೆಂಗಳೂರು(ಮೇ.04): ಬೌಲರ್‌ಗಳ ಶಿಸ್ತುಬದ್ಧ ದಾಳಿ, ನಾಯಕ ಫಾಫ್ ಡು ಪ್ಲೆಸಿಸ್‌ ಹಾಗೂ ವಿರಾಟ್ ಕೊಹ್ಲಿ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಗುಜರಾತ್ ಟೈಟಾನ್ಸ್ ಎದುರು 37 ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆರ್‌ಸಿಬಿ ತಂಡವು ಟೂರ್ನಿಯಲ್ಲಿ 4ನೇ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ಎದುರು ಗೆದ್ದು ಬೀಗಿದ್ದ ಆರ್‌ಸಿಬಿ, ಇದೀಗ ತವರಿನಲ್ಲೂ ಗುಜರಾತ್ ಎದುರು ಗೆಲುವಿನ ಕೇಕೆ ಹಾಕಿದೆ.

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೆಲ್ಲಲು ಕೇವಲ 148 ರನ್‌ಗಳ ಸಾಧಾರಣ ಗುರಿ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಓವರ್‌ನಿಂದಲೇ ಸ್ಪೋಟಕ ಆರಂಭ ಪಡೆಯಿತು. ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಕೇವಲ 3.1 ಓವರ್‌ಗಳಲ್ಲಿ 50 ರನ್‌ಗಳ ಜತೆಯಾಟವಾಡಿದರು. ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಫಾಫ್ ಡು ಪ್ಲೆಸಿಸ್‌ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಆರ್‌ಸಿಬಿ ಪರ ಕ್ರಿಸ್ ಗೇಲ್(17 ಎಸೆತ) ಬಳಿಕ ಅತಿವೇಗದ ಅರ್ಧಶತಕ ಸಿಡಿಸಿದ ಕೀರ್ತಿಗೆ ಫಾಫ್ ಪಾತ್ರರಾದರು.

ಗುಜರಾತ್ ಎದುರು ಬೌಲರ್‌ಗಳ ಶಿಸ್ತುಬದ್ಧ ದಾಳಿ, ಆರ್‌ಸಿಬಿಗೆ ಗೆಲ್ಲಲು 148 ಗುರಿ

ಕೊಹ್ಲಿ ಹಾಗೂ ಫಾಫ್ ಜತೆಗೂಡಿ ಕೇವಲ 5.5 ಓವರ್‌ಗಳಲ್ಲಿ 92 ರನ್‌ ಜತೆಯಾಟವಾಡುವ ಮೂಲಕ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಇದು ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ಪವರ್‌ ಪ್ಲೇನಲ್ಲಿ ದಾಖಲಿಸಿದ ಗರಿಷ್ಠ ರನ್ ಜತೆಯಾಟ ಎನಿಸಿತು. ಅಂತಿಮವಾಗಿ ಫಾಫ್ ಡು ಪ್ಲೆಸಿಸ್ ಕೇವಲ 23 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 64 ರನ್ ಬಾರಿಸಿ ಜೋಶ್ವಾ ಲಿಟ್ಲ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಆರ್‌ಸಿಬಿ ನಾಟಕೀಯ ಕುಸಿತ: 92 ರನ್‌ಗಳ ವರೆಗೆ ವಿಕೆಟ್ ನಷ್ಟವಿಲ್ಲದೇ ಮುನ್ನುಗ್ಗುತ್ತಿದ್ದ ಆರ್‌ಸಿಬಿ, ಫಾಫ್ ವಿಕೆಟ್ ಪತನದ ಬೆನ್ನಲ್ಲೇ ದಿಢೀರ್ ಕುಸಿತ ಕಂಡಿತು. ನಾಯಕನ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಕಳೆದ ಪಂದ್ಯದ ಹೀರೋ ವಿಲ್ ಜ್ಯಾಕ್ಸ್ ಕೇವಲ ಒಂದು ರನ್ ಗಳಿಸಿ ನೂರ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮತ್ತೋರ್ವ ಇನ್‌ಫಾರ್ಮ್ ಆಟಗಾರ ರಜತ್ ಪಾಟೀದಾರ್ ಕೇವಲ 2 ರನ್ ಗಳಿಸಿ ಲಿಟ್ಲ್‌ಗೆ ಎರಡನೇ ಬಲಿಯಾದರು. ಅದೇ ಓವರ್‌ನಲ್ಲೇ ಮ್ಯಾಕ್ಸ್‌ವೆಲ್ ಕೂಡಾ 4 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಕ್ಯಾಮರೋನ್ ಗ್ರೀನ್ ಕೂಡಾ ಒಂದು ರನ್ ಗಳಿಸಿ ಲಿಟ್ಲ್‌ಗೆ 4ನೇ ಬಲಿಯಾದರು. ಆರ್‌ಸಿಬಿ ತಂಡವು ಕೇವಲ 19 ರನ್ ಅಂತರದಲ್ಲಿ ದಿಢೀರ್ ಎನ್ನುವಂತೆ 5 ವಿಕೆಟ್ ಕಳೆದುಕೊಂಡಿತು. 

ಇನ್ನು ಮತ್ತೊಂದು ತುದಿಯಲ್ಲಿದ್ದ ವಿರಾಟ್ ಕೊಹ್ಲಿ 27 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 42 ರನ್ ಗಳಿಸಿ ನೂರ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರು. ಆಗ ಇಡೀ ಸ್ಟೇಡಿಯಂ ಒಂದು ಕ್ಷಣ ಸೈಲೆಂಟ್ ಆಯಿತು. ಆದರೆ 7ನೇ ವಿಕೆಟ್‌ಗೆ ದಿನೇಶ್ ಕಾರ್ತಿಕ್ ಹಾಗೂ ಸ್ವಪ್ನಿಲ್ ಸಿಂಗ್ 18 ಎಸೆತಗಳಲ್ಲಿ ಮುರಿಯದ 35 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಡಿಕೆ ಅಜೇಯ 21 ರನ್ ಬಾರಿಸಿದರೆ, ಸ್ವಪ್ನಿಲ್ ಸಿಂಗ್ ಅಜೇಯ 15 ರನ್ ಸಿಡಿಸಿದರು.

ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಅರ್ಧ ಡಜನ್ ಆಟಗಾರರು ಫೇಲ್..!

ಇನ್ನು ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಗುಜರಾತ್ ಟೈಟಾನ್ಸ್ ತಂಡವು, ಆರ್‌ಸಿಬಿ ಸಂಘಟಿತ ದಾಳಿ ಎದುರು ತತ್ತರಿಸಿ ಹೋಯಿತು. ಪವರ್‌ ಪ್ಲೇನೊಳಗೆ ಗುಜರಾತ್ 19 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು. ಇದಾದ ಬಳಿಕ 4ನೇ ವಿಕೆಟ್‌ಗೆ ಶಾರುಕ್ ಖಾನ್ ಹಾಗೂ ಡೇವಿಡ್ ಮಿಲ್ಲರ್ ಜೋಡಿ ಕೇವಲ 37 ಎಸೆತಗಳನ್ನು ಎದುರಿಸಿ 61 ರನ್‌ಗಳ ಜತೆಯಾಟವಾಡಿತು. ಶಾರುಕ್ ಖಾನ್ 37, ಮಿಲ್ಲರ್ 30 ಹಾಗೂ ರಾಹುಲ್ ತೆವಾಟಿಯಾ 35 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಗುಜರಾತ್ ಟೈಟಾನ್ಸ್ ತಂಡವು 19.3 ಓವರ್‌ಗಳಲ್ಲಿ 147 ರನ್‌ಗಳಿಸಿ ಸರ್ವಪತನ ಕಂಡಿತು.
 

Follow Us:
Download App:
  • android
  • ios