ಫಿಫಾ ಅರ್ಹತಾ ಟೂರ್ನಿ: ಇಂದು ಭಾರತ vs ಅಫ್ಘಾನಿಸ್ತಾನ ಫೈಟ್, ಚೆಟ್ರಿಗೆ 150ನೇ ಪಂದ್ಯ..!
ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ಭಾರತ 117ನೇ ಸ್ಥಾನದಲ್ಲಿದ್ದರೆ, ಆಫ್ಘನ್ 158ರಲ್ಲಿದೆ. ಭಾರತ ‘ಎ’ ಗುಂಪಿನಲ್ಲಿ ಆಡಿದ 3 ಪಂದ್ಯಗಳಲ್ಲಿ ತಲಾ 1 ಜಯ, ಸೋಲು, ಡ್ರಾದೊಂದಿಗೆ 4 ಅಂಕ ಸಂಪಾದಿಸಿದ್ದು, 2ನೇ ಸ್ಥಾನದಲ್ಲಿದೆ. ಕತಾರ್(9 ಅಂಕ) ಅಗ್ರಸ್ಥಾನದಲ್ಲಿದ್ದು, ಕುವೈತ್(3 ಅಂಕ) ಹಾಗೂ ಅಫ್ಘಾನಿಸ್ತಾನ(1 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನಗಳಲ್ಲಿವೆ.
ಅಭಾ(ಸೌದಿ ಅರೇಬಿಯಾ): 2026ರ ಫಿಫಾ ಫುಟ್ಬಾಲ್ ವಿಶ್ವಕಪ್‌ನ ಅರ್ಹತಾ ಟೂರ್ನಿಯಲ್ಲಿ 3ನೇ ಸುತ್ತಿಗೇರುವ ನಿರೀಕ್ಷೆ ಯಲ್ಲಿರುವ ಭಾರತ ತಂಡ 2ನೇ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಮಂಗಳವಾರ ಅಫ್ಘಾನಿಸ್ತಾನ ವಿರುದ್ಧ ಸೆಣಸಾಡಲಿದೆ. ಇತ್ತೀಚೆಗಷ್ಟೇ ನಡೆದಿದ್ದ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿ ಗೋಲು ರಹಿತ ಡ್ರಾಗೊಂಡಿತ್ತು.
ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ಭಾರತ 117ನೇ ಸ್ಥಾನದಲ್ಲಿದ್ದರೆ, ಆಫ್ಘನ್ 158ರಲ್ಲಿದೆ. ಭಾರತ ‘ಎ’ ಗುಂಪಿನಲ್ಲಿ ಆಡಿದ 3 ಪಂದ್ಯಗಳಲ್ಲಿ ತಲಾ 1 ಜಯ, ಸೋಲು, ಡ್ರಾದೊಂದಿಗೆ 4 ಅಂಕ ಸಂಪಾದಿಸಿದ್ದು, 2ನೇ ಸ್ಥಾನದಲ್ಲಿದೆ. ಕತಾರ್(9 ಅಂಕ) ಅಗ್ರಸ್ಥಾನದಲ್ಲಿದ್ದು, ಕುವೈತ್(3 ಅಂಕ) ಹಾಗೂ ಅಫ್ಘಾನಿಸ್ತಾನ(1 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನಗಳಲ್ಲಿವೆ.
ಚೆಟ್ರಿಗೆ 150ನೇ ಪಂದ್ಯ
ದಿಗ್ಗಜ ಫುಟ್ಬಾಲಿಗ ಸುನಿಲ್ ಚೆಟ್ರಿ 150ನೇ ಪಂದ್ಯವಾಡಲಿದ್ದಾರೆ. 2005ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ್ದ ಚೆಟ್ರಿ ಈ ವರೆಗೆ 149 ಪಂದ್ಯಗಳಲ್ಲಿ 93 ಗೋಲು ಬಾರಿಸಿದ್ದು, 11 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಇಂದಿನಿಂದ ಸ್ಪೇನ್ ಮಾಸ್ಟರ್ ಬ್ಯಾಡ್ಮಿಂಟನ್ ಟೂರ್ನಿ
ಮ್ಯಾಡ್ರಿಡ್: ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು, ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್ ಸೇರಿದಂತೆ ಪ್ರಮುಖರು ಕಣಕ್ಕಿಳಿಯಲಿದ್ದಾರೆ. ಸಿಂಧು ಕಳೆದ ವರ್ಷ ಫೈನಲ್‌ಗೇರಿದ್ದು, ಈ ಬಾರಿ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕಿರಣ್ ಜಾರ್ಜ್, ಸತೀಶ್ ಕರುಣಾಕರನ್ ಕೂಡಾ ಆಡಲಿದ್ದಾರೆ. ಆದರೆ ಲಕ್ಷ ಸೇನ್ ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದಾರೆ.
ಮಿಯಾಮಿ ಮಾಸ್ಟರ್ಸ್: ಪ್ರಿ ಕಾರ್ಟರ್‌ಗೆ ಬೋಪಣ್ಣ-ಎಬೆನ್
ಫ್ಲೋರಿಡಾ: ಮಿಯಾಮಿ ಮಾಸ್ಟರ್ಸ್ ಎಟಿಪಿ 1000 ಟೆನಿಸ್ ಟೂರ್ನಿಯಲ್ಲಿ ಭಾರತದ ರೋಹನ್ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬೆನ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.ಭಾನುವಾರ ನಡೆದ ಪುರುಷರ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೋ-ಆಸೀಸ್ ಜೋಡಿ ಇಟಲಿಯ ಸಿಮೋನ್ ಬೋಲೆಲ್ಲಿ-ಆ್ಯಂಡ್ರಿಯಾವವನ್ನೊರಿ ವಿರುದ್ದ 4-6, 7-6, 10-4 ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಇಟಲಿಯ ಜೋಡಿ ವಿರುದ್ಧವೇ ಗೆದ್ದು ಬೋಪಣ್ಣ-ಎಬೈನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆಯ ಪ್ರಸ್ತಾಪ ತಿರಸ್ಕರಿಸಿದ ಮಲೇಷ್ಯಾ
ಲಂಡನ್: ಅತಿಯಾದ ಖರ್ಚು, ಸಿದ್ಧತೆಗೆ ಸಮಯಾವಕಾಶ ಕೊರತೆ ಹಿನ್ನೆಲೆಯಲ್ಲಿ 2026ರ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆ ಪ್ರಸ್ತಾಪವನ್ನು ಮಲೇಷ್ಯಾ ತಿರಸ್ಕರಿಸಿದೆ. ಇತ್ತೀಚೆಗಷ್ಟೇ ಗೇಮ್ಸ್ ಆಯೋಜನೆಯಿಂದ ಆಸ್ಟ್ರೇಲಿಯಾ ಹಿಂದೆ ಸರಿದಿತ್ತು. ಆ ಬಳಿಕ ಇತರ ಯಾವುದೇ ರಾಷ್ಟ್ರಗಳು ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲು ಆಸಕ್ತಿ ತೋರುತ್ತಿಲ್ಲ. ಸಾವಿರಾರು ಕೋಟಿ ರು. ಖರ್ಚು ನೀಡಿದರೂ ಆತಿಥ್ಯ ಹಕ್ಕು ವಹಿಸಲು ದೇಶಗಳು ಮುಂದೆ ಬರುತ್ತಿಲ್ಲ. ಇನ್ನು, ಭಾರತ ಕೂಡಾ 2026ರ ಗೇಮ್ಸ್ ಆಯೋಜನೆಗೆ ಈ ವರೆಗೂ ಆಸಕ್ತಿ ತೋರಿಲ್ಲ.