ಇರಾಕ್‌ನಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದ ಯುವತಿಯೊಬ್ಬಳು ತನ್ನ ಸಹಜ ಸೌಂದರ್ಯ ಮತ್ತು ಮುಗುಳ್ನಗುವಿನಿಂದ ರಾತ್ರೋರಾತ್ರಿ ವೈರಲ್ ಆಗಿದ್ದಾಳೆ. ಈಕೆಯ ಕೆಲವೇ ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ಈಕೆ ಯಾರೆಂದು ತಿಳಿಯಲು ನೆಟ್ಟಿಗರು ಹುಡುಕಾಟ ನಡೆಸುತ್ತಿದ್ದಾರೆ.
ಕೆಲವೊಮ್ಮೆ ಅದ್ಯಾವ ಗ್ರಹ ಅದೆಲ್ಲಿ ಬಂದಿರುತ್ತೋ ಗೊತ್ತಿಲ್ಲ. ಏಕಾಏಕಿಯಾಗಿ ಯಾರ್ಯಾರೋ ವೈರಲ್ ಆಗಿ ಬಿಡುತ್ತಾರೆ. ಕೆಲವೊಮ್ಮೆ ಅವರಲ್ಲಿ ಟ್ಯಾಲೆಂಟ್ ಇರುವುದು ನಿಜವಾದರೂ, ಮತ್ತೆ ಕೆಲವೊಮ್ಮೆ ಏನೂ ಟ್ಯಾಲೆಂಟ್ ಇಲ್ಲದಿದ್ದರೂ, ನೆಗೆಟಿವ್ ರೀತಿಯಾಗಿ ಟ್ರೋಲ್ ಆಗಿಯಾದರೂ ವೈರಲ್ ಆಗಿ ರಾಜ್ಯ, ದೇಶ, ವಿಶ್ವದ ಗಮನವನ್ನೇ ಸೆಳೆದು ಬಿಡುತ್ತಾರೆ. ಯಾರಿಗೂ ಇಲ್ಲದ ಅದೃಷ್ಟ ಪಾಸಿಟಿವ್ ಆಗಿ ಇಲ್ಲವೇ ನೆಗೆಟಿವ್ ಆಗಿ ಅವರಿಗೆ ಸಿಕ್ಕು, ಅವರ ಜೀವನದ ದಿಕ್ಕನ್ನೇ ಬದಲಾಯಿಸಿರುವ ಸಾಕಷ್ಟು ಘಟನೆಗಳನ್ನು ಇದಾಗಲೇ ಎಲ್ಲರೂ ನೋಡಿರುತ್ತೇವೆ. ಇದೀಗ ಫುಟ್ಬಾಲ್ ಪಂದ್ಯದ ವೇಳೆ ಸಹಜ ಸುಂದರಿಯೊಬ್ಬಳು ವೈರಲ್ ಆಗಿದ್ದು, ಜಾಲತಾಣದ ನಾಯಕಿಯಾಗಿ ಮೆರೆಯುತ್ತಿದ್ದಾಳೆ.
ಸಾಮಾನ್ಯವಾಗಿ ಯಾವುದೇ ಪಂದ್ಯ ನಡೆದರೂ ಅದರಲ್ಲಿ ಲಕ್ಷಾಂತರ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಬರುವುದು ಇದೆ. ಅವರಲ್ಲಿ ಸುಂದರ, ಸುಂದರಿಯರು ಬೇಕಾದಷ್ಟು ಮಂದಿ ಇರುತ್ತಾರೆ. ಅಂಥವರ ನಡುವೆ ಈ ಸುಂದರಿ ಎಲ್ಲರ ಕ್ರಷ್ ಆಗಿದ್ದಾಳೆ. ಸಾಮಾನ್ಯವಾಗಿ ಯಾವುದಾದರೂ ಸೆಲೆಬ್ರಿಟಿ ಬಂದರೆ ಕ್ಯಾಮೆರಾ ಕಣ್ಣು ಅವರ ಮೇಲೆ ನೆಟ್ಟು ಅವರು ಎಲ್ಲರ ಗಮನ ಸೆಳೆಯುವುದು ಇದೆ. ಇದು ಸರ್ವೇ ಸಾಮಾನ್ಯ. ಆದರೆ ಸಾಮಾನ್ಯ ಯುವತಿಯೊಬ್ಬಳು ಕ್ಯಾಮೆರಾ ಕಣ್ಣಿಗೆ ಕಂಡು ವೈರಲ್ ಆಗಿದ್ದು ಆಕೆಯನ್ನು ನೋಡಿದವರೆಲ್ಲರೂ ವ್ಹಾವ್ಹ್ ಎನ್ನುತ್ತಿದ್ದಾರೆ. ಬಹುಶಃ ಈಕೆಗೂ ಇಷ್ಟೊಂದು ವೈರಲ್ ಆಗುವುದು ತಿಳಿದಿರಲಿಲ್ಲ ಎನ್ನಿಸುತ್ತದೆ.
ಕೆಲವೇ ಸೆಕೆಂಡ್ಗಳ ವಿಡಿಯೋ
ಕೆಲವೇ ಸೆಕೆಂಡುಗಳ ಕಾಲದಲ್ಲಿ ಕಂಡ ಈ ಯುವತಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವ್ಯೂವ್ಸ್ಕಂಡಿದೆ. ಅಂದಹಾಗೆ ಇದು ಕಂಡುಬಂದಿದ್ದು ಭಾರತದಲ್ಲಿ ಅಲ್ಲ, ಬದಲಿಗೆ ಇರಾಕ್‌ನ ಎರ್ಬಿಲ್‌ನಲ್ಲಿ ಎರ್ಬಿಲ್ ಮತ್ತು ಅಲ್-ನಾಫ್ಟ್ ನಡುವಿನ ಸ್ಥಳೀಯ ಲೀಗ್ ಪಂದ್ಯದ ಸಂದರ್ಭದಲ್ಲಿ ಕಂಡುಬಂದಿರುವ ಯುವತಿ ಈಕೆ. ಕ್ರೀಡಾಂಗಣದ ಕ್ಯಾಮೆರಾ ಪ್ರೇಕ್ಷಕರ ಕಡೆಗೆ ತಿರುಗಿದಾಗ, ಆ ಯುವತಿ ಕ್ಯಾಮೆರಾವನ್ನು ನೋಡಿ ಮುಗುಳ್ನಕ್ಕಳು, ಮತ್ತು ಆ ಸಂಕ್ಷಿಪ್ತ ಕ್ಷಣವು X, Facebook, Instagram ಮತ್ತು TikTok ಸೇರಿದಂತೆ ಎಲ್ಲಾ ವೇದಿಕೆಗಳಲ್ಲಿ ತ್ವರಿತವಾಗಿ ಹರಡಿದೆ. ಅನೇಕ ಬಳಕೆದಾರರು ಯುವತಿಯ ನೈಸರ್ಗಿಕ ನೋಟ ಮತ್ತು ಬೆಚ್ಚಗಿನ ನಗುವನ್ನು ಕಂಡು ಖುಷಿಪಡುತ್ತಿದ್ದಾರೆ. ಕೆಜಿಗಟ್ಟಲೆ ಮೇಕಪ್ ಹಾಕಿಕೊಂಡು ಬರುವ ಸೆಲೆಬ್ರಿಟಿಗಳಿಗೆ ಸೆಡ್ಡು ಹೊಡೆಯುವ ಈಕೆಯ ನೈಜ ಸೌಂದರ್ಯ ಎಲ್ಲರ ಗಮನ ಸೆಳೆಯುತ್ತಿದೆ.
ಫ್ಯಾಕ್ಟ್ ಚೆಕ್
ಕೆಲವರು ಇದನ್ನು ಎಐ ವಿಡಿಯೋ ಎಂದೂ ಊಹಿಸಿದ್ದಾರೆ. ಅದು ಎಷ್ಟರಮಟ್ಟಿಗೆ ವೈರಲ್ ಆಯಿತು ಎಂದರೆ, ಈಕೆಯ ಫ್ಯಾಕ್ಟ್ ಚೆಕ್ ಕೂಡ ಮಾಡಲಾಯಿತು. ಕೊನೆಗೆ ಇದ್ಯಾವ ಎಐ ಅಲ್ಲ, ಬದಲಿಗೆ ನಿಜವಾದ ಯುವತಿ ಎಂದು ಕಂಡುಕೊಂಡಿದ್ದಾರೆ. ಈಕೆ ಸೆಲೆಬ್ರಿಟಿ, ಮಾಡೆಲ್ ಅಥವಾ ಸಾಮಾಜಿಕ ಮಾಧ್ಯಮ ಪ್ರಭಾವಿ ಕೂಡ ಅಲ್ಲ ಎನ್ನುವುದು ತಿಳಿದಿದೆ. ಈಕೆ ಯಾರು ಎನ್ನುವ ಬಗ್ಗೆ ಅಭಿಮಾನಿಗಳು ಇನ್ನೂ ಪತ್ತೆ ಹಚ್ಚುತ್ತಿದ್ದಾರೆ.


