ಆರ್‌ಒ, ಪ್ಯೂರಿಫೈಡ್ ನೀರು ಅಂತ ಅತೀ ಶುದ್ಧ ನೀರ ಕುಡಿಯೋದು ಆರೋಗ್ಯಕ್ಕೆ ಒಳ್ಳೇದಲ್ಲ
ಕೊಳಕು ನೀರು ಆರೋಗ್ಯ ಹಾಳು ಮಾಡುತ್ತೆ. ಇದೇ ಕಾರಣಕ್ಕೆ ನಾವೆಲ್ಲ ಶುದ್ಧ ನೀರನ್ನು ಕುಡಿಯುತ್ತೇವೆ. ಆದ್ರೆ ಅತಿಯಾದ್ರೆ ಅಮೃತವೂ ವಿಷ ಎನ್ನುವಂತೆ ಶುದ್ಧ ನೀರು ಆರೋಗ್ಯ ಸುಧಾರಿಸುವ ಬದಲು ಹಾಳು ಮಾಡುತ್ತೆ.
ನೀರು ಆರೋಗ್ಯಕ್ಕೆ ಒಳ್ಳೆಯದು. ನಿತ್ಯ ಮೂರರಿಂದ ನಾಲ್ಕು ಲೀಟರ್ ನೀರು ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡುತ್ತಾರೆ. ಅನೇಕ ಜನರು ಪ್ರತಿ ನಿತ್ಯ ನೀರು ಸೇವನೆಗೆ ಹೆಚ್ಚಿನ ಆದ್ಯತೆ ನೀಡ್ತಾರೆ. ಶುದ್ಧ ನೀರು ಕುಡಿಯಲು ಮುಂದಾಗ್ತಾರೆ. ಪ್ರತಿ ನಿತ್ಯ ಶುದ್ಧ ನೀರು ಸೇವನೆ ಮಾಡುವ ಕಾರಣ ಆರೋಗ್ಯ ಸುಧಾರಿಸ್ತಿದೆ ಎಂದು ನೀವು ಭಾವಿಸಬಹುದು. ಆದ್ರೆ ನಿಮ್ಮ ನಂಬಿಕೆ ಸುಳ್ಳು. ನೀವು ಕುಡಿಯುವ ಶುದ್ಧ ನೀರು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ ಅಂದ್ರೆ ನಂಬ್ತೀರಾ? ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ವಿಷ್ಯವನ್ನು ಸ್ಪಷ್ಟಪಡಿಸಿದೆ.
ನೀರಿ (Water) ನಲ್ಲಿ ಸಾಕಷ್ಟು ಖನಿಜಗಳಿರುತ್ತವೆ. ಈ ಖನಿಜ (Mineral) ಗಳು ನಮ್ಮ ದೇಹಕ್ಕೆ ಅಗತ್ಯವಿರುತ್ತದೆ. ಶೇಕಡಾ 100 ರಷ್ಟು ಶುದ್ಧ ನೀರಿನಲ್ಲಿ ಅಗತ್ಯವಾದ ಖನಿಜಗಳು ಸಂಪೂರ್ಣವಾಗಿ ಕಳೆದು ಹೋಗುತ್ತವೆ. ಇದ್ರಿಂದ ನೀವು ಎಷ್ಟೇ ನೀರು ಕುಡಿದ್ರೂ ಪ್ರಯೋಜನವಿಲ್ಲ. ನೀರಿನ ಖನಿಜ ನಿಮ್ಮ ದೇಹಕ್ಕೆ ಸೇರದ ಕಾರಣ ಅದು ಅಪಾಯವನ್ನುಂಟು ಮಾಡುತ್ತದೆ.
ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ಅನಾರೋಗ್ಯ ! ಇದನ್ನು ನೀವೂ ನಂಬುತ್ತೀರಾ?
ಕೊಳಕು (Dirt) ನೀರು ಅನೇಕ ಅಪಾಯಕಾರಿ ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿಯೇ ಬಹುತೇಕ ಎಲ್ಲರ ಮನೆಯಲ್ಲೂ ಈಗ ಶುದ್ಧ ನೀರಿನ ಸೇವನೆಗೆ ಆದ್ಯತೆ ನೀಡುತ್ತಿದ್ದಾರೆ. ನಗರಗಳಲ್ಲಿ ಶುದ್ಧ ನೀರಿಗಾಗಿ ಆರ್‌ಒ ನೀರನ್ನು ಬಳಸುತ್ತಾರೆ. ಹಳ್ಳಿಗಳಲ್ಲಿ ಕೂಡ ಬಾವಿಯಿಂದ ಸಿಗುವ ನೀರನ್ನು ನೇರವಾಗಿ ಕುಡಿಯದೆ ಅದನ್ನು ಫಿಲ್ಟರ್ ಮಾಡಿ ಸೇವಿಸುತ್ತಾರೆ. ಇದು ನೀರಿನಲ್ಲಿರುವ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಮತ್ತು ಇತರ ಖನಿಜಗಳು ನಮ್ಮ ದೇಹ ಸೇರೋದನ್ನು ತಡೆಯುತ್ತದೆ.
RO ಅಥವಾ ಶುದ್ಧ ನೀರಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ (World Health Organsiation) ವಿಶೇಷ ಎಚ್ಚರಿಕೆ ನೀಡಿದೆ. ಆರ್ ಒ ಯಂತ್ರಗಳು ನೀರನ್ನು ಶುದ್ಧೀಕರಿಸಲು ತುಂಬಾ ಒಳ್ಳೆಯದು ಆದರೆ ಅವು ನೀರಿನಲ್ಲಿ ಕಂಡುಬರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುತ್ತವೆ. ಇದೇ ದೇಹಕ್ಕೆ ಬಹಳ ಮುಖ್ಯ ಎಂದಿದೆ.
ನೀರು ಕುಡಿಯಲು ಯೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸಲು ಟಿಡಿಎಸ್ (TDA) ಬಳಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನೀರಿನ ಟಿಡಿಎಸ್ ಮಟ್ಟವು ಮಿಲಿಯನ್‌ಗೆ 100 ರಿಂದ 250 ಭಾಗಗಳಾಗಿದ್ದರೆ, ನೀರು ಕುಡಿಯಲು ಯೋಗ್ಯವಾಗಿರುತ್ತದೆ. ಈ ಪ್ರಮಾಣ ಕಡಿಮೆ ಅಥವಾ ಹೆಚ್ಚಿದ್ದರೆ ಕುಡಿಯಲು ಯೋಗ್ಯವಿಲ್ಲ ಎಂದರ್ಥ. ನೀವು ನೀರಿನ ಟಿಡಿಎಸ್ ಅನ್ನು ಮಾರುಕಟ್ಟೆಯಲ್ಲಿ ಸಿಗುವ ಯಂತ್ರದ ಮೂಲಕ ಚೆಕ್ ಮಾಡಬಹುದು. 1 ನಿಮಿಷದಲ್ಲಿ ಇದನ್ನು ಪತ್ತೆಮಾಡಬಹುದು.
ಕುಡಿಯುವ ನೀರಿನಲ್ಲಿ pH ಮಟ್ಟ ಕೂಡ ಮುಖ್ಯವಾಗುತ್ತದೆ. ಪಿಎಚ್ ಮಟ್ಟ 7-8 ರ ನಡುವೆ ಇರಬೇಕು. ಅದನ್ನು ಕೂಡ ನೀವು ಪರೀಕ್ಷೆ ಮಾಡಬಹುದು. ನೀರಿನ ಶುದ್ಧತೆಯನ್ನು ನೀರಿನಲ್ಲಿರುವ ಆಮ್ಲಜನಕದ ಪ್ರಮಾಣದಿಂದ ನಿರ್ಧರಿಸಬಹುದು. ನೀರಿನಲ್ಲಿ ಒಆರ್ ಪಿ ಮಟ್ಟ 400 mV ಇದ್ದರೆ ನೀರು ಸಂಪೂರ್ಣವಾಗಿ ಶುದ್ಧವಾಗಿದೆ ಎಂದರ್ಥ. ಶುದ್ಧ ನೀರನ್ನು ದೀರ್ಘಕಾಲದವರೆಗೆ ಕುಡಿಯುವ ಜನರಲ್ಲಿ ಸ್ನಾಯುವಿನ ಆಯಾಸ, ಸೆಳೆತ, ಮೈಕೈ ನೋವು, ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ಕಾಡುತ್ತದೆ.
27 ಕೆ.ಜಿ ತೂಕ ಇಳಿಸಿಕೊಂಡ ಬೋನಿ ಕಪೂರ್: ಪತ್ನಿ ಶ್ರೀದೇವಿ ನೀಡಿದ್ದ ಟಿಪ್ಸ್ ನೆನಪಿಸಿಕೊಂಡ ನಿರ್ಮಾಪಕ
ಆರ್ ಒ, ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳಂತಹ ಸೂಕ್ಷ್ಮಜೀವಿಗಳು ಮತ್ತು ಜೀವಾಣುಗಳನ್ನು ಫಿಲ್ಟರ್ ಮಾಡುತ್ತದೆ. ಜೊತೆಗೆ ಖನಿಜಗಳನ್ನು ಕೂಡ ನಾಶ ಮಾಡುತ್ತದೆ. ಜನರು ಆರ್ ಒ ನೀರಿನ ಬದಲು ನೈಟ್ರೇಟ್‌ನಂತಹ ಕಲ್ಮಶಗಳನ್ನು ಫಿಲ್ಟರ್ ಮಾಡಿದ ನಂತರ ಕುದಿಸಿದ ನೀರನ್ನು ಕುಡಿಯಬೇಕು. ಹೀಗೆ ಮಾಡಿದಾಗ ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂಧ್ರ ನಾಶವಾಗುತ್ತದೆ. ಖನಿಜ ಹಾಗೆ ಉಳಿಯುವ ಕಾರಣ ದೇಹಕ್ಕೆ ಯಾವುದೇ ಹಾನಿ ಆಗುವುದಿಲ್ಲ.