ಸಣ್ಣ ಹಪ್ಪಳಕ್ಕಾಗಿ ರಣರಂಗವಾಯ್ತು ಮದುವೆ ಮನೆ: ಕೇರಳದ ವಿಡಿಯೋ ವೈರಲ್
ಹಪ್ಪಳದ ಕಾರಣಕ್ಕೆ ಮದುವೆ ಮನೆ ರಣರಂಗವಾದ ಘಟನೆ ಸಮೀಪದ ಕೇರಳದಲ್ಲಿ ನಡೆದಿದೆ.
ಭಾರತದಲ್ಲಿ ನಡೆಯುವ ಕೆಲವು ಮದುವೆಗಳು ಕೆಲವೊಮ್ಮೆ ಸಿನಿಮಾ ಕತೆಗಳನ್ನು ಮೀರಿಸುವಂತಿರುತ್ತದೆ. ಅದರಲ್ಲೂ ಪೋಷಕರೇ ಹುಡುಕಿ ನಿಶ್ಚಯಿಸಿದ ವಿವಾಹಗಳಲಂತೂ ಸಾಕಷ್ಟು ಮೆಲೊಡ್ರಾಮಾಗಳನ್ನು ನೋಡಬಹುದು. ಕೆಲವೊಂದು ಕುಟುಂಬಗಳಲ್ಲಿ ಮದುವೆ, ಪರಸ್ಪರ ಕುಟುಂಬಗಳ ಗತ್ತು ಗೈರತ್ತು ಪ್ರತಿಷ್ಠೆಯ ವಿಚಾರವೂ ಆಗಿರುವುದರಿಂದ ಸ್ವಲ್ಪ ಹೆಚ್ಚು ಕಡಿಮೆ ಆದರೂ ಅದನ್ನು ಮಹಾ ರಾಮಾಯಣವನ್ನಾಗಿಸುತ್ತಾರೆ. ಕೆಲವು ಕುಟುಂಬದವರ ಪ್ರತಿಷ್ಠೆಯ ಕಾರಣಕ್ಕೆ ಮದುವೆಗಳು ಮಂಟಪದಲ್ಲೇ ನಿಂತ ನಿದರ್ಶನಗಳಿವೆ. ಇತ್ತೀಚೆಗೆ ಕೊನೆಯ ಕ್ಷಣದಲ್ಲಿ ಮದುವೆ ಬೇಡ ಎಂದು ಹೇಳುವ ವಧುಗಳ ಸಂಖ್ಯೆ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಮದುವೆ ಮನೆ ರಣರಂಗವಾದ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ಒಂದು ಕಡೆ ಒಂದು ಸಣ್ಣ ಹಪ್ಪಳದ ಕಾರಣಕ್ಕೆ ಮದುವೆ ಮನೆ ರಣರಂಗವಾಗಿದೆ.
ದೇವರ ನಾಡು, ಸುಶಿಕ್ಷಿತರ ಬೀಡು ಎನಿಸಿದ ಕೇರಳದಲ್ಲಿ(kerala) ಈ ನಾಚಿಕೆಗೇಡಿನ ಘಟನೆ ನಡೆದಿದೆ. ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಆಯೋಜಿಸಲ್ಪಟ್ಟ ಮದುವೆಯಲ್ಲಿ ಎಕ್ಸ್ಟ್ರಾ ಹಪ್ಪಳ ಕೇಳಿದ್ದಕ್ಕೆ ಈ ಅನಾಹುತ ನಡೆದಿದೆ ಎಂದು ತಿಳಿದು ಬಂದಿದೆ. ಮದುವೆ ಸಮಾರಂಭಕ್ಕೆ ಊಟದ ವ್ಯವಸ್ಥೆಯನ್ನು ಕೆಟರಿಂಗ್ ಸಂಸ್ಥೆಗೆ ಟೆಂಡರ್ ನೀಡಲಾಗಿತ್ತು. ಕೆಟರಿಂಗ್ ಟೆಂಡರ್ ಪಡೆದ ಸಂಸ್ಥೆಯ ಸಿಬ್ಬಂದಿ ಮದುವೆಗೆ ಬಂದ ಅತಿಥಿಗಳು ಇನ್ನೊಂದು ಹಪ್ಪಳ ಕೇಳಿದ್ದಕ್ಕೆ ಇಲ್ಲ ಎಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಆರಂಭವಾದ ಮಾತಿನ ಚಕಮಕಿ ಮದುವೆ ಮನೆಯನ್ನೇ ರಣರಂಗವಾಗಿಸಿದೆ. ಮಾತಿನ ಚಕಮಕಿ ಸ್ವಲ್ಪದರಲ್ಲೇ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಟ ನಡೆದಿದೆ. ಮೊದಲಿಗೆ ಪರಸ್ಪರ ಕೈಯಲ್ಲಿ ಹೊಡೆದಾಡಿಕೊಂಡ ಅತಿಥಿಗಳು(Guest) ನಂತರ ಶೂಗಳು (Shoe)ಮತ್ತು ಚಪ್ಪಲಿಗಳಿಂದ ಹಿಡಿದು ಕುರ್ಚಿಗಳು ಮತ್ತು ಆಹಾರದ ಪಾತ್ರೆಗಳವರೆಗೆ(Vessel) ಎಲ್ಲಾ ರೀತಿಯ ವಸ್ತುಗಳನ್ನು ಪರಸ್ಪರ ಎಸೆದಾಡಿಕೊಂಡಿದ್ದಾರೆ.
ಈ ಘಟನೆಯನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್‌ನಲ್ಲಿ ಚಿತ್ರಿಕರಿಸಿಕೊಂಡಿದ್ದಾರೆ. 39 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಜನರು ಪಾತ್ರ ಪಗಡಿಗಳನ್ನು ಎಸೆದುಕೊಂಡು ಹೊಡೆದಾಡುತ್ತಿದ್ದಾರೆ.
ಅಲಪ್ಪುಳ ಜಿಲ್ಲೆಯ ಮಟ್ಟಮಂ ಗ್ರಾಮದ ಬ್ಯಾಕ್ವೆಟ್ ಹಾಲ್‌ನಲ್ಲಿ (Banquet Hall) ಭಾನುವಾರ ಈ ಗಲಾಟೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಹತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮೂವರನ್ನು 65 ವರ್ಷದ ಮುರಳಿಧರನ್, 21 ವರ್ಷದ ಜೋಹನ್, 21 ವರ್ಷದ ಹರಿ ಎಂದು ಗುರುತಿಸಲಾಗಿದೆ.
ಅತ್ತೆ ಜೊತೆ ಸೇರಿ ದಕ್ಷಿಣ ಭಾರತದ ಆಹಾರ ತಯಾರಿಸಿದ ಡಚ್ ಸೊಸೆ: ವಿಡಿಯೋ ವೈರಲ್
ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ (social Media) ಟ್ವಿಟ್ಟರ್‌ನಲ್ಲಿ ರಾಕೇಶ್ ಕೃಷ್ಣ ಸಿಂಹ ಎಂಬುವವರು ಪೋಸ್ಟ್ ಮಾಡಿದ್ದು, 100 ಶೇಕಡಾ ಸುಶಿಕ್ಷಿತರು ಇರುವ ಕೇರಳದಲ್ಲಿ ನಡೆದ ಘಟನೆ ಇದಾಗಿದೆ. ವರನ ಸ್ನೇಹಿತರು ಮದುವೆಯಲ್ಲಿ ಹಪ್ಪಳಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಈ ಗಲಾಟೆ ನಡೆದಿದೆ. ಮಾತಿನ ಚಕಮಕಿ ದೊಡ್ಡ ಜಗಳವಾಗಿ ಮಾರ್ಪಟ್ಟಿದೆ. ಇದರಲ್ಲಿ ವಿಶೇಷವೇನು ಇಲ್ಲ ಏಕೆಂದರೆ ಮಲ್ಲುಗಳು ಹಪ್ಪಳವನ್ನು ತುಂಬಾ ಇಷ್ಟಪಡುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಮದುವೆ ಮನೆಗಳಲ್ಲಿ ಇಂತಹ ಗಲಾಟೆಗಳು ಸಾಮಾನ್ಯ ಎನಿಸಿವೆ. ನಾವು ಹೇಳಿದ ಮೆನು ಮಾಡಿಲ್ಲ, ಕ್ಯಾರೆಟ್ ಹಲ್ವಾ ಮಾಡಿಲ್ಲ, ಹೋಳಿಗೆ ಮಾಡಿಲ್ಲ, ಊಟ ಚೆನ್ನಾಗಿಲ್ಲ ಎಂದು ಗಲಾಟೆ ಮಾಡಿದ್ದಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. ಒಟ್ಟಿನಲ್ಲಿ ದಕ್ಷಿಣ ಭಾರತದ ಮದುವೆಗಳಲ್ಲಿ ಹಪ್ಪಳ (Papad) ಇರಲೇಬೇಕು ಎಂಬುದು ಅಲಿಖಿತ ನಿಯಮ ಬಹುತೇಕ ದಕ್ಷಿಣ ಭಾರತೀಯರು ಹಪ್ಪಳ ಪ್ರಿಯರು ಹೀಗಿರುವಾಗ ಹಪ್ಪಳಕ್ಕೆ ಯುದ್ಧ ನಡೆದಿದ್ದರಲ್ಲಿ ತಪ್ಪೇನಿಲ್ಲ ಅಂತಿದ್ದಾರೆ ಕೆಲವು ನೆಟ್ಟಿಗರು.
ಮದ್ವೆಗೆ ಇಷ್ಟವಿಲ್ಲದೇ ಓಡಿ ಹೋದ ವರನ ಹಿಡಿದು ತಂದು ಮದ್ವೆಯಾದ ವಧು: ವೈರಲ್ ವಿಡಿಯೋ