Food Recrod: ಗಿನ್ನಿಸ್ ದಾಖಲೆಯಲ್ಲಿ ಉಗಾಂಡದ ಎಗ್ ರೋಲೆಕ್ಸ್..ಏನಿದು ?
ಚಪಾತಿ, ಆಮ್ಲೆಟ್ (Omelette) ಮತ್ತೆ ಸ್ಪಲ್ಪ ತರಕಾರಿ (Vegetables). ಎಲ್ರ ಅಡುಗೆ ಮನೇಲಿ ಇರೋದೆ ಬಿಡಿ, ಅದ್ರಲ್ಲೇನು ವಿಶೇಷ ಅಂತೀರಾ. ನಿಬ್ಬೆರಾಗಿಸೋ ವಿಷ್ಯಾನೇ. ಇವೆಲ್ಲಾನೂ ಸೇರ್ಸಿ ಸಿದ್ಧಪಡಿಸಿರೋ ಫುಡ್ (Food)ವೊಂದು ಗಿನ್ನಿಸ್ ರೆಕಾರ್ಡ್‌ಗೆ ಸೇರಿದೆ. ನಂಬೋಕೆ ಸ್ಪಲ್ಪ ಕಷ್ಟ ಅನಿಸ್ಬೋದು. ಆದ್ರೆ ಇದು ನಿಜಾರೀ.
ಒಂದೊಂದು ದೇಶದಲ್ಲೂ ಭಿನ್ನ-ವಿಭಿನ್ನವಾದ ಆಹಾರಗಳಿರುತ್ತವೆ. ಆಯಾ ವಾತಾವರಣಕ್ಕೆ ತಕ್ಕಂತೆ ಆಹಾರಕ್ರಮದಲ್ಲಿ, ರುಚಿಯಲ್ಲಿ ಬದಲಾವಣೆಯಾಗುತ್ತದೆ. ಆಹಾರ (Food)ಕ್ಕೆ ಹೊಸ ಟಚ್ ನೀಡಿ, ಇನ್ನೇನನ್ನೋ ಸೇರಿಸಿ ಹೊಸ ರೆಸಿಪಿಯನ್ನು ಸಹ ಸಿದ್ಧಪಡಿಸಲಾಗುತ್ತದೆ. ಕೆಲವೊಂದು ಆಹಾರವನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಿ ಗಿನ್ನಿಸ್ ದಾಖಲೆಗೂ ಸೇರಿಸಲು ಪ್ರಯತ್ನಿಸಲಾಗುತ್ತದೆ. ಹಾಗೆ ಸದ್ಯ ಗಿನ್ನಿಸ್ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿರೋದು ಉಗಾಂಡಾದ ಎಗ್ ರೋಲೆಕ್ಸ್. ಹಾಗಿದ್ರೆ ಎಗ್ ರೋಲೆಕ್ಸ್ ಎಂದರೇನು ? ಇದು ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಯಾಕಿದೆ ತಿಳಿಯೋಣ ?
ಉಗಾಂಡಾ ಎಗ್ ರೋಲೆಕ್ಸ್ ಎಂದರೇನು ?
ಚಪಾತಿ (Chapathi), ಮೊಟ್ಟೆಯ ಆಮ್ಲೆಟ್ ಹಲವು ತರಕಾರಿಗಳ ರುಚಿಕರವಾದ ಮಿಶ್ರಣವೇ ಎಗ್ ರೋಲೆಕ್ಸ್ (Egg Rolex). ಮೂಲತಃ ಇದು ಉಗಾಂಡದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿರುವ ಖಾದ್ಯವಾಗಿದೆ. ಎಗ್ ರೋಲೆಕ್ಸ್ ಅನ್ನು ಉಗಾಂಡಾ ರೋಲೆಕ್ಸ್ ಎಂದು ಸಹ ಕರೆಯಲಾಗುತ್ತದೆ. ಇದು ಉಗಾಂಡಾದ ಜನಪ್ರಿಯ ಭಕ್ಷ್ಯವಾಗಿದೆ. ಇದನ್ನು ಮೊಟ್ಟೆಯ ಆಮ್ಲೆಟ್ ಮತ್ತು ತರಕಾರಿಗಳಿಂದ ತಯಾರಿಸಲಾಗುತ್ತದೆ. ನಂತರ ಚಪಾತಿಯಲ್ಲಿ ಸುತ್ತಿಡಲಾಗುತ್ತದೆ. ಉಗಾಂಡಾದ ಈ ಜನಪ್ರಿಯ ಸ್ಟ್ರೀಟ್ ಫುಡ್ ಇತ್ತೀಚೆಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ (Guinness World Record)ನಲ್ಲಿಯೂ ಸೇರಿದೆ. ಹೇಗೆ ಮತ್ತು ಯಾಕೆ ಎಂಬುದನ್ನು ತಿಳಿಯೋಣ.
Health Tips: ಮೊಟ್ಟೆ v/s ಪನೀರ್, ತೂಕ ನಷ್ಟಕ್ಕೆ ಯಾವುದು ಉತ್ತಮ ?
ಉಗಾಂಡ ರೋಲೆಕ್ಸ್ ಎಂದು ಏಕೆ ಕರೆಯುತ್ತಾರೆ ?
ಆಹಾರತಜ್ಞರ ಪ್ರಕಾರ, 'ರೋಲೆಕ್ಸ್' ಎಂಬ ಹೆಸರು ಈ ಆಹಾರವನ್ನು ತಯಾರಿಸುವ ವಿಧಾನದಿಂದ ಬಂದಿದೆ. ಎಗ್ ರೋಲೆಕ್ಸ್‌ನ್ನು ತಯಾರಿಸುವಾಗ ಚಪಾತಿ, ಆಮ್ಲೆಟ್ ಮತ್ತು ತರಕಾರಿಗಳನ್ನು ಒಟ್ಟಿಗೆ ಸುತ್ತಿಕೊಂಡು ರೋಲ್‌ನಂತೆ ಸಿದ್ಧಪಡಿಸಲಾಗುತ್ತದೆ. ದಿನದ ಯಾವುದೇ ಸಮಯದಲ್ಲಿ ಈ ಆಹಾರವನ್ನು ಸವಿಯಬಹುದು. ಹೀಗಾಗಿಯೇ ಇದಕ್ಕೆ ರೋಲೆಕ್ಸ್ ಎಂಬ ಹೆಸರನ್ನು ನೀಡಲಾಗಿದೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ರೋಲೆಕ್ಸ್ !
ಜಿಡಬ್ಲ್ಯುಆರ್ ವೆಬ್‌ಸೈಟ್‌ನ ಪ್ರಕಾರ, 204.6 ಕೆಜಿ ತೂಕದ ಅತಿದೊಡ್ಡ ಉಗಾಂಡಾ ರೋಲೆಕ್ಸ್ ಅನ್ನು ಇತ್ತೀಚೆಗೆ ಉಗಾಂಡಾದ ವಕಿಸೊ ಜಿಲ್ಲೆಯ ಕಸೊಕೊಸೊದಲ್ಲಿ ರೇಮಂಡ್ ಕಹುಮಾ ಎಂಬವರು ಸಿದ್ಧಪಡಿಸಿದ್ದಾರೆ. ಉಗಾಂಡ ರೋಲೆಕ್ಸ್ 2.32 ಮೀಟರ್ ಉದ್ದ ಮತ್ತು 0.66 ಮೀಟರ್ ದಪ್ಪವಾಗಿದೆ. ರೇಮಂಡ್ ಮತ್ತು ಅವರ ತಂಡ ತಿಂಗಳುಗಳ ಕಾಲ ಪರಿಶ್ರಮ ವಹಿಸಿ ಈ ಬೃಹತ್ ರೋಲೆಕ್ಸ್ ನ್ನು ಸಿದ್ಧಪಡಿಸಿದ್ದಾರೆ. ದೈತ್ಯ ರೋಲೆಕ್ಸ್ ನ್ನು ಸಿದ್ಧಪಡಿಸಲು ಬರೋಬ್ಬರಿ 60 ಜನರು ಶ್ರಮ ವಹಿಸಿದ್ದಾರೆ.
Super Food For Kids: ಮಕ್ಕಳು ಕುಳ್ಳಗಿದ್ದಾರೆ ಅನ್ನೋ ಬೇಜಾರಾ..ಮೊಟ್ಟೆ, ಸಿಹಿ ಗೆಣಸು ಕೊಟ್ಟು ನೋಡಿ
ಬೃಹತ್ ರೋಲೆಕ್ಸ್ ತಯಾರಿಸಲು 1200 ಮೊಟ್ಟೆಗಳು, ಈರುಳ್ಳಿ, ಟೊಮ್ಯಾಟೊ, ಎಲೆಕೋಸು, ಕ್ಯಾರೆಟ್ ಮತ್ತು ಮೆಣಸನ್ನು ಒಳಗೊಂಡ 90 ಕೆಜಿ ತರಕಾರಿಗಳು, 72 ಕೆಜಿ ಹಿಟ್ಟು ಮತ್ತು 40 ಕೆಜಿ ಅಡುಗೆ ಎಣ್ಣೆಯನ್ನು ಬಳಸಲಾಗಿದೆ. ಬರೋಬ್ಬರಿ 14 ಗಂಟೆಗಳ ಕಾಲ ರೇಮಂಡ್ ಮತ್ತು ತಂಡ ಕೆಲಸ ಮಾಡಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿರುವ ಈ ರೋಲೆಕ್ಸ್‌ನ್ನು ತಯಾರಿಸಿದೆ.
ಎಗ್ ರೋಲೆಕ್ಸ್ ತಯಾರಿಸುವುದು ಹೇಗೆ ?
ರೋಲೆಕ್ಸ್ ರೆಸಿಪಿ ಸರಳವಾದ ವಿಧಾನವಾಗಿದ್ದು, ಸುಲಭವಾಗಿ ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಮೊದಲಿಗೆ ಒಂದು ಮಗ್‌ನಲ್ಲಿ, 2 ಮೊಟ್ಟೆ, 1/2 ಕತ್ತರಿಸಿದ ಟೊಮ್ಯಾಟೊ, 1 ಕತ್ತರಿಸಿದ ಈರುಳ್ಳಿ, ಸ್ಪಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು ಸೇರಿಸಿ. ಈ ಮಿಶ್ರಣವನ್ನು ಬೀಟ್ ಮಾಡಿ ಮತ್ತು ಬಿಸಿಯಾದ ತವಾದ ಮೇಲೆ ಎರೆಯಿರಿ. ಸಾಕಷ್ಟು ಅಡುಗೆ ಎಣ್ಣೆಯನ್ನು ಬಳಸಿ ಮತ್ತು ಆಮ್ಲೆಟ್ ಎರಡೂ ಬದಿಗಳಿಂದ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಅದನ್ನು ಬೇಯಿಸಿದ ಚಪಾತಿಯ ಮೇಲೆ ಇರಿಸಿ, ಅವುಗಳನ್ನು ಸುತ್ತಿಕೊಳ್ಳಿ ಮತ್ತು ಆನಂದಿಸಿ.