ಗೋವಾದ ಅಂಜುನಾದ ಬೀಚ್ ಬದಿಯ ಒಂದು ಪುಟ್ಟ ಸುಂದರ ರೆಸ್ಟೋರೆಂಟ್. ನಿಮ್ಮ ಡೇಟ್ ಜೊತೆ ಈ ರೆಸ್ಟೋರೆಂಟ್‌ಗೆ ಹೋಗಿ ಕುಳಿತು ಆರ್ಡರ್ ಮಾಡಲು ಕಾಯುವ ಹೊತ್ತಿಗಾಗಲೇ ಇದ್ದಕ್ಕಿದ್ದಂತೆ ಇಡೀ ರೆಸ್ಟೋರೆಂಟ್ ಫ್ಲೈಯಿಂಗ್ ಸಾಸರ್‌ನಂತೆ ಮೇಲೇರತೊಡಗುತ್ತದೆ. ನೋಡನೋಡುತ್ತಿದ್ದಂತೆ ಪಾಮ್ ಮರಗಳೆಲ್ಲ ಕೆಳಗೆ ಹೋಗುತ್ತಾ ಕುಳ್ಳಗಾದಂತೆ ಕಾಣಿಸುತ್ತವೆ. ಮರಳಿದ್ದ ನೆಲದತ್ತ ನೋಡಿದರೆ ನೀಲಿ ಸಮುದ್ರ, ಕತ್ತೆತ್ತಿದರೆ ನೀಲಿಯಾಕಾಶ. ನಿಮ್ಮ 180 ಡಿಗ್ರಿ ತಿರುಗುವ ಕುರ್ಚಿಯಲ್ಲಿ ತಿರುಗುತ್ತಾ 360 ಡಿಗ್ರಿ ನೋಟವನ್ನು ಸವಿಯಬಹುದು. ಬೀಸಿ ಬೀಸಿ ಬರುವ ಗಾಳಿಯು ಪಿಸುಮಾತಲ್ಲಿ ರೊಮ್ಯಾಂಟಿಕ್ ಕ್ಷಣವೊಂದನ್ನು ಕಟ್ಟಿಕೊಡುತ್ತಿದೆ. ಅದೋ ಅಲ್ಲಿ 160 ಅಡಿಗಳ ಮೇಲೆ ನೀವು ನಿಮ್ಮ ಡೇಟ್‍ ಜೊತೆ ಕುಳಿತು ರುಚಿಯಾದ ಆಹಾರದ ಜೊತೆ ಮಾಕ್‌ಟೇಲ್ ಹೀರಲು ಕಾಯುತ್ತಿದ್ದೀರಿ. ಜೀವನದಲ್ಲಿ ಮರೆಯಲಾಗದ ಗಳಿಗೆಯೊಂದನ್ನು ಸೃಷ್ಟಿಸಿಕೊಳ್ಳುತ್ತಿದ್ದೀರಿ. 

ಇದೇ ಸ್ಕೈ ಡೈನಿಂಗ್ ರೆಸ್ಟೋರೆಂಟ್. ಇಲ್ಲಿ ಕ್ರೇನ್‌ನಲ್ಲಿ ರೆಸ್ಟೋರೆಂಟನ್ನು ಮೇಲೆ ತೆಗೆದುಕೊಂಡು ಹೋಗಲಾಗುತ್ತದೆ. ಒಂದು ಬಾರಿಗೆ 22 ಜನರು ಇಲ್ಲಿ ಕುಳಿತು ತಿನ್ನಲು ಅವಕಾಶವಿದೆ. ನಿಮ್ಮ ಕಾಲುಗಳು ಗಾಳಿಯಲ್ಲಿ ತೇಲುತ್ತವೆ. ಟೇಬಲ್ ಮಧ್ಯದಲ್ಲಿ ನಿಮಗೆ ಸರ್ವ್ ಮಾಡಲು ಒಂದಿಬ್ಬರು ಸಿದ್ಧರಿರುತ್ತಾರೆ. ಮೆನು ಲಿಮಿಟೆಡ್ ಆದರೂ ಎಕ್ಸ್‌ಪೀರಿಯನ್ಸ್ ಮಾತ್ರ ಮರೆಯಲಾಗದ್ದು. ಇಲ್ಲಿ ಪನೀರ್ ಸ್ಕಿವರ್ಸ್, ಚಿಕನ್ ಸ್ಕಿವರ್ಸ್, ಸ್ಪೆಗೆಟಿ ಬೋಲೋನೀಸ್, ಚಿಕನ್ ಪಾಸ್ತಾ ಹಾಗೂ ಕೆಲ ಮಾಕ್‌ಟೇಲ್‌ಗಳನ್ನು ಸರ್ವ್ ಮಾಡಲಾಗುತ್ತದೆ. 

ಎಷ್ಟು ಹೊತ್ತು ಹ್ಯಾಂಗ್ ಔಟ್ ಮಾಡಬಹುದು?
ಅರ್ಧ ಗಂಟೆಯಿಂದ 1 ಗಂಟೆಯವರೆಗೆ ಇಲ್ಲಿ ಆರಾಮಾಗಿ ಊಟದೊಂದಿಗೆ ನೋಟ ಸವಿಯಬಹುದು. ಮಧ್ಯೆ ವಾಶ್‌ರೂಂಗೆ ಹೋಗಬೇಕೆಂದರೆ ಒಂದೇ ನಿಮಿಷದಲ್ಲಿ ಕೆಳಗಿಳಿಸುತ್ತಾರೆ. ಆದರೆ, ವಾಶ್‌ರೂಂ ಬಳಸಿದ ಬಳಿಕವೇ ಈ ರೆಸ್ಟೋರೆಂಟ್‌ಗೆ ಹೋಗುವುದು ಉತ್ತಮ. ಇಷ್ಟಕ್ಕೂ ಜನವಿಲ್ಲವೆಂದರೆ ಫುಲ್ ಆಗುವವರೆಗೆ ಕಾಯಬೇಕಿಲ್ಲ. ಕೇವಲ ಇಬ್ಬರಿದ್ದರೂ ಮೇಲೆ ಕರೆದುಕೊಂಡು ಹೋಗಲಾಗುತ್ತದೆ. 

ಹೆಣ್ಮಗು ಹುಟ್ಟಿದ್ರೆ ಫೀಸೇ ತಗೋಳ್ಳಲ್ಲ ಈ ಲೇಡಿ ಡಾಕ್ಟರ್‌

ವಯಸ್ಸಿನ ಮಿತಿ ಇಲ್ಲ
ಇಷ್ಟು ಎತ್ತರ ಹೋಗುವುದರಿಂದ ಮಕ್ಕಳು, ಮುದುಕರಿಗೆ ಅವಕಾಶವಿಲ್ಲ ಎಂದು ಭಾವಿಸಬೇಕಿಲ್ಲ. ಇಲ್ಲಿ ಎಲ್ಲ ವಯೋಮಾನದವರೂ ಸುರಕ್ಷಿತವಾಗಿ ಮೇಲೇರಬಹುದು. ಆದರೆ, ನೀವು 150 ಕೆಜಿಗಿಂತ ಕಡಿಮೆ ತೂಕದವರಾಗಿರಬೇಕಷ್ಟೇ. 

ಸುರಕ್ಷಿತವೇ?
ಜರ್ಮನ್ ಎಂಜಿನಿಯರಿಂಗ್ ಸ್ಟ್ಯಾಂಡರ್ಡ್‌ಗೆ ಸರಿಯಾಗಿ ಈ ಹೋಟೆಲ್ ವಿನ್ಯಾಸ ಮಾಡಲಾಗಿದೆ. 9 ಮೀಟರ್ ಉದ್ದದ ರೆಸ್ಟೋರೆಂಟ್‌ನ್ನು 16 ಮೆಟಲ್ ವೈರ್‌ಗಳು ಭದ್ರವಾಗಿ ಹಿಡಿದಿವೆ. ಪ್ರತಿ ವೈರ್ ಕೂಡಾ 4 ಟನ್ ತೂಕ ತಡೆಯಬಲ್ಲ ಸಾಮರ್ಥ್ಯದವು. ಮೇಲೆೇರುವ ಮುನ್ನ ಇಲ್ಲಿನ ಸೂಪರ್‌ವೈಸರ್ ಡೈನರ್‌ಗಳಿಗೆ ಸೇಫ್ಟಿ ವಿಡಿಯೋ ತೋರಿಸುತ್ತಾರೆ. ಜೊತೆಗೆ, ಬೇಕಾದ ಎಲ್ಲ ಸುರಕ್ಷತಾ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ನಿಮಗೆ ಎತ್ತರಕ್ಕೆ ಹೋದ ಬಳಿಕ ಭಯವಾದಲ್ಲಿ ತಕ್ಷಣವೇ ನಿಮ್ಮನ್ನು ಕೆಳಗಿಳಿಸಲಾಗುತ್ತದೆ. 

ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ ಕನಸು ಬೀಳುವುದ್ಯಾಕೆ?

ಟೈಮಿಂಗ್ಸ್
ಈ ರೆಸ್ಟೋರೆಂಟ್ ಮಧ್ಯಾಹ್ನ 3.15ರಿಂದ ಸಂಜೆ  7.30ರವರೆಗೆ ತೆರೆದಿರುತ್ತದೆ. ನಿಮ್ಮ ಸಮಯದ ಆದ್ಯತೆಯಂತೆ ರೇಟ್ ಫಿಕ್ಸ್ ಮಾಡಲಾಗಿದೆ. ಕನಿಷ್ಠ 2 ಗಂಟೆಗಳ ಮುಂಚೆ ಬುಕ್ ಮಾಡಬೇಕು. ಈ ಸಾಹಸಕ್ಕೆ ಇಬ್ಬರಿಗೆ ನೀವು ಬುಕ್ ಮಾಡುವ ಸಮಯಕ್ಕನುಗುಣವಾಗಿ 3500ರಿಂದ 8000ದವರೆಗೂ ಆಗಬಹುದು. ಅಂದರೆ ಸನ್‌ಸೆಟ್ ಸೆಶನ್‌ಗೆ ಹೆಚ್ಚು ಹಣ ತೆರಬೇಕಾಗುತ್ತದೆ. ಗೋವಾ ಟೂರಿಸಂ ಹಾಗೂ ಕ್ಯೂಬಾ ಗೋವಾ ಸಹಯೋಗದಲ್ಲಿ ನಡೆಯುತ್ತಿರುವ ಈ ರೆಸ್ಟೋರೆಂಟ್ ಲೈಫ್ ಟೈಂ ಅನುಭವ ನೀಡುವುದರಲ್ಲಿ ಅಚ್ಚರಿಯಿಲ್ಲ.ಲಾಕ್‌ಡೌನ್‌ನಿಂದಾಗಿ ಮನೆಯೊಳಗೇ ಬಂಧಿಯಾಗಿರುವುದರಿಂದ ಈಗ ಎಲ್ಲೂ ಹೋಗಲಾಗುವುದಿಲ್ಲ ನಿಜ. ಆದರೆ, ಎಂದಾದರೂ ಗೋವಾಗೆ ಹೋದಾಗ ಸ್ಕೈ ಡೈನಿಂಗ್ ಅನುಭವ ಪಡೆಯಲು ಮರೆಯಬೇಡಿ.