ಎಳ್ಳು ಲಡ್ಡು ತಯಾರಿಸಲು ಬಹಳ ಕಡಿಮೆ ಪದಾರ್ಥಗಳು ಬೇಕಾಗುತ್ತವೆ ಮತ್ತು ಇದನ್ನು ಮಾಡುವುದು ತುಂಬಾ ಸುಲಭ.

ಎಳ್ಳು ಲಡ್ಡು... ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಒಂದು ಸಾಂಪ್ರದಾಯಿಕ ಸಿಹಿ ತಿಂಡಿ. ಇದು ರುಚಿಕರ ಮಾತ್ರವಲ್ಲ, ಅಪಾರ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಈ ಲಡ್ಡನ್ನು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು, ಮೂಳೆಗಳನ್ನು ಬಲಪಡಿಸಲು ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಎಳ್ಳನ್ನು ಹೆಚ್ಚು ಪೌಷ್ಟಿಕವೆಂದು ಪರಿಗಣಿಸಲಾಗುತ್ತದೆ. ಇವು ಜೀವಸತ್ವಗಳು, ಖನಿಜಗಳು, ಆರೋಗ್ಯಕರ ಕೊಬ್ಬುಗಳು ಮತ್ತು ನಾರಿನಂಶದಿಂದ ಸಮೃದ್ಧವಾಗಿವೆ. ಭಾರತದಲ್ಲಿ ಎಳ್ಳನ್ನು ಎಣ್ಣೆಬೀಜ ಎಂದು ವರ್ಗೀಕರಿಸಲಾಗಿದೆ. ಇದನ್ನು ಆಹಾರ ಪದಾರ್ಥವಾಗಿ ಮತ್ತು ಮನೆಮದ್ದಾಗಿ ಬಳಸಲಾಗುತ್ತದೆ. ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ಎಳ್ಳೆಣ್ಣೆಯಿಂದ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ, ಇದರಲ್ಲಿ ಸಾಮಾನ್ಯವಾಗಿ ಸೋಪುಗಳು, ಲೂಬ್ರಿಕಂಟ್‌ಗಳು ಮತ್ತು ಅನೇಕ ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳು ಸೇರಿವೆ.

ಅಂದಹಾಗೆ ಎಳ್ಳು ಲಡ್ಡು ಮಾಡುವಾಗ ಬೆಲ್ಲವನ್ನು ಸೇರಿಸುವುದರಿಂದ ರುಚಿ ಹೆಚ್ಚುವುದಲ್ಲದೆ ದೇಹಕ್ಕೆ ಕಬ್ಬಿಣ ಮತ್ತು ಇತರ ಪ್ರಮುಖ ಖನಿಜಗಳು ದೊರೆಯುತ್ತವೆ. ಎಳ್ಳು ಲಡ್ಡು ತಯಾರಿಸಲು ಬಹಳ ಕಡಿಮೆ ಪದಾರ್ಥಗಳು ಬೇಕಾಗುತ್ತವೆ ಮತ್ತು ಇದನ್ನು ಮಾಡುವುದು ತುಂಬಾ ಸುಲಭ. ಪಾಕದ ಅಗತ್ಯವಿಲ್ಲದೆ ಎಳ್ಳು ಲಡ್ಡುವನ್ನು ಸುಲಭವಾಗಿ ಹೇಗೆ ತಯಾರಿಸುವುದು ಎಂಬುದು ಇಲ್ಲಿದೆ.

ಎಳ್ಳು ಲಡ್ಡು ಮಾಡಲು ಬೇಕಾಗುವ ಪದಾರ್ಥಗಳು
ಎಳ್ಳು
ಬೆಲ್ಲ
ಏಲಕ್ಕಿ
ಶೇಂಗಾ
ಒಣಕೊಬ್ಬರಿ ತುರಿ
ಏಲಕ್ಕಿ ಪುಡಿ
ಗೋಡಂಬಿ (ಅಗತ್ಯವಿದ್ದರೆ)
ಬಾದಾಮಿ (ಅಗತ್ಯವಿದ್ದರೆ)
ತುಪ್ಪ

ಎಳ್ಳು ಲಡ್ಡು ಮಾಡುವುದು ಹೇಗೆ?
ಒಲೆಯ ಮೇಲೆ ದಪ್ಪ ತಳದ ಕಡಾಯಿ ಅಥವಾ ಪ್ಯಾನ್ ಇರಿಸಿ.
ಇದಕ್ಕೆ ಎಳ್ಳು ಸೇರಿಸಿ, ಆ ನಂತರ ಕಡಿಮೆ ಉರಿಯಲ್ಲಿ 5-7 ನಿಮಿಷಗಳ ಕಾಲ ಎಣ್ಣೆ ಇಲ್ಲದೆ ಹುರಿಯಿರಿ.
ಎಳ್ಳು ಸಿಡಿಯಲು ಪ್ರಾರಂಭವಾಗುವವರೆಗೆ, ಸ್ವಲ್ಪ ಬಣ್ಣ ಬದಲಾಗುವವರೆಗೆ ಮತ್ತು ಉತ್ತಮ ಪರಿಮಳ ಬರುವವರೆಗೆ ಹುರಿಯಿರಿ.
ಎಳ್ಳು ಸುಟ್ಟು ಹೋಗದಂತೆ ಎಚ್ಚರವಹಿಸಿ, ಏಕೆಂದರೆ ಅವು ಸುಟ್ಟರೆ ಕಹಿಯಾಗುತ್ತದೆ. ತಿನ್ನಲೂ ರುಚಿ ಅನಿಸುವುದಿಲ್ಲ.
ಹುರಿದ ಎಳ್ಳನ್ನು ತಕ್ಷಣ ಅಗಲವಾದ ತಟ್ಟೆಗೆ ವರ್ಗಾಯಿಸಿ ಮತ್ತು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
ಈಗ ಶೇಂಗಾ ಮತ್ತು ಒಣಕೊಬ್ಬರಿಯನ್ನು ಪ್ರತ್ಯೇಕವಾಗಿ ಒಲೆಯ ಮೇಲೆ ಬಾಣಲೆಯಲ್ಲಿ ಹುರಿದು ಪಕ್ಕಕ್ಕೆ ಇರಿಸಿ (ಶೇಂಗಾ ಸಿಪ್ಪೆಗಳನ್ನು ತೆಗೆದು ಪಕ್ಕಕ್ಕೆ ಇರಿಸಿ)
ಗೋಡಂಬಿ ಮತ್ತು ಬಾದಾಮಿ ಬಳಸುತ್ತಿದ್ದರೆ, ಸ್ವಲ್ಪ ತುಪ್ಪ ಸೇರಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಬಹುದು.
ಈಗ, ಮಿಕ್ಸರ್ ತೆಗೆದುಕೊಂಡು ಸಂಪೂರ್ಣವಾಗಿ ತಣ್ಣಗಾದ ಎಳ್ಳು, ಹುರಿದ ಮತ್ತು ಸಿಪ್ಪೆ ಸುಲಿದ ಶೇಂಗಾ ಮತ್ತು ಒಣಕೊಬ್ಬರಿ ತುರಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಇದಕ್ಕೆ ಪುಡಿ ಮಾಡಿದ ಬೆಲ್ಲ ಮತ್ತು ಏಲಕ್ಕಿ ಸೇರಿಸಿ ಪುಡಿ ಮಾಡಿ. ನಡುವೆ ಒಂದು ಚಮಚ ತುಪ್ಪ ಬೆರೆಸುತ್ತಲೇ ಇರಿ.
ಈಗ ಬೆಲ್ಲವು ಕರಗಿ ಎಳ್ಳಿನ ಜೊತೆಗೆ ಚೆನ್ನಾಗಿ ಪೇಸ್ಟ್ ಆಗುತ್ತದೆ.
ಮಿಶ್ರಣವು ಸ್ವಲ್ಪ ದಪ್ಪವಾಗಿರಬೇಕು ಮತ್ತು ತುಂಬಾ ಪೇಸ್ಟ್ ಆಗಿರಬಾರದು. ಏಕೆಂದರೆ ಲಡ್ಡನ್ನು ಕಟ್ಟಿಕೊಳ್ಳಲು ಅದು ಸುಲಭವಾಗಬೇಕು.
ಮಿಶ್ರಣವು ಒಣಗಿದಂತೆ ಕಂಡುಬಂದರೆ, 1-2 ಟೀ ಚಮಚ ಕರಗಿದ ತುಪ್ಪವನ್ನು ಸೇರಿಸಿ ಮತ್ತೆ ಮಿಶ್ರಣ ಮಾಡಿ.
ಈಗ ಮಿಕ್ಸಿ ಜಾರ್‌ನಲ್ಲಿರುವ ಎಲ್ಲಾ ಮಿಶ್ರಣವನ್ನು ಅಗಲವಾದ ತಟ್ಟೆಗೆ ಹರಡಿಕೊಳ್ಳಿ.

ಕೊನೆಯಲ್ಲಿ...

ನಿಮ್ಮ ಕೈಗಳನ್ನು ಸ್ವಲ್ಪ ತುಪ್ಪ ಅಥವಾ ಎಣ್ಣೆಯಿಂದ ಒದ್ದೆ ಮಾಡಿಕೊಳ್ಳಿ.
ಸ್ವಲ್ಪ ಸ್ವಲ್ಪವೇ ಮಿಶ್ರಣವನ್ನು ತೆಗೆದುಕೊಂಡು ನಿಮಗೆ ಬೇಕಾದ ಗಾತ್ರಕ್ಕೆ ಲಡ್ಡನ್ನು ಕಟ್ಟಿಕೊಳ್ಳಿ.
ಈ ಲಡ್ಡುಗಳು ಮಾಡುವುದು ತುಂಬಾ ಸುಲಭ. ಅಷ್ಟೇ ಅಲ್ಲ, ಬಹಳ ರುಚಿ ಮತ್ತು ಆರೋಗ್ಯಕ್ಕೆ ಒಳ್ಳೆಯದು