Sponge Dosa recipe in Kannada: ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಏನು ಮಾಡೋದು ಎಂಬ ಚಿಂತೆನಾ? ಹಾಗಿದ್ದರೆ ಎಣ್ಣೆ ಮತ್ತು ಸೋಡಾವಿಲ್ಲದೆ ಕೇವಲ 2 ಚಮಚ ಉದ್ದಿನಬೇಳೆ ಬಳಸಿ ಹತ್ತಿಯಂತಹ ಸಾಫ್ಟ್ ಸ್ಪಾಂಜ್ ದೋಸೆ ತಯಾರಿಸುವ ವಿಧಾನ ಇಲ್ಲಿದೆ ನೋಡಿ..
ಬೆಳಗಿನ ಉಪಹಾರಕ್ಕೆ ಮೃದುವಾದ ದೋಸೆ ಇಷ್ಟಪಡುವವರಿಗೆ ಇಲ್ಲಿದೆ ಒಂದು ವಿಶೇಷ ರೆಸಿಪಿ. ಕೇವಲ 2 ಟೇಬಲ್ ಚಮಚ ಉದ್ದಿನಬೇಳೆ ಮತ್ತು ತೆಂಗಿನಕಾಯಿ ಬಳಸಿ, ಒಂದು ಹನಿ ಎಣ್ಣೆ ಅಥವಾ ಸೋಡಾ ಇಲ್ಲದೆ ಮೆತ್ತನೆಯ ಸ್ಪಾಂಜ್ ದೋಸೆಗಳನ್ನು ನೀವು ತಯಾರಿಸಬಹುದು. ಇದಕ್ಕೆ ಸಖತ್ ಕಾಂಬಿನೇಶನ್ ಆಗಿರುವ ಖಾರವಾದ ಈರುಳ್ಳಿ ಚಟ್ನಿ ಮಾಡುವ ವಿಧಾನವನ್ನೂ ಇಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಇಡ್ಲಿ ದೋಸೆಗಿಂತ ಚಟ್ನಿಗೇ ಡಿಮ್ಯಾಂಡ್! ತೆಳ್ಳನೆಯ ಚಟ್ನಿ ಮಾಡಲು ಟಿಫನ್ ಸೆಂಟರ್‌ನಲ್ಲಿ ಬಳಸುವ 2 ಸೀಕ್ರೆಟ್ ಪದಾರ್ಥಗಳಿವು
ಮೊದಲಿಗೆ ಸ್ಪೈಸಿ ಈರುಳ್ಳಿ ಚಟ್ನಿ ತಯಾರಿಸುವ ವಿಧಾನ ನೋಡೋಣ
ನೆನೆಸಿಡಿ: ಮೊದಲು ಚಟ್ನಿಗಾಗಿ 10 ಒಣಮೆಣಸಿನಕಾಯಿಯನ್ನು (ಬಣ್ಣಕ್ಕಾಗಿ ಬ್ಯಾಡಗಿ ಅಥವಾ ಕಾಶ್ಮೀರಿ ಮೆಣಸಿನಕಾಯಿ ಬಳಸಬಹುದು) 15 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿಡಿ.
ರುಬ್ಬಿಕೊಳ್ಳಿ: ಮಿಕ್ಸಿ ಜಾರ್‌ಗೆ ನೆನೆಸಿದ ಮೆಣಸಿನಕಾಯಿ, 2 ದೊಡ್ಡ ಈರುಳ್ಳಿ, 2 ಟೊಮೆಟೊ, 10 ಬೆಳ್ಳುಳ್ಳಿ ಎಸಳು, ಸ್ವಲ್ಪ ಅರಿಶಿನ, ಉಪ್ಪು ಮತ್ತು ಸ್ವಲ್ಪ ಹುಣಸೆಹಣ್ಣು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಒಗ್ಗರಣೆ: ಬಾಂಡ್ಲಿಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ ಮತ್ತು ಜೀರಿಗೆ ಹಾಕಿ ಹುರಿಯಿರಿ. ನಂತರ ಕರಿಬೇವು ಸೇರಿಸಿ, ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಕಿ.
ಬೇಯಿಸಿ: ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಎಣ್ಣೆ ಸೈಡ್‌ನಲ್ಲಿ ಬಿಡುವವರೆಗೆ ಬೇಯಿಸಿ. ಈ ಚಟ್ನಿಯನ್ನು 4 ದಿನಗಳವರೆಗೆ ಸ್ಟೋರ್ ಮಾಡಿ ಬಳಸಬಹುದು.
ಈಗ ಸ್ಪಾಂಜ್ ದೋಸೆಗೆ ಹಿಟ್ಟನ್ನು ಮಾಡುವ ವಿಧಾನ ನೋಡೋಣ
ನೆನೆಸಿಡಿ: ಒಂದು ಪಾತ್ರೆಲ್ಲಿ 1 ಕಪ್ ಇಡ್ಲಿ ಅಕ್ಕಿ, 1/2 ಕಪ್ ಗಟ್ಟಿ ಅವಲಕ್ಕಿ ಮತ್ತು 2 ಟೇಬಲ್ ಚಮಚ ಉದ್ದಿನಬೇಳೆಯನ್ನು ಹಾಕಿ ಚೆನ್ನಾಗಿ ತೊಳೆದು 5-6 ಗಂಟೆಗಳ ಕಾಲ ನೆನೆಸಿಡಿ.
ರುಬ್ಬುವ ವಿಧಾನ: ನೆನೆಸಿದ ಪದಾರ್ಥಗಳನ್ನು ಮಿಕ್ಸಿ ಜಾರ್‌ಗೆ ಹಾಕಿ. ಅದರ ಜೊತೆಗೆ 1 ಕಪ್ ಹಸಿ ತೆಂಗಿನಕಾಯಿ ತುರಿ ಮತ್ತು 1 ಚಮಚ ಸಕ್ಕರೆ ಸೇರಿಸಿ. ರುಬ್ಬುವಾಗ ಹಿಟ್ಟು ಬಿಸಿಯಾಗದಂತೆ ತಣ್ಣೀರನ್ನು ಬಳಸಿ ನುಣ್ಣಗೆ ರುಬ್ಬಿಕೊಳ್ಳಿ.
ಹುದುಗುವಿಕೆ (Fermentation): ಈ ಹಿಟ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿ ಮುಚ್ಚಳ ಮುಚ್ಚಿ ರಾತ್ರಿಯಿಡೀ ಹುದುಗಲು ಬಿಡಿ.
ಇದನ್ನೂ ಓದಿ: ತುಂಬಾ ಸಿಂಪಲ್, ವಾರವಿಡೀ ಇರುತ್ತೆ.. ತಿಂಡಿಗೆ ಸೈಡ್ ಡಿಶ್ ರುಚಿ ರುಚಿಯಾದ ಟೊಮೆಟೊ ತೊಕ್ಕು
ದೋಸೆ ಮಾಡುವ ಕ್ರಮ
*ಮರುದಿನ ಬೆಳಗ್ಗೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹಗುರವಾಗಿ ಕಲಕಿ (ಹಿಟ್ಟಿನ ಒಳಗಿನ ಗಾಳಿ ಹೋಗದಂತೆ ಎಚ್ಚರವಹಿಸಿ).
*ದೋಸೆ ಹಂಚನ್ನು ಚೆನ್ನಾಗಿ ಬಿಸಿ ಮಾಡಿ. ಒಂದು ಸೌಟು ಹಿಟ್ಟನ್ನು ಹಂಚಿನ ಮಧ್ಯದಲ್ಲಿ ಹಾಕಿ, ಅತೀ ಹೆಚ್ಚು ಹರಡದೆ ಲಘುವಾಗಿ ಸ್ಪ್ರೆಡ್ ಮಾಡಿ.
ಕೂಡಲೇ ಮುಚ್ಚಳ ಮುಚ್ಚಿ ಮೀಡಿಯಂ ಫ್ಲೇಮ್‌ನಲ್ಲಿ ಆವಿಯಲ್ಲಿ ಬೇಯಿಸಿ. ಈ ದೋಸೆಗೆ ಎಣ್ಣೆ ಹಾಕುವ ಅಗತ್ಯವಿಲ್ಲ.
*ಸುಮಾರು 2 ನಿಮಿಷದ ನಂತರ ಮುಚ್ಚಳ ತೆಗೆದು ನೋಡಿ. ಮೇಲೆ ಕೈ ತಾಕಿದಾಗ ಹಿಟ್ಟು ಅಂಟದಿದ್ದರೆ ದೋಸೆ ರೆಡಿ ಎಂದರ್ಥ. ಈ ದೋಸೆಯನ್ನು ಮಗುಚಿ ಹಾಕುವ ಅಗತ್ಯವಿಲ್ಲ.
*ತೆಂಗಿನಕಾಯಿ ಮತ್ತು ಅವಲಕ್ಕಿ ಬಳಸಿರುವುದರಿಂದ ಈ ದೋಸೆಗಳು ಸ್ಪಾಂಜ್‌ನಂತೆ ಮೆತ್ತಗಿರುತ್ತವೆ ಮತ್ತು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ತಯಾರಿಸಿ ನೋಡಿ ಮತ್ತು ಈ ರುಚಿಕರ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.