Goan Wild Mango Coconut Curry: ಬೇಸಿಗೆಯ ಕಾಲ ಬಂತೆಂದರೆ ಮಾವಿನಹಣ್ಣುಗಳದ್ದೇ ಹಬ್ಬ. ಕೇವಲ ಹಣ್ಣಾಗಿ ತಿನ್ನುವುದರ ಬದಲು, ಮಾವಿನಹಣ್ಣಿನಿಂದ ರುಚಿಕರವಾದ ಅಡುಗೆ ಮಾಡುವುದು ಹೇಗೆ ಎಂಬುದನ್ನು ನಟಿ ಸಮೀರಾ ರೆಡ್ಡಿ ಅವರು ತೋರಿಸಿಕೊಟ್ಟಿದ್ದಾರೆ. ಗೋವಾದ ಸಾಂಪ್ರದಾಯಿಕ ಶೈಲಿಯ ಈ 'ಘೋಟಾಚೆ ಸಸಾವ್' ಕರಿ ಅನ್ನದೊಂದಿಗೆ ಅದ್ಭುತ ರುಚಿ ನೀಡುತ್ತದೆ. 

ಬೇಸಿಗೆಯ ಸುಡುಬಿಸಿಲಿನಲ್ಲಿ ಮಾಗಿದ ಮಾವಿನಹಣ್ಣುಗಳ ರುಚಿಯನ್ನು ಸವಿಯುವುದೇ ಒಂದು ಅದ್ಭುತ ಅನುಭವ. ಸಾಮಾನ್ಯವಾಗಿ ಮಾವಿನಹಣ್ಣನ್ನು ಕೇವಲ ಹಣ್ಣಾಗಿ ತಿನ್ನುವ ಬದಲು, ಅದರಿಂದ ಒಂದು ಸಾಂಪ್ರದಾಯಿಕ ಮತ್ತು ವಿಭಿನ್ನವಾದ ಅಡುಗೆಯನ್ನು ತಯಾರಿಸಿದರೆ ಊಟದ ರುಚಿ ಇಮ್ಮಡಿಗೊಳ್ಳುತ್ತದೆ. ಗೋವಾದ ಕೊಂಕಣಿ ಸಂಪ್ರದಾಯದಲ್ಲಿ ಅತ್ಯಂತ ಜನಪ್ರಿಯವಾಗಿರುವ 'ಘೋಟಾಚೆ ಸಸಾವ್' ಅಂತಹ ಒಂದು ವಿಶಿಷ್ಟ ಖಾದ್ಯವಾಗಿದೆ. ಇದನ್ನು ಮಾವಿನಹಣ್ಣು ಮತ್ತು ಕೊಬ್ಬರಿಯ ಕರಿ ಎಂದೂ ಕರೆಯುತ್ತಾರೆ. ಕೊಂಕಣಿ ಭಾಷೆಯಲ್ಲಿ 'ಘೋಟಾ' ಎಂದರೆ ಕಾಡಿನಲ್ಲಿ ಸಿಗುವ ಸಣ್ಣ ಗಾತ್ರದ ಹಣ್ಣಾದ ರಸಭರಿತ ಮಾವಿನಹಣ್ಣುಗಳು ಮತ್ತು 'ಸಸಾವ್' ಎಂದರೆ ಸಾಸಿವೆ ಎಂದರ್ಥ. ಈ ಖಾದ್ಯದಲ್ಲಿ ಸಾಸಿವೆ ಮತ್ತು ಹಸಿ ಕೊಬ್ಬರಿಯನ್ನು ಪ್ರಧಾನವಾಗಿ ಬಳಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

ಈ ಖಾದ್ಯದ ವಿಶೇಷತೆಯೆಂದರೆ ಇದರಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಹೀಗಾಗಿ ಇದು ಸಾತ್ವಿಕ ಆಹಾರ ಇಷ್ಟಪಡುವವರಿಗೂ ಸೂಕ್ತವಾಗಿದೆ. ಕೇವಲ 30 ನಿಮಿಷಗಳಲ್ಲಿ ಅತ್ಯಂತ ಸುಲಭವಾಗಿ ಇದನ್ನು ತಯಾರಿಸಬಹುದು. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚಿದ್ದ ಖ್ಯಾತ ನಟಿ ಸಮೀರಾ ರೆಡ್ಡಿ ಅವರು ಇತ್ತೀಚೆಗೆ ಈ ಆಕರ್ಷಕ ಅಡುಗೆಯನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಚಿತ್ರರಂಗದಿಂದ ದೂರವಿರುವ ಸಮೀರಾ, ಗೋವಾದ ಪ್ರಶಾಂತ ಪರಿಸರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಅಲ್ಲಿನ ಸ್ಥಳೀಯ ಸಂಸ್ಕೃತಿ ಮತ್ತು ಇಂತಹ ಅಪರೂಪದ ಅಡುಗೆಗಳನ್ನು ಅವರು ಸದಾ ತಮ್ಮ ಅಭಿಮಾನಿಗಳಿಗೆ ಪರಿಚಯಿಸುತ್ತಿರುತ್ತಾರೆ.

ಮಾವಿನಹಣ್ಣು ಮತ್ತು ಕೊಬ್ಬರಿಯ ಕರಿ ಅಡುಗೆಗೆ ಈ ಕೆಳಗಿನ ಪದಾರ್ಥಗಳು ಬೇಕಾಗುತ್ತವೆ

ಸಣ್ಣ ಗಾತ್ರದ ಹಣ್ಣಾದ ಮಾವಿನಹಣ್ಣುಗಳು
ಹಸಿ ಕೊಬ್ಬರಿ ತುರಿ
ಧನಿಯಾ (ಕೊತ್ತಂಬರಿ ಬೀಜ)
ಕರಿಬೇವು
ಅರಿಶಿನ ಮತ್ತು ಕೆಂಪು ಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಸಾಸಿವೆ ಮತ್ತು ಅಡುಗೆ ಎಣ್ಣೆ
ಅಗತ್ಯಕ್ಕೆ ತಕ್ಕಷ್ಟು ನೀರು

ತಯಾರಿಸುವ ವಿಧಾನ

ಮಸಾಲೆಯ ಸಿದ್ಧತೆ
ಮೊದಲು ಒಂದು ಮಿಕ್ಸಿ ಜಾರ್‌ನಲ್ಲಿ ಹಸಿ ಕೊಬ್ಬರಿ ತುರಿ, ಸ್ವಲ್ಪ ಧನಿಯಾ, ಚಿಟಿಕೆ ಅರಿಶಿನ ಮತ್ತು ಕೆಂಪು ಮೆಣಸಿನ ಪುಡಿಯನ್ನು ಹಾಕಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ಪೇಸ್ಟ್ ತಯಾರಿಸಿ ಪಕ್ಕಕ್ಕಿಡಿ.

ಒಗ್ಗರಣೆ
ನಂತರ ಒಲೆಯ ಮೇಲೆ ಒಂದು ದಪ್ಪ ತಳದ ಬಾಂಡಲಿ ಇಟ್ಟು ಸ್ವಲ್ಪ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ಮೇಲೆ ಸಾಸಿವೆ ಹಾಕಿ ಸಿಡಿಸಿ. ಸಾಸಿವೆ ಸಿಡಿದ ನಂತರ ಕರಿಬೇವು ಸೇರಿಸಿ ಒಳ್ಳೆಯ ಸುಗಂಧ ಬರುವವರೆಗೆ ಹುರಿಯಿರಿ. 
ಈಗ ಸಿಪ್ಪೆ ಸುಲಿದ ಮಾವಿನ ಹಣ್ಣುಗಳನ್ನು ಸೇರಿಸಿ. ಎಣ್ಣೆಯಲ್ಲಿ ಒಂದು ನಿಮಿಷ ನಿಧಾನವಾಗಿ ಬೆರೆಸಿ ಹುರಿಯಿರಿ. ನಂತರ ಅರಿಶಿನ, ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ, ಮುಚ್ಚಿಟ್ಟು ಮಾವಿನ ಹಣ್ಣುಗಳು ಮೃದುವಾಗುವವರೆಗೆ ಬೇಯಿಸಿ. -
ಮಾವಿನಹಣ್ಣು ಬೆಂದ ನಂತರ, ಮೊದಲೇ ತಯಾರಿಸಿದ ತೆಂಗಿನಕಾಯಿ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿ ಇನ್ನೊಂದು ಐದು ನಿಮಿಷ ಬೇಯಲು ಬಿಡಿ.ಅಷ್ಟೇ, ರುಚಿಕರವಾದ ಗೋವಾದ ವಿಶೇಷ ಮಾವಿನ ತೆಂಗಿನಕಾಯಿ ಕರಿ ಸಿದ್ಧವಾಗಿದೆ. 

ಗಮನಿಸಿ

ಈ ಖಾದ್ಯಕ್ಕೆ ವಿಡಿಯೋದಲ್ಲಿ ತೋರಿಸಿರುವ ಹಾಗೆ ಸಣ್ಣ ಗಾತ್ರದ, ಅಧಿಕ ರಸವಿರುವ ಸಾಂಪ್ರದಾಯಿಕ ಮಾವಿನಹಣ್ಣುಗಳನ್ನು ಬಳಸಿದರೆ ರುಚಿ ಹೆಚ್ಚಿರುತ್ತದೆ.
ಒಗ್ಗರಣೆಗೆ ಸಾಸಿವೆಯನ್ನು ಸರಿಯಾದ ಪ್ರಮಾಣದಲ್ಲಿ ಬಳಸಿ.

ಇಲ್ಲಿದೆ ನೋಡಿ ವಿಡಿಯೋ 

View post on Instagram