ತುಂಬಾ ಹಸಿವಾಗಿದೆಯಾ? ಹಾಗಿದ್ದರೆ ಕೋಬ್ರಾ ಆರ್ಡರ್ ಮಾಡಬಹುದು. ಸ್ವಲ್ಪ ಹಸಿವು ಕಡಿಮೆ ಇದ್ದು ತಿನ್ನುವ ಚಟ ಜಾಸ್ತಿ ಇದ್ದಲ್ಲಿ ಇತರೆ ಮರಿ ಹಾವುಗಳು ಸಾಲಬಹುದು. ಇನ್ನು ಇವುಗಳಲ್ಲಿ ವೆರೈಟಿ ಕೇಳಿದ್ರೆ ಬಾಯಲ್ಲಿ ನೀರೂರಬಹುದು, ಕಡುಬಿನಂತೆ ಎಲೆಗಳಲ್ಲಿ ಸುತ್ತಿದ ಹಾವುಗಳು, ಸ್ಪ್ರಿಂಗ್ ರೋಲ್ ಮಾಡಿದಂಥವು, ಹಾವಿನ ಮಾಂಸದೊಳಗೆ ಮೊಸಳೆಯ ಮಾಂಸದ ರುಚಿ ಬೆರೆಸಿದಂಥದು, ಸೂಪ್, ಹೊಟ್ಟೆ, ಮೂಳೆ... 

ಅಬ್ಬಬ್ಬಾ... ಈ ಹೋಟೆಲ್‌ನ ಮೆನು ನೋಡಿದರೆ ಒಮ್ಮೆ ಮೈ ಜುಂ ಎಂದೀತು. ಏಕೆಂದರೆ ಇದರ ತುಂಬಾ ಹಾವುಗಳೇ ಹರಿದಾಡುತ್ತಿವೆ. ಯಾವುದಪ್ಪಾ ಈ ಹೋಟೆಲ್, ಎಲ್ಲಿದೆ ಎಂದು ತಿಳ್ಕೋಬೇಕಾ, ಇದು ಲೇ ಮತ್ ಸ್ನೇಕ್ ವಿಲೇಜ್‌ನ ಜನಪ್ರಿಯ ಹೋಟೆಲ್ ಹಂಗ್. ವಿಯೆಟ್ನಾಂನ ಹನೋಯ್‌ನಿಂದ 5 ಕಿಲೋಮೀಟರ್ ದೂರದಲ್ಲಿದೆ. 

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

ಲೇ ಮತ್ ಪಟ್ಟಣ

ಈ ಪಟ್ಟಣಕ್ಕೆ ಪಟ್ಟಣವೇ ಹಲವಾರು ತಲೆಮಾರುಗಳಿಂದ ಅಂದರೆ ಸಾವಿರ ವರ್ಷಗಳಿಗೂ ಮುಂಚಿನಿಂದಲೂ ಹಾವು ಹಿಡಿಯುವುದು, ಹೊಡೆಯುವುದನ್ನು ಜೀವನವಾಗಿ ಮಾಡಿಕೊಂಡು ಬಂದಿದೆ. ಇಲ್ಲಿನ ಯಾರನ್ನೇ ಮಾತನಾಡಿಸಿದರೂ ಅವರ ಬಳಿ ಹಾವಿನಿಂದ ಕಚ್ಚಿಸಿಕೊಂಡಿದ್ದು, ಅದರಿಂದ ಬೆರಳು ಕಳೆದುಕೊಂಡಿದ್ದು ಮುಂತಾದ ಕತೆಗಳು ಹೇಳಲು ಇದ್ದೇ ಇರುತ್ತವೆ. ಇಲ್ಲಿ ಹಾವನ್ನು ಹುಡುಕಿ ಹಿಡಿಯುವುದಷ್ಟೇ ಅಲ್ಲ, ಫಾರ್ಮ್‌ನಲ್ಲಿ ಹಾವನ್ನೇ ಬೆಳೆಸುತ್ತಾರೆ, ಮೊಟ್ಟೆ ಸಾಕಣೆ ಮಾಡುತ್ತಾರೆ. ವಿಯೆಟ್ನಾಮಿಗರ ಪ್ರಕಾರ ಹಾವನ್ನು ಸೇವಿಸುವುದರಿಂದ ಪುರುಷರ ಬಲ ಹಾಗೂ ವೀರ್ಯ ವೃದ್ಧಿಸುತ್ತದೆ. ಇಲ್ಲಿನ ಯಾವುದೇ ರೆಸ್ಟೋರೆಂಟ್‌ಗೆ ಹೋಗಿ, ಅಲ್ಲಿನ ಮೆನುವಿನಲ್ಲಿ ಹಾವಿದ್ದೇ ಇರುತ್ತದೆ. ಅದರಲ್ಲೂ ದಿ ಹಂಗ್ ಎಂಬ ಹೋಟೆಲ್ ಎಲ್ಲಕ್ಕಿಂತ ಫೇಮಸ್. ಇಲ್ಲಿ ಟೂರಿಸ್ಟ್‌ಗಳು ಹಾವಿನ ರುಚಿ ಆಸ್ವಾದಿಸಲು ತುಂಬಿ ತುಳುಕುತ್ತಾರೆ. 

ದಿ ಹಂಗ್ ಹೋಟೆಲ್

ಇಲ್ಲಿ ಹೋಟೆಲ್‌ಗೆ ಹೋದೊಡನೆ ನೀವು ನಿಮಗೆ ಯಾವ ಹಾವು ಬೇಕೆಂದು ಆಯ್ಕೆ ಮಾಡಬಹುದು. ನೀವು ಬಯಸಿದರೆ ಅವರು ಆ ಹಾವನ್ನು ನಿಮ್ಮೆದುರೇ ನೆಲಕ್ಕೆ ಬಡಿದು ಸಾಯಿಸಿ, ಫಟಾಪಟ್ ಅದರ ಹೃದಯ ತೆಗೆಯುತ್ತಾರೆ. ಇದನ್ನು ಅಕ್ಕಿಯ ವೈನ್‌ಗೆ ಹಾಕಿಕೊಡುತ್ತಾರೆ. ನೀವಿದನ್ನು ಅಗೆಯಬಾರದು. ರಾಗಿಮುದ್ದೆಯಂತೆ ಒಂದೇ ಗುಟುಕಿಗೆ ನುಂಗಬೇಕು. ಇನ್ನು ಹಾವಿನ ರಕ್ತ ಹಾಗೂ ಬೈಲ್‌ಜ್ಯೂಸನ್ನು ಕೂಡಾ ವೈನ್‌ಗೆ ಮಿಕ್ಸ್ ಮಾಡಿ ಊಟದ ಜೊತೆ ಸೇವನೆಗೆ ನೀಡುತ್ತಾರೆ. ಕೋಬ್ರಾದ ವೈನ್, ಮೂರು ಹಾವುಗಳದ್ದು ಬೇಕೆಂದರೆ ಕೋಬ್ರಾ, ಬಿದಿರ ಹಾವು ಹಾಗೂ ಕ್ರೈಟ್ಸ್ ಮೂರು ಹಾವಿನ ವೈನ್, ಐದು ಬೇಕೆಂದರೆ ಐದು ವಿಧದ ಹಾವುಗಳ ವೈನ್ ಎಲ್ಲವೂ ಇಲ್ಲಿ ಸಿಗುತ್ತವೆ. ಹಾವುಗಳನ್ನು ಔಷಧೀಯ ಸೊಪ್ಪುಗಳ ರಸದಲ್ಲಿ ಅದ್ದಿ ಇಟ್ಟು ಕೂಡಾ ಬಳಸಲಾಗುತ್ತದೆ. 

ಹೆಬ್ಬಾವಿನ ಮಸಾಜ್ ಮಾಡಿಸಿಕೊಳ್ಳೊ ಧೈರ್ಯ ನಿಮಗಿದ್ಯಾ?

ಎಲ್ಲ ಎಂದರೆ ಎಲ್ಲ... ಹಾವಿನ ದೇಹದ ಪ್ರತಿ ಭಾಗಗಳೂ ಇಲ್ಲಿನ ಅಡುಗೆ ಮನೆಯಲ್ಲಿ ರುಚಿ ರುಚಿಯಾದ ಖಾದ್ಯವಾಗಿ ಬದಲಾಗುತ್ತವೆ. ಹೊಟ್ಟೆ, ಮೆದುಳು, ಮೂಳೆ, ರಕ್ತ, ಹೃದಯ... ಹಾವು ಹಲವು ರೂಪದಲ್ಲಿ ತಟ್ಟೆಗೆ ಬರುತ್ತದೆ. ಈ ಎಲ್ಲ ಅಡುಗೆಗಳಲ್ಲೂ ವಿಯೆಟ್ನಾಮೀಸ್ ಫ್ಲೇವರ್ ಕಾಣಿಸುತ್ತದೆ. ಈ ಅಡುಗೆಗಳಲ್ಲಿ ಪುದೀನಾ, ಫಿಶ್ ಸಾಸ್, ಕೊತ್ತಂಬರಿ ಸೊಪ್ಪು ಹಾಗೂ ಬೆಳ್ಳುಳ್ಳಿಯನ್ನು ಬಳಕೆ ಮಾಡುವುದರಿಂದ ಹೊಸಬರು ಇದನ್ನು ಟ್ರೈ ಮಾಡಲು ಹೆಚ್ಚು ಹೆದರದೆ ಮನಸ್ಸು ಮಾಡುತ್ತಾರೆನ್ನುವುದು ಇವರ ನಂಬಿಕೆ. ಆದರೆ, ಹಾವಿನ ಹೃದಯ ಸೇವನೆಗೆ ಮಾತ್ರ ಗಟ್ಸ್ ಇರಲೇಬೇಕು. ಏಕೆಂದರೆ ಇದನ್ನು ಹಸಿಯಾಗಿಯೇ ಗುಳುಂ ಮಾಡಬೇಕು. 

ಒಂದು ಕೋಬ್ರಾವು 60 ಡಾಲರ್‌ನಲ್ಲಿ 6ರಿಂದ 8 ಜನರ ಹೊಟ್ಟೆ ತುಂಬಿಸಬಲ್ಲದು. 

ವಿಷವಲ್ಲವೇ?

ಈ ಹೋಟೆಲ್ ಮಾಲೀಕ ಲಾಂಗ್ ಪ್ರಕಾರ, ಬರುವ ಪ್ರವಾಸಿಗರೆಲ್ಲರೂ ಆಹಾರ ತಿಂದು ವಿಷದಿಂದ ಏನಾದರೂ ಆದರೆ ಎಂದು ಭಯ ವ್ಯಕ್ತಪಡಿಸುತ್ತಾರೆ. ಆದರೆ, ಇದುವರೆಗೂ ಹಾವಿನ ಖಾದ್ಯಗಳನ್ನು ಸೇವಿಸಿ ಕನಿಷ್ಠ ಪಕ್ಷ ಅಲರ್ಜಿ ಆದ ದೃಷ್ಟಾಂತಗಳೂ ಇಲ್ಲ. 

ಉರಗದೊಂದಿಗೇ ಸಮರದ ಜೀವನ ನಡೆಸೋ ಗ್ರಾಮವಿದು!

ಔಷಧವಾಗಿ ಹಾವು

ಈ ಪ್ರದೇಶದಲ್ಲಿ ಸಾವಿರಾರು ವರ್ಷಗಳಿಂದ ಹಾವನ್ನು ಔಷಧಿಯಾಗಿ ಬಳಸಲಾಗುತ್ತಿದೆಯಂತೆ. ಅಂದರೆ, ಸಾಂಪ್ರದಾಯಿಕ ವೈದ್ಯರು ತಲೆನೋವಿಗೆ ಹಾವಿನ ರಕ್ತವನ್ನು ಔಷಧವಾಗಿ ಕೊಡುತ್ತಿದ್ದರೆ, ಗಂಟಲ ತುರಿಕೆ ಹಾಗೂ ನೋವಿಗೆ ಸ್ನೇಕ್ ಬೈಲ್ ನೀಡುತ್ತಿದ್ದರಂತೆ. ಮೂಳೆಗಳ ಸಮಸ್ಯೆಗೆ ಕೂಡಾ ಈ ಬೈಲ್ ಬಹಳ ಒಳ್ಳೆಯದು ಎನ್ನುವುದು ಅವರ ನಂಬಿಕೆ. 
ವಿಯೆಟ್ನಾಮೀಸ್ ಜನರ ದೈನಂದಿನ ಜೀವನದಲ್ಲಿ ಆಹಾರವಾಗಿ, ಔಷಧವಾಗಿ, ಉದ್ಯೋಗವಾಗಿ ಹಾವುಗಳು ಬೆರೆತುಹೋಗಿವೆ. ಹಾವೆಂದರೆ ಅವರಿಗೆ ಮನುಷ್ಯರಷ್ಟೇ ಆದರ, ಇರುವೆ ಎಂಬಷ್ಟೇ ಭಯರಹಿತ ವಾತಾವರಣ. ಟ್ರಿಪ್ ಎಂದು ವಿಯೆಟ್ನಾಂಗೆ ಹೋದರೆ ಲೇ ಮತ್ ಕಡೆ ಹೋಗಲು ಮರೆಯಬೇಡಿ.