ಮದ್ಯಪಾನ ಮಾಡುವಾಗ ಹಲವರು ಸೈಡ್ಸ್ ಆಗಿ ಸಿಹಿ ತಿನಿಸು, ಮಸಾಲೆ ಪದಾರ್ಥ, ಪಿಜ್ಜಾ ಮತ್ತು ಕರಿದ ಬೀನ್ಸ್ ಸೇವಿಸುತ್ತಾರೆ. ಆದರೆ, ಈ ಆಹಾರಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ, ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್ಟ್ರಿಕ್ ಮತ್ತು ಎದೆಯುರಿಯಂತಹ ತೊಂದರೆಗಳನ್ನು ಉಂಟುಮಾಡಬಹುದು.
ಬೆಂಗಳೂರು: ಮದ್ಯಪಾನವನ್ನು ಎಂಜಾಯ್ ಮಾಡುವವರು ಎಣ್ಣೆ ಹೊಡೆಯಲು ಸಿಗುವ ಒಂದು ಅವಕಾಶವನ್ನು ಹಾಳು ಮಾಡುವುದಿಲ್ಲ. ಅದು ಹಬ್ಬಹರಿ ದಿನಗಳೇ ಇರಲಿ, ಮದುವೆ, ಬ್ಯಾಚುಲರ್ ಪಾರ್ಟಿ ಹೀಗೆ ಅವಕಾಶ ಸಿಕ್ಕಾಗಲೆಲ್ಲಾ ಎಣ್ಣೆ ಹೊಡೆಯುತ್ತಾರೆ. ಆದರೆ ನೀವು ಎಣ್ಣೆ ಹೊಡೆಯುವಾಗ ಈ 4 ತಪ್ಪನಂತೂ ಮಾಡಬೇಡಿ.
ಈ ಆರ್ಟಿಕಲ್ ಓದುವ ಮುನ್ನ ಒಂದು ಮಾತು ನೆನಪಿಡಿ. ಮದ್ಯಪಾನ ಹಾಗೂ ಧೂಮಪಾನ ಆರೋಗ್ಯಕ್ಕೆ ಹಾನಿಕರ. ಹೀಗಾಗಿ ನಾವು ಮದ್ಯಪಾನ ಸೇವನೆಯನ್ನು ಉತ್ತೇಜಿಸುವುದಿಲ್ಲ. ಮದ್ಯಪಾನದ ಜತೆಗೆ ಸೈಡ್ಸ್ ರೂಪದಲ್ಲಿ ಹಲವರು ಹಲವು ರೀತಿಯ ಆಹಾರಗಳನ್ನು ಬಳಸುತ್ತಾರೆ. ಆದರೆ ಮದ್ಯಪಾನಕ್ಕೆ ಯಾವ ಆಹಾರ ಸೂಕ್ತ, ಯಾವುದು ಸರಿಯಾದ ಕಾಂಬಿನೇಷನ್ ಅಲ್ಲ ಎನ್ನುವುದು ಬಹುತೇಕ ಮದ್ಯಪ್ರಿಯರಿಗೆ ಗೊತ್ತಿರುವುದಿಲ್ಲ.
ಮದ್ಯದ ಜತೆಗೆ ಸೈಡ್ಸ್ ರೂಪದಲ್ಲಿ ಸರಿಯಾದ ಕಾಂಬಿನೇಷನ್ ಇಲ್ಲದ ಆಹಾರ ಸೇವಿಸಿದರೆ, ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಂತೂ ಗ್ಯಾರಂಟಿ. ಮದ್ಯಪಾನ ಮಾಡುವಾಗ ಯಾವ ಆಹಾರಗಳಿಂದ ದೂರವಿರಬೇಕು ಮತ್ತು ಯಾಕಾಗಿ ದೂರವಿರಬೇಕು ಎನ್ನುವುದನ್ನು ಈ ಲೇಖನದ ಮೂಲಕ ಎಳೆಎಳೆಯಾಗಿ ತಿಳಿದುಕೊಳ್ಳೋಣ ಬನ್ನಿ.
ಚಾಕೋಲೇಟ್, ಸಿಹಿ ತಿನಿಸುಗಳಿಂದ ದೂರವಿರಿ:
ಕೆಲವು ಮದ್ಯಪ್ರಿಯರು ತಮ್ಮ ಪಾನೀಯದ ಜತೆಗೆ ಸಿಹಿ ತಿನಿಸುಗಳನ್ನು ಎಂಜಾಯ್ ಮಾಡುತ್ತಾರೆ. ಅವರ ಮೊದಲ ಆಯ್ಕೆ ಚಾಕೊಲೇಟ್ ಆಗಿರುತ್ತದೆ. ಯಾಕೆಂದರೆ ಇದು ಕಿಕ್ ಹೆಚ್ಚಿಸುತ್ತೆ ಎನ್ನುವುದು ಒಂದು ಕಲ್ಪನೆಯಾಗಿದೆ. ಆದರೆ ಚಾಕೊಲೇಟ್‌ನಲ್ಲಿರುವ ಕೆಫೀನ್ ಅಂಶ ಗ್ಯಾಸ್ಟ್ರಿಕ್ಟ್ ಸಮಸ್ಯೆಯನ್ನು ಉಲ್ಬಣ ಮಾಡಿಬಿಡಬಹುದು. ಆದ್ದರಿಂದ ಮದ್ಯಪಾನ ಮಾಡುವಾಗ ಚಾಕೊಲೇಟ್ ಹಾಗೂ ಸಿಹಿ ಪದಾರ್ಥಗಳಿಂದ ದೂರವಿದ್ದಷ್ಟು ಒಳ್ಳೆಯದು.
ಭಜ್ಜಿ, ಮಸಾಲೆ ಐಟಂನಿಂದ ದೂರವಿರಿ:
ಕೆಲವರು ಎಣ್ಣೆ ಪಾರ್ಟಿ ಮಾಡುವಾಗ ಬಾಯಿ ರುಚಿ ತಣಿಸಲು ಭಜ್ಜಿ ಹಾಗೂ ಮಸಾಲೆಯುಕ್ತ ಸೈಡ್ಸ್ ಬೇಕು ಎಂದು ಆಸೆಪಟ್ಟು ತಿನ್ನುತ್ತಾರೆ. ಆದರೆ ಇದು ಜೀರ್ಣಕ್ರಿಯೆಗೆ ತೊಂದರೆಯನ್ನುಂಟು ಮಾಡಬಹುದು. ಮೊದಲನೆಯದಾಗಿ ಆಲ್ಕೋಹಾಲ್ ಕರುಳಿನ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಿಗೆ ಹಾನಿ ಮಾಡಿರುತ್ತದೆ. ಇದರ ಜತೆಗೆ ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಹೆಚ್ಚುವರಿಯಾಗಿ ಉಪ್ಪು ಹಾಗೂ ಮಸಾಲೆಯುಕ್ತ ಆಹಾರಗಳಿಂದ ಮದ್ಯಪಾನ ಮಾಡುವಾಗ ದೂರವಿರಿ.
ಕೊಬ್ಬಿನಿಂದ ಕೂಡಿರುವ ಪಿಜ್ಜಾವನ್ನು ಸೈಡ್ಸ್ ರೂಪದಲ್ಲಿ ತಿನ್ನಲೇಬೇಡಿ:
ಹೌದು, ಉಪ್ಪು ಹಾಗೂ ಕೊಬ್ಬಿನಿಂದ ತುಂಬಿರುವ ಪಿಜ್ಜಾವನ್ನು ಆಲ್ಕೋಹಾಲ್‌ನೊಂದಿಗೆ ಸೇವಿಸಿದಾಗ ನಿರ್ಜಲೀಕರಣವನ್ನು ಹೆಚ್ಚಿಸುತ್ತದೆ. ಪಿಜ್ಜಾದಲ್ಲಿರುವ ಚೀಸ್, ಕೊಬ್ಬು ಹಾಗೂ ಕಾರ್ಬೊಹೈಡ್ರೇಟ್‌ಗಳು ನಿಮ್ಮ ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡಬಹುದು. ಇದರ ಜತೆಗೆ ಟಮೋಟೋ ಸಾಸ್ ಹಾಗೂ ಮಸಾಲೆಗಳು ಆಮ್ಲೀಯತೆಯನ್ನು ಹೆಚ್ಚಿಸುವ ಮೂಲಕ ಎದೆಯುರಿಯನ್ನುಂಟು ಮಾಡಬಹುದು. ಹೀಗಾಗಿ ಪಿಜ್ಜಾ ಸೈಡ್ಸ್ ಮಾಡಿಕೊಳ್ಳುವ ಮುನ್ನ ಎಚ್ಚರವಿರಲಿ.
ಕಡಲೆ, ಕರಿದ ಬೀನ್ಸ್ ಐಟಂಗಳನ್ನು ಮುಟ್ಟಲೇಬೇಡಿ:
ವಿಸ್ಕಿ, ರಮ್ ಹಾಗೂ ವೈನ್ ಸೇವಿಸುವ ಬಹುತೇಕ ಮಂದಿ ಕರಿದ ಕಡಲೆ ಅಥವಾ ಬೀನ್ಸ್ ಬೀಜಗಳನ್ನು ತಿನ್ನಲು ಬಯಸುತ್ತಾರೆ. ಆದರೆ ಈ ಕಾಂಬಿನೇಷನ್ ನಾಲಿಗೆಗೆ ರುಚಿಕೊಟ್ಟರೂ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಸುಳ್ಳಲ್ಲ. ವಿಸ್ಕಿ/ವೈನ್ ಜತೆಗೆ ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಷ್ಟೇ ಅಲ್ಲದೇ ಪೋಷಕಾಂಶಗಳ ಕೊರತೆಗೂ ಕಾರಣವಾಗುತ್ತದೆ.


