ಅನ್ನಕ್ಕೂ ಸೈ, ಚಪಾತಿಗೂ ಜೈ, ನೋಡಿ ಒಂದು ಕೈ
ಮಧ್ಯಾಹ್ನಕ್ಕೆ ಚಪಾತಿ, ಅನ್ನ ರೆಡಿ ಮಾಡ್ತೀವಿ. ಜೊತೆಗೆ ಏನು ಮಾಡಲಿ ಅನ್ನೋದೇ ಚಿದಂಬರ ರಹಸ್ಯವಾಗಿ ಕಾಡೋದುಂಟು. ಅದಕ್ಕುತ್ತರ ಇಲ್ಲಿದೆ.
- ಗೀತಾ ಬಿ ಯು
1. ಮಾಟೋಡೆ ಪಲ್ಯ
ಬೇಕಾಗುವ ಸಾಮಗ್ರಿ
ತೊಗರಿಬೇಳೆ ಒಂದು ಪಾವು, ಮೆಂತ್ಯೆ ಸೊಪ್ಪು ಒಂದು ಚಿಕ್ಕ ಕಟ್ಟು, ಹಸಿಮೆಣಸಿನಕಾಯಿ 10-12, ಕಾಯಿತುರಿ ಒಂದು ಕಪ್, ರುಚಿಗೆ ಉಪ್ಪು, ಎಣ್ಣೆ ನಾಲ್ಕು ಟೇಬಲ್ ಸ್ಪೂನು.
ಭರ್ಜರಿ ಊಟದ ನಂತ್ರ ಹೊಟ್ಟೆ ಅಸ್ವಸ್ಥ: ಜೀರಾ ಕೂಲರ್ ಕುಡೀರಿ, ಇಲ್ಲಿದೆ ಸುಲಭ ರೆಸಿಪಿಮಾಡುವ ವಿಧಾನ
ತೊಗರಿ ಬೇಳೆಯನ್ನು ಎರಡು ಗಂಟೆಗಳ ಕಾಲ ನೆನೆಸಿ, ನೀರು ಸೋಸಿ ಹಸಿಮೆಣಸಿನಕಾಯಿ, ಉಪ್ಪಿನೊಂದಿಗೆ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಮೆಂತ್ಯೆ ಸೊಪ್ಪು ಸಣ್ಣಗೆ ಹೆಚ್ಚಿಕೊಂಡು, ಚೆನ್ನಾಗಿ ತೊಳೆದು, ತರಿತರಿಯಾಗಿ ರುಬ್ಬಿಕೊಂಡ ಬೇಳೆ ಹಾಗೂ ಕಾಯಿ ತುರಿಯೊಂದಿಗೆ ಕಲಸಬೇಕು.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಅರಿಶಿನ, ಒಣ ಮೆಣಸಿನಕಾಯಿ ಒಗ್ಗರಣೆ ಹಾಕಿ ಕಲಸಿಟ್ಟುಕೊಂಡ ಬೇಳೆ ಸೊಪ್ಪು ಹಾಕಿ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಆಗಾಗ ಕೈ ಆಡಿಸಬೇಕು. ನೀರು ಹಾಕಬೇಕಿಲ್ಲ. ಇದು ಬೇಯಲು ಸುಮಾರು 25 ನಿಮಿಷ ತೆಗೆದುಕೊಳ್ಳುತ್ತದೆ.
2. ಚಕೋತನೆ ಸೊಪ್ಪಿನ ಕೂಟು
ಬೇಕಾಗುವ ಸಾಮಗ್ರಿ
ಚಕೋತನೇ ಸೊಪ್ಪು 1 ಕಟ್ಟು, ತೊಗರಿ ಬೇಳೆ ಅರೆ ಪಾವು, ಕಡಲೆ ಕಾಯಿ ಬೀಜ ಒಂದು ಹಿಡಿ.
ಅಂತಿಂಥ ಅಣಬೆಯಲ್ಲಈ ಗುಚ್ಚಿ,ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಮಾಡುವ ವಿಧಾನ
ಕುಕ್ಕರ್‌ನಲ್ಲಿ ಒಂದು ಬಟ್ಟಲಿನಲ್ಲಿ ಬೇಳೆ, ಇನ್ನೊಂದು ಬಟ್ಟಲಿನಲ್ಲಿ ಸೊಪ್ಪು, ಕಡಲೆ ಕಾಯಿ ಬೀಜವನ್ನು ಕೊಂಚ ಉಪ್ಪಿನೊಂದಿಗೆ ಬೇಯಿಸಿಕೊಳ್ಳುವುದು. ಬಾಣಲೆಯಲ್ಲಿ ಚೂರು ತುಪ್ಪದಲ್ಲಿ ಮೆಣಸು ಒಂದು ಚಮಚ, ಉದ್ದಿನಬೇಳೆ ಒಂದೂವರೆ ಚಮಚ, ಒಣಮೆಣಸಿನಕಾಯಿ ಮೂರು, ಅಕ್ಕಿ ಒಂದೂವರೆ ಚಮಚ ಹಾಕಿ ಹುರಿದುಕೊಳ್ಳಬೇಕು. ಒಲೆ ಆರಿಸಿದ ಮೇಲೆ ಒಂದು ಪುಟ್ಟಬಟ್ಟಲು ಒಣ ಕೊಬ್ಬರಿ ಹಾಕಿ ಹುರಿದು ಪುಡಿ ಮಾಡಿಕೊಳ್ಳಬೇಕು.
ಬೆಂದ ಬೇಳೆ, ಸೊಪ್ಪು ಕಡಲೆ ಕಾಯಿ ಬೀಜ, ಈ ಪುಡಿ ಎಲ್ಲಾ ಬೆರೆಸಿ, ರುಚಿಗೆ ತಕ್ಕಷ್ಟುಉಪ್ಪು ಹಾಕಿ ಎರಡು ಕುದಿ ಕುದಿಸಿದರೆ ಕೂಟು ರೆಡಿ.
3. ಕ್ಯಾಪ್ಸಿಕಂ ಮಸಾಲಾ
( ಹೀರೆಕಾಯಿ, ಪಡವಲಕಾಯಿ, ಬದನೆಕಾಯಿ, ಸೋರೆಕಾಯಿಗಳಲ್ಲಿ ಕೂಡ ಮಾಡಬಹುದು)
ಬೇಕಾಗುವ ಸಾಮಗ್ರಿ
ಕ್ಯಾಪ್ಸಿಕಂ 5 (ಮಧ್ಯಮ ಗಾತ್ರದಲ್ಲಿ ಹೆಚ್ಚಿಕೊಳ್ಳಬೇಕು), ಈರುಳ್ಳಿ (ಒಂದು ದೊಡ್ಡದು ಅಥವಾ ಎರಡು ಚಿಕ್ಕವು), ಮೂರು ಟೊಮ್ಯಾಟೊ, ನಾಲ್ಕು ಹಸಿಮೆಣಸಿನಕಾಯಿ.
ತನಗೆ ಕೊರೋನಾ ಚಿಕಿತ್ಸೆ ನೀಡಿದ ವೈದ್ಯರಿಗೆ ಕೈಯಾರೆ ಬೆಳೆದ ಅಕ್ಕಿ ನೀಡಿದ ವೃದ್ಧ..!
ಮಾಡುವ ವಿಧಾನ
ಟೊಮ್ಯಾಟೊ, ಹಸಿಮೆಣಸಿನ ಕಾಯನ್ನು ನೀರು ಹಾಕದೇ ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು. ಬಳಿಕ ಎರಡು ಟೇಬಲ್ ಚಮಚ ಎಣ್ಣೆಯನ್ನು ಬಾಂಡಲೆಗೆ ಹಾಕಿ ಕಾದ ಮೇಲೆ ಹೆಚ್ಚಿಕೊಂಡ ಕ್ಯಾಪ್ಸಿಕಂನೊಂದಿಗೆ ಎರಡು ಈರುಳ್ಳಿ ಹಾಕಿ. ಕೊಂಚ ಉಪ್ಪು ಹಾಗು ರೆಡ್ ಚಿಲ್ಲಿ ಪೌಡರ್ ಹಾಕಿ 5 ನಿಮಿಷ ಬಾಡಿಸಬೇಕು.
ಬೇರೊಂದು ತಟ್ಟೆಗೆ ಅದನ್ನು ಹಾಕಿ. ಅದೇ ಬಾಂಡಲೆಗೆ ಎರಡು ಟೇಬಲ್ ಚಮಚ ತುಪ್ಪ ಹಾಕಿ, ಜೀರಿಗೆ, ಅರಿಶಿನ, ತುರಿದ ಶುಂಠಿ ಹಾಕಿ ಹುರಿಯಬೇಕು. ಅದಕ್ಕೆ ಮೂರು ಟೇಬಲ್ ಚಮಚ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಘಮ ಬರುವವರೆಗೂ ಹುರಿಯಬೇಕು. ರುಬ್ಬಿಕೊಂಡ ಈರುಳ್ಳಿ ಟೊಮೇಟೊ ಪೇಸ್ಟ್ ಹಾಕಿ ಬೆರೆಸಬೇಕು. ನಂತರ ಎರಡು ಚಮಚ ಅಚ್ಚ ಕಾರದ ಪುಡಿ, ಗರಂ ಮಸಾಲಾ, ಜೀರಿಗೆ ಪುಡಿ, ಧನಿಯಾ ಪುಡಿ ತಲಾ ಒಂದು ಚಮಚ ಹಾಕಬೇಕು. ಉಪ್ಪು ಹಾಕಿ ಮಿಕ್ಸ್ ಮಾಡಿ ಐದು ನಿಮಿಷ ಚೆನ್ನಾಗಿ ಫ್ರೈ ಮಾಡಬೇಕು. ಮಸಾಲೆ ಖಾರ ಇದ್ದರೆ ಅದೂ ಒಂದು ಚಮಚ ಹಾಕಬೇಕು. ಹುರಿದು ಎತ್ತಿಟ್ಟಿದ್ದ ಕ್ಯಾಪ್ಸಿಕಂ ಹಾಗು ಈರುಳ್ಳಿ ಹಾಕಿ 3 ನಿಮಿಷ ಮುಚ್ಚಿ ಬೇಯಿಸಿದರೆ ಕ್ಯಾಪ್ಸಿಕಂ ಮಸಾಲಾ ರೆಡಿ . ಅಲಂಕಾರಕ್ಕೆ ಮೇಲೆ ಕೊಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸುವುದು ಕಡ್ಡಾಯ.
4. ಅಲಸಂದೆ ಕಾಳು ಬದನೆಕಾಯಿ ಹುಳಿ
ಬೇಕಾಗುವ ಸಾಮಗ್ರಿ
1 ಪಾವು ಅಲಸಂದೆ ಕಾಳು, ಬದನೆ ಹೋಳು, ಸಾಸಿವೆ, ಒಣಮೆಣಸು, ಎಣ್ಣೆ, ಅರಿಶಿನ, ಕರಿಬೇವು, ಕೊತ್ತಂಬರಿ ಬೀಜ, ಚಿಕ್ಕ ದಾಲ್ಚಿನಿ ತುಂಡು, 1 ಟೀ ಚಮಚ ಕಡಲೆ ಬೇಳೆ ಹಾಗೂ ಉದ್ದಿನ ಬೇಳೆ , ಮೆಂತ್ಯೆ ಅರ್ಧ ಟೀ ಚಮಚ, 1ಒಣ ಕೊಬ್ಬರಿ.
ಮಾಡುವ ವಿಧಾನ
ಒಂದು ಪಾವು ಅಲಸಂದೆ ಕಾಳನ್ನು ಚೆನ್ನಾಗಿ ತೊಳೆದು ತಕ್ಕಷ್ಟುಉಪ್ಪು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಬೇಕು. ಒಂದು ಟೇಬಲ್ ಚಮಚ ಎಣ್ಣೆಯನ್ನು ಬಾಣಲೆಗೆ ಹಾಕಿ, ಕಾದ ಮೇಲೆ ಸಾಸಿವೆ, ಒಣಮೆಣಸಿಕಾಯಿ, ಅರಿಶಿನ, ಕರಿಬೇವು ಒಗ್ಗರಣೆ ಹಾಕಿ. ಹೆಚ್ಚಿಕೊಂಡ ಬದನೇಕಾಯಿ ಹೋಳುಗಳನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ ಬಾಡಿಸಬೇಕು .
ಕೊತ್ತಂಬರಿ ಬೀಜ, ಆರು ಒಣಮೆಣಸಿನಕಾಯಿ, ಚಿಕ್ಕ ದಾಲ್ಚಿನಿ ತುಂಡು, 1 ಟೀ ಚಮಚ ಕಡಲೆ ಬೇಳೆ ಹಾಗೂ ಉದ್ದಿನ ಬೇಳೆ, ಮೆಂತ್ಯೆ ಅರ್ಧ ಟೀ ಚಮಚ ಎಲ್ಲವನ್ನು ಡ್ರೈ ರೋಸ್ಟ್ ಮಾಡಬೇಕು. ನಂತರ ಒಂದು ಒಣ ಕೊಬ್ಬರಿ ಹಾಕಿ ಪುಡಿ ಮಾಡಿಕೊಳ್ಳಬೇಕು. ಅದೇ ಮಿಕ್ಸಿ ಜಾರಿಗೆ ಕಾಲು ಪಾವಿನಷ್ಟುಬೆಂದ ಕಾಳು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಸಿದ್ಧ ಹುಳಿಪುಡಿ ಹಾಕಬಾರದು. ಒಗ್ಗರಣೆಗೆ ಹಾಕಿದ ಬದನೆಕಾಯಿಗೆ ರುಬ್ಬಿದ ಮಸಾಲೆ, ಮಿಕ್ಕ ಬೆಂದ ಕಾಳು ಹಾಕಿ ಹದ ಸರಿ ಮಾಡಿ ಎಣ್ಣೆಯಲ್ಲಿ ಸಾಸಿವೆ ಇಂಗಿನ ಒಗ್ಗರಣೆ ಹಾಕಿದರೆ ಸ್ಪೆಷಲ್ ಹುಳಿ ರೆಡಿ.
5. ಉಪ್ಪು ಹುಣಸೆ ಚಟ್ನಿ
ಈ ಚಟ್ನಿ ನಮ್ಮಮ್ಮ ಮಾಡುತ್ತಿದ್ದರು. ಉಪ್ಪು ಹುಣಸೆ ಚಟ್ನಿ ಅಂತ. ನಿನ್ನೆ ದೋಸೆಗೆ ರುಬ್ಬುತ್ತಿದ್ದಾಗ ನೆನಪಿಗೆ ಬಂದು ಅದನ್ನು ಅರ್ಧಕ್ಕೆ ಬಿಟ್ಟು ತಂಗಿಗೆ ಫೋನ್ ಮಾಡಿದೆ .
ಅಮ್ಮನೊಂದಿಗೆ ಹೆಚ್ಚಿನ ಅಡಿಗೆ ಕಲಿತವಳು ಅವಳು. ಅಮ್ಮನಿಗೆ ಹೆಚ್ಚು ಸಹಾಯ ಮಾಡುತಿದ್ದವಳು ಅವಳೇ. ನಾನು ಅಮ್ಮನ ಮನೆ ಬಿಟ್ಟಾಗ ಅಮ್ಮನಿಗೆ 49. ನನಗೆ ಯಾವುದೇ ಕೆಲಸ ಹೇಳುತ್ತಿರಲಿಲ್ಲ ಅಮ್ಮ. ಅವರೇ ಎಲ್ಲಾ ಮಾಡಿಕೊಳ್ಳುತಿದ್ದರು. ನಾನು ಉಪ್ಪು ಹುಣಸೆ ಚಟ್ನಿ ರೆಸಿಪಿ ಕೇಳಿದಾಗ ಚೆಂದಾಗಿ ಹೇಳಿದಳು ತಂಗಿ. ಸೋ ಖಾರ ಖಾರದ ಚಟ್ನಿ ರೆಡಿ.
ನೀವು ಹೇಗೆ ಮಾಡೋದು ಅಂತ ಕೇಳಿಯೇ ಕೇಳುತ್ತೀರಿ..
ಬೇಕಾಗುವ ಸಾಮಗ್ರಿ: ಅರ್ಧ ಟೀ ಚಮಚ ಕೊತ್ತಂಬರಿ ಬೀಜ, ಕಾಲು ಟೀ ಚಮಚ ಮೆಂತ್ಯೆ, ಅರಿಶಿನ, ಸಾಸಿವೆ, ಕೊಂಚ ಹುರಿದುಕೊಂಡ ಮೇಲೆ ಎಂಟೊ ಹತ್ತೋ ಹಸಿಮೆಣಸಿನಕಾಯಿ, ಅರ್ಧ ಕಟ್ಟು ಕೊತ್ತಂಬರಿ ಸೊಪ್ಪು, ಅರ್ಧ ನಿಂಬೆ ಹಣ್ಣಿನ ಗಾತ್ರದ ಹುಣಸೆಹಣ್ಣು, ಬೆಲ್ಲ, ಉಪ್ಪು, ಸಾಸಿವೆ, ಇಂಗು.
ಮಾಡುವ ವಿಧಾನ
ಅರ್ಧ ಟೀ ಚಮಚ ಕೊತ್ತಂಬರಿ ಬೀಜ, ಕಾಲು ಟೀ ಚಮಚ ಮೆಂತ್ಯೆ, ಅರಿಶಿನ, ಸಾಸಿವೆ, ನಸು ಹುರಿದ ಹಸಿಮೆಣಸಿನಕಾಯಿ, ಅರ್ಧ ಕಟ್ಟು ಕೊತ್ತಂಬರಿ ಸೊಪ್ಪು, ಅರ್ಧ ನಿಂಬೆ ಹಣ್ಣಿನ ಗಾತ್ರದ ಹುಣಸೆಹಣ್ಣು ಹಾಕಿ ಸ್ವಲ್ಪ ಬಾಡಿಸಬೇಕು. ಸ್ಟವ್ ಆರಿಸಿ ಎರಡು ಹಿಡಿ ಒಣ ಕೊಬ್ಬರಿ, ಚೂರು ಉಪ್ಪು, ಚೂರು ಬೆಲ್ಲ ಬೆರೆಸಿ ಹಾಕಿ ರುಬ್ಬುವುದು. ಸಾಸಿವೆ ಇಂಗಿನ ಒಗ್ಗರಣೆ ಹಾಕಿದರೆ ಚಟ್ನಿ ರೆಡಿ. ದೋಸೆಯೊಂದಿಗೆ ಸೂಪರ್. ಅನ್ನದೊಂದಿಗೆ ಕೂಡ.
6. ರಂಜಕ
ಬೇಕಾಗುವ ಸಾಮಗ್ರಿ: ಕೆಂಪು ಮೆಣಸಿನಕಾಯಿ 20, ನಿಂಬೆ ಹಣ್ಣು ಒಂದು ಅಥವಾ ಹುಣಸೆಹಣ್ಣು ನಿಂಬೆಹಣ್ಣಿನ ಗಾತ್ರದಷ್ಟು, ಮೆಂತ್ಯೆ 1 ಸ್ಪೂನ್, ಬೆಲ್ಲ 2 ಟೇಬಲ್ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ
ಮೆಂತ್ಯೆ ಹುರಿದುಕೊಳ್ಳಬೇಕು. ಸ್ವಲ್ಪ ಅರಿಶಿನ ಹಾಕಿ ಪುಡಿ ಮಾಡಿಕೊಳ್ಳಬೇಕು. ಮೆಣಸಿನಕಾಯಿ ತೊಳೆದು ಒರೆಸಿ ಮುರಿದು ಚೂರು ಎಣ್ಣೆಯಲ್ಲಿ ಹುರಿದುಕೊಳ್ಳಬೇಕು. ಮೆಂತ್ಯೆ ಪುಡಿಯೊಂದಿಗೆ ಆರಿದ ಮೆಣಸಿನಕಾಯಿ, ಬೆಲ್ಲ, ಉಪ್ಪು, ನಿಂಬೆ ರಸ ಹಾಕಿ ರುಬ್ಬಿದರೆ ರಂಜಕ ರೆಡಿ.
ಹುಣಸೆ ಹಣ್ಣು ಹಾಕಿದರೆ ಮೆಣಸಿನಕಾಯಿಯೊಂದಿಗೆ ಹುರಿಯಬೇಕು. ನೀರು ಸೋಕಿಸಬಾರದು.