ಇವರದ್ದು ಹೊಟ್ಟೆನಾ ಕಲ್ ಕಟ್ಟೇನಾ? ಮಾರ್ವಾಡಿ ಕುಟುಂಬದ ವಿಡಿಯೋ ವೈರಲ್
ಪ್ರಯಾಣದ ವೇಳೆ ಹಿತಮಿತವಾಗಿ ಆಹಾರ ಸೇವನೆ ಮಾಡ್ಬೇಕು. ಹಾಗಂತ ಎಲ್ಲರ ಬಾಯಿ ಕಟ್ಟೋಕೆ ಸಾಧ್ಯವಿಲ್ಲ. ಕೆಲವರು ಪ್ರಯಾಣ ಪೂರ್ತಿ ಆಹಾರ ಸೇವನೆ ಮಾಡ್ತಿರುತ್ತಾರೆ. ಇವರು ತಿನ್ನೋದಕ್ಕೆ ರೈಲಿನಲ್ಲೇ ಮಿನಿ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ.
ಭಾರತದಲ್ಲಿರುವಷ್ಟು ಆಹಾರದ ವೆರೈಟಿ ಮತ್ತೆಲ್ಲೂ ಸಿಗಲಿಕ್ಕಿಲ್ಲ. ಒಂದೊಂದು ಪ್ರದೇಶದಲ್ಲಿ, ಒಂದೊಂದು ಜಾತಿಯಲ್ಲಿ ಆಹಾರದಲ್ಲಿ ಬದಲಾವಣೆಯನ್ನು ನಾವು ಕಾಣಬಹುದು. ಮಾಂಸಹಾರಿಗಳಿಗೆ ಆಹಾರದಲ್ಲಿ ಸಾಕಷ್ಟು ವೆರೈಟಿ ಸಿಗುತ್ತದೆ ಎನ್ನುವವರಿದ್ದಾರೆ. ಸಸ್ಯಹಾರದಲ್ಲೂ ವೆರೈಟಿಗೆ ಕಡಿಮೆ ಇಲ್ಲ ಎನ್ನುವವರು ಕೆಲವರು. ಅದೇನೇ ಇರಲಿ, ಒಂದೇ ಸೊಪ್ಪು ಅಥವಾ ತರಕಾರಿಯಿಂದ ಹತ್ತಾರು ಆಹಾರವನ್ನು ತಯಾರಿಸುವ ಕಲೆ ಭಾರತೀಯರಿಗೆ ತಿಳಿದಿದೆ.
ಭಾರತ (India) ದ ಕೆಲ ಜನಾಂಗದ ಜನರ ಆಹಾರ (Food) ಪ್ರೀತಿ ಗಮನ ಸೆಳೆಯುತ್ತದೆ. ದಿನಕ್ಕೆ ಐದಾರು ಬಗೆಯ ಆಹಾರ ತಯಾರಿಸಿ ಸೇವನೆ ಮಾಡುವ ಜನರು ನಮ್ಮಲ್ಲಿದ್ದಾರೆ. ಅದ್ರಲ್ಲಿ ಮಾರ್ವಾಡಿಗಳು ಒಂದು. ವ್ಯಾಪಾರದಲ್ಲಿ ಮಾರ್ವಾಡಿ (Marwari) ಗಳು ಎತ್ತಿದ ಕೈ. ತಂದೆ, ಮಗ, ಮೊಮ್ಮಗ, ಅಳಿಯ, ಮಮ್ಮಳಿಯ ಹೀಗೆ ಕುಟುಂಬದ ಎಲ್ಲ ಸದಸ್ಯರೂ ಒಂದೊಂದು ಅಂಗಡಿ ತೆರೆದು ವ್ಯಾಪಾರ ಮಾಡ್ತಿರುತ್ತಾರೆ. ಮಾರ್ವಾಡಿಗಳು ಬರೀ ವ್ಯಾಪಾರಕ್ಕೆ ಮಾತ್ರವಲ್ಲ ಆಹಾರಕ್ಕೂ ಹೆಸರುವಾಸಿ. ಅವರಿಗೆ ಆಹಾರ ಹಾಗೂ ಪಾನೀಯಗಳ ಮೇಲೆ ಹೆಚ್ಚಿನ ಒಲವಿದೆ. ಮೂರು ಹೊತ್ತು ಬೇರೆ ಬೇರೆ ಆಹಾರ ಸೇವನೆ ಮಾಡಲು ಅವರು ಬಯಸ್ತಾರೆ. ಹೊಸ ಹೊಸ ಪ್ರಯೋಗ ನಡೆಯುತ್ತಿರುತ್ತದೆ. ಹಾಗಾಗಿಯೇ ಮನೆಯಲ್ಲಿ ಇಡೀ ದಿನ ಅಡುಗೆ ಕೆಲಸ ನಡೆಯುತ್ತಿರುತ್ತದೆ. ಸಸ್ಯಹಾರಿಗಳಾಗಿದ್ರೂ ಮಾರ್ವಾಡಿಗಳ ಖಾದ್ಯ ವೆರೈಟಿ ಕಡಿಮೆ ಏನಿಲ್ಲ.
ಊಟ ಮಾಡಿದ ತಕ್ಷಣ ಟೀ, ಕಾಫಿ ಕುಡೀತಿರಾ, ಹಾಗಿದ್ರೆ ನೀವಿದನ್ನು ತಿಳ್ಕೊಳ್ಳೇಬೇಕು
ಈ ಮಾರ್ವಾಡಿಗಳ ಆಹಾರ ಪ್ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಾರ್ವಾಡಿ ಕುಟುಂಬ ಅಲ್ಲಿ ಆಹಾರ ಸೇವನೆ ಮಾಡ್ತಿದೆಯಾ ಇಲ್ಲ ಆಹಾರದ ಮಳಿಗೆ ತೆರೆದಿದೆಯಾ ಎಂಬ ಪ್ರಶ್ನೆ ಮೂಡಿದೆ. ಅಷ್ಟೊಂದು ವೆರೈಟಿ ಆಹಾರವನ್ನು ಅವರು ರೈಲಿನಲ್ಲಿ ತಿಂದಿದ್ದಾರೆ.
ರೈಲಿನ ಪ್ರಯಾಣದ ವೇಳೆ ಕೆಲವರು ರೈಲಿನಲ್ಲಿ ನೀಡುವ ಆಹಾರವನ್ನೇ ಸೇವನೆ ಮಾಡ್ತಾರೆ. ಮತ್ತೆ ಕೆಲವರು ಸ್ನ್ಯಾಕ್ಸ್ ಅದು ಇದು ಅಂತ ಸಣ್ಣಪುಟ್ಟ ಆಹಾರವನ್ನು ಬ್ಯಾಗ್ ನಲ್ಲಿಟ್ಟುಕೊಂಡು ಬರ್ತಾರೆ. ಮತ್ತೆ ಕೆಲವರು ಸಮಯ ಹೊಂದಿಸಿಕೊಂಡು ರೈಲು ಪ್ರಯಾಣದ ವೇಳೆ ಅಗತ್ಯವಿರುವ ಎಲ್ಲ ಆಹಾರವನ್ನು ಪ್ಯಾಕ್ ಮಾಡಿರ್ತಾರೆ. ಆದ್ರೆ ಈ ಮಾರ್ವಾಡಿ ಕುಟುಂಬ ಒಂದು ಕೈ ಮೇಲಿದೆ. ಅವರು ತಂದ ಆಹಾರಗಳು ರೈಲಿನಲ್ಲಿದ್ದವರ ಹುಬ್ಬೇರಿಸುವಂತೆ ಮಾಡಿದೆ. ಒಂದಾದ್ಮೇಲೆ ಒಂದರಂತೆ ಆಹಾರ ಬ್ಯಾಗ್ ನಿಂದ ಹೊರ ಬಂದಿದೆ. ಇದನ್ನು ನೋಡಿದ ಕೆಲ ಪ್ರಯಾಣಿಕರು ಕಿರಿಕಿರಿಗೊಳಗಾಗಿದ್ರೂ ಅಚ್ಚರಿ ಏನಿಲ್ಲ.
Kkanchankitchen ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ನೀವು ರೈಲಿನಲ್ಲಿ ಹೀಗೆ ಆಹಾರ ಸೇವನೆ ಮಾಡ್ತೀರಾ ಎಂದು ಶೀರ್ಷಿಕೆ ಹಾಕಿ ವಿಡಿಯೋ ಹಂಚಿಕೊಳ್ಳಲಾಗಿದೆ. ರೈಲಿನಲ್ಲಿರುವ ಮಾರ್ವಾಡಿಗಳನ್ನು ನೀವು ವಿಡಿಯೋದಲ್ಲಿ ನೋಡ್ಬಹುದು. ವಿಡಿಯೋ ಮೇಲ್ಭಾಗದಲ್ಲಿ ಒಂದು ಮಾರ್ವಾಡಿ ಕುಟುಂಬ ಪ್ರಯಾಣ ಬೆಳೆಸುತ್ತಿದೆ ಎಂದು ಬರೆಯಲಾಗಿದೆ. ಈರುಳ್ಳಿ, ಸೌತೆಕಾಯಿ ಕತ್ತರಿಸಿರುವ ಪ್ಲೇಟ್ ಜೊತೆ ಮೊದಲು ಬ್ರೆಡ್ ತಿನ್ನುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ನಂತ್ರ ಕುಟುಂಬಸ್ಥರು ಜ್ಯೂಸ್ ಸೇವನೆ ಮಾಡುತ್ತಾರೆ. ಮತ್ತೆ ಹಣ್ಣು, ಸ್ನ್ಯಾಕ್ಸ್, ರೊಟ್ಟಿ, ಚಿಪ್ಸ್ ಹೀಗೆ ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಒಂದಲ್ಲ ಒಂದು ಆಹಾರವನ್ನು ಸೇವನೆ ಮಾಡ್ತಾನೆ ಇರೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು. ರೈಲು ಪ್ರಯಾಣದಲ್ಲಿ ಏನೆಲ್ಲ ಬೇಕು ಎಂಬುದನ್ನು ಪಟ್ಟಿ ಮಾಡಿ ಮಹಿಳೆಯರು ಪ್ಯಾಕ್ ಮಾಡಿದಂತಿದೆ.
ಈ ಐದು ಕಾರಣಕ್ಕೆ ಕ್ಯಾರೆಟ್ ಹಲ್ವಾ ತಿನ್ಲೇಬೇಕು ಅಂತಿದ್ದಾರೆ ಉದ್ಯಮಿ ಆನಂದ್ ಮಹೀಂದ್ರಾ
ಇನ್ಸ್ಟಾಗ್ರಾಮ್ ನ ಮಾರ್ವಾಡಿ ಕುಟುಂಬದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಕೆಲವರು ಇವರು ತಿನ್ನೋದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ರೀಲ್ಸ್ ಗಾಗಿ ಈ ವಿಡಿಯೋ ಮಾಡಲಾಗಿದೆ ಎಂದಿದ್ದಾರೆ. ನನ್ನ ಅಮ್ಮ ಕೂಡ ಹೀಗೆ ಆಹಾರ ಪ್ಯಾಕ್ ಮಾಡ್ತಾರೆ ಎಂದು ಒಬ್ಬ ಬರೆದಿದ್ದಾನೆ.