ಭಾರತದ ಸಾದಾ ಹಪ್ಪಳ ಮಲೇಷಿಯನ್ ರೆಸ್ಟೋರೆಂಟ್‌ನಲ್ಲಿ 'ಏಷ್ಯನ್ ನಾಚೋಸ್', ಬೆಲೆ ಕೇಳಿದ್ರೆ ದಂಗಾಗ್ತೀರಾ!
ಭಾರತೀಯರಿಗೆ ಊಟದ ಜೊತೆ ನೆಂಚಿಕೊಳ್ಳೋಕೆ ಹಪ್ಪಳ ಇದ್ರೆ ಒಂಚೂರು ಜಾಸ್ತೀನೆ ಊಟ ಸೇರುತ್ತೆ. ಸಂಜೆ ಹೊತ್ತು ಸಿಹಿ, ಹುಳಿಯಾದ ಮಸಾಲೆ ಪಾಪಡ್ ತಿನ್ನೋಕೆ ಇನ್ನೂ ಚೆಂದ. ಹೆಚ್ಚೆಂದರೆ ಇವಕ್ಕೆಲ್ಲಾ ನೂರು ರೂಪಾಯಿ ಇರಬಹುದು ಅಷ್ಟೆ. ಆದ್ರೆ ಮಲೇಷಿಯನ್ ರೆಸ್ಟಫರೆಂಟ್ ಭಾರತದಲ್ಲಿ ತಿನ್ನೋ ಹಪ್ಪಳವನ್ನೇ ಏಷ್ಯನ್ ನಾಚೋಸ್ ಅನ್ನೋ ಹೆಸ್ರಲ್ಲಿ ಮಾರಾಟ ಮಾಡ್ತಿದೆ. ಬೆಲೆ ಭರ್ತಿ 500 ರೂ.
ಭಾರತೀಯರು ಸ್ವಭಾತಹಃ ಆಹಾರಪ್ರಿಯರು. ರುಚಿ ರುಚಿಯಾದ ಆಹಾರವನ್ನು ತಯಾರಿಸಿ ತಿನ್ನೋಕೆ ಇಷ್ಟಪಡುತ್ತಾರೆ. ಇಂಡಿಯನ್ ಫುಡ್ ವಿದೇಶಗಳಲ್ಲಿಯೂ ತುಂಬಾನೇ ಫೇಮಸ್ ಆಗಿದೆ. ದೋಸೆ, ಸಮೋಸಾ, ರೊಟ್ಟಿ, ಹಪ್ಪಳ, ಪಾಯಸಗಳನ್ನು ವಿದೇಶಿಗರು ಸಹ
ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಹೀಗಾಗಿಯೇ ವಿದೇಶಕ್ಕೆ ಹೋಗೋ ಭಾರತೀಯರು ಅಲ್ಲಿ ಇಂಡಿಯನ್ ರೆಸ್ಟೋರೆಂಟ್‌ಗಳಿಗಾಗಿ ಹುಡುಕಾಡ್ತಾರೆ. ಆದ್ರೆ ಇದು ಮಾತ್ರವಲ್ಲದೆ ವಿದೇಶದಲ್ಲಿಯೂ ಕೆಲವೊಂದು ರೆಸ್ಟೋರೆಂಟ್‌ಗಳು ಭಾರತೀಯ ಆಹಾರಗಳನ್ನು ಬೇರೆಯದೇ ಹೆಸರಲ್ಲಿ ಮಾರಾಟ ಮಾಡಿ ಯಾಮಾರಿಸ್ತಿವೆ.
ಫುಡ್ ವಿಷ್ಯದಲ್ಲಿ ಪೋಷಕರು ಮಕ್ಕಳನ್ನು ಯಾಮಾರಿಸೋದು ಸಾಮಾನ್ಯ. ಮಕ್ಕಳು ತಟ್ಟೆಯಲ್ಲಿ ಹಾಕಿಕೊಟ್ಟ ಆಹಾರ ತಿನ್ನಲ್ಲ ಅಂತ ಕಲರ್‌ಫುಲ್ ಆಗಿ ಡೆಕೊರೇಟ್ ಮಾಡಿ ಕೊಡ್ತಾರೆ. ಚಪಾತಿ ತ್ರಿಕೋನಾಕಾರದಲ್ಲಿ ಕತ್ತರಿಸಿ ಪಲ್ಯ ಹರಡಿ ಪಿಜ್ಜಾ ಅನ್ನುತ್ತಾರೆ. ಬನ್‌ನ ಒಳಗೆ ಕ್ರೀಮ್ ತುಂಬಿ ಬರ್ಗರ್ ಅನ್ನುತ್ತಾರೆ. ಮಕ್ಕಳು ಇದನ್ನೇ ನಿಜವೆಂದು ನಂಬಿ ಬಿಡುತ್ತಾರೆ. ಹಾಗೆಯೇ ಇಲ್ಲಿ ಕೆಲವೊಂದು ದೇಶಗಳು ಭಾರತದ ಆಹಾರವನ್ನು (Indian food) ಬೇರೆ ಹೆಸರಲ್ಲಿ ಮಾರಾಟ ಮಾಡಿ ಜನರನ್ನು ಯಾಮಾರಿಸುತ್ತಿವೆ.
Indian Food: ಹಪ್ಪಳ ಇಲ್ಲದ ಊಟವೇ ಕಂಪ್ಲೀಟ್ ಆಗೋಲ್ಲ, ಅಷ್ಟಕ್ಕೂ ಇದೆಲ್ಲಿ ಹುಟ್ಟಿ ಕೊಂಡಿದ್ದು?
ಮಲೇಷಿಯನ್ ರೆಸ್ಟೋರೆಂಟ್‌ನಲ್ಲಿ ಹಪ್ಪಳದ ಹೆಸರು ಏಷಿಯನ್ ನಾಚೋಸ್
ಭಾರತೀಯರ ನೆಚ್ಚಿನ ಹಪ್ಪಳ ಮಲೇಷಿಯನ್ ರೆಸ್ಟೋರೆಂಟ್‌ನಲ್ಲಿ ಏಷಿಯನ್ ನಾಚೋಸ್ ಎಂದು ಕರೆಯಲ್ಪಡುತ್ತಿದೆ. ಇದರ ಬೆಲೆ ಭರ್ತಿ 500 ರೂ. ಟ್ವಿಟ್ಟರ್ ಬಳಕೆದಾರರಾದ ಸಮಂತಾ ಅವರು ಪಾಪಡ್‌ನ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. 'ಘೋರ ಅಪರಾಧ ನಡೆದಿದೆ' ಎಂದು ಅವರು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಭಾರತದ ಹಪ್ಪಳವನ್ನು (Papad) ಏಷ್ಯನ್ ನ್ಯಾಚೋಸ್ ಎಂದು ಮಾರಾಟ ಮಾಡಿದ ಹೊಟೇಲ್‌ನ್ನು 'ಸ್ನಿಚ್ ಬೈ ದಿ ಥೀವ್ಸ್' ಎಂದು ಗುರುತಿಸಲಾಗಿದೆ. ಇದು ಮಲೇಷ್ಯಾದಲ್ಲಿದೆ. ಇದರ ಬೆಲೆ 27 ಮಲೇಷಿಯನ್ ರಿಂಗಿಟ್‌ಗಳು. ಅಂದರೆ ಸರಿಸುಮಾರು ರೂ 500. ಹೀಗಾಗಿ ದೇಸಿಗಳು ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ.
ಈ ಪೋಸ್ಟ್ ಅನ್ನು 5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ಧಾರೆ. 9,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಭಾರತೀಯ ಹಪ್ಪಳಕ್ಕೆ ಯಾಕಿಷ್ಟು ಬೆಲೆ (Price) ಎಂದಿದ್ದಾರೆ. ಇನ್ನು ಕೆಲವರು ಮೆಣಸು ಹಾಕಿದ ಹೆಸರುಬೇಳೆ ಹಪ್ಪಳವನ್ನು ಅವರು ಬ್ಲ್ಯಾಕ್ ಸ್ಪಾಟೆಡ್ ನಾಚೋಸ್ ಎಂದು ಕರೆದರೂ ಅಚ್ಚರಿ ಏನಿಲ್ಲ ಎಂದು ತಮಾಷೆ ಮಾಡಿದ್ದಾರೆ.
ಯುಕೆ ಮ್ಯಾನ್ ಮಾಡಿದ ಮೆಣಸಿನ ಬಜ್ಜಿಗೆ ಫಿದಾ ಆದ ಭಾರತೀಯರು.. ವೈರಲ್ ವಿಡಿಯೋ
ಮತ್ತೊಬ್ಬರು 'ನಾನಿಲ್ಲಿ ಎರಡು ರೂಪಾಯಿಗೆ ಮಸಾಲಾಪುಡಿ ಹಾಕಿದ ಹಪ್ಪಳ ತಿಂದು ಸಂತೃಪ್ತನಾಗಿದ್ದೇನೆ' ಎಂದು ಒಬ್ಬರು ಹೇಳಿದ್ದಾರೆ. ಮೆಕ್ಸಿಕನ್ನರು, ಭಾರತೀಯರು ಇದನ್ನು ನೋಡಿ ಸಾಕಷ್ಟು ಬೇಸರ ಮಾಡಿಕೊಂಡರೆ ಅಚ್ಚರಿ ಏನಿಲ್ಲ ಬಿಡಿ ಎಂದಿದ್ದಾರೆ ಮತ್ತೊಬ್ಬರು. ಇದನ್ನು ನೋಡಿ ನಾವು ಮನೆಯಲ್ಲಿ ಹಪ್ಪಳವನ್ನು ನಾಚೋಸ್ ಎನ್ನಲು ಶುರು ಮಾಡಿದ್ದೇವೆ. ನನ್ನ ತಾಯಿಯೂ ಹಾಂ ತಗೋ ನಾಚೋಸ್ ಎನ್ನಲು ಕಲಿತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಕೌಲಾಲಂಪುರದಲ್ಲಿ ಇತ್ತೀಚೆಗೆ ಚಿಕನ್ ಖಾದ್ಯ ತಿಂದೆ. ಆದರೆ ಇಷ್ಟೊಂದು ತುಟ್ಟಿಯಾಗಿರಲಿಲ್ಲ ಎಂದಿದ್ದಾರೆ ಮತ್ತೊಬ್ಬರು. ಬೆಂಗಳೂರಿನ ಬಾಬ್ಸ್ಗೆ ಹೋಗಿ ಸ್ಪೆಷಲ್ ಚಿಪ್ಸ್ ಆರ್ಡರ್ ಮಾಡಿದೆ. ಅದಕ್ಕೆ ಅವರು ತಟ್ಟೆ ತುಂಬಾ ಅಕ್ಕಿ ಸಂಡಿಗೆ ಹಾಕಿ ಕೊಟ್ಟರು ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಯುಎಸ್ ರೆಸ್ಟೊರೆಂಟ್ ಭಾರತೀಯ ಸಾದಾ ದೋಸೆಯನ್ನು 'ನೇಕೆಡ್ ಕ್ರೆಪ್', ಸಾಂಬಾರ್ ವಡಾವನ್ನು 'ಡಂಕ್ಡ್ ಡೋಗ್ನಟ್ ಡಿಲೈಟ್' ಎಂದು ಮಾರಾಟ ಮಾಡುತ್ತಿರೋ ವಿಚಾರ ಚರ್ಚೆಗೆ ಗ್ರಾಸವಾಗಿತ್ತು.