ಕೊಡಗು ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ 77 ಮನೆಗಳು ಹಾನಿಯಾಗಿವೆ ಎಂದು ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜು.11): ಕೊಡಗು ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ 77 ಮನೆಗಳು ಹಾನಿಯಾಗಿವೆ ಎಂದು ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ. ಇದಕ್ಕೂ ಮೊದಲು ಕೊಡಗು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇನ್ನೂ ಒಂದುವರೆ ತಿಂಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆ ಇರುವುದರಿಂದ ಎಲ್ಲಾ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದು ಸರಿಯಾಗಿ ಕೆಲಸ ನಿಭಾಯಿಸುವಂತೆ ಸೂಚಿಸಿದ್ದಾರೆ. ಮಳೆಯಿಂದ ಪ್ರಾಕೃತಿಕ ತೊಂದರೆಗಳಾದಲ್ಲಿ ತಕ್ಷಣವೇ ಸಮರೋಪಾದಿಯಲ್ಲಿ ಕಾರ್ಯಪ್ರವೃತರಾಗುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.

ಅಲ್ಲದೆ ಇದುವರೆಗೆ ಮಳೆಯಿಂದ ಹಾನಿಯಾಗಿರುವ ಕುರಿತು ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು. 77 ಮನೆಗಳಿಗೆ ಹಾನಿಯಾಗಿದೆ. ಪೂರ್ಣ ಹಾನಿಯಾಗಿ ಮನೆಗಳಿಗೆ ಈಗಾಗಲೇ 2.40 ಲಕ್ಷ ಹಾಗೂ ಭಾಗಶಃ ಹಾನಿಯಾದ ಮನೆಗಳಿಗೆ 50 ಸಾವಿರದಂತೆ ಪರಿಹಾರ ಒದಗಿಸಲಾಗಿದೆ. 2344 ವಿದ್ಯುತ್ ಕಂಬಗಳು ಹಾನಿಯಾಗಿದ್ದು 100 ಕ್ಕೂ ಹೆಚ್ಚು ಟ್ರಾನ್ಸ್ಫಾರ್ಮರ್ ಹಾನಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ 409 ಸಾರ್ವಜನಿಕ ಶಾಲೆಗಳಲ್ಲಿ 2454 ಶಾಲಾ ಕೊಠಡಿಗಳು ಇವೆ. ಅವುಗಳಲ್ಲಿ 600 ಕೊಠಡಿಗಳು ದುರಸ್ಥಿ ಆಗಬೇಕಾಗಿದೆ ಎಂದಿದ್ದಾರೆ.

ಶಾಲಾ ಕೊಠಡಿ ಮತ್ತು ಅಂಗನವಾಡಿ ಕಟ್ಟಡಗಳ ವಸ್ತು ಸ್ಥಿತಿ ಪರಿಶೀಲಿಸಲಾಗಿದ್ದು, ದುರಸ್ಥಿ ಮಾಡಬೇಕಾಗಿರುವ ಶಾಲೆಗಳ ಬಗ್ಗೆ ಕೂಡಲೇ ಗಮನ ಹರಿಸುವಂತೆ ಸೂಚಿಸಲಾಗಿದೆ. ಜೊತೆಗೆ ಈಗಾಗಲೇ ಎಸ್ಟಿಮೇಟ್ ಮಾಡಿ ದುರಸ್ಥಿತಿಗೆ ಸೂಚಿಸಲಾಗಿದೆ ಎಂದಿದ್ದಾರೆ. ಮೇ ತಿಂಗಳ ಸಂದರ್ಭ ಮಳೆಯಿಂದ ಎರಡು ಮಾನವ ಜೀವಹಾನಿಯಾಗಿದ್ದವು. ಆದಾದ ಬಳಿಕ ಯಾವುದೇ ಮಾನವ ಜೀವಹಾನಿ ಆಗಿಲ್ಲ ಎಂದಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳು ಉತ್ತಮ ಕೆಲಸ ಮಾಡುತ್ತಿವೆ. ಆದರೆ ಪಿಆರ್ಡಿ ಇಲಾಖೆ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಿಲ್ಲ. ಹಿಂದಿನ ಸಭೆಯಲ್ಲೂ ಇದರ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.

ಆದರೂ ಪ್ರಗತಿ ಸಾಧಿಸಿಲ್ಲ. ಹೀಗಾಗಿ ಇಲಾಖೆಯ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಚಿವ ಬೋಸರಾಜ್ ಹೇಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಈಗಾಗಲೇ ಒಟ್ಟು 11 % ಮಳೆ ಜಾಸ್ತಿ ಆಗಿದೆ. ಇನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಉಚಿತ ಬಸ್ಸು ಪ್ರಯಾಣಕ್ಕೆ ಸಂಬಂಧಿಸಿಂದತೆ ಯೋಜನೆ ಒಂದು ವರ್ಷ ಪೂರೈಸುತ್ತಿದೆ. ಇದಕ್ಕಾಗಿ ರಾಜ್ಯದಲ್ಲಿ 500 ಕೋಟಿ ವ್ಯಯಿಸಲಾಗಿದ್ದು, 1.20 ಕೋಟಿ ಮಹಿಳೆಯರು ಓಡಾಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಇದಕ್ಕಾಗಿ 51.87 ಕೋಟಿ ವೆಚ್ಚವಾಗಿದೆ ಎಂದು ಸಚಿವ ಭೋಸರಾಜ್ ಹೇಳಿದ್ದಾರೆ.