Davanagere Benne Dose : ದಾವಣಗೆರೆ ಬೆಣ್ಣೆ ದೋಸೆ ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರು ಬರುತ್ತೆ ಅಲ್ವಾ? ಬಿಸಿ ದೋಸೆ, ಬೆಣ್ಣೆ, ಕಾಯಿ ಚಟ್ನಿ, ಆಲೂಗಡ್ಡೆ ಪಲ್ಯ ವಾರೇ ವಾ ಸಖತ್ತಾಗಿರುತ್ತೆ ಅಲ್ವಾ? ಆದ್ರೆ ಈ ದಾವಣಗೆರೆ ಬೆಣ್ಣೆ ದೋಸೆ ಶುರು ಮಾಡಿದ್ದು ಯಾರು ಅನ್ನೋದು ಗೊತ್ತಾ? 

ದಾವಣಗೆರೆ ಬೆಣ್ಣೆ ದೋಸೆ

ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರು ಬರುವಂತೆ ಮಾಡುವ ದೋಸೆ ಅಂದ್ರೆ ಅದು ದಾವಣಗೆರೆ ಬೆಣ್ಣೆ ದೋಸೆ. ಬಿಸಿ ಬಿಸಿ ಗರಿಗರಿಯಾದ ದೋಸೆಯ ಮೇಲೆ ಒಂದಷ್ಟು ಬೆಣ್ಣೆ ಹಾಕಿ, ಅದರ ಜೊತೆಗೆ ತೆಂಗಿನಕಾಯಿ ಚಟ್ನಿ, ಆಲೂಗಡ್ಡೆ ಪಲ್ಯ ಸೇರಿಸಿ ಕೊಡುವಂತಹ ಈ ದೋಸೆ ಸಿಕ್ಕಾಪಟ್ಟೆ ಫೇಮಸ್. ಕರ್ನಾಟಕದಲ್ಲಿ ಮನೆಮಾತಾಗಿರುವ ದಾವಣೆಗೆರೆ ಬೆಣ್ಣೆ ದೋಸೆ ಮೊದಲ ಬಾರಿಗೆ ತಯಾರಾಗಿದ್ದು ಎಲ್ಲಿ? ಇದನ್ನು ತಯಾರಿಸಿದವರು ಯಾರು ಅನ್ನೋದು ನಿಮಗೆ ಗೊತ್ತಿದ್ಯಾ? ಖಂಡಿತವಾಗಿಯೂ ಯಾವುದೇ ಬ್ಯುಸಿನೆಸ್ ಮಾಡುವ, ದೊಡ್ಡ ಹೊಟೇಲ್ ಉದ್ಯಮ ನಡೆಸುವ ಸಲುವಾಗಿ ಈ ದೋಸೆಯನ್ನು ಶುರು ಮಾಡಿದ್ದಲ್ಲ, ಬದಲಾಗಿ, ತನ್ನ ಹಾಗೂ ತನ್ನ ಮಕ್ಕಳ ಹೊಟ್ಟೆ ತುಂಬಿಸಲು ಇದನ್ನು ಶುರು ಮಾಡಿದ್ದರು. ಬನ್ನಿ ಆ ಕಥೆಯನ್ನು ಪೂರ್ತಿಯಾಗಿ ತಿಳಿಯಿರಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಾವಣಗೆರೆ ಬೆಣ್ಣೆ ದೋಸೆ ಶುರುವಾಗಿದ್ದು, ತುಂಬಾ ಹಿಂದೆ, ಅಂದ್ರೆ ಸ್ವಾತಂತ್ರ್ಯ ಸಿಗೋದಕ್ಕೂ ಮುನ್ನ. ಇದಕ್ಕೆ 1928 ರಿಂದ ತುಂಬಾನೆ ಸ್ವಾರಸ್ಯಕರವಾದ ಇತಿಹಾಸವಿದೆ. 1928 ರಲ್ಲಿ ಚೆನ್ನಮ್ಮ ಎಂಬ ಮಹಿಳೆ ಹುಬ್ಬಳ್ಳಿಯಿಂದ ತನ್ನ ಮಕ್ಕಳೊಂದಿಗೆ ದಾವಣಗೆರೆಗೆ ವಲಸೆ ಬಂದಿದ್ದರು. ತಮ್ಮ ಕುಟುಂಬವನ್ನು ಸಲಹಲು ಚೆನ್ನಮ್ಮ ಒಂದು ಪುಟ್ಟದಾದ ಉಪಹಾರ ಗೃಹ ತೆರೆದರು. ಅಲ್ಲಿ ಆಕೆ ತನ್ನ ವಿಶಿಷ್ಟ ಪಾಕವಿಧಾನದೊಂದಿಗೆ ದೋಸೆ, ಚಟ್ನಿ ಮತ್ತು ಆಲೂಗಡ್ಡೆ ಪಲ್ಯವನ್ನು ತಯಾರಿಸಲು ಪ್ರಾರಂಭಿಸಿದರು. ಅವರು ವಸಂತ ಟಾಕೀಸ್ ಬಳಿಯ ನಾಟಕ ಥಿಯೇಟರ್ ಮುಂದೆ ತನ್ನ ಪುಟ್ಟ ಉಪಹಾರ ಗೃಹವನ್ನು ಪ್ರಾರಂಭಿಸಿದರು. ಥಿಯೇಟರ್ ಗೆ ಬರುತ್ತಿದ್ದವರು, ಸುತ್ತಲಿನ ಕಾರ್ಮಿಕರು ಚೆನ್ನಮ್ಮನ ಬಳಿ ಬಂದು ದೋಸೆ ತಿನ್ನೋದಕ್ಕೆ ಶುರು ಮಾಡಿದರು. ಆರಂಭದಲ್ಲಿ ಚೆನ್ನಮ್ಮ ರಾಗಿ ಹಿಟ್ಟಿನೊಂದಿಗೆ ದೋಸೆಯನ್ನು ತಯಾರಿಸುತ್ತಿದ್ದರು. ಅದರ ಜೊತೆಗೆ ಬೆಣ್ಣೆಯನ್ನು ಕೊಡುತ್ತಿದ್ದರು. ಇವರ ಈ ಸರಳವಾದ ದೋಸೆಯ ಸ್ವಾಧಿಷ್ಟವಾದ ರುಚಿಯನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟರು. ಬಳಿಕ ಇವರ ದೋಸೆ ಜನಪ್ರಿಯತೆ ಪಡೆಯಲು ಶುರುವಾಯಿತು.

ನಂತರ 1938 ರ ವೇಳೆಗೆ ಚೆನ್ನಮ್ಮನ ಮಕ್ಕಳು ರಾಗಿ ಹಿಟ್ಟಿನ ಬದಲಾಗಿ, ಅಕ್ಕಿ ಹಿಟ್ಟು, ಮಂಡಕ್ಕಿ, ಉದ್ದಿನ ಬೇಳೆ, ಬೆಣ್ಣೆಯೊಂದಿಗೆ ದೋಸೆಯನ್ನು ತಯಾರಿಸಲು ಪ್ರಾರಂಭಿಸಿದರು. ಇದಂತೂ ಕೆಲವೇ ದಿನಗಳಲ್ಲಿ ದಾವಣಗೆರೆಯಲ್ಲಿ ಜನಪ್ರಿಯವಾಯಿತು.ಇದನ್ನು ಚೆನ್ನಮ್ಮನವರ ಇಬ್ಬರು ಪುತ್ರರಾದ ಶಾಂತಪ್ಪ ಮತ್ತು ಮಹದೇವಪ್ಪ ನಡೆಸುತ್ತಿದ್ದರು. ಬಳಿಕ ಇಬ್ಬರೂ ತಮ್ಮದೇ ಆದ ಅಂಗಡಿಗಳನ್ನು ತೆರೆದರು. ಶಾಂತಪ್ಪ ಅವರು 1994ರಲ್ಲಿ "ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್" ಎಂಬ ಹೆಸರಿನಲ್ಲಿ ತಮ್ಮದೇ ಆದ ಉಪಹಾರ ಗೃಹವನ್ನು ಶುರುಮಾಡಿದರು. ಅದು ದಾವಣಗೆರೆಯ ಅತ್ಯಂತ ಹಳೆಯ ಬೆಣ್ಣೆ ದೋಸೆ ಹೊಟೇಲ್. ಇದನ್ನು ಪ್ರಸ್ತುತ ಅವರ ಮಗ ನಡೆಸುತ್ತಿದ್ದಾರೆ. ಮಹದೇವಪ್ಪ ವಸಂತ ಥಿಯೇಟರ್ ಬಳಿ ತಮ್ಮ ಉಪಹಾರ ಗೃಹ ತೆರೆದಿದ್ದರು. ಇದೀಗ ಅವರ ಮಕ್ಕಳು ಸಹ ದಾವಣಗೆರೆಯ ಬೇರೆ ಬೇರೆ ಪ್ರದೇಶಗಳಲ್ಲಿ ಹೊಟೇಲ್ ತೆರೆದಿದ್ದಾರೆ. ಈ ಎಲ್ಲಾ ಹೊಟೇಲ್ ಗಳು ಇಂದಿಗೂ ದಾವಣಗೆರೆ ಬೆಣ್ಣೆ ದೋಸೆಗೆ ಜನಪ್ರಿಯತೆ ಪಡೆದಿದೆ.

ಅದು ಒಬ್ಬ ವಲಸೆ ಬಂದ ತಾಯಿಯು ತನ್ನ ಮಕ್ಕಳನ್ನು ಸಲಹಲು ಶುರು ಮಾಡಿದ ಒಂದು ಪುಟ್ಟ ದೋಸೆ ಅಂಗಡಿ ಮತ್ತು ಆಕೆ ಮಾಡಿದ ಬೆಣ್ಣೆ ದೋಸೆ, ಇಂದು ಕರ್ನಾಟಕದಾದ್ಯಂತ ದಾವಣಗೆರೆ ಬೆಣ್ಣೆ ದೋಸೆ ಎಂದೇ ಖ್ಯಾತಿ ಪಡೆದಿದೆ.