ಹೀರೆಕಾಯಿ ಚಟ್ನಿ ಅಲ್ಲ ಹೀರೆಕಾಯಿ ಚಟ್ಟಿ, ರೆಸಿಪಿ ಹೇಳಿಕೊಟ್ಟ 'ಲಕ್ಷ್ಮೀ ಬಾರಮ್ಮ'ದ ರಶ್ಮಿ ಪ್ರಭಾಕರ್
ಆರೋಗ್ಯಕರ ತರಕಾರಿಗಳಲ್ಲೊಂದು ಹೀರೆಕಾಯಿ. ಇದರಿಂದ ಸಾಂಬಾರ್, ತಂಬುಳಿ, ಪಲ್ಯ, ಚಟ್ನಿ ಹೀಗೆ ಹಲವು ಆಹಾರವನ್ನು ತಯಾರಿಸಬಹುದು. ಹಾಗೆಯೇ ಹೀರೆಕಾಯಿಯಿಂದ ಚಟ್ಟಿ ತಯಾರಿಸುತ್ತಾರೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ಈ ಬಗ್ಗೆ ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ರಶ್ಮಿ ಪ್ರಭಾಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಆರೋಗ್ಯಕರ ತರಕಾರಿಗಳಲ್ಲೊಂದು ಹೀರೆಕಾಯಿ. ಇದರಿಂದ ಸಾಂಬಾರ್, ತಂಬುಳಿ, ಪಲ್ಯ, ಚಟ್ನಿ ಹೀಗೆ ಹಲವು ಆಹಾರವನ್ನು ತಯಾರಿಸಬಹುದು. ಹಾಗೆಯೇ ಹೀರೆಕಾಯಿಯಿಂದ ಚಟ್ಟಿ ತಯಾರಿಸುತ್ತಾರೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ಚಟ್ಟಿನಾ, ಚಟ್ನಿನಾ ಅಂತ ಕನ್‌ಫ್ಯೂಸ್ ಆಗ್ಬೇಡಿ. ನಾವಿಲ್ಲಿ ಹೇಳ್ತಿರೋದು ಹೀರೆಕಾಯಿ ಚಟ್ಟಿ ಬಗ್ಗೆ. ಇದು ಮಲೆನಾಡು ಹಾಗೂ ಉಡುಪಿ ಭಾಗಗಳಲ್ಲಿ ತಯಾರಿಸುವ ಆಹಾರ. ಜೀ ಕನ್ನಡದಲ್ಲಿ ಪ್ರಸಾರವಾಗುವ ಕಪಲ್ಸ್ ಕಿಚನ್ಸ್ ರಿಯಾಲಿಟಿ ಶೋನಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ರಶ್ಮಿ ಪ್ರಭಾಕರ್ ಹೀರೆಕಾಯಿ ಚಟ್ಟಿ ತಯಾರಿಸುವುದು ಹೇಗೆಂದು ತಿಳಿಸಿಕೊಟ್ಟಿದ್ದಾರೆ. ಗಂಡ ನಿಖಿಲ್‌ಗೆ ರುಚಿಕರವಾದ ಹೀರೆಕಾಯಿ ಚಟ್ಟಿ ತಯಾರಿಸಿ ಕೊಟ್ಟಿದ್ದಾರೆ.
ಹೀರೆಕಾಯಿ ಚಟ್ಟಿ
ಬೇಕಾದ ಪದಾರ್ಥಗಳು
1 ಕಪ್ ಅಕ್ಕಿ (2ರಿಂದ 3 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಿ)
2-4 ಒಣ ಮೆಣಸು
1 ಸ್ಪೂನ್ ಕೊತ್ತಂಬರಿ ಬೀಜ
ಅರ್ಧ ಸ್ಪೂನ್ ಜೀರಿಗೆ
ಸ್ವಲ್ಪ ಹುಳಿ
ಸ್ವಲ್ಪ ಬೆಲ್ಲ
2 ಸ್ಪೂನ್ ತೆಂಗಿನ ತುರಿ
ಉಪ್ಪು
ಮಾಡುವ ವಿಧಾನ
ಮೊದಲಿಗೆ ಅಕ್ಕಿ ಮತ್ತು ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಹಿಟ್ಟು ತೆಳುವಾಗಬಾರದು. ಮಿಲ್ಕ್‌ಶೇಕ್‌ನಂತೆ ಥಿಕ್ ಆಗಿರಬೇಕು. ಈಗ ಸೋರೆಕಾಯಿಯ (Ridge Gourd) ಸಿಪ್ಪೆ ತೆಗೆದು ತೆಳುವಾಗಿ ದುಂಡಗೆ ಕಟ್ ಮಾಡಿಟ್ಟುಕೊಳ್ಳಬೇಕು. ಇದನ್ನು ಹಿಟ್ಟಿನಲ್ಲಿ ಅದ್ದಿ ತವಾದಲ್ಲಿ ಇಡುತ್ತಾ ಹೋಗಬೇಕು. ದೋಸೆಯ ಆಕಾರದಲ್ಲಿ ಹೀರೆಕಾಯಿಯನ್ನು ಇಡುತ್ತಾ ಹೋಗಬೇಕು. ಮೇಲಿಂದ ಎಣ್ಣೆಯನ್ನು ಹಾಕಿಕೊಂಡು ನಿಧಾನವಾಗಿ ಮಗುಚಿ ಹಾಕಬೇಕು. ಈಗ ರುಚಿಕರವಾದ ಹೀರೆಕಾಯಿ ಚಟ್ಟಿ ಸವಿಯಲು ಸಿದ್ಧ. ಹೀರೆಕಾಯಿ ಚಟ್ಟಿ ಇತರ ದೋಸೆಗಳಿಗಿಂತ ಭಿನ್ನವಾಗಿದ್ದು, ರುಚಿಕರವಾಗಿರುತ್ತದೆ. ಬೆಳಗಿನ ಉಪಾಹಾರಕ್ಕಾಗಿ (Breakfast) ಅಥವಾ ಸಂಜೆಯ ತಿಂಡಿಯ ಸಮಯದಲ್ಲಿ ಇದನ್ನು ಸವಿಯಬಹುದು.
ಹೀರೆಕಾಯಿ ಆರೋಗ್ಯ ಪ್ರಯೋಜನಗಳು
ಹೀರೆಕಾಯಿ ಹೆಚ್ಚು ನಾರಿನಂಶವಿರುವ ತರಕಾರಿ (Vegetable)ಯಾಗಿದ್ದು, ಅನೇಕ ಆರೋಗ್ಯ ಪ್ರಯೋಜನಗಳನ್ನು (Health benefits) ಹೊಂದಿದೆ. ಹೀರೆಕಾಯಿಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ ಮತ್ತು ವಿಟಮಿನ್ ಎ, ಬಿ, ಸಿ ಮಾತ್ರವಲ್ಲದೆ ಕೆಲವು ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ರಕ್ತ ಶುದ್ಧೀಕರಣ, ತೂಕ ನಷ್ಟ ಮತ್ತು ಸಕ್ಕರೆ ಮಟ್ಟವನ್ನು (Sugar level) ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀರೆಕಾಯಿಯಲ್ಲಿ ವಿಟಮಿನ್ ಬಿ 6 ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ವಿಟಮಿನ್ ಬಿ -6 ದೇಹ (Body)ದಲ್ಲಿನ ನರಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ6, ನೀರಿನಲ್ಲಿ ಕರಗುವ ವಿಟಮಿನ್ ಆಗಿದ್ದು, ಇದು ಮೆದುಳಿನ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ.
ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನೋರು ಹೀರೆಕಾಯಿ ಸೇವನೆ ಮಾಡ್ಬೇಕು. ಇದು ಹೊಟ್ಟೆಯ ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸುವ ಜೊತೆಗೆ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹಿಗಳು ಕೂಡ ಹೀರೆಕಾಯಿ ಸೇವನೆ ಮಾಡಬೇಕು. ಇದು ಸಕ್ಕರೆಯ ಚಯಾಪಚಯವನ್ನು ವೇಗಗೊಳಿಸುತ್ತದೆ. ಇದಲ್ಲದೆ ಮಧುಮೇಹದಿಂದ ಉಂಟಾಗುವ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಹೀರೆಕಾಯಿ ಸಹಾಯಕಾರಿ.
ಹೀರೆಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಹೀರೆಕಾಯಿ ತಲೆನೋವಿಗೆ ರಾಮಬಾಣ ಎನ್ನಲಾಗಿದೆ. ಹೀರೆಕಾಯಿ ನೋವು ನಿವಾರಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇವು ನೋವನ್ನು ಕಡಿಮೆ ಮಾಡುತ್ತವೆ.ಹೀರೆಕಾಯಿಯಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಬಿ ಮತ್ತು ವಿಟಮಿನ್ ಸಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಹೀರೆಕಾಯಿಯಲ್ಲಿ ಕಬ್ಬಿಣ ಸಮೃದ್ಧವಾಗಿದೆ. ಕಬ್ಬಿಣದ ಕೊರತೆ ನೀಗಿಸಿ, ರಕ್ತಹೀನತೆ ಕಡಿಮೆ ಮಾಡ್ಬೇಕೆಂದ್ರೆ ಹೀರೆಕಾಯಿ ಸೇವನೆ ಮಾಡ್ಬೇಕು, ಇದ್ರಲ್ಲಿರುವ ವಿಟಮಿನ್ ಬಿ 6 ಕೆಂಪು ರಕ್ತ ಕಣಗಳ ರಚನೆಗೆ ಕಾರಣವಾಗುತ್ತದೆ.