Rava Idli Recipe: ಯಾವಾಗಲೂ ತಿಂಡಿ ಏನು ಮಾಡೋದು ಎಂದು ಯೋಚನೆ ಮಾಡೋದೆ ತಲೆ ನೋಯುತ್ತಾ? ನಾಳೆ ಬೆಳಗ್ಗಿನ ಉಪಹಾರಕ್ಕೆ ದಿಢೀರ್ ಆಗಿ ಮಾಡಬಹುದಾದ ಸಾಫ್ಟ್ ಆಗಿರುವ ರವೆ ಇಡ್ಲಿ ಹೇಗೆ ಮಾಡೋದು ಎನ್ನುವ ರೆಸಿಪಿ ಇಲ್ಲಿದೆ. ಇದರ ಜೊತೆ ಘಂ ಎನ್ನುವ ಶೇಂಗಾ ಚಟ್ನಿ ರೆಸಿಪಿಯೂ ಇದೆ. ಒಮ್ಮೆ ಟ್ರೈ ಮಾಡಿ ನೋಡಿ.
ಬಾಯಲ್ಲಿ ಇಟ್ಟರೆ ಕರಗುವಂತಹ ರವೆ ಇಡ್ಲಿ
ಬೆಳಗಿನ ತಿಂಡಿಗೆ ಪ್ರತಿದಿನ ಒಂದೇ ರೀತಿಯ ತಿಂಡಿ ತಿಂದು ಬೋರ್ ಆಗಿದ್ಯಾ? ಹಾಗಿದ್ರೆ ಇವತ್ತು ನಿಮಗಾಗಿ ಸ್ಪೆಷಲ್ ರವೆ ಇಡ್ಲಿ ಮಾಡೋದನ್ನು ತಿಳಿಸ್ತೀವಿ. ಇದು ಮಾಡೋದು ಸುಲಭ. ಬಾಯಲ್ಲಿಟ್ಟರೆ ಕರಗಿ ಹೋಗುವಷ್ಟು ಸಾಫ್ಟ್. ಇದರ ಜೊತೆಗೆ ಶೇಂಗಾ ಚಟ್ನಿ ಇದ್ರೆ ಮತ್ತೆ ಹೇಳೋದೆ ಬೇಡ. ಹೇಗೆ ಮಾಡೋದು ನೋಡೋಣ.
ರವೆ, ಮೊಸರು ಬಳಸಿ ಇಡ್ಲಿ ಹಿಟ್ಟು ತಯಾರಿಸಿ
- ರವೆ ಇಡ್ಲಿ ತಯಾರಿಸಲು ಮೊದಲು ಒಂದು ಪಾತ್ರೆಯಲ್ಲಿ ರವೆಯನ್ನು ತೆಗೆದುಕೊಳ್ಳಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸ್ವಲ್ಪ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹೆಚ್ಚು ಮೊಸರು ಸೇರಿಸಬೇಡಿ. ಇದರಿಂದ ಹಿಟ್ಟು ಹೆಚ್ಚು ಹುಳಿಯಾಗಬಹುದು.
- ಈಗ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತಾ ಚೆನ್ನಾಗಿ ಕಲಸಿ. ಹಿಟ್ಟಿನಲ್ಲಿ ಗಂಟುಗಳು ಉಳಿಯದಂತೆ ನೋಡಿಕೊಳ್ಳಿ. ಇಡ್ಲಿ ಹಿಟ್ಟು ತುಂಬಾ ತೆಳುವಾಗಿರಬಾರದು, ಅತಿಯಾಗಿ ಗಟ್ಟಿಯಾಗಿಯೂ ಇರಬಾರದು.
- ಹಿಟ್ಟನ್ನು ಚೆನ್ನಾಗಿ ಕಲಸಿದ ಬಳಿಕ ಸ್ವಲ್ಪ ಸಮಯ ಹಾಗೆಯೇ ಬಿಡಿ. ಇದರಿಂದ ರವೆ ನೀರನ್ನು ಹೀರಿಕೊಂಡು ಉಬ್ಬುತ್ತದೆ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಹಿಟ್ಟಿನ ಹದವನ್ನು ಸರಿಪಡಿಸಿಕೊಳ್ಳಿ.
ಇಡ್ಲಿ ತಟ್ಟೆಗೆ ಹಿಟ್ಟು ಹಾಕುವ ಮೊದಲು ಈ ಕೆಲಸ ಮಾಡಿ
- ಇಡ್ಲಿ ತಯಾರಿಸಲು ಮೊದಲು ಇಡ್ಲಿ ತಟ್ಟೆಗೆ ಸ್ವಲ್ಪ ಅಡುಗೆ ಎಣ್ಣೆಯನ್ನು ಹಚ್ಚಿ. ಇದರಿಂದ ಇಡ್ಲಿ ಬೆಂದ ಬಳಿಕ ತಟ್ಟೆಗೆ ಅಂಟಿಕೊಳ್ಳದೆ ಸುಲಭವಾಗಿ ಹೊರಬರುತ್ತದೆ.
- ಈಗ ಸಿದ್ಧಪಡಿಸಿದ ಹಿಟ್ಟನ್ನು ಇಡ್ಲಿ ತಟ್ಟೆಗೆ ಹಾಕಿ. ಇಡ್ಲಿ ಪಾತ್ರೆಯಲ್ಲಿ ಬೇಯಲು ಇಡಿ. ಸುಮಾರು 15ರಿಂದ 20 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ.
- ಇಡ್ಲಿ ಬೆಂದಿದೆಯೇ ಎಂದು ತಿಳಿಯಲು ಚಾಕು ಅಥವಾ ಟೂತ್ಪಿಕ್ನಿಂದ ಚುಚ್ಚಿ ನೋಡಿ. ಅದು ಸ್ವಚ್ಛವಾಗಿ ಹೊರಬಂದರೆ ಇಡ್ಲಿ ಬೆಂದಿದೆ ಎಂದರ್ಥ. ಇಡ್ಲಿಗಳನ್ನು ಸ್ವಲ್ಪ ತಣ್ಣಗಾಗಲು ಬಿಟ್ಟು, ನಂತರ ಎಚ್ಚರಿಕೆಯಿಂದ ಹೊರತೆಗೆಯಿರಿ.
ಶೇಂಗಾ ಚಟ್ನಿ ಮಾಡಿ
ರವೆ ಇಡ್ಲಿಯನ್ನು ಚಟ್ನಿ ಜೊತೆ ತಿನ್ನೋದೆ ಅದ್ಭುತವಾಗಿರುತ್ತೆ. ಇದಕ್ಕಾಗಿ ಮೊದಲು ಶೇಂಗಾ ಬೀಜಗಳನ್ನು ಚೆನ್ನಾಗಿ ಹುರಿದುಕೊಳ್ಳಿ. ಅದು ತಣ್ಣಗಾದ ಬಳಿಕ ಸಿಪ್ಪೆ ತೆಗೆದು ಮಿಕ್ಸರ್ ಜಾರ್ಗೆ ಹಾಕಿ. ಅದಕ್ಕೆ ಹಸಿಮೆಣಸಿನಕಾಯಿ, ಸ್ವಲ್ಪ ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ತುರಿದ ತೆಂಗಿನಕಾಯಿ ಸೇರಿಸಿ. ಈಗ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಎಲ್ಲವನ್ನೂ ನುಣ್ಣಗೆ ರುಬ್ಬಿಕೊಳ್ಳಿ. ನಿಮಗೆ ಗಟ್ಟಿಯಾದ ಚಟ್ನಿ ಇಷ್ಟವಿದ್ದರೆ ಕಡಿಮೆ ನೀರು ಬಳಸಿ. ತೆಳುವಾದ ಚಟ್ನಿ ಬೇಕಿದ್ದರೆ ಸ್ವಲ್ಪ ಹೆಚ್ಚು ನೀರು ಸೇರಿಸಬಹುದು. ಈಗ ರುಚಿಯಾದ ಶೇಂಗಾ ಚಟ್ನಿ ರೆಡಿಯಾಗುತ್ತದೆ. ಚಟ್ನಿಯ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಸಾಸಿವೆ, ಒಣಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ಹಾಕಿ.
ಈಗ ಮೃದುವಾದ ಮಲ್ಲಿಗೆಯಂತಹ ಇಡ್ಲಿ ಜೊತೆ ಗಮ ಗಮ ಎನ್ನುವ ಶೇಂಗಾ ಚಟ್ನಿ ಮಾಡಿ ಸರ್ವ್ ಮಾಡಿ. ಬೆಳಗ್ಗೆ ಹೆಚ್ಚು ತಲೆಕೆಡಿಸದೆ ಸುಲಭವಾದ ಬಾಯಲಿಟ್ಟರೆ ಕರಗುವಂತಹ ಇಡ್ಲಿ ರೆಡಿಯಾಗುತ್ತದೆ.


