Tomato Bonda Recipe: ಹೊರಗಡೆ ಟೊಮೆಟೊದ ಹುಳಿ ರುಚಿ, ಒಳಗಡೆ ಮಸಾಲೆಯುಕ್ತ ಆಲೂಗಡ್ಡೆಯ ಹೂರಣ – ಈ ಬೋಂಡಾ ನೋಡಲು ಎಷ್ಟು ಚೆನ್ನಾಗಿರುತ್ತದೆಯೋ, ತಿನ್ನಲು ಅಷ್ಟೇ ರುಚಿಯಾಗಿರುತ್ತದೆ. ವಿಶೇಷವೆಂದರೆ ಇದು ಹೆಚ್ಚು ಎಣ್ಣೆಯನ್ನೂ ಹೀರಿಕೊಳ್ಳುವುದಿಲ್ಲ. ಮತ್ಯಾಕೆ ತಡ.. ಈ ರೆಸಿಪಿ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.

ಳೆಗಾಲವಿರಲಿ ಅಥವಾ ಚಳಿಗಾಲದ ಸಂಜೆಯಿರಲಿ, ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕೆನಿಸುವುದು ಸಹಜ. ಅಂತಹ ಸಮಯದಲ್ಲಿ ನಮಗೆ ತಕ್ಷಣ ನೆನಪಾಗುವುದು ಆಲೂ ಬೋಂಡಾ ಅಥವಾ ಮಿರ್ಚಿ ಬಜ್ಜಿ. ನೀವು ಈಗಾಗಲೇ ಹಲವು ಬಾರಿ ಆಲೂ ಬೋಂಡಾ, ಮಿರ್ಚಿ ಬಜ್ಜಿ ತಿಂದಿರುತ್ತೀರಿ. ಸಾಮಾನ್ಯವಾಗಿ ಇವುಗಳನ್ನು ಆಲೂಗಡ್ಡೆ ಮತ್ತು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಆದರೆ, ಯಾವಾಗಲೂ ಒಂದೇ ರೀತಿಯ ರುಚಿ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ಈ ಬಾರಿ ಸ್ವಲ್ಪ ಹೊಸದಾಗಿ, ಅತ್ಯಂತ ರುಚಿಕರವಾದ 'ಟೊಮೆಟೊ ಬೋಂಡಾ' ಪ್ರಯತ್ನಿಸಿ ನೋಡಿ. ಇದು ಅಷ್ಟಾಗಿ ಎಣ್ಣೆಯನ್ನು ಹೀರಿಕೊಳ್ಳುವುದಿಲ್ಲ ಮತ್ತು ತಿಂದ ನಂತರ ನಿಮ್ಮ ಕೈಗಳಿಗೆ ಜಿಡ್ಡು ಅಂಟುವುದಿಲ್ಲ.

ತಯಾರಿಸುವ ವಿಧಾನ

ಮೊದಲು ಬೋಂಡಾ ಒಳಗೆ ಇಡುವ ಹೂರಣವನ್ನು (Stuffing) ಸಿದ್ಧಪಡಿಸಿಕೊಳ್ಳಬೇಕು. ಸ್ಟವ್ ಮೇಲೆ ಒಂದು ಬಾಂಡಲಿ ಇಟ್ಟು, ಸ್ವಲ್ಪ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ನಂತರ ಅದಕ್ಕೆ ಸ್ವಲ್ಪ ಸೋಂಪು, ಧನಿಯಾ ಮತ್ತು ಜೀರಿಗೆ ಹಾಕಿ ಹುರಿಯಿರಿ. ಆಮೇಲೆ ಹಸಿಮೆಣಸಿನಕಾಯಿ, ಶುಂಠಿ ತುರಿ ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವವರೆಗೆ ಹುರಿಯಿರಿ.

ಈಗ ಅದಕ್ಕೆ ಸ್ವಲ್ಪ ಮೆಣಸಿನ ಪುಡಿ (Pepper powder), ಚಿಟಿಕೆ ಇಂಗು, ಎರಡು ಟೀ ಚಮಚ ಕಡಲೆ ಹಿಟ್ಟು ಹಾಕಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಕೈಯಾಡಿಸುತ್ತಾ ಹುರಿಯಿರಿ. ನಂತರ ಸ್ವಲ್ಪ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಸೇರಿಸಿ. ಈಗ ಸ್ವಲ್ಪ ಕಸೂರಿ ಮೇತಿ ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ.

ಇವೆಲ್ಲ ಬೆಂದ ನಂತರ, ಮೊದಲೇ ಬೇಯಿಸಿ ಪುಡಿ ಮಾಡಿಟ್ಟುಕೊಂಡ ಆಲೂಗಡ್ಡೆ ಮಿಶ್ರಣವನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಬೆರೆಸಿ. ಕೊನೆಯಲ್ಲಿ ಕಪ್ಪು ಉಪ್ಪು (Black salt), ಸ್ವಲ್ಪ ಆಮ್‌ಚೂರ್ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸ್ಟವ್ ಆರಿಸಿ. ಈಗ ಹೂರಣ ಸಿದ್ಧ.

ಟೊಮೆಟೊಗಳನ್ನು ಶುಚಿಯಾಗಿ ತೊಳೆದು, ಅದರ ಮೇಲ್ಭಾಗದಲ್ಲಿ (ತೊಟ್ಟು ಇರುವ ಜಾಗ) ಗುಂಡಗೆ ಕತ್ತರಿಸಿ ಸಣ್ಣ ರಂಧ್ರ ಮಾಡಿ. ಈಗ ಒಳಗಿರುವ ಬೀಜ ಮತ್ತು ತಿರುಳನ್ನು ಜಾಗರೂಕತೆಯಿಂದ ಹೊರತೆಗೆಯಿರಿ. ಹೀಗೆ ಬಟ್ಟಲಿನಂತೆ ಖಾಲಿಯಾದ ಟೊಮೆಟೊಗಳ ಒಳಗೆ ನಾವು ತಯಾರಿಸಿಟ್ಟುಕೊಂಡ ಆಲೂಗಡ್ಡೆ ಮಸಾಲೆಯನ್ನು ಒತ್ತಿ ತುಂಬಿಸಿ.

ಹಿಟ್ಟು ಮತ್ತು ಕರಿಯುವ ವಿಧಾನ

ಒಂದು ಅಗಲವಾದ ಪಾತ್ರೆಯಲ್ಲಿ ಅಗತ್ಯವಿರುವಷ್ಟು ಕಡಲೆ ಹಿಟ್ಟು ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ, ಬೇಕಾದಷ್ಟು ನೀರು ಹಾಕುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ (ಸ್ವಲ್ಪ ಗಟ್ಟಿಯಾಗಿ) ಕಲಸಿಕೊಳ್ಳಿ. ಹಿಟ್ಟನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ಫ್ಲಫಿ ಆಗುವವರೆಗೆ (ಉಬ್ಬುವಂತೆ) ಕಲಸುವುದು ಬಹಳ ಮುಖ್ಯ.

ಈಗ ಸ್ಟವ್ ಮೇಲೆ ಕಡಾಯಿ ಇಟ್ಟು ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಕಾದ ನಂತರ, ಮಸಾಲೆ ತುಂಬಿದ ಟೊಮೆಟೊಗಳನ್ನು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಟೊಮೆಟೊಗೆ ಹಿಟ್ಟು ಚೆನ್ನಾಗಿ ಮೆತ್ತಿಕೊಳ್ಳುವಂತೆ ಕೋಟ್ ಮಾಡಿ. ನಂತರ ಜಾಗರೂಕತೆಯಿಂದ ಎಣ್ಣೆಯಲ್ಲಿ ಬಿಡಿ. ಬೋಂಡಾಗಳು ಹೊಂಬಣ್ಣಕ್ಕೆ (Golden Brown) ಬರುವವರೆಗೆ ಚೆನ್ನಾಗಿ ಕರಿಯಿರಿ. ಅಷ್ಟೇ, ರುಚಿಕರವಾದ ಟೊಮೆಟೊ ಬೋಂಡಾ ಸಿದ್ಧ! ಇದನ್ನು ಚಟ್ನಿ ಅಥವಾ ಸಾಸ್ ಜೊತೆ ಸವಿಯಲು ಅದ್ಭುತವಾಗಿರುತ್ತದೆ.

ಇಲ್ಲಿದೆ ವಿಡಿಯೋ 

View post on Instagram