Chicken Fry Recipe: ಇದನ್ನು ನೇರವಾಗಿ ಅಥವಾ ಅನ್ನದೊಂದಿಗೆ ಸೈಡ್ ಡಿಶ್ ಆಗಿ ಅಥವಾ ಸ್ಟಾರ್ಟರ್ ಆಗಿ ತಿನ್ನಲು ಸಹ ತುಂಬಾ ಒಳ್ಳೆಯದು. ಮತ್ಯಾಕೆ ತಡ, ಈಗ ಈ ಬಾಯಲ್ಲಿ ನೀರೂರಿಸುವ ಚಿಕನ್ ಫ್ರೈ ಅನ್ನು ಮನೆಯಲ್ಲಿಯೇ ಹೇಗೆ ತಯಾರಿಸಬೇಕೆಂದು ಹಂತ ಹಂತವಾಗಿ ನೋಡೋಣ ಬನ್ನಿ.. 

ಹೊರಗೆ ಮಳೆ ಬರುತ್ತಿರುವಾಗ ಅಥವಾ ಥಂಡಿ ವಾತವರಣವಿದ್ದಾಗ ಖಾರ ಖಾರವಾಗಿರುವ, ರುಚಿಕರವಾದ ಏನನ್ನಾದರೂ ತಿನ್ನಬೇಕನಿಸುತ್ತದೆ. ಆಗ ಚಿಕನ್ ಫ್ರೈಗಿಂತ ಉತ್ತಮವಾದದ್ದು ಇನ್ನೊಂದಿಲ್ಲ ಅಲ್ಲವೇ?. ಚಿಕನ್ 65 ಎಲ್ರಿಗೂ ಗೊತ್ತು. ಆದ್ರೆ ಅದರ ಬದಲಿಗೆ ಕೇರಳದ ಪ್ರಸಿದ್ಧ 'ತಟ್ಟುಕಡೈ' (thattu kadai) ಶೈಲಿಯ ಚಿಕನ್ ಫ್ರೈ ಟ್ರೈ ಮಾಡಿ. ಹೇಗಿದ್ದರೂ ನಾಳೆ ಭಾನುವಾರ. ಎಲ್ಲರ ಮನೆಯಲ್ಲೂ ನಾನ್‌ ವೆಜ್‌ಇದ್ದೇ ಇರುತ್ತದೆ. ಇನ್ನು ಈ ಖಾದ್ಯದಲ್ಲಿ ಬಳಸಲಾದ ತೆಂಗಿನ ಎಣ್ಣೆ ಮತ್ತು ಪೇಸ್ಟ್ ಇದಕ್ಕೆ ಅದ್ಭುತವಾದ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ.

ಕೇರಳ ಶೈಲಿಯ ಚಿಕನ್ ಫ್ರೈ ವಿಶೇಷತೆಯೆಂದರೆ ಚಿಕನ್ ಜೊತೆಗೆ ಹುರಿದ ಹಸಿರು ಮೆಣಸಿನಕಾಯಿಗಳು ಮತ್ತು ತುರಿದ ತೆಂಗಿನಕಾಯಿ ಸಹ ತುಂಬಾ ಗರಿಗರಿಯಾಗಿ ಮತ್ತು ಖಾರವಾಗಿರುತ್ತವೆ. ಸಣ್ಣ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು ಕಾಶ್ಮೀರಿ ಮೆಣಸಿನಕಾಯಿಗಳಿಂದ ತಯಾರಿಸಿದ ಮಸಾಲವು ಚಿಕನ್‌ಗೆ ಉತ್ತಮ ಬಣ್ಣ ಮತ್ತು ಖಾರವನ್ನು ನೀಡುತ್ತದೆ. ಇದನ್ನು ನೇರವಾಗಿ ಅಥವಾ ಅನ್ನದೊಂದಿಗೆ ಸೈಡ್ ಡಿಶ್ ಆಗಿ ಅಥವಾ ಸ್ಟಾರ್ಟರ್ ಆಗಿ ತಿನ್ನಲು ಸಹ ತುಂಬಾ ಒಳ್ಳೆಯದು. ಮತ್ಯಾಕೆ ತಡ, ಈಗ ಈ ಬಾಯಲ್ಲಿ ನೀರೂರಿಸುವ ಚಿಕನ್ ಫ್ರೈ ಅನ್ನು ಮನೆಯಲ್ಲಿಯೇ ಹೇಗೆ ತಯಾರಿಸಬೇಕೆಂದು ಹಂತ ಹಂತವಾಗಿ ನೋಡೋಣ ಬನ್ನಿ..

ಬೇಕಾಗಿರುವ ಪದಾರ್ಥಗಳು

ಸಣ್ಣ ಈರುಳ್ಳಿ (20)
ಬೆಳ್ಳುಳ್ಳಿ ಎಸಳುಗಳು (5)
ಶುಂಠಿ ತುಂಡು
ಕಾಶ್ಮೀರಿ ಮೆಣಸಿನಕಾಯಿ(3)
ಹಸಿರು ಮೆಣಸಿನಕಾಯಿ(2)
ಒಂದು ಹಿಡಿ ಕೊತ್ತಂಬರಿ ಸೊಪ್ಪು

ಮ್ಯಾರಿನೇಟ್ ಮಾಡಲು
ಕೋಳಿ ಮಾಂಸ (400 ಗ್ರಾಂ), ಅರ್ಧ ನಿಂಬೆಹಣ್ಣು, ಸೋಂಪು (1 ಟೀ ಚಮಚ), ಅರಿಶಿನ (1/2 ಟೀ ಚಮಚ), ಕಾಶ್ಮೀರಿ ಮೆಣಸಿನ ಪುಡಿ (2 ಟೀ ಚಮಚ), ಕಾಳುಮೆಣಸಿನ ಪುಡಿ (1/2 ಟೀ ಚಮಚ), ಸೋಂಪು ಪುಡಿ (1/4 ಟೀ ಚಮಚ), ಜೀರಿಗೆ ಪುಡಿ (1 ಟೀ ಚಮಚ), ಗರಂ ಮಸಾಲ (1 ಟೀ ಚಮಚ), ಅಕ್ಕಿ ಹಿಟ್ಟು (1 ಚಮಚ), ಒಂದು ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು.

ಹುರಿಯಲು ಬೇಕಾಗಿರುವುದು
ತೆಂಗಿನ ಎಣ್ಣೆ (2 ಚಮಚ), ಕರಿಬೇವು, ಹಸಿಮೆಣಸಿನಕಾಯಿ (5), ತೆಂಗಿನಕಾಯಿ ತುರಿ (2 ಚಮಚ).

ತಯಾರಿಸುವ ವಿಧಾನ

*ಮೊದಲು, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಮಿಕ್ಸರ್‌ನಲ್ಲಿ ಹಾಕಿ ನಯವಾದ ಪೇಸ್ಟ್‌ ಆಗುವವರೆಗೆ ರುಬ್ಬಿಕೊಳ್ಳಿ.
*ಚಿಕನ್ ತುಂಡುಗಳನ್ನು ತೊಳೆದು ಒಂದು ಬಟ್ಟಲಿನಲ್ಲಿ ಹಾಕಿ. ಇದಕ್ಕೆ ರುಬ್ಬಿದ ಮಸಾಲಾ ಪೇಸ್ಟ್, ಮ್ಯಾರಿನೇಟ್ ಮಾಡಲು
ಮೇಲೆ ತಿಳಿಸಿದ ಪದಾರ್ಥಗಳನ್ನ ಕ್ರಮವಾಗಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕನಿಷ್ಠ 2 ಗಂಟೆಗಳ ಕಾಲ ಪಕ್ಕಕ್ಕೆ ಇರಿಸಿ. ಇದರಿಂದ ಚಿಕನ್ ತುಂಡುಗಳು ಮಸಾಲೆಯನ್ನ ಚೆನ್ನಾಗಿ ಹೀರಿಕೊಳ್ಳುತ್ತವೆ.
*ಈಗ ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಒಂದು ಬದಿಯಲ್ಲಿ ಹುರಿಯಿರಿ.
*ಕೋಳಿ ಮಾಂಸವು ಮೂರನೇ ಒಂದು ಭಾಗದಷ್ಟು ಬೆಂದ ನಂತರ, ತೆಂಗಿನಕಾಯಿ ತುರಿ, ಕರಿಬೇವು ಮತ್ತು ಕತ್ತರಿಸಿದ ಹಸಿರು ಮೆಣಸಿನಕಾಯಿಗಳನ್ನು ಬಾಣಲೆಗೆ ಸೇರಿಸಿ.
*ಚಿಕನ್ ತೆಂಗಿನಕಾಯಿ ಮಿಶ್ರಣ ಚೆನ್ನಾಗಿ ಬೆಂದ ನಂತರ ಮತ್ತು ಒಳ್ಳೆಯ ಪರಿಮಳ ಬರುತ್ತಿದ್ದಾಗ, ಸ್ಟೌವ್ ಆಫ್ ಮಾಡಿ. ಅಷ್ಟೇ! ಬಿಸಿ ಬಿಸಿ ಕೇರಳ ಶೈಲಿಯ ಚಿಕನ್ ಫ್ರೈ ಸವಿಯಲು ಸಿದ್ಧ.