- ನಿತ್ತಿಲೆ

1. ದಾಸವಾಳ ಸೊಪ್ಪಿನ ದೋಸೆ

ಸಾಮಗ್ರಿಗಳು - ಎಳೆಯ ಬಿಳಿ ಐದೆಸಳ ದಾಸವಾಳದ ಎಲೆ 40 ರಿಂದ 45. ಇದಕ್ಕೆ ಎಳೆಯ ಮೊಗ್ಗು, ಚಿಗುರನ್ನೂ ಹಾಕಬಹುದು. 2 ಲೋಟ ಅಕ್ಕಿ, 1 ಕಪ್‌ ಪೇಪರ್‌ ಅವಲಕ್ಕಿ, ಉಪ್ಪು, ನೀರು.

ಮಾಡುವ ವಿಧಾನ:

1. ಅಕ್ಕಿಯನ್ನು ತೊಳೆದು ಐದಾರು ನೆನೆಸಿ.

2. ಅವಲಕ್ಕಿಯನ್ನು ಸ್ವಲ್ಪ ಹೊತ್ತು ನೆನೆಸಿಡಿ.

3. ಅಕ್ಕಿಗೆ ದಾಸವಾಳದ ಎಲೆ, ನೆನೆಸಿಟ್ಟಅವಲಕ್ಕಿ, ನೀರು ಹಾಕಿ ನುಣ್ಣಗೆ ರುಬ್ಬಿ.

4. ಈ ಹಿಟ್ಟನ್ನು ಚೆನ್ನಾಗಿ ಕೈಯಿಂದ ತಿರುವಿ. ಅಥವಾ ಸೌಟಿನಲ್ಲೂ ಐದಾರು ನಿಮಿಷ ತಿರುವಿ.

5. ತುಸು ಬೆಚ್ಚಗಿರುವ ಜಾಗದಲ್ಲಿ ರಾತ್ರಿಯಿಡೀ ಹುದುಗಲು ಬಿಡಿ. 10 ರಿಂದ 12 ಗಂಟೆಯಷ್ಟುಕಾಲ ಹಿಟ್ಟು ಹುದುಗಬೇಕು.

6. ಬೆಳಗ್ಗೆ ಹಿಟ್ಟಿಗೆ ಉಪ್ಪು ಹಾಕಿ ಚೆನ್ನಾಗಿ ತಿರುವಿ.

7. ಕಾವಲಿಗೆ ಎಣ್ಣೆ ಹಚ್ಚಿ, ತುಸು ದಪ್ಪಗೆ ದೋಸೆ ಹುಯ್ಯಿರಿ.

ಇದು ಸ್ಪಾಂಜ್‌ನಂತೆ ತಿನ್ನಲು ಸಖತ್ತಾಗಿರುತ್ತೆ.

ನಾಳೆ ಬೆಳಗ್ಗಿನ ತಿಂಡಿಗೆ ಉತ್ತಪ್ಪ ಟ್ರೈ ಮಾಡಿ 

ಗಟ್ಟಿಚಟ್ನಿ

1. ತವಾ ಮೇಲೆ ಒಂಚೂರು ಎಣ್ಣೆ ಹಾಕಿ, ಸಾಸಿವೆ, ಒಣ ಮೆಣಸು (ಬ್ಯಾಡಗಿ) ಹಾಕಿ ಹುರಿಯಿರಿ.

2. ಸಾಸಿವೆ ಸಿಡಿದಾಗ ಉದ್ದಿನ ಬೇಳೆ ಹಾಕಿ. ಇಂಗನ್ನೂ ಸೇರಿಸಿ.

3. ಇದಕ್ಕೆ ನಾಲ್ಕೈದು ಪೀಸು ಶುಂಠಿ ಹಾಕಿ. ಬಳಿಕ ಸಣ್ಣ ನಿಂಬೆಹಣ್ಣಿನ ಗಾತ್ರ ಹುಣಸೆಹಣ್ಣು ಸೇರಿಸಿ.

4. ಇದನ್ನು ನಾಲ್ಕೈದು ನಿಮಿಷ ಫ್ರೈ ಮಾಡಿ.

5. ಮಿಕ್ಸಿಗೆ ಹುರಿದದ್ದನ್ನು ಹಾಕಿ. ಕಾಲು ಕಪ್‌ನಷ್ಟುಬೆಲ್ಲವನ್ನು ಸೇರಿಸಿ. ಉಪ್ಪು ಹಾಕಿ.

6. ನೀರು ಹಾಕದೇ ರುಬ್ಬಿ.

ಈ ಚಟ್ನಿ ದಾಸವಾಳ ದೋಸೆಗೆ ಬೆಸ್ಟ್‌ ಕಾಂಬಿನೇಶನ್‌.

2. ಬೇಳೆ ದೋಸೆ

ಸಾಮಗ್ರಿ - ದೋಸೆ ಅಕ್ಕಿ 1 ಕಪ್‌, ಉದ್ದಿನ ಬೇಳೆ - 1/4 ಕಪ್‌, ತೊಗರಿ ಬೇಳೆ-1/4 ಕಪ್‌, ಕಡಲೆ ಬೇಳೆ-1/4 ಕಪ್‌, ಹೆಸರು ಬೇಳೆ-1/4 ಕಪ್‌, ತೆಂಗಿನ ತುರಿ -1/4 ಕಪ್‌, ಶುಂಠಿ ಸ್ವಲ್ಪ, ಹಸಿಮೆಣಸಿನ ಕಾಯಿ 1, ಬ್ಯಾಡಗಿ ಮೆಣಸು - 2 , ಇಂಗು- ಚಿಟಿಕೆ, ಕೊತ್ತಂಬರಿ ಸೊಪ್ಪು, ಉಪ್ಪು.

ಮಾಡುವ ವಿಧಾನ-

1. ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು ನಾಲ್ಕೈದು ಗಂಟೆ ಕಾಲ ನೆನೆಸಿ.

2. ಎಲ್ಲ ಬೇಳೆಗಳನ್ನೂ ತೊಳೆದು ನಾಲ್ಕೈದು ಗಂಟೆ ನೆನೆಸಿ.

3. ಬೇಳೆಗೆ ಕಾಯಿತುರಿ, ಶುಂಠಿ, ಹಸಿಮೆಣಸು, ಒಣ ಮೆಣಸು, ಇಂಗು ಹಾಕಿ.

4. ಇದಕ್ಕೆ ಕಡಿಮೆ ನೀರು ಹಾಕಿ ನುಣ್ಣಗೆ ಆದರೆ ಗಟ್ಟಿಗೆ ರುಬ್ಬಿ.

5. ನೆನೆಸಿದ ಅಕ್ಕಿಗೆ ನೀರು ಹಾಕಿ ನುಣ್ಣಗೆ ರುಬ್ಬಿ.

6. ಅಕ್ಕಿ ಹಿಟ್ಟನ್ನು ಬೇಳೆ ಹಿಟ್ಟಿಗೆ ಸೇರಿಸಿ.

7. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ.

8. ಕಾವಲಿಗೆ ಎಣ್ಣೆ ಹಚ್ಚಿ ಸ್ವಲ್ಪ ತೆಳುವಾಗಿ ಹುಯ್ಯಿರಿ.

9. ಮೇಲಿಂದ ತುಪ್ಪ ಹಾಕಿ. ಕೆಂಪಾದ ಮೇಲೆ ತೆಗೆಯಿರಿ.

ಬೆಂಗಳೂರಿನಲ್ಲಿ ಮಿಸ್ ಮಾಡದೇ ಮಸಾಲ ದೋಸೆ ತಿನ್ನಬೇಕಾದ ಜಾಗಗಳು!

ಚಟ್ನಿ

1. ತವಾಗೆ ಎಣ್ಣೆ ಹಾಕಿ.

2. ಬಿಸಿಯಾದ ಮೇಲೆ ಸಾಸಿವೆ ಹಾಕಿ. ಸಿಡಿದಾಗ ಉದ್ದಿನ ಬೇಳೆ, ಒಣ ಮೆಣಸು, ಇಂಗು ಹಾಕಿ ಹುರಿಯಿರಿ.

3. ಇದಕ್ಕೆ ಕಾಲು ಕಪ್‌ನಷ್ಟುಶುಂಠಿ ಸೇರಿಸಿ. ನಿಂಬೆ ಗಾತ್ರದ ಹುಣಸೆ ಹಣ್ಣು ಹಾಕಿ. ಕಾಲು ಸ್ಪೂನ್‌ ಅರಿಶಿನ ಸೇರಿಸಿ.

4. ಬೆಲ್ಲ ಉಪ್ಪು ಹಾಕಿ ರುಬ್ಬಿ. ಮೇಲಿಂದ ಬಿಳಿ ಎಳ್ಳು ಉದುರಿಸಿ.

ಬೇಳೆ ದೋಸೆಯ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.

3. ಹೆಸರು ಕಾಳಿನ ದೋಸೆ

ಸಾಮಗ್ರಿ- 1 ಕಪ್‌ ಹೆಸರು ಕಾಳು, 1 ಕಪ್‌ ಅಕ್ಕಿ, ಅರ್ಧ ಕಪ್‌ ಹೆಸರು ಬೇಳೆ, ಹಸಿ ಮೆಣಸು ಮೂರು, ಶುಂಠಿ, ಕೊತ್ತಂಬರಿ ಸೊಪ್ಪು, ಉಪ್ಪು.

ಮಾಡುವ ವಿಧಾನ

1. ಹೆಸರು ಕಾಳು, ಅಕ್ಕಿ, ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಒಂದು ರಾತ್ರಿ ನೆನೆಸಿಡಿ.

2. ಮರುದಿನ ಈ ಕಾಳು, ಅಕ್ಕಿ, ಬೇಳೆಯನ್ನು ಮಿಕ್ಸಿಗೆ ಹಾಕಿ.

3. ಇದರ ಜೊತೆಗೆ 3 ಹಸಿಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ರುಬ್ಬಿ.

4. ತವಾದ ಮೇಲೆ ತೆಳುವಾಗಿ ಹರಡಿ.

5. ಮೇಲಿಂದ ಈರುಳ್ಳಿ, ಕೊತ್ತಂಬರಿಸೊಪ್ಪು ಉದುರಿಸಿ. ಸ್ವಲ್ಪ ಎಣ್ಣೆ ಹಾಕಿ.

6. ಕೆಂಪಗಾದ ಮೇಲೆ ತೆಗೆಯಿರಿ.

ಬಾಯಿಗೂ ರುಚಿ, ದೇಹಕ್ಕೂ ಹಿತವಾದ ಓಟ್ಸ್ ದೋಸೆ

ಚಟ್ನಿ

1. ಬಾಣಲೆಗೆ ಎಣ್ಣೆ ಹಾಕಿ ಶುಂಠಿಯನ್ನು ಚೆನ್ನಾಗಿ ಹುರಿದಿಟ್ಟುಕೊಳ್ಳಿ.

2. ಉದ್ದಿನ ಬೇಳೆ, ಕಡಲೇ ಬೇಳೆ, 2 ಒಣ ಮೆಣಸು, ಎಣ್ಣೆ, 1 ಹಸಿಮೆಣಸು ಹಾಕಿ ಹುರಿಯಿರಿ.

3. ಇದನ್ನೆಲ್ಲ ಮಿಕ್ಸಿಗೆ ಹಾಕಿ. ಹುಣಸೆ ಹುಳಿ, ಉಪ್ಪು ಸೇರಿಸಿ ರುಬ್ಬಿ.

4. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಬಳಿಕ ಉದ್ದಿನ ಬೇಳೆ ಸೇರಿಸಿ ಹುರಿಯಿರಿ. ಕರಿಬೇವಿನ ಸೊಪ್ಪನ್ನು ಹಾಕಿ ಇಂಗು ಉದುರಿಸಿ.

5. ಇದನ್ನು ಚಟ್ನಿಯ ಮೇಲೆ ಒಗ್ಗರಣೆ ಹಾಗೆ ಹಾಕಿ.

ಹೆಸರು ಕಾಳು ದೋಸೆಗೆ ಈ ಚಟ್ನಿ ಹಾಕಿ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು.