Asianet Suvarna News Asianet Suvarna News

ಕೆಂಪು, ಹಸಿರು, ಕಪ್ಪು ದ್ರಾಕ್ಷಿ, ಬೇಸಿಗೆಯಲ್ಲಿ ಯಾವ್ದನ್ನು ತಿಂದ್ರೆ ಆರೋಗ್ಯಕ್ಕೆ ಒಳ್ಳೇದು?

ಬೇಸಿಗೆ ಶುರುವಾಗಿದೆ. ಮೈ ಸುಡೋ ಧಗೆಗೆ ಎಷ್ಟು ಜ್ಯೂಸ್ ಅಥವಾ ಹಣ್ಣುಗಳನ್ನು ತಿಂದ್ರೂ ಸಾಕಾಗಲ್ಲ. ಹಾಗಾಗಿಯೇ ಹೆಚ್ಚಿನವರು ಸಾಕಷ್ಟು ಪ್ರಮಾಣದಲ್ಲಿ ಸೀಸನಲ್‌ ಫ್ರುಟ್ಸ್ ತಿನ್ನುತ್ತಾರೆ. ಬೇಸಿಗೆಯಲ್ಲಿ ದ್ರಾಕ್ಷಿ ಹೆಚ್ಚು ಮಾರಾಟವಾಗುತ್ತದೆ. ಆದ್ರೆ ಆರೋಗ್ಯಕ್ಕೆ ಯಾವ ರೀತಿಯ ದ್ರಾಕ್ಷಿ ಒಳ್ಳೆಯದು ತಿಳಿಯೋಣ.

Health tips, Green, black or red grapes, Know which is the healthiest of them all Vin
Author
First Published Mar 7, 2023, 10:39 AM IST

ಬೇಸಿಗೆ ಬಂತು ಅಂದ್ರೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಬಿಸಿಲಿನ ಶಾಖಕ್ಕೆ ಹೆಚ್ಚು ಸುಸ್ತಾಗುತ್ತದೆ, ನಿಶ್ಯಕ್ತಿ ಆವರಿಸುತ್ತದೆ. ದೇಹ ಡಿಹೈಡ್ರೇಟ್ ಕೂಡಾ ಆಗುತ್ತದೆ. ಹೀಗಾಗಿಯೇ ಹೆಚ್ಚಿನವರು ಸಾಕಷ್ಟು ಹೆಚ್ಚು ಪ್ರಮಾಣದಲ್ಲಿ ಹಣ್ಣು ಹಾಗೂ ಜ್ಯೂಸ್‌ಗಳನ್ನು ಕುಡಿಯುತ್ತಾರೆ. ಅದರಲ್ಲೂ ಸೀಸನಲ್ ಫ್ರುಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದ್ರಾಕ್ಷಿ, ಕರಬೂಜ ಮೊದಲಾದ ಹಣ್ಣುಗಳು ಬೇಸಿಗೆಯಲ್ಲಿ ಸಿಗುತ್ತವೆ. ಅದರಲ್ಲೂ ದ್ರಾಕ್ಷಿ ಹೆಚ್ಚು ಫೇಮಸ್, ಕಪ್ಪು, ಹಸಿರು, ಕೆಂಪು ದ್ರಾಕ್ಷಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್. 

ಸಿಹಿ-ಹುಳಿ ಮಿಶ್ರಿತ ದ್ರಾಕ್ಷಿ (Grapes) ಕಂಡರೆ ಯಾರಿಗೆ ತಾನೆ ಇಷ್ಟವಾಗಲ್ಲ, ಅದರಲ್ಲೂ ತರಾವರಿ ದ್ರಾಕ್ಷಿಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಕಪ್ಪು ದ್ರಾಕ್ಷಿ, ಹಸಿರು ದ್ರಾಕ್ಷಿ, ಕೆಂಪು ದ್ರಾಕ್ಷಿ, ಸ್ವಲ್ಪ ನೇರಳೆ ಬಣ್ಣದ ದ್ರಾಕ್ಷಿ ಹೀಗೆ ಅನೇಕ ಬಗೆಯ ದ್ರಾಕ್ಷಿಗಳು ಸಿಗುತ್ತವೆ. ಕೆಲವೊಂದು ದ್ರಾಕ್ಷಿಗಳಂತೂ ದುಬಾರಿ ಬೆಲೆಗಳಿರುತ್ತದೆ. ಒಂದೊಂದು ರೀತಿಯ ದ್ರಾಕ್ಷಿಯ ರುಚಿಯೂ (Taste) ವಿಭಿನ್ನವಾಗಿರುತ್ತದೆ. ದ್ರಾಕ್ಷಿಯ ಬಣ್ಣ ಬದಲಾದರೆ ಅದರಲ್ಲಿರುವ ಪೋಷಕಾಂಶಗಳೂ ಭಿನ್ನವಾಗಿರುವುದೇ? ಯಾವ ಬಗೆಯ ದ್ರಾಕ್ಷಿ ಹೆಚ್ಚು ಆರೋಗ್ಯಕರ (Healthy) ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

ದಿನಕ್ಕೆಷ್ಟು ಹಣ್ಣು ತಿಂದರೊಳಿತು? ಹೇಗಿರಬೇಕು ಹಣ್ಣಿನ ಡಯಟ್?

ಹಸಿರು ದ್ರಾಕ್ಷಿ: ಹಸಿರು ದ್ರಾಕ್ಷಿಯನ್ನು ಸಾಮಾನ್ಯವಾಗಿ ಎಲ್ಲರೂ ಹೆಚ್ಚಿನ ಪ್ರಮಾಣದಲ್ಲಿ ತಿನ್ನುತ್ತಾರೆ. ಆದರೆ ಇದರಲ್ಲಿಯೂ ಅನೇಕ ಬಗೆಯ ದ್ರಾಕ್ಷಿಗಳು ಸಿಗುತ್ತವೆ. ಕೆಲವೊಂದು ತುಂಬಾ ಸಿಹಿ (Sweet)ಯಾಗಿದ್ದರೆ, ಇನ್ನು ಕೆಲವು ತುಂಬಾನೇ ಹುಳಿ ಇರುತ್ತದೆ. ಇನ್ನು ಫ್ರೂಟ್‌ ಸಲಾಡ್‌, ಮೊಸರನ್ನ ಇವುಗಳಿಗೆ ಹಸಿರು ಬಣ್ಣದ ದ್ರಾಕ್ಷಿ ಹಾಕಲಾಗುತ್ತದೆ. ಅಧ್ಯಯನದ ಪ್ರಕಾರ 1 ಕಪ್‌ ಹಸಿರು ದ್ರಾಕ್ಷಿಯಲ್ಲಿ ಇಷ್ಟೆಲ್ಲಾ ಪೋಷಕಾಂಶಗಳಿವೆ:
ಸರಿಸುಮಾರು 104 ಕ್ಯಾಲೋರಿ
1.4 ಗ್ರಾಂ ಪ್ರೊಟೀನ್
0.2 ಗ್ರಾಂ ಕೊಬ್ಬಿನಂಶ
27ಗ್ರಾಂ ಕಾರ್ಬ್ಸ್
ಮಾತ್ರವಲ್ಲ ಇಂಥಾ ದ್ರಾಕ್ಷಿಯಲ್ಲಿ ವಿಟಮಿನ್‌ ಸಿ, ವಿಟಮಿನ್‌ ಕೆ ತುಂಬಾನೇ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವುದು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಕಪ್ಪು ದ್ರಾಕ್ಷಿ: ಕಪ್ಪು ದ್ರಾಕ್ಷಿಯಲ್ಲೂ ಹಲವು ಬಗೆಗಳಿವೆ. ಹುಳಿ ಹಾಗೂ ಸಿಹಿ ಮಿಶ್ರಿತ. ತುಂಬಾ ಹುಳಿ ಇರುವ ದ್ರಾಕ್ಷಿಯನ್ನು ಜ್ಯೂಸ್‌ ತಯಾರಿಸುವಾಗ ಹೆಚ್ಚಾಗಿ ಬಳಸಲಾಗುವುದು. ಇನ್ನು ವೈನ್‌ ತಯಾರಿಯಲ್ಲಿಯೂ ಬಳಸಲಾಗುವುದು. ಇನ್ನು ಕಪ್ಪು ಬಣ್ಣದ ಬೀಜ ಕಡಿಮೆ ಇರುವ ಅಥವಾ ಇಲ್ಲದಿರುವ ದ್ರಾಕ್ಷಿ ಸಿಗುವುದು, ಇದು ತಿನ್ನಲು ತುಂಬಾನೇ ರುಚಿಯಾಗಿರುತ್ತದೆ. 1 ಕಪ್‌ ದ್ರಾಕ್ಷಿಯಲ್ಲಿ ಸರಿಸುಮಾರು ಇಷ್ಟೆಲ್ಲಾ ಪೋಷಕಾಂಶಗಳಿರುತ್ತದೆ'
104 ಕ್ಯಾಲೋರಿ
1.1 ಗ್ರಾಂ ಪ್ರೊಟೀನ್‌
0.2 ಗ್ರಾಂ ಕೊಬ್ಬಿನಂಶವಿದೆ.
ಇದರಲ್ಲೂ ವಿಟಮಿನ್ ಕೆ ಮತ್ತು ಸಿ ಇದೆ, ಈ ದ್ರಾಕ್ಷಿ ಕ್ಯಾನ್ಸರ್‌ ಕಣಗಳನ್ನು ತಡೆಗಟ್ಟುತ್ತದೆ.

ಕಿವಿ ಹಣ್ಣನ್ನು ತಿನ್ನಿ ಆದರೆ ಸಿಪ್ಪೆ ಎಸೆಯೋ ಬದ್ಲು, ಈ ರೀತಿ ಬಳಸಿ

ಕೆಂಪು ದ್ರಾಕ್ಷಿ: ಕೆಂಪಗಿರುವ ದ್ರಾಕ್ಷಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಆದ್ರೆ ಈ ದ್ರಾಕ್ಷಿ ದುಬಾರಿ (Costly) ಕೂಡಾ ಹೌದು. ಇದನ್ನು ಜಾಮ್, ಜೆಲ್ಲಿ ಮಾಡಲು ಬಳಸುತ್ತಾರೆ. ಒಂದು ಕೆಂಪು ದ್ರಾಕ್ಷಿಯಲ್ಲೂ 104 ಕ್ಯಾಲೋರಿ, 1.1 ಗ್ರಾಂ ಪ್ರೊಟೀನ್, 0.2 ಗ್ರಾಂ ಕೊಬ್ಬಿನಂಶ, 27.3 ಗ್ರಾಂ ಕಾರ್ಬ್ಸ್, ವಿಟಮಿನ್‌ ಸಿ ಮತ್ತು ವಿಟಮಿನ್ ಕೆ ಇರುತ್ತದೆ.

ಯಾವ ದ್ರಾಕ್ಷಿಯಲ್ಲಿ ಅತ್ಯಧಿಕ ಪೋಷಕಾಂಶಗಳಿವೆ?
ಬೇಸಿಗೆಯಲ್ಲಿ (Summer) ಎಲ್ಲಾ ರೀತಿಯ ದ್ರಾಕ್ಷಿ ಲಭ್ಯವಿರುವ ಕಾರಣ ಯಾವ ದ್ರಾಕ್ಷಿಯನ್ನು ಸೇವಿಸುವುದು ಉತ್ತಮ ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡಬಹುದು. ಎಲ್ಲಾ ಬಗೆಯ ದ್ರಾಕ್ಷಿಯಲ್ಲೂ ಅತ್ಯುತ್ತಮವಾದ ಪೋಷಕಾಂಶಗಳಿವೆ, ಆದರೆ ಕಪ್ಪು ಹಾಗೂ ಕೆಂಪು ದ್ರಾಕ್ಷಿಯಲ್ಲಿ 3 ಬಗೆಯ ಪಾಲಿಫೀನೋಲ್ಸ್ ಆದ ಫೀನೋಲಿಕ್ ಆಮ್ಲ, ಫ್ಲೇವೋನಾಯ್ಡ್, resveratrol ಇರುತ್ತದೆ. ಇವುಗಳು ಉರಿಯೂತ ತಡೆಗಟ್ಟಲು, ಕ್ಯಾನ್ಸರ್ ತಡೆಗಟ್ಟಲು, ಹೃದಯ ಆರೋಗ್ಯಕ್ಕೆ ಅನುಕೂಲಕರವಾಗಿದೆ. ಆದ್ದರಿಂದ ಹಸಿರು ದ್ರಾಕ್ಷಿಗಿಂತ ಕೆಂಪು ಹಾಗೂ ಕಪ್ಪು ದ್ರಾಕ್ಷಿಸ್ವಲ್ಪ ಅಧಿಕ ಪೋಷಕಾಂಶಗಳನ್ನು ಹೊಂದಿದೆ.

ಪ್ರತಿದಿನ ದ್ರಾಕ್ಷಿ ತಿಂದರೆ ಏನೆಲ್ಲಾ ಪ್ರಯೋಜನವಿದೆ?
* ಕ್ಯಾನ್ಸರ್ ಕಣಗಳನ್ನು ತಡೆಗಟ್ಟುತ್ತದೆ
* ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತದೆ, ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ
* ಹೃದಯದ ಆರೋಗ್ಯಕ್ಕೆ ಒಳ್ಳೆಯದು
*ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
* ನೆನಪಿನ ಶಕ್ತಿಗೆ ಒಳ್ಳೆಯದು
* ಕಣ್ಣಿನ ದೃಷ್ಟಿಗೆ ಒಳ್ಳೆಯದು
* ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
* ಉರಿಯೂತ ಕಡಿಮೆ ಮಾಡುತ್ತದೆ
* ತ್ವಚೆಯ ಹೊಳಪು ಹೆಚ್ಚಿಸುತ್ತದೆ.

ಒಟ್ಟಾರೆಯಾಗಿ ನೋಡುವುದಾದರೆ ಎಲ್ಲಾ ಬಗೆಯ ದ್ರಾಕ್ಷಿಯಲ್ಲಿ ಪ್ರಮುಖ ಪೋಷಕಾಂಶಗಳು ದೊರೆಯುವುದರಿಂದ ನಿಮಗೆ ಇಷ್ಟವಾದ ದ್ರಾಕ್ಷಿಯನ್ನು ಸವಿಯಿರಿ.

Latest Videos
Follow Us:
Download App:
  • android
  • ios