ಟೀ, ಕಾಫಿಗೆ ಹಾಲು ಬೆರೆಸಿದ್ರೆ ಅದು ಆರೋಗ್ಯ ಹಾಳು ಮಾಡುತ್ತೆ ಎನ್ನುವ ಕಾರಣಕ್ಕೆ ಬ್ಲಾಕ್ ಕಾಫಿ, ಗ್ರೀನ್ ಟೀ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇದ್ರಲ್ಲಿ ಯಾವುದು ಆರೋಗ್ಯ ಲಾಭ ಹೊಂದಿದೆ ಎಂಬುದು ಜನರಿಗೆ ಗೊತ್ತಿಲ್ಲ. ಅದಕ್ಕೆ ಉತ್ತರ ಇಲ್ಲಿದೆ.
ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವ ಜನರು ಆರೋಗ್ಯಕರ ಆಹಾರ ಸೇವನೆ ಮಾಡಲು ಶುರು ಮಾಡ್ತಾರೆ. ಆರೋಗ್ಯಕ್ಕೆ ಉತ್ತಮ ಎಂದೇ ನಾವು ಕೆಲವೊಂದು ಆಹಾರ ಸೇವನೆ ಮಾಡ್ತಿರುತ್ತೇವೆ. ಆದ್ರೆ ಅದು ಎಷ್ಟರ ಮಟ್ಟಿಗೆ ಒಳ್ಳೆಯದು ಎಂಬುದನ್ನು ತಿಳಿಯುವ ಪ್ರಯತ್ನ ನಡೆಸೋದಿಲ್ಲ. ಗ್ರೀನ್ ಟಿ ಹಾಗೂ ಬ್ಲಾಕ್ ಕಾಫಿ ವಿಷ್ಯದಲ್ಲೂ ಇದು ಸತ್ಯ. ಗ್ರೀನ್ ಟೀ ಕುಡಿಯುವ ಜನರು ಇದು ಒಳ್ಳೆಯದು ಅಂದ್ರೆ ಬ್ಲಾಕ್ ಕಾಫಿ ಸೇವನೆ ಮಾಡುವ ಜನರು ಅದು ಒಳ್ಳೆಯದು ಎನ್ನುತ್ತಾರೆ. ಎರಡೂ ತಮ್ಮ ತಮ್ಮ ಸ್ಥಾನದಲ್ಲಿ ನಿಂತಾಗ ಆರೋಗ್ಯ ವೃದ್ಧಿಸುವ ಕೆಲಸ ಮಾಡುತ್ತದೆ ನಿಜ. ಆದ್ರೆ ಎರಡನ್ನೂ ಎದುರುಬದುರು ನಿಲ್ಲಿಸಿ ಪರೀಕ್ಷೆ ಮಾಡಿದಾಗ ಯಾವುದು ಹೆಚ್ಚು ಒಳ್ಳೆಯದು ಎಂಬ ಸಂಗತಿ ಹೊರಬರುತ್ತದೆ. ಯುರೋಪಿಯನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಈ ಬಗ್ಗೆ ಅಧ್ಯಯನವೊಂದು ಪ್ರಕಟವಾಗಿದೆ. ಅದ್ರಲ್ಲಿ ಯಾವುದು ಬೆಸ್ಟ್ ಎಂಬ ಬಗ್ಗೆ ಪರೀಕ್ಷೆ ನಡೆದಿದೆ.
ಗ್ಲೂಕೋಸ್ (Glucose) ಚಯಾಪಚಯ ಮತ್ತು ಉತ್ಕರ್ಷಣ ನಿರೋಧಕ ಸ್ಥಿತಿಯನ್ನು ಅಧ್ಯಯನ (Study) ದಲ್ಲಿ ಪತ್ತೆ ಮಾಡುವ ಪ್ರಯತ್ನ ನಡೆದಿದೆ. ಅಧ್ಯಯನದಲ್ಲಿ ಯಾವ ವಿಷ್ಯ ಬಹಿರಂಗವಾಗಿದೆ ಹಾಗೇ ಈ ಟೀಗಳ ಸೇವನೆಯಿಂದಾಗುವ ಲಾಭವೇನು ಎಂಬ ಮಾಹಿತಿ ಇಲ್ಲಿದೆ.
Health Tips: ಪೌಷ್ಟಿಕ ರೊಟ್ಟಿ ಆರೋಗ್ಯ ಹಾಳು ಮಾಡೋದ್ಯಾವಾಗ?
ಗ್ರೀನ್ ಟೀ (Green Tea) : ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದ ಎಲೆಗಳಿಂದ ಈ ಗ್ರೀನ್ ಟೀಯನ್ನು ತಯಾರಿಸಲಾಗುತ್ತದೆ. ಗ್ರೀನ್ ಟೀ ಕ್ಯಾಟೆಚಿನ್ ನಿಂದ ಸಮೃದ್ಧವಾಗಿದೆ. ಒಂದು ರೀತಿಯ ಉತ್ಕರ್ಷಣ ನಿರೋಧಕ ಇದಾಗಿದೆ. ಗ್ಲೂಕೋಸ್ ಚಯಾಪಚಯದ ಪ್ರಯೋಜನವನ್ನು ಇದು ನೀಡುತ್ತದೆ. ಗ್ರೀನ್ ಟೀ ಸೇವನೆ ಮಾಡುವುದ್ರಿಂದ ಹೃದಯ ಆರೋಗ್ಯದಲ್ಲಿ ನೀವು ಸಕಾರಾತ್ಮಕ ಬದಲಾವಣೆ ಕಾಣಬಹುದು. ತೂಕ ಇಳಿಸಲು ಬಯಸುವವರು ಕೂಡ ಇದನ್ನು ಧಾರಾಳವಾಗಿ ಬಳಕೆ ಮಾಡಬಹುದು. ಗ್ರೀನ್ ಟಿದಲ್ಲಿ ಕಂಡು ಬರುಯವ ಕೆಫೀನ್ ಮತ್ತು ಎಲ್-ಥೈನೈನ್ ಸಂಯೋಜನೆಯು ಮೆದುಳಿನ ಕೆಲಸವನ್ನು ಚುರುಕುಗೊಳಿಸುತ್ತದೆ. ಮನಸ್ಥಿತಿಯನ್ನು ಸುಧಾರಿಸುವ ಕೆಲಸವನ್ನು ಕೂಡ ಗ್ರೀನ್ ಟೀ ಮಾಡುತ್ತದೆ. ಗ್ರೀನ್ ಟೀ ಸೇವನೆ ಮಾಡುವುದ್ರಿಂದ ನಿಮ್ಮ ದೇಹ ಹೈಡ್ರೀಕರಣಗೊಳ್ಳುತ್ತದೆ.
ತೆಂಗಿನಕಾಯಿ ಚಿಪ್ಪಿನಲ್ಲಿ ಸಿದ್ಧವಾಗುತ್ತೆ ಇಡ್ಲಿ, ರುಚಿ ಹೇಗಿರ್ಬಹುದು ಗೆಸ್ ಮಾಡಿ!
ಬ್ಲಾಕ್ ಕಾಫಿ : ಹುರಿದ ಕಾಫಿ ಬೀಜಗಳಿಂದ ಇದನ್ನು ತಯಾರಿಸಲಾಗುತ್ತದೆ. ಬ್ಲಾಕ್ ಕಾಫಿಯಲ್ಲಿರುವ ಮಹತ್ವದ ಅಂಶವೆಂದ್ರೆ ಕೆಫೀನ್. ಆಯಾಸವನ್ನು ಕಡಿಮೆ ಮಾಡಿ, ನಿಮ್ಮ ಮೂಡ್ ಫ್ರೆಶ್ ಮಾಡುವ ಕೆಲಸವನ್ನು ಇದು ಮಾಡುತ್ತದೆ. ಇದರ ನಿಯಮಿತ ಸೇವನೆಯು ನರವೈಜ್ಞಾನಿಕ ಕಾಯಿಲೆಗಳು ಮತ್ತು ಯಕೃತ್ತಿನ ಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಚಯಾಪಚಯ ಕ್ರಿಯೆ ಸುಧಾರಿಸುವ ಜೊತೆಗೆ ಹಸಿವನ್ನು ತಡೆಯುವ ಕೆಲಸವನ್ನು ಬ್ಲಾಕ್ ಕಾಫಿ ಮಾಡುತ್ತದೆ. ಇದ್ರಿಂದ ನಿಮ್ಮ ತೂಕ ನಿಯಂತ್ರಣಕ್ಕೆ ಬರುತ್ತದೆ.
ಅಧ್ಯಯನದಲ್ಲಿ ಏನು ಪತ್ತೆಯಾಗಿದೆ? : ಅಧ್ಯಯನದಲ್ಲಿ ಗ್ಲುಕೋಸ್ ಚಯಾಪಚಯದ ವ್ಯತ್ಯಾಸವನ್ನು ಪತ್ತೆ ಮಾಡಲಾಗಿದೆ. ಎರಡೂ ಗ್ಲೂಕೋಸ್ ಚಯಾಪಚಯವನ್ನು ಸುಧಾರಿಸುತ್ತದೆಯಾದ್ರೂ ಬ್ಲಾಕ್ ಕಾಫಿಗಿಂತ ಗ್ರೀನ್ ಟಿ, ಗ್ಲುಕೋಸ್ ಚಯಾಪಚಯ ಸುಧಾರಿಸುವಲ್ಲಿ ಸ್ವಲ್ಪ ಮುಂದಿದೆ. ರಕ್ತಪ್ರವಾಹದಲ್ಲಿನ ಉತ್ಕರ್ಷಣ ನಿರೋಧಕ ಸಾಮರ್ಥ್ಯದ ಮೇಲೆ ಇವು ಹೇಗೆ ಕೆಲಸ ಮಾಡುತ್ತವೆ ಎಂಬುದನು ಕೂಡ ಪತ್ತೆ ಮಾಡಲಾಗಿದೆ. ಅಧ್ಯಯನದ ವರದಿ ಪ್ರಕಾರ, ಬ್ಲಾಕ್ ಕಾಫಿ ಹಾಗೂ ಗ್ರೀನ್ ಟೀ ಎರಡರಲ್ಲೂ ಉತ್ಕರ್ಷಣ ನಿರೋಧಕ ಸಾಮರ್ಥ್ಯ ಹೆಚ್ಚಿದೆ. ಇದ್ರಲ್ಲೂ ಕೂಡ ಒಂದು ಸಣ್ಣ ಅಂಚಿನಷ್ಟು ಗ್ರೀನ್ ಟೀ ಪರಿಣಾಮ ಹೆಚ್ಚು ಎಂದು ವರದಿಯಲ್ಲಿ ಹೇಳಲಾಗಿದೆ. ಗ್ರೀನ್ ಟೀ ಮತ್ತು ಬ್ಲಾಕ್ ಕಾಫಿಯಲ್ಲಿರುವ ಮುಖ್ಯ ವ್ಯತ್ಯಾಸ ಕೆಫೀನ್. ಬ್ಲಾಕ್ ಕಾಫಿಯಲ್ಲಿ ಇದು ಹೆಚ್ಚಿರುತ್ತದೆ. ತಕ್ಷಣ ಪ್ರೆಶ್ ಆಗ್ಬೇಕು ಎನ್ನುವವರಿಗೆ ಬ್ಲಾಕ್ ಕಾಫಿ ಬೆಸ್ಟ್. ಸೌಮ್ಯತೆಯನ್ನು ಬಯಸುವವರಿಗೆ ಗ್ರೀನ್ ಟೀ ಬೆಸ್ಟ್ ಎನ್ನುತ್ತಾರೆ ತಜ್ಞರು.
