Recipe : ಅದೇ ಕಾಯಿ ಚಟ್ನಿ ಬೋರ್ ಆದ್ರೆ ರಾಜಸ್ತಾನಿ ಬೆಳ್ಳುಳ್ಳಿ ಚಟ್ನಿ ಟ್ರೈ ಮಾಡಿ
ಪ್ರತಿ ದಿನ ಬ್ರೇಕ್ ಫಾಸ್ಟ್ ಏನು ಮಾಡ್ಬೇಕು.. ಈ ಪ್ರಶ್ನೆ ಜೊತೆ ದೋಸೆ, ಇಡ್ಲಿ, ಚಪಾತಿ ಮಾಡಿದ್ರೆ ಅದಕ್ಕೆ ಏನು ಎಂಬ ಪ್ರಶ್ನೆ ಕಾಡೋದು ಸಹಜ. ಅದೇ ಟೊಮೆಟೊ, ಶೇಂಗಾ ಚಟ್ನಿ ತಿಂದು ಸಾಕಾಗಿದೆ ಎನ್ನುವವರು ಇಲ್ಲಿರುವ ಹೊಸ ರೆಸಿಪಿ ಪ್ರಯತ್ನಿಸಿ ನೋಡಿ.
ಬೆಳ್ಳುಳ್ಳಿ ಎಂದಾಕ್ಷಣ ಅದರ ಘಮ ಮೂಗಿಗೆ ಎಟುಕದೇ ಇರದು. ಎಂತಹ ಅಡುಗೆಯಾದರೂ ಬೆಳ್ಳುಳ್ಳಿಯ ಒಂದು ಒಗ್ಗರಣೆ ಬಿದ್ದರೆ ಸಾಕು ಅದರ ಸುವಾಸನೆ ದುಪ್ಪಟ್ಟಾಗುವುದರಲ್ಲಿ ಸಂಶಯವಿಲ್ಲ. ಬೆಳ್ಳುಳ್ಳಿ ತಿನ್ನಲು ಎಷ್ಟು ರುಚಿಯೋ ಅಷ್ಟೇ ಆರೋಗ್ಯಕರ ಕೂಡ ಹೌದು. ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ-6, ವಿಟಮಿನ್-ಸಿ, ಫೈಬರ್, ಪ್ರೊಟೀನ್ ಮತ್ತು ಮ್ಯಾಂಗನೀಸ್ ಮುಂತಾದ ಪೋಷಕಾಂಶಗಳಿವೆ.
ನಾವು ತಿನ್ನುವ ಕೆಲವು ಆಹಾರ (Food) ದಿಂದಲೇ ನಮಗೆ ಸೋಂಕುಗಳು ಹರಡುತ್ತವೆ. ಬೆಳ್ಳುಳ್ಳಿ (Garlic) ಆಹಾರದ ಮೂಲಕ ನಮ್ಮ ಶರೀರವನ್ನು ಪ್ರವೇಶಿಸುವ ವೈರಸ್, ಯೀಸ್ಟ್ ಮತ್ತು ಕ್ರಿಮಿಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿಯೇ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಮೊದಲಿನಿಂದಲೂ ಬೆಳ್ಳುಳ್ಳಿಯನ್ನು ಬಳಸಲಾಗುತ್ತಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೆಳ್ಳುಳ್ಳಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಬೆಳ್ಳುಳ್ಳಿಯಿಂದ ಗ್ಯಾಸ್ಟ್ರಿಕ್ (Gastric) ಸಮಸ್ಯೆ, ಹೊಟ್ಟೆಯಲ್ಲಿ ಹುಳು, ಜ್ವರ, ನೆಗಡಿ, ಉರಿಯೂತಕ್ಕೆ ದಿವ್ಯೌಷಧವಾಗಿದೆ. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ (Cholesterol) ಅನ್ನು ನಿಯಂತ್ರಿಸುತ್ತದೆ. ಇಷ್ಟೆಲ್ಲ ಮಹತ್ವದ ಗುಣಗಳನ್ನು ಹೊಂದಿರುವ ಈ ಬೆಳ್ಳುಳ್ಳಿಯಿಂದ ರುಚಿಕರವಾದ ಚಟ್ನಿಯನ್ನು ಹೇಗೆ ತಯಾರಿಸುವುದೆಂದು ನೋಡೋಣ. ಬೆಳಗ್ಗಿನ ದೋಸೆ, ರೊಟ್ಟಿ, ಚಪಾತಿ ಮುಂತಾದ ತಿಂಡಿಗಳಿಗೆ ಚಟ್ನಿ ಬೇಕೇ ಬೇಕು. ಪ್ರತಿದಿನ ಪುದಿನ, ಕೊತ್ತುಂಬರಿ, ಈರುಳ್ಳಿ, ಟೊಮೆಟೊ ಚಟ್ನಿಗಳನ್ನು ತಿಂದು ಬೇಸತ್ತವರಿಗೆ ಈ ಚಟ್ನಿ ಹೊಸ ರುಚಿಯನ್ನು ನೀಡುತ್ತೆ. ರಾಜಸ್ತಾನಿ ಶೈಲಿಯ ಬೆಳ್ಳುಳ್ಳಿ ಚಟ್ನಿ ರುಚಿ ಮತ್ತು ಆರೋಗ್ಯ ಎರಡನ್ನೂ ಕೊಡುತ್ತೆ ಹಾಗೂ ಇದನ್ನು ತಯಾರಿಸುವುದು ಕೂಡ ಬಹಳ ಸುಲಭ.
CHAITRA NAVRATRI 2023: 9 ದಿನಗಳ ಕಾಲ ತಪ್ಪಿಯೂ ಈ ಆಹಾರ ಪದಾರ್ಥ ಸೇವನೆ ಮಾಡಬೇಡಿ!
ಬೆಳ್ಳುಳ್ಳಿ ಮತ್ತು ಮೊಸರಿನ ಚಟ್ನಿಗೆ ಬೇಕಾಗುವ ಸಾಮಗ್ರಿ : 8-10 ಬೆಳ್ಳುಳ್ಳಿ ಎಸಳು, 2 ಕಪ್ ತಾಜಾ ಮೊಸರು, 4-5 ಹಸಿಮೆಣಸು, ಒಂದು ಚಮಚ ಸಾಸಿವೆ, 5-6 ಕರಿಬೇವಿನ ಎಸಳು, 2 ಚಮಚ ಎಣ್ಣೆ, ಒಂದು ಚಮಚ ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು
ಬೆಳ್ಳುಳ್ಳಿ ಮತ್ತು ಮೊಸರಿನ ಚಟ್ನಿ ತಯಾರಿಸುವ ವಿಧಾನ : 1
• ಮೊದಲು ಬೆಳ್ಳುಳ್ಳಿಯ ಎಸಳುಗಳನ್ನು ಬಿಡಿಸಿಕೊಳ್ಳಿ.
• ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ.
• ಹಸಿಮೆಣಸನ್ನು ತೊಳೆದು ಇಟ್ಟುಕೊಳ್ಳಿ.
• ಮಿಕ್ಸಿ ಜಾರ್ ಗೆ ಹಸಿಮೆಣಸು, ಬೆಳ್ಳುಳ್ಳಿ ಮತ್ತು ಮೊಸರನ್ನು ಹಾಕಿ ಪೇಸ್ಟ್ ತಯಾರಿಸಿ.
• ಈಗ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ ಸಾಸಿವೆ ಹಾಕಿ ನಂತರ ಕರಿಬೇವಿನ ಎಲೆಯನ್ನು ಹಾಕಿ.
• ಸಾಸಿವೆ ಕರಿಬೇವಿನ ಒಗ್ಗರಣೆಯನ್ನು ಬೆಳ್ಳುಳ್ಳಿ ಮೊಸರಿನ ಪೇಸ್ಟ್ ಗೆ ಹಾಕಿ.
• ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿ.
Health Tips: ಬಿಪಿ, ಕೊಲೆಸ್ಟ್ರಾಲ್ ಕಂಟ್ರೋಲ್‌ನಲ್ಲಿಡಲು ಈ ಸ್ಪೆಷಲ್ ಟೀ ಕುಡೀರಿ ಸಾಕು
ವಿಧಾನ : 2
ಬೇಕಾಗುವ ಸಾಮಗ್ರಿ : ಬೆಳ್ಳುಳ್ಳಿ ಎಸಳು 3-4, ಒಣಮೆಣಸು, ಎರಡು ಚಮಚ ಎಣ್ಣೆ, ಒಂದು ಕಪ್ ಮೊಸರು, ಒಂದು ಇಂಚಿನಷ್ಟು ಶುಂಠಿ, 2 ಟೊಮೆಟೊ, ರುಚಿಗೆ ತಕ್ಕಷ್ಟು ಉಪ್ಪು
ಬೆಳ್ಳುಳ್ಳಿ ಮತ್ತು ಮೊಸರಿನ ಚಟ್ನಿ ತಯಾರಿಸುವ ವಿಧಾನ :
• ಮೊದಲು ಬೆಳ್ಳುಳ್ಳಿಯ ಎಸಳುಗಳನ್ನು ಬಿಡಿಸಿಕೊಳ್ಳಿ.
• ಟೊಮೆಟೊ ಮತ್ತು ಶುಂಠಿಯನ್ನು ತೊಳೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
• ಒಣಮೆಣಸನ್ನು ನೀರಿನಲ್ಲಿ ನೆನೆಸಿ ತೆಗೆದಿಡಿ.
• ಒಂದು ಬಾಣಲಿಯಲ್ಲಿ ಎರಡು ಚಮಚ ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಟೊಮೆಟೋವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ ರುಚಿಗೆ ಎಷ್ಟು ಉಪ್ಪು ಬೇಕೋ ಅಷ್ಟು ಉಪ್ಪನ್ನು ಹಾಕಿ ಎಲ್ಲವನ್ನೂ ಚೆನ್ನಾಗಿ ಹೊಂದಿಸಿ.
• ಮಿಕ್ಸ್ ಮಾಡಿದ ಪೇಸ್ಟ್ ಅನ್ನು ತಣ್ಣಗಾಗಲು ಫ್ರಿಜ್ ನಲ್ಲಿಡಿ.
• ಪೇಸ್ಟ್ ತಣ್ಣಗಾದ ನಂತರ ಅದಕ್ಕೆ ಮೊಸರನ್ನು ಹಾಕಿದರೆ ಚಟ್ನಿ ಸಿದ್ಧವಾಗುತ್ತೆ.
ಈ ಚಟ್ನಿಯನ್ನು ನೀವು ರೊಟ್ಟಿ, ಅನ್ನ ಅಥವಾ ಸ್ನ್ಯಾಕ್ಸ್ ಜೊತೆ ತಿನ್ನಬಹುದು.