ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ₹115ರ ಪೊಂಗಲ್‌ಗೆ ₹273 ಪಾವತಿಸಿದ್ದನ್ನು ಪ್ರಶ್ನಿಸಿದ್ದಾರೆ. ಆಹಾರದ ಮೂಲ ಬೆಲೆಗಿಂತ ಡೆಲಿವರಿ ಹಾಗೂ ಇತರೆ ಶುಲ್ಕಗಳು ಹೆಚ್ಚಿರುವುದರ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳ ಶುಲ್ಕ ವ್ಯವಸ್ಥೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಬೆಂಗಳೂರು: ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳ ಶುಲ್ಕ ವ್ಯವಸ್ಥೆ ಕುರಿತಾಗಿ ಮತ್ತೆ ಚರ್ಚೆ ಶುರುವಾಗಿದೆ. ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಸ್ವಿಗ್ಗಿ (Swiggy) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಆಹಾರದ ಮೂಲ ಬೆಲೆಗೆ ಹೋಲಿಸಿದರೆ ಅತಿಯಾದ ಡೆಲಿವರಿ ಹಾಗೂ ಇತರೆ ಶುಲ್ಕಗಳನ್ನು ವಿಧಿಸಿರುವುದನ್ನು ಪ್ರಶ್ನಿಸಿದ್ದಾರೆ.

ರಾಮೇಶ್ವರಂ ಕೆಫೆಯಿಂದ ಪೊಂಗಲ್ ಆರ್ಡರ್

ಸುಮಲತಾ ಅವರು ರಾಮೇಶ್ವರಂ ಕೆಫೆಯಿಂದ ಪೊಂಗಲ್ ಆರ್ಡರ್ ಮಾಡಿದ್ದರು. ಆರ್ಡರ್ ಮಾಡಿದ ಆಹಾರದ ಮೂಲ ಬೆಲೆ ₹115 ಮಾತ್ರವಾಗಿದ್ದರೂ, ಸ್ವಿಗ್ಗಿ ಮೂಲಕ ಒಟ್ಟು ₹273 ಹಣವನ್ನು ವಸೂಲಿ ಮಾಡಲಾಗಿದೆ. ಅಂದರೆ ಮೂಲ ಬೆಲೆಯಿಂದ 158 ರೂ ಹೆಚ್ಚು. ಇದರಿಂದ ಆಹಾರದ ಬೆಲೆಯಿಗಿಂತಲೂ ಹೆಚ್ಚು ಮೊತ್ತವನ್ನು ಡೆಲಿವರಿ ಹಾಗೂ ಇತರೆ ಶುಲ್ಕಗಳ ಹೆಸರಿನಲ್ಲಿ ಪಡೆಯಲಾಗುತ್ತಿದೆ ಎಂಬ ಆಕ್ಷೇಪವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅವರು ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ₹115 ಮೌಲ್ಯದ ಪೊಂಗಲ್‌ಗೆ ₹273 ಯಾಕೆ? ಆಹಾರದ ಬೆಲೆಯಿಗಿಂತ ಡಬಲ್ ಚಾರ್ಜ್ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಗ್ರಾಹಕರಿಗೆ ಪಾರದರ್ಶಕ ಬೆಲೆ ಮಾಹಿತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆಹಾರದ ಮೂಲ ಬೆಲೆಯನ್ನೇ ಮೀರಿ ಹೋಗುತ್ತಿರುವ ಶುಲ್ಕ

ಆನ್‌ಲೈನ್ ಫುಡ್ ಡೆಲಿವರಿ ಸೇವೆಗಳಲ್ಲಿ ಡೆಲಿವರಿ ಚಾರ್ಜ್, ಪ್ಯಾಕಿಂಗ್ ಶುಲ್ಕ, ಪ್ಲಾಟ್‌ಫಾರ್ಮ್ ಫೀ, ಜಿಎಸ್‌ಟಿ ಸೇರಿದಂತೆ ಹಲವು ವಿಧದ ಹೆಚ್ಚುವರಿ ಶುಲ್ಕಗಳು ಸೇರಿಸುವುದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಈ ಶುಲ್ಕಗಳು ಆಹಾರದ ಮೂಲ ಬೆಲೆಯನ್ನೇ ಮೀರಿ ಹೋಗುತ್ತಿರುವುದರಿಂದ ಗ್ರಾಹಕರ ಅಸಮಾಧಾನ ಹೆಚ್ಚುತ್ತಿದೆ.

ಸುಮಲತಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ. ಕೆಲವರು ಫುಡ್ ಡೆಲಿವರಿ ಕಂಪನಿಗಳು ಪಾರದರ್ಶಕ ದರ ವ್ಯವಸ್ಥೆಯನ್ನು ಅನುಸರಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟಾರೆ, ಸ್ವಿಗ್ಗಿ ವಿರುದ್ಧ ಸುಮಲತಾ ವ್ಯಕ್ತಪಡಿಸಿದ ಅಸಮಾಧಾನ, ಆನ್‌ಲೈನ್ ಆಹಾರ ವಿತರಣಾ ಸೇವೆಗಳ ಬೆಲೆ ನಿಗದಿಯಲ್ಲಿ ಸ್ಪಷ್ಟತೆ ಮತ್ತು ನಿಯಂತ್ರಣ ಅಗತ್ಯವಿದೆ ಎಂಬ ಚರ್ಚೆಗೆ ಮತ್ತೆ ನಾಂದಿ ಹಾಡಿದೆ.

Scroll to load tweet…