non-veg in swiggy veg order: ಬೆಂಗಳೂರಿನ ಮಹಿಳೆಯೊಬ್ಬರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಸಸ್ಯಾಹಾರಿ ಸ್ಯಾಂಡ್‌ವಿಚ್‌ನಲ್ಲಿ ಸೀಗಡಿ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿ ಕೇಸು ಗೆದ್ದಿದ್ದಾರೆ. ಅವರಿಗೆ 1 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಸಸ್ಯಾಹಾರಿ ಸ್ಯಾಂಡ್‌ವಿಚ್‌ನಲ್ಲಿ ಸೀಗಡಿ : ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಸಸ್ಯಹಾರಿ ಮಹಿಳೆಯೊಬ್ಬರು ಸ್ವಿಗ್ಗಿಯಿಂದ ಆರ್ಡರ್ ಮಾಡಿದ್ದ ಸಸ್ಯಹಾರದ ಆಹಾರದಲ್ಲಿ ಮಾಂಸಾಹಾರ ಎಂದು ಗುರುತಿಸಲ್ಪಟ್ಟ ಸೀಗಡಿ ಪತ್ತೆಯಾದ ಹಿನ್ನೆಲೆ ಕೋರ್ಟ್ ಮೇಟ್ಟಿಲೇರಿದ್ದು, ಕೇಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಗ್ರಾಹಕರ ನ್ಯಾಯಾಲಯವೂ ಮಹಿಳೆ 1ಲಕ್ಷ ರೂಪಾಯಿಯ ಪರಿಹಾರ ನೀಡುವಂತೆ ಸ್ವಿಗ್ಗಿ ಹಾಗೂ ಅವರು ಆಹಾರ ಆಯ್ಕೆ ಮಾಡಿದ್ದ ಪ್ಯಾರಿಸ್ ಪಾಣಿನಿ ಆಹಾರ ಸಂಸ್ಥೆಗೆ ಆದೇಶಿಸಿದೆ.

ರೆಸ್ಟೋರೆಂಟ್ ಪ್ಯಾರಿಸ್ ಪಾಣಿನಿ, ಸ್ವಿಗ್ಗಿ ವಿರುದ್ಧ ಕೇಸ್ ದಾಖಲಿಸಿದ್ದ ಮಹಿಳೆ

ಬೆಂಗಳೂರಿನ 37 ವರ್ಷದ ಮಹಿಳಿ ನಿಶಾ ಜಿ ಎಂಬುವವರೇ ಹೀಗೆ ಸ್ವಿಗ್ಗಿ ವಿರುದ್ಧ ಕೇಸ್ ದಾಖಲಿಸಿ ಗೆದ್ದವರು. ಪ್ರಾಣಿಗಳ ಮೇಲಿನ ಪ್ರೀತಿಯ ಕಾರಣದಿಂದಾಗಿ ನಿಶಾ ಜೀ ಅವರು ಜೀವನಪೂರ್ತಿ ಸಸ್ಯಾಹಾರವನ್ನೇ ಸೇವಿಸಬೇಕು ಎಂದು ಧೃಡ ನಿರ್ಧಾರ ಮಾಡಿದ್ದರು. ಹೀಗಾಗಿ ಅವರು ಸಸ್ಯಹಾರವನ್ನು ಮಾತ್ರ ಸೇವಿಸುತ್ತಿದ್ದರು. ಈ ಮಧ್ಯೆ ಅಂದರೆ 2024ರ ಜುಲೈ 10ರಂದು ಅವರು ಆನ್‌ಲೈನ್ ಆಹಾರ ಪೂರೈಕೆ ಸಂಸ್ಥೆಯಾದ ಸ್ವಿಗ್ಗಿಯಲ್ಲಿ ಸಸ್ಯಾಹಾರಿ ಸ್ಯಾಂಡ್‌ವಿಚ್‌ನ್ನು ಆರ್ಡರ್ ಮಾಡಿದ್ದರು. ಆದರ ಈ ಸಸ್ಯಹಾರಿ ಸ್ಯಾಂಡ್‌ವಿಚ್‌ನಲ್ಲಿ ಸೀಗಡಿ ತುಂಡುಗಳು ಸಿಕ್ಕ ನಂತರ ಅವರು ಸ್ವಿಗ್ಗಿ ಹಾಗೂ ಅವರು ಆಹಾರ ಆರ್ಡರ್ ಮಾಡಿದ್ದ ರೆಸ್ಟೋರೆಂಟ್ ಪ್ಯಾರಿಸ್ ಪಾಣಿನಿ ವಿರುದ್ಧ ಕೇಸ್ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯವೂ ಈಗ ಸ್ವಿಗ್ಗಿ ಹಾಗೂ ಪ್ಯಾರಿಸ್ ಪಾಣಿನಿ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದು, ಗ್ರಾಹಕಿಗೆ 1 ಲಕ್ಷ ರೂ. ಪರಿಹಾರವನ್ನು ನೀಡುವಂತೆ ನಿರ್ದೇಶಿಸಿದೆ.

ತಪ್ಪು ಒಪ್ಪಿಕೊಂಡಿದ್ದ ಪ್ಯಾರಿಸ್ ಪಾಣಿನಿ:

ಸಸ್ಯಹಾರಿ ಸ್ಯಾಂಡ್‌ವಿಚ್‌ನಲ್ಲಿ ಸೀಗಡಿ ಸಿಕ್ಕಿದ ನಂತರ ಭಯ ಹಾಗೂ ಶುದ್ಧೀಕರಣದ ಆಚರಣೆ ಮಾಡುವಂತಾಯ್ತು ಸ್ಯಾಂಡ್‌ವಿಚ್ ಸೇವಿಸಿದಾಗ ಬೇರೆಯದೇ ರುಚಿ ಅನುಭವ ಆಯ್ತು. ನಂತರ ಪರಿಶೀಲಿಸಿದಾಗ ಸ್ಯಾಂಡ್ವಿಚ್ ಒಳಗೆ ಸೀಗಡಿ ತುಂಡುಗಳು ಕಂಡುಬಂದವು ಎಂದು ಅವರು ಹೇಳಿದ್ದಾರೆ. ಈ ಘಟನೆಯ ಮರುದಿನ ಗ್ರಾಹಕಿ ನಿಶಾ ಅವರು ಪ್ಯಾರಿಸ್ ಪಾಣಿನಿ ಔಟ್ಲೆಟ್‌ಗೆ ಭೇಟಿ ನೀಡಿದಾಗ, ಅಲ್ಲಿ ವ್ಯವಸ್ಥಾಪಕರು ಅವರಿಗಾದ ಗೊಂದಲವನ್ನು ಒಪ್ಪಿಕೊಂಡರಲ್ಲದೇ ಭಾರೀ ಜನದಟ್ಟನೆಯ ಕಾರಣದಿಂದ ಹೀಗಾಗಿದೆ ಎಂದು ಹೇಳಿದರು. ಅಲ್ಲದೇ ಇದಕ್ಕೆ ಬದಲಾಗಿ ಬೇರೆ ನೀಡುವುದಾಗಿ ಹೇಳಿದರು. ಆದರೆ ನಿಶಾ ಅವರು ರೆಸ್ಟೋರೆಂಟ್ ಮನವಿ ತಿರಸ್ಕರಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಘಟನೆಯಿಂದ ಅವಮಾನ ಮತ್ತು ಆಧ್ಯಾತ್ಮಿಕ ಭಾವನೆಗೆ ಘಾಸಿಯಾಗಿದೆ ಎಂದು ನಿಶಾ ಹೇಳಿದ್ದಾರೆ.

2024 ರ ಜುಲೈ 20ರಂದೇ ನಿಶಾ ಸ್ವಿಗ್ಗಿ ಮತ್ತು ಪ್ಯಾರಿಸ್ ಪಾಣಿನಿ ಸಂಸ್ಥಗೆ ಕಾನೂನು ನೋಟಿಸ್‌ಗಳನ್ನು ಕಳುಹಿಸಿದರು, ಆದರೆ ಎರಡೂ ಸಂಸ್ಥೆಗಳು ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ. ನಂತರ 2024ರ ಆಗಸ್ಟ್ 22ರಂದು ಸೇವೆಯಲ್ಲಿನ ಕೊರತೆ ಮತ್ತು ನಂಬಿಕೆ ದ್ರೋಹವನ್ನು ಆರೋಪಿಸಿ ನಿಶಾ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದು, ತಮಗಾದ ಅನ್ಯಾಯಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರಿದ್ದರು.

ಕೋರ್ಟ್‌ನಲ್ಲಿ ಸ್ವಿಗ್ಗಿ, ಪ್ಯಾರಿಸ್ ಪಾಣಿನಿ ಹೇಳಿದ್ದೇನು?

ಕೋರ್ಟ್ ವಿಚಾರಣೆ ಸಮಯದಲ್ಲಿ ಸ್ವಿಗ್ಗಿ ಸಂಸ್ಥೆ ತಾನು ಗ್ರಾಹಕರನ್ನು ರೆಸ್ಟೋರೆಂಟ್‌ಗಳಿಗೆ ಸಂಪರ್ಕ ಕಲ್ಪಿಸುವ ತಂತ್ರಜ್ಞಾನ ಮಧ್ಯವರ್ತಿ ಮಾತ್ರ ಎಂದು ವಾದಿಸಿದರು ಮತ್ತು ಈ ಮಾರಾಟದ ಒಪ್ಪಂದವು ಖರೀದಿದಾರ ಮತ್ತು ರೆಸ್ಟೋರೆಂಟ್ ನಡುವೆ ಮಾತ್ರ ಇರುತ್ತದೆ ಎಂದರು. ಇತ್ತ ರೆಸ್ಟೋರೆಂಟ್ ಪ್ಯಾರಿಸ್ ಪಾಣಿನಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಇದು ಜನದಟ್ಟಣೆಯ ಸಮಯದಲ್ಲಿ ಆದಂತಹ ಯಾವುದೇ ಉದ್ದೇಶಪೂರ್ವಕವಾಗಿ ಮಾಡದ ತಪ್ಪು ಎಂದರು. ಹಾಗೂ ನಾವು ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ಆಹಾರವನ್ನು ನೀಡುವುದರಿಂದ ಸಾಮಾನ್ಯ ಸಸ್ಯಾಹಾರಿಗಳು ನಮ್ಮ ರೆಸ್ಟೋರೆಂಟ್ ಅನ್ನು ಆಯ್ಕೆ ಮಾಡುತ್ತಿರಲಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದರು.

ಈ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ದೂರುಗಳ ಪರಿಹಾರ ಆಯೋಗವು, ಸಸ್ಯಾಹಾರಿಗಳಿಗೆ ಮಾಂಸಾಹಾರಿ ಆಹಾರವನ್ನು ತಲುಪಿಸುವುದು ಸೇವೆಯಲ್ಲಿನ ಗಂಭೀರ ಕೊರತೆ ಎಂದು ತೀರ್ಪು ನೀಡಿತು. ಸಸ್ಯಾಹಾರಿ ಅಥವಾ ಧರ್ಮ, ಸಂಸ್ಕೃತಿ ಅಥವಾ ಆರೋಗ್ಯದ ಆಧಾರದ ಮೇಲೆ ಕೆಲವು ಆಹಾರ ನಿರ್ಬಂಧಗಳನ್ನು ಹೊಂದಿರುವ ವ್ಯಕ್ತಿಗೆ ಮಾಂಸಾಹಾರಿ ಆಹಾರವನ್ನು ಕಳುಹಿಸುವ ಕ್ರಿಯೆಯನ್ನು ಹಗುರವಾಗಿ ಪರಿಗಣಿಸಲಾಗುವುದಿಲ್ಲ, ಅಂತಹ ನಿರ್ಲಕ್ಷ್ಯವು ಭಾವನಾತ್ಮಕ, ಧಾರ್ಮಿಕ ಮತ್ತು ಮಾನಸಿಕ ಪರಿಣಾಮಗಳನ್ನು ಬೀರುತ್ತದೆ ಗ್ರಾಹಕ ನ್ಯಾಯಾಲಯವೂ ತನ್ನ ತೀರ್ಪಿನಲ್ಲಿ ಹೇಳಿದೆ. ಜೊತೆಗೆ ಸ್ವಿಗ್ಗಿ ಮತ್ತು ಪ್ಯಾರಿಸ್ ಪಾಣಿನಿಗೆ ಜಂಟಿಯಾಗಿ ಗ್ರಾಹಕಿಗೆ ಪರಿಹಾರವಾಗಿ 50,000 ರೂ., ಮಾನಸಿಕ ಯಾತನೆಗೆ 50,000 ರೂ., ಮೊಕದ್ದಮೆ ವೆಚ್ಚಕ್ಕೆ 5,000 ರೂ. ಮತ್ತು ಸ್ಯಾಂಡ್‌ವಿಚ್ ಖರೀದಿಗೆ ನೀಡಿದ 146 ರೂಪಾಯಿಗೆ 12 ಶೇಕಡಾ ಬಡ್ಡಿಯೊಂದಿಗೆ ಮರುಪಾವತಿಸುವಂತೆ ಕೋರ್ಟ್ ನಿರ್ದೇಶಿಸಿದೆ.

ಇದನ್ನೂ ಓದಿ: ವೇದಿಕೆಯಲ್ಲಿ ಮಾತು ಮುಗಿಸುತ್ತಿದ್ದಂತೆ ಕುಸಿದು ಬಿದ್ದು ವೆಬ್ ಡೆವಲಪರ್ ಸಾವು: ಕೊನೆಕ್ಷಣ ವೈರಲ್

ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಭಾರತೀಯ ಮೆಕ್ಕಾ ಯಾತ್ರಿಕರ ಬಸ್ ದುರಂತ: ನ ಒಂದೇ ಕುಟುಂಬ ಮೂರು ತಲೆಮಾರಿನ 18 ಜನ ಸಾವು