Rice Poha Bonda: ಮೈದಾ ಅಥವಾ ಸೋಡಾ ಬಳಸದೆ ಅಕ್ಕಿ-ಅವಲಕ್ಕಿ ಬಳಸಿ ಸ್ನಾಕ್ಸ್ ಮಾಡುವುದು ತುಂಬಾ ಸುಲಭ. ಹೊರಗಡೆ ಗರಿಗರಿಯಾಗಿ, ಒಳಗಡೆ ಮೃದುವಾಗಿ ಪರ್ಫೆಕ್ಟ್ ಆಗಿ ಬರಲು ಈ ಕೆಳಗಿನ ಸಿಂಪಲ್ ಟಿಪ್ಸ್ ಫಾಲೋ ಮಾಡಿ..
ಬೆಳಗಿನ ಉಪಹಾರಕ್ಕೆ ಅಥವಾ ಸಂಜೆಯ ಚಹಾ ಸಮಯಕ್ಕೆ ಗರಿಗರಿಯಾದ, ರುಚಿಕರವಾದ ತಿಂಡಿ ಬೇಕೆನಿಸಿದರೆ, ಮನೆಯಲ್ಲಿರುವ ಅಕ್ಕಿ ಮತ್ತು ಅವಲಕ್ಕಿ ಬಳಸಿ ಸುಲಭವಾಗಿ ಸ್ನಾಕ್ಸ್ ತಯಾರಿಸಬಹುದು. ಈ ತಿಂಡಿಯ ಪ್ರಮುಖ ವಿಶೇಷವೆಂದರೆ ಇದಕ್ಕೆ ಕಡಲೆಹಿಟ್ಟು, ಮೈದಾ, ಮೊಸರು ಅಥವಾ ಅಡುಗೆ ಸೋಡಾ ಯಾವುದನ್ನೂ ಬಳಸುವ ಅವಶ್ಯಕತೆ ಇಲ್ಲ.
ಬೇಕಾಗುವ ಸಾಮಗ್ರಿಗಳು
ಅಕ್ಕಿ (ರೇಷನ್ ಅಕ್ಕಿ ಅಥವಾ ಮಾಮೂಲಿ ಅಕ್ಕಿ): 1 ಕಪ್
ಅವಲಕ್ಕಿ: 1/2 ಕಪ್
ಈರುಳ್ಳಿ: 1 (ದಪ್ಪ ಸೈಜ್, ಸಣ್ಣಗೆ ಹೆಚ್ಚಿದ್ದು)
ಜೀರಿಗೆ: 1/2 ಚಮಚ
ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು: ರುಚಿಗೆ ತಕ್ಕಷ್ಟು
ಉಪ್ಪು ಹಾಗೂ ಎಣ್ಣೆ: ಅಗತ್ಯಕ್ಕೆ ತಕ್ಕಷ್ಟು
ತಯಾರಿಸುವ ವಿಧಾನ
ಹಿಟ್ಟಿನ ತಯಾರಿ
ಒಂದು ಕಪ್ ಅಕ್ಕಿ ಮತ್ತು ಅರ್ಧ ಕಪ್ ಅವಲಕ್ಕಿಯನ್ನು ಸುಮಾರು 2 ಗಂಟೆಗಳ ಕಾಲ ಚೆನ್ನಾಗಿ ತೊಳೆದು ನೆನೆಸಿಡಬೇಕು. ನಂತರ ನೀರನ್ನು ಸಂಪೂರ್ಣವಾಗಿ ಬಸಿದು, ಮಿಕ್ಸಿ ಜಾರ್ಗೆ ಹಾಕಿ ಅತ್ಯಂತ ಕಡಿಮೆ ನೀರು ಸೇರಿಸಿ ಸ್ವಲ್ಪ ಗಟ್ಟಿಯಾಗಿ (ಮೀಡಿಯಂ ಆಗಿ) ರುಬ್ಬಿಕೊಳ್ಳಬೇಕು.
ಮಸಾಲೆ ಮಿಶ್ರಣ
ರುಬ್ಬಿದ ಹಿಟ್ಟಿಗೆ ಹೆಚ್ಚಿದ ಈರುಳ್ಳಿ, ಜೀರಿಗೆ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. (ಹಿಟ್ಟು ತೆಳುವಾದರೆ 1-2 ಚಮಚ ಒಣ ಅಕ್ಕಿಹಿಟ್ಟು ಸೇರಿಸಿಕೊಳ್ಳಬಹುದು). ಇದನ್ನು 15 ರಿಂದ 20 ನಿಮಿಷಗಳ ಕಾಲ ನೆನೆಯಲು ಬಿಡಬೇಕು.
ಕರೆಯುವ ವಿಧಾನ
ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಉರಿಯನ್ನು ಕಡಿಮೆ ಮಾಡಿಕೊಂಡು ಕೈಯನ್ನು ಸ್ವಲ್ಪ ನೀರಿನಿಂದ ತೇವ ಮಾಡಿಕೊಂಡು ಸಣ್ಣ ಸಣ್ಣ ಉಂಡೆಗಳ ರೂಪದಲ್ಲಿ ಹಿಟ್ಟನ್ನು ಎಣ್ಣೆಗೆ ಬಿಡಬೇಕು. ನಂತರ ಉರಿಯನ್ನು ಹದವಾಗಿಟ್ಟುಕೊಂಡು ಎರಡೂ ಬದಿ ಗೋಲ್ಡನ್ ಬಣ್ಣ ಬರುವವರೆಗೆ ಕರಿದರೆ ಗರಿಗರಿಯಾದ ಬೋಂಡಾ ಸಿದ್ಧವಾಗುತ್ತದೆ.
ಕಾಂಬಿನೇಷನ್ ಟೊಮೊಟೊ ಚಟ್ನಿ
ಬಾಣಲೆಯಲ್ಲಿ ಎಣ್ಣೆ ಹಾಕಿ ಈರುಳ್ಳಿ, ಬೆಳ್ಳುಳ್ಳಿ, ಒಣಮೆಣಸಿನಕಾಯಿ ಹಾಗೂ 3 ಹಣ್ಣಾದ ಟೊಮೊಟೊ, ಕರಿಬೇವು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು.
ಕೊನೆಯಲ್ಲಿ ಸ್ವಲ್ಪ ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ಮಿಶ್ರಣ ತಣ್ಣಗಾದ ಮೇಲೆ ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.
ಇದಕ್ಕೆ ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ನೀಡಿದರೆ ರುಚಿಕರವಾದ ಟೊಮೊಟೊ ಚಟ್ನಿ ಸಿದ್ಧ.
ಸವಿಯುವ ಬಗೆ
ಬಿಸಿಬಿಸಿಯಾದ ಈ ಅಕ್ಕಿ-ಅವಲಕ್ಕಿ ಬೋಂಡಾವನ್ನು ಹುಳಿ-ಖಾರವಾದ ಟೊಮೊಟೊ ಚಟ್ನಿ ಮತ್ತು ಈರುಳ್ಳಿಯೊಂದಿಗೆ ಸವಿಯಲು ಅತ್ಯಂತ ಅದ್ಭುತವಾಗಿರುತ್ತದೆ. ಕಡಿಮೆ ಸಮಯದಲ್ಲಿ ಆರೋಗ್ಯಕರವಾಗಿ ಮನೆಯಲ್ಲೇ ಮಾಡಬಹುದಾದ ಉತ್ತಮ ಸ್ನಾಕ್ಸ್ ಇದಾಗಿದೆ.
ಇದು ಗಮನದಲ್ಲಿರಲಿ
ಹಿಟ್ಟು ತೆಳುವಾದರೆ
ರುಬ್ಬುವಾಗ ನೀರು ಹೆಚ್ಚಾಗಿ ಹಿಟ್ಟು ತೆಳುವಾದರೆ ಅಥವಾ ಬೋಂಡಾ ಎಣ್ಣೆ ಕುಡಿಯುತ್ತದೆ ಅನ್ನಿಸಿದರೆ, 1-2 ಚಮಚ ಅಕ್ಕಿಹಿಟ್ಟು ಅಥವಾ ಚಿರೋಟಿ ರವೆ ಸೇರಿಸಿ ಕಲಸಿ.
ಎಣ್ಣೆ ಹೀರಿಕೊಳ್ಳದಂತೆ ಕರೆಯಲು
ಎಣ್ಣೆ ಚೆನ್ನಾಗಿ ಕಾದ ನಂತರವೇ ಉರಿ ಮಧ್ಯಮ ಮಾಡಿಕೊಂಡು ಬೋಂಡಾ ಹಾಕಿ. ತಣ್ಣನೆಯ ಎಣ್ಣೆಗೆ ಹಾಕಿದರೆ ಬೋಂಡಾ ಎಣ್ಣೆ ಹೀರಿಕೊಳ್ಳುತ್ತದೆ.
ಎಣ್ಣೆಗೆ ಬಿಡುವಾಗ ಕೈಗೆ ಹಿಟ್ಟು ಅಂಟಿಕೊಳ್ಳದಂತೆ
ಪ್ರತಿ ಬಾರಿ ಹಿಟ್ಟನ್ನು ಕೈಗೆ ತೆಗೆದುಕೊಳ್ಳುವ ಮುನ್ನ ನಿಮ್ಮ ಕೈಯನ್ನು ಸ್ವಲ್ಪ ನೀರಿನಲ್ಲಿ ಅದ್ದಿ (ತೇವ ಮಾಡಿಕೊಂಡು) ನಂತರ ಹಿಟ್ಟು ತೆಗೆದುಕೊಂಡು ಎಣ್ಣೆಗೆ ಬಿಡಿ. ಇದರಿಂದ ಹಿಟ್ಟು ಕೈಗೆ ಅಂಟದೆ ಗುಂಡಗೆ, ಸುಲಭವಾಗಿ ಎಣ್ಣೆಗೆ ಬೀಳುತ್ತದೆ.




