ಫೈವ್ ಸ್ಟಾರ್ ಹೊಟೇಲಲ್ಲೇ ಫ್ರೀ ಫುಡ್ ತಿನ್ನುತ್ತೆ ಈ ಜೋಡಿ! ಟ್ರಿಕ್ ಕೇಳಿ ದಂಗಾದ ನೆಟ್ಟಿಗರು
ಹೊಟ್ಟೆಗೆ ಹಿಟ್ಟಿಲ್ಲ ಎನ್ನುವ ಸಮಯದಲ್ಲಿ ಕದ್ದು ತಿಂದ್ರೂ ಅದು ದೊಡ್ಡ ಅಪರಾಧವಾಗದಿರಬಹುದು. ಆದ್ರೆ ಕೈನಲ್ಲಿ ಹಣವಿದ್ರೂ, ದುಬಾರಿ ಬಟ್ಟೆ ಧರಿಸುವ ವ್ಯಕ್ತಿಗಳು ದುಡಿದು ತಿನ್ನುವ ಜನರಿಗೆ ಮೋಸ ಮಾಡಿದ್ರೆ ಅದನ್ನು ಸಹಿಸೋದು ಕಷ್ಟ. ಈಗ ಈ ದಂಪತಿಯೊಬ್ಬರ ಕೆಲಸ ಎಲ್ಲರ ಕಣ್ಣು ಕೆಂಪು ಮಾಡಿದೆ.
ಫೈವ್ ಸ್ಟಾರ್ ಹೊಟೇಲ್ ನಲ್ಲಿ ಆಹಾರ ಸೇವನೆ ಮಾಡ್ಬೇಕು (Having Food at FIve Star Hotel) ಅಂದ್ರೆ ತನ್ನ ಜೇಬು ತುಂಬಿರಬೇಕು. ಬ್ಯಾಂಕ್ ಬ್ಯಾಲೆನ್ಸ್ (Bank Balance) ಹೆಚ್ಚಿದ್ದವರು ಮಾತ್ರ ಹೊಟೇಲ್‌ಗೆ ಹೋಗುವ ಧೈರ್ಯ ಮಾಡ್ತಾರೆ. ಕೆಲವರು ಕೈನಲ್ಲಿ ಹಣ ಇರಲಿ ಬಿಡಲಿ, ತಮ್ಮದೇ ಟ್ರಿಕ್ಸ್ ಉಪಯೋಗಿಸಿ ಫೈವ್ ಸ್ಟಾರ್ ಹೊಟೇಲ್ ನಲ್ಲಿ ಆಹಾರ ತಿಂದು ಬರ್ತಾರೆ. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದ. ಆತನ ಟ್ರಿಕ್ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಹೊಟೇಲಲ್ಲಿ ಆಹಾರ ತಿಂದ್ಮೇಲೆ, ಇನ್ನೇನು ಬಿಲ್ ಬರುತ್ತೆ ಎನ್ನುವ ಸಮಯದಲ್ಲಿ ಹಾರ್ಟ್ ಹಿಡಿದುಕೊಂಡು ನೋವು ನೋವು ಅಂತ ಕಿರುಚಾಡುತ್ತಿದ್ದ. ಈ ಸಮಯದಲ್ಲಿ ಆತನನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನವನ್ನು ಹೊಟೇಲ್ ಸಿಬ್ಬಂದಿ ಮಾಡ್ತಿದ್ದರು. ಯಾರೂ ಆತನ ಬಳಿ ಆಹಾರದ ಬಿಲ್ ಕೇಳಲು ಬರ್ತಿರಲಿಲ್ಲ. ಆದ್ರೆ ಈತನ ಚಾಲಾಕಿತನ ತುಂಬಾ ದಿನ ನಡೆಯಲಿಲ್ಲ. ಒಮ್ಮೆ ಹೊಟೇಲ್ ಮಾಲೀಕನ ಕೈಗೆ ಸಿಕ್ಕಿ ಬಿದ್ದಿದ್ದ. ಈಗ ಇಂಥಹದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಆದ್ರೆ ಫೈವ್ ಸ್ಟಾರ್ ಹೊಟೇಲ್ ಗೆ ಮೋಸ ಮಾಡ್ತಿರುವ ದಂಪತಿ ಪೊಲೀಸ್ ಕೈಗೆ ಸಿಕ್ಕಿಬಿದ್ದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ದಂಪತಿ ಸುದ್ದಿಯಾಗಿದ್ದಾರೆ.
ಸಾಮಾಜಿಕ ಜಾಲತಾಣ (Social Network) ಎಕ್ಸ್ ನಲ್ಲಿ ಉದಿತ್ ಭಂಡಾರಿ ಎಂಬ ವ್ಯಕ್ತಿ ದಂಪತಿ ಕಥೆಯನ್ನು ಹಂಚಿಕೊಂಡಿದ್ದಾರೆ. ಗುರುಗ್ರಾಮ್ (Gurugram) ಗೆ ಸ್ನೇಹಿತರ ಪಾರ್ಟಿಯೊಂದಕ್ಕೆ ಹೋದಾಗ ಈ ದಂಪತಿ ಸಿಕ್ಕಿದ್ದಾರೆ. ಅವರು ಫೈವ್ ಸ್ಟಾರ್ (Five Star) ಹೊಟೇಲ್ ಸಿಬ್ಬಂದಿಗೆ ಮೋಸ ಮಾಡಿ ಹೇಗೆ ಆಹಾರವನ್ನು ಉಚಿತವಾಗಿ ತಿನ್ನುತ್ತೇವೆ ಎಂಬುದನ್ನು ಹೇಳಿದ್ದಾರೆ.
ಸಿಕ್ಕಾಪಟ್ಟೆ ನೀರು ಕುಡಿದ್ರೆ ಏನಾಗುತ್ತೆ? ಓವರ್ ಹೈಡ್ರೇಶನ್‌ನ ಲಕ್ಷಣಗಳು..
ಉದಿತ್ ಭಂಡಾರಿ ಪ್ರಕಾರ, ಈ ದಂಪತಿ ಹೊಟೇಲ್ ಗೆ ಹೋಗಿ ದುಬಾರಿ ಆಹಾರವನ್ನು ಆರ್ಡರ್ ಮಾಡ್ತಾರೆ. ಆಹಾರವನ್ನು ಅರ್ಧ ತಿಂದ ನಂತ್ರ ಅದಕ್ಕೆ ತಾವು ತಂದಿದ್ದ ಸತ್ತ ನೊಣವನ್ನು ಹಾಕ್ತಾರೆ. ಆ ನಂತ್ರ ಹೊಟೇಲ್ ಸಿಬ್ಬಂದಿ ಕರೆದು, ಆಹಾರದಲ್ಲಿ ಸತ್ತ ನೊಣವಿದೆ ಎಂದು ಗಲಾಟೆ ಮಾಡ್ತಾರೆ. ಹೆಸರು ಹಾಳಾಗೋದನ್ನು ತಪ್ಪಿಸಿಕೊಳ್ಳಲು ಹೊಟೇಲ್ ಸಿಬ್ಬಂದಿ ಅವರ ಬಾಯಿ ಮುಚ್ಚಿಸಲೆತ್ನಿಸುತ್ತಾರೆ. ಸರ್ವ್ ಮಾಡಿದ ಆಹಾರಕ್ಕೆ ಬಿಲ್ ನೀಡದೆ ದಂಪತಿಯನ್ನು ವಾಪಸ್ ಕಳಿಸ್ತಾರೆ. ಹೊಟ್ಟೆ ತುಂಬ ತಿಂದಿದ್ದೂ ಆಯ್ತು, ಹಣವೂ ಖಾಲಿಯಾಗಲಿಲ್ಲ ಎನ್ನುವ ಖುಷಿಯಲ್ಲಿ ದಂಪತಿ ಮನೆಗೆ ಬರ್ತಾರೆ.
ಈ ವಿಷ್ಯವನ್ನು ಬರೆದ ಉದಿತ್ ಭಂಡಾರಿ, ಈ ದಂಪತಿಗೆ ತಾವು ಮಾಡುವ ಕೆಲಸದಲ್ಲಿ ಖುಷಿ ಸಿಗ್ತಿದೆ. ಹಾಗಂತ ಅವರು ಬಡವರಲ್ಲ. ಇಬ್ಬರ ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇದೆ. ಫೈವ್ ಸ್ಟಾರ್ ಹೊಟೇಲ್ ಗೆ ಮೋಸ ಮಾಡೋದನ್ನು ಇವರು ಖುಷಿಯಾಗಿ ಹೇಳ್ತಿದ್ದರು ಎಂದು ಬರೆದಿದ್ದಾರೆ.
ಇವುಗಳನ್ನು ತಿಂದ್ರೆ 50ರ ಹರೆಯದ ಮಹಿಳೆ, 20ರ ಯುವತಿಯಂತೆ ಸ್ಟ್ರಾಂಗ್ ಆಗ್ತಾರೆ!
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ನೂರಾರು ಮಂದಿ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಅನೇಕರು ಇದನ್ನು ಮೋಸ ಎಂದಿದ್ದಾರೆ. ಕೆಲ ಶ್ರೀಮಂತ ವ್ಯಕ್ತಿಗಳು ಕೂಡ ಇಂಥ ಕೆಲಸ ಮಾಡ್ತಾರೆ. ಹೊಟೇಲ್ ಗೆ ಬಂದು ಆಹಾರ ಅರ್ಧ ತಿಂದ್ಮೇಲೆ ಅದು ಬಿದ್ದಿದೆ, ಇದು ಬಿದ್ದಿದೆ ಅಂತ ಸಬೂಬು ಹೇಳಿ ಇನ್ನೊಂದು ಪ್ಲೇಟ್ ಉಚಿತವಾಗಿ ತರಿಸಿಕೊಂಡು ತಿನ್ನುತ್ತಾರೆ. ಇದ್ರಿಂದ ಹೊಟೇಲ್ ಮಾಲೀಕರಿಗೆ ಸಾಕಷ್ಟು ನಷ್ಟವಾಗ್ತಿದೆ ಎಂದು ಅನೇಕರು ದೂರಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ದಂಪತಿಗೆ ಹಣದ ಕೊರತೆಯಿಲ್ಲ. ಆದರೆ ನೈತಿಕತೆಯ ದೊಡ್ಡ ಕೊರತೆ ಇದೆ ಎಂದು ಕಮೆಂಟ್ ಮಾಡಿದ್ದಾರೆ.