ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಹೊಸದಾಗಿ ಆರಂಭವಾದ ರಾಮೇಶ್ವರಂ ಕೆಫೆ, ಉದ್ಘಾಟನೆಯ ಅಂಗವಾಗಿ ಉಚಿತ ಊಟದ ವ್ಯವಸ್ಥೆ ಮಾಡಿತ್ತು. ಈ ಉಚಿತ ಊಟಕ್ಕಾಗಿ ಸುಡು ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಜನರು ಕಿಲೋಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದು, ಈ ದೃಶ್ಯದ ವಿಡಿಯೋ ವೈರಲ್ ಆಗಿದೆ.

ಉಚಿತ ಎಂದ್ರೆ ಸಾಕು ಬಹುತೇಕ ಎಲ್ಲರ ಕಿವಿಗಳೂ ನೆಟ್ಟಗಾಗುತ್ತವೆ, ಕಣ್ಣುಗಳು ಅರಳಿಬಿಡುತ್ತವೆ. ಏಕೆಂದ್ರೆ ಈ ಶಬ್ದದಲ್ಲಿಯೇ ಅದು ಏನೋ ಒಂಥರಾ ಮಾಯೆ ಇದೆ. ಇದೇ ಕಾರಣಕ್ಕೆ ಉಚಿತ ಎನ್ನೋದು ರಾಜಕಾರಣಿಗಳಿಗೆ ದೊಡ್ಡ ವರದಾನವಾಗಿಬಿಟ್ಟಿದೆ. 'ಒಂದಿಷ್ಟು ಬೀಸಾಕಿದ್ರೆ ಸಾಕು, ವೋಟ್​ ಬರತ್ತೆ' ಎನ್ನುವಂಥ ಕೀಳು ಮಾತುಗಳನ್ನೂ ಅದೆಷ್ಟೋ ರಾಜಕಾರಣಿಗಳು ಆಡುವುದು ಉಂಟು. ಅದಕ್ಕೆ ತಕ್ಕಂತೆ ನಮ್ಮ ಮತದಾರರು ಕೂಡ ಕೊಟ್ಟದ್ದನ್ನು ಪ್ರಸಾದ ಎಂದು ಸ್ವೀಕರಿಸಿ ಮತ ಹಾಕುವುದೂ ಉಂಟು. ಅಷ್ಟಕ್ಕೂ ಇದೇನು ಇಂದು, ನಿನ್ನೆಯ ಮಾತಲ್ಲ ಬಿಡಿ. ಫ್ರೀ ಆಗಿ ಸಿಗತ್ತೆ ಎಂದರೆ ಏನನ್ನೂ ಬಿಡಲ್ಲ ಒಂದಿಷ್ಟು ಮಂದಿ. ಅದಕ್ಕೆ ಸಾಕ್ಷಿಯಾಗಿ ನಿಂತಿರೋದೇ ಈ ವಿಡಿಯೋ.

Add Asianetnews Kannada as a Preferred SourcegooglePreferred

ರಾಮೇಶ್ವರಂ ಕೆಫೆ

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ರಾಮೇಶ್ವರಂ ಕೆಫೆ ಹೊಸದಾಗಿ ಉದ್ಘಾಟನೆಗೊಂಡಿದೆ. ಜನರನ್ನು ಆಕರ್ಷಿಸುವ ಸಲುವಾಗಿ ಯಾವುದೇ ಮಳಿಗೆಗಳು, ಹೋಟೆಲ್​ಗಳು ಸೇರಿ ಯಾವುದೇ ವ್ಯಾಪಾರಸ್ಥರು ಒಂದಷ್ಟು ದಿನ ಆಕರ್ಷಕ ಕೊಡುಗೆ ನೀಡುವುದು ಸರ್ವೇ ಸಾಮಾನ್ಯ. ಡಿಸ್ಕೌಂಟ್​ಗಳ ಭರಾಟೆಯೂ ಇರುತ್ತದೆ. ಇದು ಜನರನ್ನು ಸೆಳೆದುಕೊಳ್ಳುವ ತಂತ್ರ. ಹೀಗೆ ಡಿಸ್ಕೌಂಟ್​ಗೆ ಬರುವ ಜನರ ಪೈಕಿ ಕೆಲವರಾದರೂ ತಮ್ಮ ಕಾಯಂ ಗಿರಾಕಿಗಳಾಗುತ್ತಾರೆ ಎನ್ನುವುದು ಅವರಿಗೆ ತಿಳಿದಿರುತ್ತದೆ. ಇದು ಮಾರುಕಟ್ಟೆಯ ತಂತ್ರ, ಬಿಜಿನೆಸ್​ ಟೆಕ್ನಿಕ್​. ಇದು ಅವರಿಗೆ ಅವಶ್ಯಕವೂ ಹೌದು, ಅನಿವಾರ್ಯವೂ ಹೌದು.

ಫ್ರೀ ಊಟ

ಅದೇ ರೀತಿ ಇದೀಗ ರಾಮೇಶ್ವರಂ ಕೆಫೆ ಹಾಗೆಯೇ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಫ್ರೀ ಊಟದ ವ್ಯವಸ್ಥೆ ಮಾಡಿತ್ತು. ಇಂಥ ಆಫರ್​ ಕೊಟ್ಟಾಗ ಅದು ಹೇಗೆ ಜನರಿಗೆ ತಲುಪುತ್ತದೆಯೋ ಆ ದೇವರೇ ಬಲ್ಲ ಎಂದು ಹೇಳುವವರೇ ಹಲವರು. ಯಾವುದಾದರೂ ಮಹತ್ವದ ಮಾಹಿತಿ ಕೊಟ್ಟರೆ ಜನರಿಗೆ ಅದು ಗೊತ್ತಾಗುವುದೇ ಇಲ್ಲ. ಆದರೆ ಉಚಿತದ ಬಗ್ಗೆ ಎಲ್ಲೋ ಒಂದು ಕಡೆ ಚಿಕ್ಕ ಬೋರ್ಡ್​ ಹಾಕಿದ್ರೂ ಸಾಕು, ಅದು ಇಡೀ ಊರಿಗೇ ಪ್ರಚಾರ ಆಗಿ ಬಿಡುತ್ತದೆ ಎನ್ನುವುದಕ್ಕೆ ಈಗ ವೈರಲ್​ ಆಗಿರೋ ವಿಡಿಯೋ ಸಾಕ್ಷಿಯಾಗಿದೆ.

ಸುಡು ಬಿಸಿಲು

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಸುಡು ಬಿಸಿಲು. ಹೊರಗೆ ಕಾಲಿಡಲು ಆಗದ ಸ್ಥಿತಿ. ಸ್ವಲ್ಪವೇ ಬಿಸಿಲಿದ್ದರೂ, ದಮ್ಮಯ್ಯ ಎಂದರೂ ವೋಟ್​ ಹಾಕಲು ಹೊರಗೆ ಕಾಲಿಡದ ಜನ ಇಂದು ಕಿಲೋಮೀಟರ್​ಗಟ್ಟಲೆ ಫ್ರೀ ಊಟಕ್ಕೆ ಕ್ಯೂ ನಿಂತಿದ್ದಾರೆ. ಇದೇನು ಎಐ ವಿಡಿಯೋನೋ ಅಥ್ವಾ ನಿಜಕ್ಕೂ ನಮ್ಮ ಜನ ಹೀಗೆ ಉಚಿತಗಳಿಗೆ ದಾಸರಾಗಿದ್ದಾರೋ ಎನ್ನುವ ಡೌಟ್​ ಬರುವಷ್ಟು ದೊಡ್ಡ ಸಾಲು ಇಲ್ಲಿದೆ. ರಾಮೇಶ್ವರಂ ಕೆಫೆ ಎನ್ನೋದು ಸಕತ್​ ಫೇಮಸ್​. ಇಲ್ಲಿಯ ಆಹಾರಗಳು ಬಲು ದುಬಾರಿ. ಹಾಗಾಗಿ ಸಾಮಾನ್ಯ ಜನರು ಇಲ್ಲಿ ತಿಂಡಿ ತಿನ್ನುವುದು ಕನಸಿನ ಮಾತೇ ಎನ್ನುವ ಮಾತಿದೆ. ಇದೇ ಕಾರಣಕ್ಕೆ ಉಚಿತವಿದ್ದಾಗಲಾದರೂ ತಿಂದು ಬಿಡೋಣ ಎಂದುಕೊಂಡೋ ಏನೋ ಎಲ್ಲಾ ಕೆಲಸ ಬದಿಗಿಟ್ಟು ಬಂದಿದ್ದಾರೆ ಜನ. ಬೆಂಗಳೂರಿಗರಿಗೆ ದೊಡ್ಡ ಸಲಾಂ ಹೇಳ್ತಿದ್ದಾರೆ ನೆಟ್ಟಿಗರು. ಇನ್ನು ವೋಟ್​ ಹಾಕ್ದೋರಿಗೆ ಬಿಟ್ಟಿ ಊಟ ಪಕ್ಕದಲ್ಲೇ ಇದೆ ಎಂದ್ರೆ ಬಹುಶಃ ಮನೆಯಲ್ಲಿ ಇರುವ ಎಲ್ಲರೂ ಬರ್ತಾರೋ ಏನೊ, ಮುಂದಿನ ಸಲ ಇದೆ ಪ್ಲ್ಯಾನ್ ಮಾಡಿ ಎಂದು ಸಲಹೆಯನ್ನೂ ಕೊಡುತ್ತಿದ್ದಾರೆ.