Asianet Suvarna News Asianet Suvarna News

ಬೆಂಗಳೂರು-ಮೈಸೂರು ಹೈವೇನಲ್ಲಿ 10 ರೂ.ಗೆ ಸಿಗುತ್ತೆ ಹೊಟ್ಟೆ ತುಂಬಾ ತಿಂಡಿ; ತಟ್ಟೆ ತುಂಬಾ ಮಲ್ಲಿಗೆ ಇಡ್ಲಿ, ಬೋಂಡ!

ಬೆಂಗಳೂರು ಮೈಸೂರು ಹೆದ್ದಾರಿಯ ಬಳಿ ಕೇವಲ 10 ರೂಪಾಯಿಗೆ ಹೊಟ್ಟೆ ತುಂಬಾ ತಿಂಡಿ ಸಿಗುತ್ತದೆ. ತಟ್ಟೆ ತುಂಬಾ ಇಡ್ಲಿ (8 ಇಡ್ಲಿ) ಹಾಗೂ ಒಂದು ಬೋಂಡಾ ಕೊಡ್ತಾರೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..

Bengaluru Mysuru expressway near mandya full meals at only Rs 10 idli and bonda sat
Author
First Published May 16, 2024, 4:34 PM IST

ಬೆಂಗಳೂರು/ಮಂಡ್ಯ (ಮೇ 16): ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕೇವಲ 10 ರೂಪಾಯಿಗೆ ತಟ್ಟೆ ತುಂಬಾ ಮಲ್ಲಿಗೆ ಇಡ್ಲಿ (8 ಇಡ್ಲಿಗಳು) ಹಾಗೂ ಒಂದು ದಪ್ಪನೆಯ ಬೋಂಡಾ ಸಿಗುತ್ತದೆ. ಹೌದು, ನೀವು ಲೋ ಬಜೆಟ್‌ನಲ್ಲಿ ಹೊಟ್ಟೆ ತುಂಬಾ ರುಚಿಕರ ತಿಂಡಿ ತಿನ್ನಬೇಕೆಂದರೆ ಹೋಟೆಲ್‌ಗೊಮ್ಮೆ ಭೇಟಿ ಕೊಡಿ...

ಸಾಮಾನ್ಯವಾಗಿ ಎಲ್ಲರೂ ಒಂದಲ್ಲಾ ಒಂದು ರೀತಿಯ ಆಹಾರ ಪ್ರಿಯರೇ ಆಗಿದ್ದೇವೆ. ಅದರಲ್ಲಿಯೂ ಪ್ರಯಾಣದ ವೇಳೆ ಒಂದೊಳ್ಳೆ ತಿಂಡಿ ಅಥವಾ ಊಟ ಸಿಕ್ಕರೆ ನಮ್ಮ ಅದೃಷ್ಟವೇ ಸರಿ. ಆಹಾರ ಪ್ರಿಯರಿಗೆ ಹಾಗೂ ಕಡಿಮೆ ಬಜೆಟ್‌ನಲ್ಲಿ ಹೊಟ್ಟೆ ತುಂಬಾ ರುಚಿಕರ ತಿಂಡಿ ತಿನ್ನ ಬೇಕು ಎನ್ನುವವರಿಗೆ ಇಲ್ಲಿದೆ ನೋಡಿ ಸರಿಯಾದ ಸ್ಥಳ. ಅದೂ ಕೂಡ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುವ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇದ್ದು, ಸಮಯವಿದ್ದರೆ ಒಂದು 10 ನಿಮಿಷ ವಾಹನವನ್ನು ಸರ್ವೀಸ್‌ ರಸ್ತೆಗೆ ಇಳಿಸಿ ಭರ್ಜರಿ ತಿಂಡಿ ತಿಂದು ಹೋಗಬಹುದು. ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಸನಾತನ (@sanatan_kannada) ಎನ್ನುವವರು ಪೋಸ್ಟ್ ಮಾಡಿಕೊಂಡಿದ್ದಾರೆ.

ಕೋವಿಶೀಲ್ಡ್ ಲಸಿಕೆ ದೂಷಿಸಬೇಡಿ, ಕಂಡುಹಿಡಿದವರಿಗೊಂದು ಥ್ಯಾಂಕ್ಸ್ ಹೇಳಿ: ಡಾ. ಸಿ ಎನ್ ಮಂಜುನಾಥ್

10 ರೂಪಾಯಿಗೆ ಒಂದು ಪ್ಲೇಟ್ ಇಡ್ಲಿ(8 ಇರುತ್ತವೆ) ಹಾಗೂ ಒಂದು ದಪ್ಪನೆಯ ಬೋಂಡ, ಟಮೋಟ ಸಾಗು+ಚಟ್ನಿ.

ಹಬೆಯಾಡುವ ಮಲ್ಲಿಗೆ ಮೃದುವಿನ ಬಿಸಿ ಇಡ್ಲಿಯನ್ನು ಸಾಗು ಹಾಗೂ ಚಟ್ನಿಯಲ್ಲಿ ಮುಳುಗಿಸಿ ಬಾಯಲ್ಲಿಟ್ಟರೆ ನೀವು ಅಗಿಯುವ ಅಗತ್ಯವಿಲ್ಲ. ಮುಲಮುಲನೆ ಕರಗಿ ಗಂಟಲಿಗಿಳಿಯುತ್ತದೆ. ಇದೇ ಸ್ವಾದ ಹಾಗೂ ಪ್ರಮಾಣದ ಇಡ್ಲಿ ತಿನ್ನಬೇಕೆಂದರೆ   ಹೋಟೆಲುಗಳಲ್ಲಿ ಕನಿಷ್ಠ ರೂ.100 ಆದರೂ ಬೇಕು. ಕಳೆದ 33 ವರ್ಷಗಳಿಂದಲೂ ಅದೇ ಜಾಗದಲ್ಲಿ ಇಡ್ಲಿ ಮಾಡುವ ಕಾಯಕದಲ್ಲಿ ಗತಿಸಿಹೋದ ತನ್ನ ಗಂಡನ ಕಾಣುತ್ತಿದ್ದಾರೆ.. ಇವರ ಗಂಡ ದೊಡ್ಡಯ್ಯ 33 ವರ್ಷದ ಹಿಂದೆ ಇದೇ ಹೋಟೆಲಿನಲ್ಲಿ ಕೊನೆಯುಸಿರೆಳೆದರು. ಆಗ ಒಂದು ಇಡ್ಲಿ 50ಪೈಸೆ. ಈಗ್ಗೆ 6-7 ವರ್ಷದಿಂದ ಈಚೆಗೆ ಇಡ್ಲಿ ಬೆಲೆ 1ರೂ. ಆಗಿದೆ..! 

ಇದ್ದ ಒಬ್ಬಳೇ ಮಗಳನ್ನು ಮದುವೆ ಮಾಡಿದ್ದಾರೆ.. ಆಗಿದ್ದ ಸಣ್ಣ ಗುಡಿಸಲು ಹೊಡೆಸಿ ಹಾಕಿ, ಈಗ ಶೀಟ್ ಮನೆ ಮಾಡಿದ್ದಾರೆ.. ಈಗ ಆ ಮನೆಯಲ್ಲಿ ಒಬ್ಬರೇ ವಾಸ.. ಪ್ರತಿದಿನ ಅಕ್ಕಿ-ಉದ್ದು ನೆನೆಸಿ, ಎರಡೆರಡು ಬಕೆಟ್ ಹೊತ್ತು ಮಂಡ್ಯಕ್ಕೆ ಬಸ್‌ನಲ್ಲಿ ಹೋಗಿ ಗ್ರೈಂಡರ್ ಮಾಡಿಸಿಕೊಂಡು ಬಂದು ದಿನಕ್ಕೆ 500 ಇಡ್ಲಿ, 100 ಬೋಂಡ ಮಾಡುತ್ತಾರೆ. ಅಲ್ಲಿಗೆ ರೂ.700 ಬರುತ್ತದೆ. ಅದರಲ್ಲಿ‌ ಅಕ್ಕಿ, ಉದ್ದಿನ ಬೇಳೆ, ಕಾಯಿ, ಕಡಲೆಹಿಟ್ಟು, ಈರುಳ್ಳಿ, ಎಣ್ಣೆ, ಸಿಲಿಂಡರ್, ಖರ್ಚು ತೆಗೆದು ದಿನಕ್ಕೆ ಕೇವಲ 150 -200ರೂ ಉಳಿಯುತ್ತದೆ.

ಇಷ್ಟೆಲ್ಲಾ ಮಾಡಿ 150 ಉಳಿದರೆ ಸಾಕಾ ಎಂದು ಕೇಳಿದರೆ, "ಅಯ್ಯೋ, ಈ ವಯಸ್ಸಲ್ಲಿ ನನ್ನನ್ನು ಯಾರು ಕೂಲಿಗೆ ಕರೆಯುತ್ತಾರೆ, ಈ ಇಡ್ಲಿ ಮಾಡುದ್ರೆ ನನ್ನ ಜೀವ್ನಕ್ಕಾಗುವಷ್ಟಾದರೂ ಆಯ್ತದೆ ಬಾ ಮಗಾ" ಎನ್ನುತ್ತಾರೆ.‌. ಇಡ್ಲಿ ಬೆಲೆ 2ರೂ ಆದರೂ ಮಾಡಿ ಎಂದಾಗ, 'ಅಯ್ಯೋ 1ರೂಪಾಯೇ ಸಾಕು ಬನ್ರಪ್ಪ, ನಾನ್ ಬದ್ಕುಕೆ ಇಷ್ಟೇ ಸಾಕಲ್ವೆ' ಎನ್ನುತ್ತಾರೆ.. ಅವರ ಈ ಮಾತು ಕೇಳಿ ಒಂದು ನಿಮಿಷ ನಮ್ಮ ಜೀವನ ನಶ್ವರ ಎನಿಸಿಬಿಟ್ಟಿತು.. ಎಲೆಮರೆ ಕಾಯಿಯಂತೆ ಸ್ವಾರ್ಥವಿಲ್ಲದೇ ಬದುಕುತ್ತಿರುವ ಇಂತಹ ಮುದಿಜೀವಕ್ಕೆ ಯಾರೂ ಆಸರೆಯಿಲ್ಲ.

ಬೆಳಗ್ಗೆ ಕಾರ್ಪೋರೇಟ್‌ ಜಾಬ್‌, ಸಂಜೆಯಾದ್ರೆ ಟೀ-ಆಮ್ಲೆಟ್ ಮಾರಾಟ ಮಾಡೋ ಕೆಲ್ಸ!

ಊರಿನ ಒಬ್ಬ ಮುಖಂಡರು ಒಂದು ಶಾಲು ಹೊದಿಸಿ ಸನ್ಮಾನ ಮಾಡಿದ್ದೇ ಇವರ ಪಾಲಿನ ಪರಮ ಕ್ಷಣ. ಅದನ್ನೇ ಫೋಟೋ ಕಟ್ಟು ಹಾಕಿಸಿ ತನ್ನ ಮನೆಯಲ್ಲಿ ಇಟ್ಟು ಸಾರ್ಥಕತೆ ಮೆರೆಯುತ್ತಿದ್ದಾರೆ. ನೀವೊಮ್ಮೆ ಆ ಮಾರ್ಗವಾಗಿ ಹೋದರೆ ಮರೆಯದೇ ಭೇಟಿ ನೀಡಿ ಹೊಟ್ಟೆತುಂಬಾ ಇಡ್ಲಿ ತಿಂದು ಬನ್ನಿ.. ಅವರು ಶೀಟ್‌ಮನೆ ಕಟ್ಟಿಸಲು ಮಾಡಿರುವ 1.5 ಲಕ್ಷ ರೂ. ಸಾಲ ತೀರಿಸಲು ಸಾಧ್ಯವಾದರೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿಬನ್ನಿ.

ಸ್ಥಳ - ಇಂಡುವಾಳು ಗ್ರಾಮ, ಮಂಡ್ಯ ಜಿಲ್ಲೆ (ಬೆಂಗಳೂರು ಮೈಸೂರು ಹೆದ್ದಾರಿ) ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios