ಪ್ರೆಶರ್ ಕುಕ್ಕರ್ ಬದಲು ಮಣ್ಣಿನ ಮಡಿಕೆಯಲ್ಲಿ ಬೇಳೆ ಬೇಯಿಸುವುದರಿಂದ ಎಷ್ಟೊಂದು ಪ್ರಯೋಜನ ಸಿಗುತ್ತೆ ನಿಮಗೆ ಗೊತ್ತೇ? ಮಣ್ಣಿನ ಪಾತ್ರೆಯಲ್ಲಿ ನಿಧಾನವಾಗಿ ಬೇಯಿಸಿದ ಬೇಳೆ ವಿಶೇಷ ರುಚಿ ಮತ್ತು ಸುವಾಸನೆ ಜೊತೆಗೆ ಆರೋಗ್ಯಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತೆ.

ಮಣ್ಣಿನ ಮಡಕೆಯಲ್ಲಿ ಅಡುಗೆ

ಹಿಂದಿನ ಕಾಲದಲ್ಲಿ ಮಹಿಳೆಯರು ಅಡುಗೆ ಮಾಡಲು ಸ್ಟೀಲ್ ಪಾತ್ರೆಗಳಿಗಿಂತ ಮಣ್ಣಿನ ಪಾತ್ರೆಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಇಂದು ಪ್ರೆಶರ್ ಕುಕ್ಕರ್, ನಾನ್‌ಸ್ಟಿಕ್ ಪ್ಯಾನ್ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು ಅಡುಗೆಮನೆಯಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಆದರೆ ಹಿಂದೆ ಮಣ್ಣಿನ ಬಾಣಲೆ, ಹಂಡೆ ಮತ್ತು ತವಾವನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಮಣ್ಣಿನ ಮಡಕೆಯಲ್ಲಿ ಬೇಯಿಸಿದ ಬೇಳೆಯ ರುಚಿ ಪ್ರೆಶರ್ ಕುಕ್ಕರ್‌ನಲ್ಲಿ ಮಾಡಿದ ಬೇಳೆಗಿಂತ ವಿಭಿನ್ನವಾಗಿರುತ್ತದೆ ಎಂದು ಅನೇಕರು ಹೇಳುತ್ತಾರೆ. ಇದರಿಂದ ಹೆಚ್ಚು ಪ್ರಯೋಜನ ಕೂಡ ಇದೆ. ಅವುಗಳ ಬಗ್ಗೆ ನೋಡೋಣ.

ಮಣ್ಣಿನ ಮಡಕೆಯಲ್ಲಿ ಬೇಳೆ ಬೇಯಿಸುವುದರ ಪ್ರಯೋಜನಗಳು ಯಾವುವು?

ಕಡಿಮೆ ಎಣ್ಣೆಯಲ್ಲಿ ಅಡುಗೆ

ಮಣ್ಣಿನ ಪಾತ್ರೆಯಲ್ಲಿ ಬೇಳೆ ಬೇಯಿಸುವಾಗ ಹೆಚ್ಚು ಎಣ್ಣೆ ಅಥವಾ ತುಪ್ಪ ಬಳಸುವ ಅಗತ್ಯವಿಲ್ಲ. ಬೇಳೆಯನ್ನು ನೀರಿನೊಂದಿಗೆ ನಿಧಾನವಾಗಿ ಬೇಯಿಸಬಹುದು. ಇದರಿಂದ ಅಡುಗೆಯಲ್ಲಿ ಅನಗತ್ಯ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಬಹುದು.

ಜೀರ್ಣಕ್ರಿಯೆಗೆ ಸಹಾಯಕ

ಬೇಳೆಯಲ್ಲಿ ಪ್ರೋಟೀನ್ ಮತ್ತು ನಾರಿನಂಶ ಹೇರಳವಾಗಿರುತ್ತವೆ. ಬೇಳೆಯನ್ನು ಸರಿಯಾಗಿ ಬೇಯಿಸುವುದರಿಂದ ಅದು ಮೃದುವಾಗಿ, ತಿನ್ನಲು ಸುಲಭವಾಗುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಸಹಾಯವಾಗಬಹುದು.

ಬೇಳೆಯ ನೈಸರ್ಗಿಕ ರುಚಿ ಮತ್ತು ಸುವಾಸನೆ ಉಳಿಯುತ್ತದೆ

ಮಣ್ಣಿನ ಮಡಕೆಯಲ್ಲಿ ಕಡಿಮೆ ಉರಿಯಲ್ಲಿ ನಿಧಾನವಾಗಿ ಬೇಳೆ ಬೇಯಿಸಿದಾಗ ಅದರ ರುಚಿ ಮತ್ತು ಸುವಾಸನೆ ವಿಭಿನ್ನವಾಗಿರಬಹುದು. ನಿಧಾನವಾದ ಅಡುಗೆ ವಿಧಾನವು ಬೇಳೆ ಸಮವಾಗಿ ಬೇಯಲು ಸಹಾಯ ಮಾಡುತ್ತದೆ. ಮಸಾಲೆ ಮತ್ತು ಇತರ ಪದಾರ್ಥಗಳೊಂದಿಗೆ ಬೇಯಿಸಿದಾಗ ಬೇಳೆಗೆ ವಿಶೇಷವಾದ ರುಚಿ ಸಿಗುತ್ತದೆ. ಹೀಗಾಗಿ ಸಾಂಪ್ರದಾಯಿಕ ಅಡುಗೆಯ ರುಚಿಯನ್ನು ಇಷ್ಟಪಡುವವರಿಗೆ ಮಣ್ಣಿನ ಪಾತ್ರೆಗಳು ಉತ್ತಮ ಆಯ್ಕೆಯಾಗಬಹುದು.

ನೈಸರ್ಗಿಕ ಖನಿಜಾಂಶ

ಮಣ್ಣು ನೈಸರ್ಗಿಕವಾಗಿ ವಿವಿಧ ಖನಿಜಗಳನ್ನು ಹೊಂದಿರುತ್ತದೆ. ಆದರೆ ಮಣ್ಣಿನ ಪಾತ್ರೆಯಲ್ಲಿ ಬೇಳೆ ಬೇಯಿಸುವುದರಿಂದ ಕಬ್ಬಿಣ, ಸತು, ಗಂಧಕ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಅಗತ್ಯ ಪ್ರಮಾಣದಲ್ಲಿ ಆಹಾರಕ್ಕೆ ಸೇರುತ್ತವೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸಣ್ಣ ಪ್ರಮಾಣದಲ್ಲಿ ಸಿಗುತ್ತವೆ.

ನಿಧಾನವಾಗಿ ಬೇಯಿಸುವ ಅಡುಗೆ ವಿಧಾನ

ಮಣ್ಣಿನ ಪಾತ್ರೆಗಳಲ್ಲಿ ನಿಧಾನವಾಗಿ ಅಡುಗೆ ಮಾಡುವುದರಿಂದ ಬೇಳೆ ಚೆನ್ನಾಗಿ ಮೃದುವಾಗಲು ಮತ್ತು ಅದರ ರುಚಿ ಉತ್ತಮವಾಗಲು ಸಹಾಯವಾಗಬಹುದು. ಈ ವಿಧಾನದಲ್ಲಿ ಸರಿಯಾದ ಪ್ರಮಾಣದ ನೀರು ಬಳಸಿದರೆ ಬೇಳೆ ಒಣಗದಂತೆ ಬೇಯಿಸಬಹುದು.

ಮಣ್ಣಿನ ಪಾತ್ರೆಗಳನ್ನು ಬಳಸುವ ಸರಿಯಾದ ವಿಧಾನ

ಹೊಸ ಪಾತ್ರೆಯನ್ನು ಸಿದ್ಧಪಡಿಸಿ: ಪಾತ್ರೆಯ ತಯಾರಕರು ನೀಡಿರುವ ಸೂಚನೆಗಳನ್ನು ಅನುಸರಿಸಿ. ಕೆಲವು ಮಣ್ಣಿನ ಪಾತ್ರೆಗಳನ್ನು ಮೊದಲ ಬಳಕೆಗೆ ಮುನ್ನ ನೀರಿನಲ್ಲಿ ನೆನೆಸಬೇಕಾಗಬಹುದು. ಎಲ್ಲ ಪಾತ್ರೆಗಳಿಗೂ 8–10 ಗಂಟೆಗಳ ಕಾಲ ನೆನೆಸುವುದು ಕಡ್ಡಾಯವಲ್ಲ.

ಸ್ವಚ್ಛತೆಗೆ ಆದ್ಯತೆ ನೀಡಿ: ಪಾತ್ರೆಯನ್ನು ಬಳಸಿದ ನಂತರ ಚೆನ್ನಾಗಿ ತೊಳೆಯಿರಿ ಮತ್ತು ಸಂಪೂರ್ಣ ಒಣಗಲು ಬಿಡಿ.

ತೀವ್ರ ಉರಿಯಲ್ಲಿ ಇಡಬೇಡಿ: ಪಾತ್ರೆ ನೇರವಾಗಿ ಗ್ಯಾಸ್ ಮೇಲೆ ಬಳಸಲು ಸೂಕ್ತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉಷ್ಣತೆಯನ್ನು ನಿಧಾನವಾಗಿ ಹೆಚ್ಚಿಸಿ. ಹಠಾತ್ ಉಷ್ಣತೆಯ ಬದಲಾವಣೆಯಿಂದ ಪಾತ್ರೆ ಬಿರುಕು ಬಿಡಬಹುದು.

ಆಹಾರಕ್ಕೆ ಸುರಕ್ಷಿತವಾದ ಪಾತ್ರೆ ಆಯ್ಕೆಮಾಡಿ: ಆಹಾರ ಬೇಯಿಸಲು ತಯಾರಿಸಲಾದ, ಸುರಕ್ಷಿತ ಲೇಪನವಿರುವ ಮಣ್ಣಿನ ಪಾತ್ರೆಗಳನ್ನು ಮಾತ್ರ ಬಳಸಿ. ಹಾನಿಗೊಂಡ ಅಥವಾ ಸುರಕ್ಷಿತವಲ್ಲದ ಪಾತ್ರೆಗಳನ್ನು ಬಳಸಬೇಡಿ.

ಬೇಳೆಯನ್ನು ಚೆನ್ನಾಗಿ ಬೇಯಿಸಿ: ಬೇಳೆಯನ್ನು ಸರಿಯಾದ ಪ್ರಮಾಣದ ನೀರಿನಲ್ಲಿ ಸಂಪೂರ್ಣವಾಗಿ ಬೇಯಿಸಿ. ಇದರಿಂದ ತಿನ್ನಲು ಸುಲಭವಾಗುತ್ತದೆ ಮತ್ತು ಆಹಾರ ಸುರಕ್ಷತೆಯೂ ಕಾಪಾಡಲ್ಪಡುತ್ತದೆ.