Amla Storage Tips : ನೆಲ್ಲಿಕಾಯಿಯನ್ನು ಬಹಳ ದಿನ ಸಂಗ್ರಹಿಸೋದು ಕಷ್ಟ ಎನ್ನುವವರು ಹಳೆ ಟ್ರಿಕ್ಸ್ ಫಾಲೋ ಮಾಡ್ಬಹುದು. ಹಿಂದೆ ಅಜ್ಜಿಯಂದಿರುವ ಮಾಡ್ತಿದ್ದ ಉಪಾಯ ಏನು ಗೊತ್ತಾ?
ಚಳಿಗಾಲ ಬರ್ತಿದ್ದಂತೆ ಮಾರ್ಕೆಟ್ ನಲ್ಲಿ ನೆಲ್ಲಿಕಾಯಿ ದರ್ಬಾರ್ ಜೋರಾಗುತ್ತೆ. ನೆಲ್ಲಿಕಾಯಿ ರುಚಿಯಲ್ಲಿ ಹುಳಿಯಾಗಿದ್ದರೂ, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ. ಪ್ರತಿ ದಿನ ನೆಲ್ಲಿಕಾಯಿ ಜ್ಯೂಸ್ ಕುಡಿಯುವವರು ನಮ್ಮಲ್ಲಿದ್ದಾರೆ. ಹಾಗಂತ ಒಂದೇ ದಿನ ಕೆಜಿ ಕೆಜಿ ನೆಲ್ಲಿಕಾಯಿ ಖರೀದಿ ಮಾಡಿದ್ರೆ ಅದು ಬೇಗ ಹಾಳಾಗುತ್ತದೆ. ಕೆಲವೇ ದಿನಗಳಲ್ಲಿ ಅದು ಮೆತ್ತಗಾಗಲು ಶುರುವಾಗುತ್ತೆ. ನೆಲ್ಲಿಕಾಯಿ ಬಹಳ ದಿನ ಚೆನ್ನಾಗಿರ್ಬೇಕು ಅಂದ್ರೆ ಈ ಟ್ರಿಕ್ಸ್ ಫಾಲೋ ಮಾಡಿ.
ಸಾಸಿವೆ ಎಣ್ಣೆ
ನೆಲ್ಲಿಕಾಯಿಯನ್ನು ದೀರ್ಘಕಾಲ ಸಂಗ್ರಹಿಸಿಡಲು ಹಳೆಯ ಕಾಲದಿಂದಲೂ ಬಳಸುತ್ತಿರುವ ಒಂದು ವಿಧಾನವೆಂದ್ರೆ ಅದರ ಮೇಲೆ ಸ್ವಲ್ಪ ಎಣ್ಣೆ ಹಚ್ಚುವುದು. ಇದಕ್ಕಾಗಿ ಮೊದಲು ತಾಜಾ ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು, ಬಟ್ಟೆಯಿಂದ ಸಂಪೂರ್ಣವಾಗಿ ಒಣಗಿಸಬೇಕು. ನೆಲ್ಲಿಕಾಯಿಯ ಮೇಲೆ ನೀರು ಇರಬಾರದು. ಈಗ ಕೈಗೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಒಂದೊಂದೇ ನೆಲ್ಲಿಕಾಯಿಗೆ ಚೆನ್ನಾಗಿ ಹಚ್ಚಿ. ಬಳಿಕ ಅವುಗಳನ್ನು ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿ ಫ್ರಿಜ್ನಲ್ಲಿ ಇಡಿ. ಹೀಗೆ ಮಾಡಿದ್ರೆ ಅನೇಕ ದಿನ ನೆಲ್ಲಿಕಾಯಿ ಹಾಳಾಗದೆ ಉಳಿಯುತ್ತದೆ.
ಏರ್ಟೈಟ್ ಕಂಟೇನರ್ ಬಳಸಿ
ಬೇರೆ ಯಾವುದೇ ಪದಾರ್ಥವನ್ನು ಬಳಸದೆ ನೆಲ್ಲಿಕಾಯಿಯನ್ನು ಸಂಗ್ರಹಿಸಿಡಲು ಏರ್ಟೈಟ್ ಕಂಟೇನರ್ ಕೂಡ ಸುಲಭವಾದ ವಿಧಾನವಾಗಿದೆ. ಮೊದಲು ನೆಲ್ಲಿಕಾಯಿಯನ್ನು ತೊಳೆದು ಸ್ವಚ್ಛಗೊಳಿಸಿ. ಬಳಿಕ ಕಿಚನ್ ಟವೆಲ್ ಅಥವಾ ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಿ. ನೆಲ್ಲಿಕಾಯಿ ಸಂಪೂರ್ಣವಾಗಿ ಒಣಗಿದ ನಂತರ ಏರ್ಟೈಟ್ ಕಂಟೇನರ್ನಲ್ಲಿ ಹಾಕಿ ಫ್ರಿಜ್ನಲ್ಲಿ ಇಡಿ. ಕಂಟೇನರ್ ಅನ್ನು ಸರಿಯಾಗಿ ಮುಚ್ಚಬೇಕು. ಇದರಿಂದ ಒಳಗೆ ಗಾಳಿ ಮತ್ತು ತೇವಾಂಶದ ಪ್ರಭಾವ ಕಡಿಮೆಯಾಗುತ್ತದೆ. ಈ ವಿಧಾನವು ನೆಲ್ಲಿಕಾಯಿಯನ್ನು ಸ್ವಲ್ಪ ಸಮಯದವರೆಗೆ ತಾಜಾವಾಗಿಡಲು ಸಹಾಯ ಮಾಡುತ್ತದೆ.
ಕುದಿಸಿ, ಒಣಗಿಸಿ ಸಂಗ್ರಹಿಸಿ
ನೆಲ್ಲಿಕಾಯಿಯ ಶೆಲ್ಫ್ ಲೈಫ್ ಹೆಚ್ಚಿಸಲು ಅದನ್ನು ಕುದಿಸಿ, ಒಣಗಿಸಿಯೂ ಸಂಗ್ರಹಿಸಬಹುದು. ಇದಕ್ಕಾಗಿ ಮೊದಲು ನೆಲ್ಲಿಕಾಯಿಯ ಬೀಜಗಳನ್ನು ತೆಗೆದುಹಾಕಿ. ನಂತರ ಅವುಗಳನ್ನು ನೀರಿನಲ್ಲಿ ಸುಮಾರು 10ರಿಂದ 15 ನಿಮಿಷಗಳ ಕಾಲ ಕುದಿಸಿ. ಕುದಿಸಿದ ಬಳಿಕ ನೆಲ್ಲಿಕಾಯಿಯನ್ನು ಚೆನ್ನಾಗಿ ಒಣಗಿಸಿ. ನಂತರ ಒಂದರಿಂದ ಎರಡು ದಿನಗಳ ಕಾಲ ಬಿಸಿಲಿನಲ್ಲಿ ಇಡಿ. ಇದರಿಂದ ನೆಲ್ಲಿಕಾಯಿ ಸಂಪೂರ್ಣವಾಗಿ ಒಣಗುತ್ತದೆ. ನೆಲ್ಲಿಕಾಯಿ ಚೆನ್ನಾಗಿ ಒಣಗಿ ಗಟ್ಟಿಯಾದ ನಂತರ ಅದನ್ನು ಏರ್ಟೈಟ್ ಕಂಟೇನರ್ನಲ್ಲಿ ತುಂಬಿಸಿ ಇಡಿ. ಈ ರೀತಿ ನೆಲ್ಲಿಕಾಯಿಯನ್ನು ದೀರ್ಘಕಾಲ ಬಳಸಬಹುದು.
ನೆಲ್ಲಿಕಾಯಿ ಪುಡಿ ಮಾಡಿ ಸಂಗ್ರಹಿಸಿಡಿ
ನಿಮ್ಮ ಬಳಿ ಹೆಚ್ಚಿನ ಪ್ರಮಾಣದಲ್ಲಿ ನೆಲ್ಲಿಕಾಯಿ ಇದ್ದರೆ, ಅದನ್ನು ಪುಡಿ ಮಾಡಿಟ್ಟುಕೊಳ್ಳುವುದು ಕೂಡ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಮೊದಲು ನೆಲ್ಲಿಕಾಯಿಯನ್ನು ಕುದಿಸಿ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ನೆಲ್ಲಿಕಾಯಿ ಸಂಪೂರ್ಣವಾಗಿ ಒಣಗಿ ಗಟ್ಟಿಯಾದ ನಂತರ ಅದನ್ನು ಗ್ರೈಂಡರ್ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ತಯಾರಾದ ನೆಲ್ಲಿಕಾಯಿ ಪುಡಿಯನ್ನು ಏರ್ಟೈಟ್ ಕಂಟೇನರ್ನಲ್ಲಿ ಸಂಗ್ರಹಿಸಿಡಿ. ಅಗತ್ಯಕ್ಕೆ ತಕ್ಕಂತೆ ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಪಾನೀಯವಾಗಿ ಸೇವಿಸಬಹುದು ಅಥವಾ ತರಕಾರಿಗಳಲ್ಲಿಯೂ ಬಳಸಬಹುದು.
ನೆಲ್ಲಿಕಾಯಿ ಕ್ಯಾಂಡಿ
ನೆಲ್ಲಿಕಾಯಿಯನ್ನು ದೀರ್ಘಕಾಲ ಬಳಸಲು ಮತ್ತೊಂದು ವಿಧಾನವೆಂದರೆ ಅದರಿಂದ ಕ್ಯಾಂಡಿ ತಯಾರಿಸುವುದು. ನೆಲ್ಲಿಕಾಯಿಯನ್ನು ನೇರವಾಗಿ ತಿನ್ನಲು ಇಷ್ಟಪಡದವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಮಕ್ಕಳಿಗೂ ಇದರ ರುಚಿ ಹೆಚ್ಚು ಇಷ್ಟವಾಗುತ್ತದೆ. ಇದಕ್ಕಾಗಿ ನೆಲ್ಲಿಕಾಯಿಯನ್ನು ಮೊದಲು ಕುದಿಸಿ, ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಸೇರಿಸಲಾಗುತ್ತದೆ. ಇದು ಹಲವು ತಿಂಗಳುಗಳವರೆಗೆ ಸಂಗ್ರಹಿಸಿಡಲು ಸಹಾಯ ಮಾಡುತ್ತದೆ.
ಈ ವಿಷಯ ನೆನಪಿರಲಿ
ನೆಲ್ಲಿಕಾಯಿಯನ್ನು ಸಂಗ್ರಹಿಸುವ ಮೊದಲು ಚೆನ್ನಾಗಿ ತೊಳೆದು ಸಂಪೂರ್ಣವಾಗಿ ಒಣಗಿಸುವುದು ಮುಖ್ಯ. ನೆಲ್ಲಿಕಾಯಿಯ ಮೇಲೆ ನೀರು ಅಥವಾ ತೇವಾಂಶ ಉಳಿದಿದ್ದರೆ ಅದು ಬೇಗನೆ ಹಾಳಾಗಬಹುದು. ನೆಲ್ಲಿಕಾಯಿಯನ್ನು ಸಂಗ್ರಹಿಸುವ ಕಂಟೇನರ್ ಕೂಡ ಸ್ವಚ್ಛವಾಗಿ ಮತ್ತು ಒಣಗಿರಬೇಕು.






