ಒರಳು ಚಿತ್ರಾನ್ನ To ಅವಕಾಡೋ ಸ್ಯಾಂಡ್‌ವಿಚ್: ಇಲ್ಲಿವೆ ಸುಲಭ ರೆಸಿಪಿ
‘ಚೈನೀಸ್ ಐಟಂ’ ಅಂದ್ರೆ ಮಧ್ಯರಾತ್ರಿ ಬೇಕಾದ್ರೂ ಎದ್ ಕೂರ್ತೀನಿ’ ಅಂತಾರೆ ‘ಭೀಮಸೇನ ನಳಮಹರಾಜ’ ಸಿನಿಮಾದ ನಾಯಕಿ ಆರೋಹಿ ನಾರಾಯಣ್. ಅವರೇ ಹೇಳಿದ ನಾಲ್ಕು ಯಮ್ಮೀ ಫುಡ್ ರೆಸಿಪಿ ನಿಮಗಾಗಿ
‘ಚೈನೀಸ್ ಐಟಂ’ ಅಂದ್ರೆ ಮಧ್ಯರಾತ್ರಿ ಬೇಕಾದ್ರೂ ಎದ್ ಕೂರ್ತೀನಿ’ ಅಂತಾರೆ ‘ಭೀಮಸೇನ ನಳಮಹರಾಜ’ ಸಿನಿಮಾದ ನಾಯಕಿ ಆರೋಹಿ ನಾರಾಯಣ್. ಹೆಸರೇ ಹೇಳುವಂತೆ ಹೇಳುವಂತೆ ಇಡೀ ಚಿತ್ರದಲ್ಲಿ ಅಡುಗೆಯೇ ಹೈಲೈಟ್. ಅಡುಗೆ ಮಾಡೋನು ಹೀರೋ. ಹಾಗಿದ್ರೆ ಹೀರೋಯಿನ್ ಏನ್ ಮಾಡ್ತಾರೆ ಅಂದ್ರೆ ಪಟ್ಟಾಗಿ ಕೂತು ಆತ ಮಾಡಿದ ಅಡುಗೆಯನ್ನೆಲ್ಲ ಸ್ವಾಹಾ ಮಾಡೋದು! ಇಂಥಾ ಹುಡುಗಿ ಆರೋಹಿ ಇಲ್ಲಿ ಮಜವಾದ ರೆಸಿಪಿ ಹೇಳಿದ್ದಾರೆ. ನೀವೂ ಟ್ರೈ ಮಾಡಬಹುದು.
ಒರಳು ಚಿತ್ರಾನ್ನ
ಬೇಕಾಗುವ ಸಾಮಗ್ರಿ: ಹಸಿ ತೆಂಗಿನ ತುರಿ- 1 ಕಪ್, ಕೊತ್ತಂಬರಿ ಸೊಪ್ಪು-1 ಸಣ್ಣ ಕಟ್ಟು, ಹಸಿ ಮೆಣಸಿನಕಾಯಿ 3, ಜೀರಿಗೆ 1 ಚಮಚ, ಅರಿಶಿನ- ಸ್ವಲ್ಪ, ಹುಣಸೆ ಹಣ್ಣು - ಅಡಿಕೆ ಗಾತ್ರ, ಉಪ್ಪು, ಅನ್ನ, ಬೆಲ್ಲ ಸ್ವಲ್ಪ, ಕರಿಬೇವು, ಅನ್ನ - 3 ಕಪ್, ಸಾಸಿವೆ, ಉದ್ದಿನ ಬೇಳೆ, ಕಡಲೇ ಬೀಜ, ಕಡಲೆ ಬೇಳೆ, ಎಣ್ಣೆ.
ಮಾಡುವ ವಿಧಾನ: ಇದನ್ನು ಒರಳಲ್ಲಿ ಮಾಡಿದ್ರೆ ರುಚಿ ಹೆಚ್ಚು ಅಂತಾರೆ. ಮಿಕ್ಸಿಯಲ್ಲೂ ಮಾಡಬಹುದು. ನನಗೆ ಬಹಳ ಇಷ್ಟವಾದ ರೆಸಿಪಿ ಇದು. ಅಮ್ಮ ಅದ್ಭುತವಾಗಿ ಈ ಒರಳು ಚಿತ್ರಾನ್ನ ಮಾಡುತ್ತಾರೆ. ಮಾಡೋದು ಸುಲಭ. ರುಚಿಯೂ ಸೂಪರಾಗಿರುತ್ತೆ. ಮೊದಲು ತೆಂಗಿನಕಾಯಿ, ಬೆಲ್ಲ, ಅರಿಶಿನ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಜೀರಿಗೆ, ಹುಣಸೆ ಹಣ್ಣು ಇದನ್ನೆಲ್ಲ ತರಿ ತರಿಯಾಗಿ ರುಬ್ಬಿಕೊಳ್ಳಬೇಕು.
ಮಕ್ಕಳಿಗೆ ಇಷ್ಟವಾಗೋ ಸೂಪರ್ ಬ್ರೇಕ್ ಫಾಸ್ಟ್ ರೆಸಿಪಿ, ಟ್ರೈ ಮಾಡಿ
ಇನ್ನೊಂದು ಕಡೆ ಒಗ್ಗರಣೆಗಿಡಬೇಕು. ಸಾಸಿವೆ, ಕಡಲೇಬೇಳೆ, ಉದ್ದಿನ ಬೇಳೆ, ಒಣಮೆಣಸು, ಕಡಲೇ ಬೀಜ ಮತ್ತು ಕರಿಬೇವಿನ ಒಗ್ಗರಣೆ ರೆಡಿ ಮಾಡಿ, ಇದಕ್ಕೆ ರುಬ್ಬಿರೋದನ್ನು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಹಸಿ ವಾಸನೆ ಹೋಗೋ ಹಾಗೆ ಸ್ವಲ್ಪ ಹೊತ್ತು ಬಿಸಿ ಮಾಡಿ. ಇದಕ್ಕೆ ಉಪ್ಪು ಸೇರಿಸಿ. ಆಮೇಲೆ ಅನ್ನ ಹಾಕಿ ಮಿಕ್ಸ್ ಮಾಡಿದ್ರೆ ಮುಗೀತು. ಒರಳು ಚಿತ್ರಾನ್ನ ರೆಡಿ.
ಸಿಹಿ ಒತ್ತು ಶ್ಯಾವಿಗೆ
ಬೇಕಾಗುವ ಸಾಮಗ್ರಿ: ಎರಡೂವರೆ ಕಪ್ ಸೋನ ಮಸೂರಿ ಅಕ್ಕಿ, ಕಾಲು ಕಪ್ ದಪ್ಪ ಅವಲಕ್ಕಿ, ಉಪ್ಪು. ಕಾಂಬಿನೇಶನ್ ಆಗಿ ಗಸಗಸೆ ಪಾಯಿಸ, ಎಳ್ಳು, ಬೆಲ್ಲ, ಕಾಯಿ ಪುಡಿ.
ಮಾಡುವ ವಿಧಾನ: ಅಕ್ಕಿ ಹಾಗೂ ಅವಲಕ್ಕಿಗಳನ್ನು ಮೂರು ಗಂಟೆ ನೆನೆಸಬೇಕು. ಆಮೇಲೆ ಇದನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಬೇಕು. ಹಿಟ್ಟು ದೋಸೆ ಹಿಟ್ಟಿಗಿಂತ ತುಸು ತೆಳುವಾಗಿರಲಿ, ನೀರು ದೋಸೆ ಹಿಟ್ಟಿಗಿಂತ ಕೊಂಚ ದಪ್ಪಗಿರಲಿ. ಇದಕ್ಕೆ ಉಪ್ಪು ಹಾಕಿ. ನಂತರ ಇದನ್ನು ಬಾಣಲೆಗೆ ಹಾಕಿ ಮೀಡಿಯಂ ಉರಿಯಲ್ಲಿ ತಿರುವುತ್ತಿರಿ. ಹತ್ತರಿಂದ ಹದಿನೈದು ನಿಮಿಷಕ್ಕೆ ಇದು ಸಂಪೂರ್ಣ ಗಟ್ಟಿಯಾಗುತ್ತೆ. ಅಲ್ಲಿಯವರೆಗೂ ತಿರುವುತ್ತಲೇ ಇರಬೇಕು. ಇಲ್ಲವಾದರೆ ಗಂಟು ಗಂಟಾಗುತ್ತೆ. ಗಟ್ಟಿಯಾದ ಹಿಟ್ಟನ್ನು ಬಿಸಿ ಇರುವಾಗಲೇ ತುಸು ದೊಡ್ಡಕ್ಕೆ ಉಂಡೆ ಮಾಡಬೇಕು. ಒತ್ತು ಶಾವಿಗೆ ಒರಳಿನೊಳಗೆ ಹೋಗುವ ಸೈಜ್‌ನಲ್ಲಿ ಉಂಡೆ ಮಾಡಿ. ಇದನ್ನು ಇಪ್ಪತೈದು ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಬೇಕು. ನಂತರ ಇದನ್ನು ಶ್ಯಾವಿಗೆ ಒರಳಿನಲ್ಲಿ ಒತ್ತಬೇಕು. ಬಿಸಿ ಇರುವಾಗಲೇ ಶ್ಯಾವಿಗೆ ಒತ್ತಬೇಕು. ತಣ್ಣಗಾದ್ರೆ ಆಗೋದಿಲ್ಲ. ಒಳಗೆ ಎಣ್ಣೆ ಸವರಿಕೊಂಡು ಒಂದೊಂದೇ ಉಂಡೆಯನ್ನು ಒತ್ತುತ್ತಾ ಬರಬೇಕು. ಇದಕ್ಕೆ ಕಾಂಬಿನೇಶನ್ ಆಗಿ ಗಸಗಸೆ ಪಾಯಸ ಮಾಡ್ತಾರೆ. ಅದರ ಮೇಲೆ ಎಳ್ಳು, ಬೆಲ್ಲ, ಕಾಯಿ ಪುಡಿ ಉದುರಿಸುತ್ತೀವಿ. ಸ್ವೀಟ್ ಆಗಿ ಟೇಸ್ಟಿಯಾಗಿರುತ್ತೆ.
ಪತ್ರೊಡೆ
ಬೇಕಾಗುವ ಸಾಮಗ್ರಿ : 2 ಕಪ್ ದೋಸೆ ಅಕ್ಕಿ, ಕಾಲು ಕಪ್ ಕಡಲೆ ಬೇಳೆ, ಕಾಲು ಕಪ್ ಉದ್ದಿನ ಬೇಳೆ, ಕಾಲು ಸ್ಪೂನ್ ಮೆಂತೆ ಕಾಳು, ಕೆಸುವಿನ ಎಲೆ 20, 1 ಕಪ್ ತೆಂಗಿನ ತುರಿ, ಅರ್ಧ ಕಪ್ ಬೆಲ್ಲ, 1 ಸ್ಪೂನ್ ಕೊತ್ತಂಬರಿ ಬೀಜ, ಹುಣಸೆ ಹಣ್ಣು, ಅರ್ಧ ಚಮಚ ಜೀರಿಗೆ, ಕಾಲು ಸ್ಪೂನ್ ಅರಿಶಿನ, ಐದು ಬ್ಯಾಡಗಿ ಮೆಣಸು, ಅರ್ಧ ಚಮಚ ಉಪ್ಪು, ನೀರು, ಎಣ್ಣೆ
ಬಿಳಿ ಮತ್ತು ಕೆಂಪು ಮಾಂಸ: ಯಾವುದಲ್ಲಿ ಪ್ರೊಟೀನ್ ಜಾಸ್ತಿ..? ಯಾವುದು ಆರೋಗ್ಯಕ್ಕೆ ಹೆಚ್ಚು ಸೂಕ್ತ
ಮಾಡುವ ವಿಧಾನ: ದೋಸೆ ಅಕ್ಕಿ, ಕಡಲೆ ಬೇಳೆ, ಉದ್ದಿನ ಬೇಳೆ, ಮೆಂತೆ ಕಾಳನ್ನು ನೀರಲ್ಲಿ ನಾಲ್ಕು ಗಂಟೆ ನೆನೆಸಬೇಕು. ಇದನ್ನು ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ 1 ಕಪ್ ತೆಂಗಿನ ತುರಿ, ಹುಣಸೇ ಹಣ್ಣು, ಬೆಲ್ಲ, ಕೊತ್ತಂಬರಿ ಬೀಜ, ಜೀರಿಗೆ, ಅರಿಶಿನ, ಬ್ಯಾಡಗಿ ಮೆಣಸು, ಉಪ್ಪು, ಸ್ವಲ್ಪ ನೀರು ಹಾಕಿ. ಇದನ್ನು ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಬೇಕು. ದೊಡ್ಡ ಕೆಸುವಿನ ಎಲೆಯನ್ನು ಮೊದಲು ತೆಗೆದುಕೊಂಡು ಅದರ ಹಿಂಭಾಗದ ನಾರನ್ನು ತೆಗೆಯಬೇಕು. ಅದರ ಮೇಲೆ ಹಿಟ್ಟನ್ನು ತೆಳುವಾಗಿ ಹರಡಬೇಕು. ಇದರ ಮೇಲೆ ಇನ್ನೊಂದು ಕೆಸುವಿನ ಎಲೆ ಇಟ್ಟು ಅದರ ಮೇಲೂ ಹಿಟ್ಟನ್ನು ಹರಡಬೇಕು. ಈ ರೀತಿ ನಾಲ್ಕರಿಂದ ಐದರಷ್ಟುಎಲೆಯನ್ನು ಒಂದರ ಮೇಲೆ ಒಂದನ್ನಿಟ್ಟು ಮಸಾಲೆ ಹಚ್ಚುತ್ತಾ ಬರಬೇಕು. ನಂತರ ಕೆಳಗಡೆಯಿಂದ ಮಡಚುತ್ತಾ ಬರಬೇಕು. ಮಡಚಿದಲ್ಲಿಗೆ ಮತ್ತೆ ಹಿಟ್ಟು ಸವರಬೇಕು. ಬದಿಗಳನ್ನೂ ಮಡಚಿ ಮಸಾಲೆ ಹಚ್ಚಬೇಕು. ಆಮೇಲೆ ಹಾಸಿಗೆ ಮಡಚಿದ ಹಾಗೆ ಮಡಚಬೇಕು. ಇದು ಟೈಟ್ ರೋಲ್ ಮಾಡಬೇಕು. ಇದನ್ನು ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ 35 ನಿಮಿಷ ಬೇಯಿಸಬೇಕು. ಚೆನ್ನಾಗಿ ಬೆಂದು ಆರಿದ ಮೇಲೆ ಕಟ್ ಮಾಡಬೇಕು. ತುಪ್ಪ ಹಾಕಿ ತವಾದಲ್ಲಿ ಕೆಂಪಗೆ ಶಾಲೋ ಫ್ರೈ ಮಾಡಬೇಕು.
ಅವಕಾಡೋ ಸ್ಯಾಂಡ್‌ವಿಚ್
ಬೇಕಾಗುವ ಸಾಮಗ್ರಿ: ಬ್ರೆಡ್, ಅವಕಾಡೋ, ವೈಲೆಟ್ ಕ್ಯಾಬೇಜ್ ಈರುಳ್ಳಿ, ಸ್ವೀಟ್‌ಕಾರ್ನ್, ನಿಂಬೆಹಣ್ಣು, ಉಪ್ಪು, ಹಸಿ ಮೆಣಸು, ಟೊಮ್ಯಾಟೋ, ಪುದೀನಾ, ಸೌತೆ ಕಾಯಿ ಸ್ಲೈಸ್, ವೆಜ್ ಮೆಯೊನೀಸ್ ಕ್ರೀಮ್, ಕೆಚ್‌ಅಪ್, ಸೀಸನಿಂಗ್ ಪೌಡರ್.
ಮಾಡುವ ವಿಧಾನ: ಬ್ರೆಡ್ ತಗೊಳ್ಳಿ. ನೇರಳೆ ಬಣ್ಣದ ಚಿಕ್ಕದಾಗಿ ಹೆಚ್ಚಿಕೊಂಡ ಕ್ಯಾಬೇಜ್, ಸ್ವೀಟ್ ಕಾರ್ನ್, ಸಣ್ಣಗೆ ಹೆಚ್ಚಿದ ಈರುಳ್ಳಿ ಈ ಮೂರನ್ನೂ ಒಂದು ಬೌಲ್‌ಗೆ ಹಾಕಿ ಉಪ್ಪು ಹಾಕಿ ಮಿಕ್ಸ್ ಮಾಡಿ. ಇನ್ನೊಂದು ಬೌಲ್‌ನಲ್ಲಿ ಅವಕಾಡೋ, ಈರುಳ್ಳಿ, ಹಸಿಮೆಣಸು, ಟೊಮ್ಯಾಟೋವನ್ನು ಒಟ್ಟಿಗೆ ಮ್ಯಾಶ್ ಮಾಡಬೇಕು. ಇದಕ್ಕೆ ನಿಂಬೆರಸ, ಸ್ವಲ್ಪ ಉಪ್ಪು ಹಾಕಿ ಇಟ್ಟಿರಬೇಕು. ಈಗ ಪುದೀನ, ಕೊತ್ತಂಬರಿ, ಹಸಿ ಮೆಣಸಿನ ಕಾಯಿ, ಉಪ್ಪು ಹಾಕಿ ರುಬ್ಬಿ ಗ್ರೀನ್ ಚಟ್ನಿ ರೆಡಿ ಮಾಡಬೇಕು. ಮುಂದೆ ಒಂದು ಪ್ಲೇಟ್‌ನಲ್ಲಿ ಟೊಮ್ಯಾಟೋ, ಸೌತೆಕಾಯಿ ಸ್ಲೈಸ್ ಮಾಡಿಟ್ಟಿರಬೇಕು. ಈಗ ವೆಜ್ ಮೆಯೊನೀಸ್, ಸೀಸನಿಂಗ್ ಪೌಡರ್, ಕೆಚಪ್ ಇದನ್ನು ರೆಡಿ ಇಟ್ಕೊಳ್ಳಬೇಕು. ಈಗ ಬ್ರೆಡ್ ಸ್ಪೈಸ್ ಮೇಲೆ, ಮೊದಲ ಲೇಯರ್ ಆಗಿ ವೈಲೆಟ್ ಕ್ಯಾಬೇಜ್, ಈರುಳ್ಳಿ, ಸ್ವೀಟ್ ಕಾರ್ನ್,ಈರುಳ್ಳಿ, ಉಪ್ಪು ಹಾಕಿ ಸೆ್ೊ್ರಡ್ ಮಾಡಬೇಕು. ಅದರ ಮೇಲೆ ಇನ್ನೊಂದು ಬ್ರೆಡ್‌ಪೀಸ್ ಇಟ್ಟು, ಅವಕಾಡೋ, ಟೊಮ್ಯಾಟೋ ಮಿಕ್ಸ್‌ಅನ್ನು ಹಾಕಬೇಕು. ಅದರ ಮೇಲೆ ಒಂದು ಬ್ರೆಡ್ ಇಟ್ಟು ಗ್ರೀನ್ ಚಟ್ನಿ ಸವರಬೇಕು. ಟೊಮ್ಯಾಟೋ ಸೌತೆಕಾಯಿ ಸ್ಲೈಸ್ ಅದರ ಮೇಲಿಡಬೇಕು. ಅದರ ಮೇಲೆ ಇನ್ನೊಂದು ಬ್ರೆಡ್ ಹಾಕಿ ಕ್ಲೋಸ್ ಮಾಡಬೇಕು. ಆ ಕ್ಲೋಸ್ ಮಾಡೋ ಬ್ರೆಡ್ ಮೇಲೆ ವೆಜ್ ಮೆಯೊನೀಸ್, ಕೆಚ್‌ಅಪ್, ಸೀಸನಿಂಗ್ ಪೌಡರ್ ಹಾಕ್ಬೇಕು. ಇದನ್ನು ತವಾಮೇಲಿಟ್ಟು ರೋಸ್ಟ್ ಮಾಡಬೇಕು. ಇದಕ್ಕೆ ಬೇಕಿದ್ರೆ ಚೀಸ್ ಸ್ಲೈಸ್ ಹಾಕ್ಕೊಳ್ಳಬಹುದು.